31 December, 2010

ಕನಸಿಗೊಂದು ವಿಳಾಸ ಸಿಕ್ಕ ಖುಶಿಯು



ಉಪಗ್ರಹಕ್ಕೆ ಕನಸಿನ ರೆಕ್ಕೆಗಳಿವೆ

ಕತ್ತಲಲ್ಲಿ ಮರೆತ ಬಟ್ಟೆಗಳು
ರಾತ್ರಿಯ ಜೊತೆ ಕನಸು ಕಾಣುತ್ತಿವೆ
ಒಳಗೆ ಇಸ್ತ್ರಿ ಮಾಡಿಟ್ಟ ಬಟ್ಟೆಗಳು
ಸೆಕೆಗೆ ಬೆವತಿವೆ
              --
ಹಗಲು ರಾತ್ರಿ ವ್ಯತ್ಯಾಸ ಗೊತ್ತಾಗದ
ರಾತ್ರಿಪಾಳಿಯ ಹುಡುಗನ ಕೆಂಪುಕಣ್ಣಿನಲ್ಲಿನ
ಹಗಲಿನ ಕನಸುಗಳಿಗೆ ಯಾವ ಪದಗಳೂ ಇಲ್ಲ
             --
ಆ ಎಲ್ಲ ನಕ್ಷತ್ರಕಡ್ಡಿ ಹೊತ್ತಿಸುವ
ಕನಸುಗಳು ಕಳೆದಿದ್ದು
ಟಿವಿ ನ್ಯೂಸಲ್ಲಿ ಮೈಮುರಿಯುತ್ತಿರುವ
ಇದೇ ಪೇಟೆಯಲ್ಲಿ
              --
ಊರೂರು ಸುತ್ತುವ ಲಾರಿಗೆ ಮಾತ್ರ
ಯಾವ ಊರಿನ ಹೆಸರೂ ನೆನಪಿಲ್ಲ
              --
ಶಾಪಿಂಗ್ ಮಾಲಿನ
ಬಾಗಿಲು ತೆರೆದುಕೊಳ್ಳುವ ಹೊತ್ತಿಗೆ
ಹಳ್ಳಿ ಹುಡುಗ ಕಂಡ ಕನಸಿನ
ವಿಳಾಸ ಹುಡುಕಿ ಅಲೆಯುತ್ತಿದ್ದಾನೆ
              --
ಹೈವೆಬದಿಯ ತಂದೂರಿ ರೊಟ್ಟಿ ಸುಡುವ
ಹುಡುಗನಿಗೆ ಮಾತ್ರ ಎಲ್ಲ ದೊಡ್ಡ ಲಾರಿಗಳ
ನೆನಪಿದೆ
              --
ಸುಮ್ಮನೆ ಕರೆದುನೋಡು
ನೀನಿದ್ದಲ್ಲಿಗೇ ಬರುತ್ತದೆ,
ಭೂಗೋಳದ ನೆತ್ತಿಯ ಮೇಲೆ ಸುತ್ತುವ
ಉಪಗ್ರಹಕ್ಕೆ ಕನಸಿನ ರೆಕ್ಕೆಗಳಿವೆ.

____________________________

[ಅಡಿಟಿಪ್ಪಣಿ: ನನಗನಿಸಿದ ಸಾಲುಗಳನ್ನು ಹಾಗೇ ಬರೆದಿಟ್ಟಿದ್ದೆ, ಒಂದೇ ಶೀರ್ಶಿಕೆಯಡಿ ಬರುವಂಥದ್ದನ್ನೆಲ್ಲ ಜೋಡಿಸಿದಾಗ ಕವಿತೆಯ ತರ ಕಂಡು ನಾಲ್ಕು ತಿಂಗಳ ಹಿಂದೆ 'ಮಯೂರ'ಕ್ಕೆ ಕಳುಹಿಸಿದ್ದೆ,ಪುಣ್ಯಕ್ಕೆ ಸಂಪಾದಕರಿಗೂ ಹಾಗೇ ಅನಿಸಿ ಈ ಜನವರಿ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ.ಕಳುಹಿಸಿಯಾದ ನಂತರ ಇದನ್ನು ಇನ್ನಷ್ಟು ತಿದ್ದಿ ತೀಡಿದ್ದರೆ ಕವಿತೆಯಾಗಬಹುದಿತ್ತು ಅನ್ನಿಸಿತ್ತು,ಹಾಗೆ ತಿದ್ದಿದಾಗಲೂ ಏನೂ ಸುಧಾರಣೆ ಕಾಣದೆ ಕವಿತೆಯಾಗಿಸುವ ಅಸೆ ಕೈಬಿಟ್ಟು ಇಲ್ಲಿನ ಕೆಲ ಸಾಲುಗಳ ಜೊತೆ ಉಳಿದ ಕೆಲವನ್ನೂ ಸೇರಿಸಿ ಕನಸಿನ ವಿಳಾಸಕ್ಕಾಗಿ ಎಂಬ ಶೀರ್ಶಿಕೆಯಡಿ ಬ್ಲಾಗಿನಲ್ಲಿ ಪೋಸ್ಟ್ ಮಾಡಿದ್ದೆ.  ಮಯೂರದಲ್ಲಿ  ನನ್ನ ಕವನ ನೋಡುವುದು ನನ್ನ ಬಹುದಿನದ ಹಂಬಲವಾಗಿತ್ತು, ಅಲ್ಲಿ ಪ್ರಕಟವಾದ ಕವಿತೆಯ ಜೊತೆಗೇ ನಾನು ತಿದ್ದಿಟ್ಟಿದ್ದ ಕವಿತೆಯಂಥದ್ದನ್ನೂ ಇರಲಿ ಎಂದು ಇಲ್ಲಿ ಹಾಕಿದ್ದೇನೆ. ಯಾವುದಕ್ಕೂ ನಿಮ್ಮ ಅನಿಸಿಕೆ/ಸಲಹೆ ತಿಳಿಸಿ]

                                                             ** ** ** ** ** ** ** **

ಕ್ಯಾಲೆಂಡರಿನ ಲೆಕ್ಕದಲ್ಲಿ ಮತ್ತೊಂದು ಇಸವಿಯನ್ನು ಹಿಂದೆ ತಳ್ಳುತ್ತ ಹೊಸದೊಂದು ನಾಳೆಗೆ ತೆರೆದುಕೊಳ್ಳುವ ಸಮಯದಲ್ಲಿ ನಿಮ್ಮನ್ನೆಲ್ಲ  ನೆನೆಯುತ್ತ,ಹೊಸ ಹುರುಪೊಂದು ಅನುದಿನವೂ ನಿಮ್ಮ ಕೈಹಿಡಿದು ನಡೆಸಲೆನ್ನುವ ಆಶಯದೊಂದಿಗೆ ಈ ವರ್ಷಕ್ಕೆ ಕೋರುವ ವಿದಾಯವು.

22 December, 2010

ಗಾಳಿಗೆ ತಡೆದ ಗೀಜುಗನ ಗೂಡಾಗಿ

ಎಲ್ಲ ಮರೆತು ಹೋಗಿತ್ತು
ಜಂಜಡವೇ ಬದುಕಾಗಿ
ಏನೋ ನೆನಪಾಗಿ ಹೋಗಿ ನೋಡಿದರೆ
ಗೀಜುಗನ ಗೂಡು ಹರಿದು ಬಿದ್ದಿತ್ತು
ಮೊಟ್ಟೆ ಮರಿ ಎಲ್ಲಿ ಹೋದವು?

ಅಲ್ಲಲ್ಲಿ ಹಾರುತ್ತ ಚಿಲಿಪಿಲಿ ಕೂಗುತ್ತ
ಅನುಕ್ಷಣವೂ ಜೀವದುಸಿರಿನಂತೆ
ಅಂಟು ಗಂಟಿಲ್ಲದ ಬರೀ ನಂಟಿನ
ಗೀಜುಗನ ಗೂಡಿತ್ತಲ್ಲ

ಒಡಲೊಳಗಣ ಕನಸೆಲ್ಲ ನನಸಾದ ಹಾಗೆ
ತುದಿಟೊಂಗೆಗೆ ಜೋತುಬಿದ್ದ
ಸುಳಿವ ಗಾಳಿಯ ದನಿಯಾಗಿ
ಗೀಜುಗನ ಗೂಡಿತ್ತಲ್ಲ

ಕನಸಿನ ಚಿಲಿಪಿಲಿಯೆಲ್ಲ ಬೇಸರವಾಗಿ
ಗಾಳಿಮರ ಮರೆತು ಹಾರಿದವೆ ಗೀಜುಗ
ಸ್ತಬ್ಧ ಗಾಳಿಯನಷ್ಟೆ ಉಳಿಸಿ
ಮರದ ನಂಟು ಮುಗಿದ ಹಾಗೆ

ಇಲ್ಲ ಹಕ್ಕಿ ಗೂಡು ಬಿಡಲಿಲ್ಲ,ಹಕ್ಕಿಯ ಉಸಿರು ಬೀಳಲಿಲ್ಲ.ಒಮ್ಮೆ ತೆರೆದರೆ ಮುಚ್ಚಿದ ಕಣ್ಣು ನಮ್ಮೊಳಗನ ಒಳಗಾಗಿ ಕಾಣುವುದು ಗೀಜುಗನ ಗೂಡು.ಸೋತ ಭಾರದ ಬದುಕು ಹಗುರಾಗಿ ನಿರಮ್ಮಳ ಕೂರಲು ಗೂಡು ಸಿಗಬಹುದು,ನಿರಾಳ ಬಯಲಲ್ಲೂ ಸುಳಿವ ಗಾಳಿಯ ಹಾಡಾಗಿ.ಜೀವದೆಳೆ ಜೊತೆಯಾಗಿ ಇರಬಹುದು ಗಾಳಿಗೆ ತಡೆದು.ಇಲ್ಲ ಹಕ್ಕಿ ಗೂಡು ಬೀಳಲಿಲ್ಲ, ಹಕ್ಕಿ ಗೂಡ ಬಿಡಲಿಲ್ಲ.

ನಮ್ಮ ನಡುವಿನ ನಂಟ ಹೊಲಿದರೆ
ಆಸೆಬುರುಕು ಹಸಿವ ಕಳೆದರೆ
ಕಂಡ ಕನಸು ಚಿಂವ್ವೆನ್ನುತ್ತ
ನಮ್ಮ ನಡೆಸೀತು ನಾಳೆಗಳಿಗೆ
ಎದೆಯ ದುಗುಡ ಮರೆಸುವ ಜೋಗುಳದಂತೆ
ಅನುದಿನವೂ ಗೀಜುಗನ ಹಾಡು ಸಿಕ್ಕೀತು
ಬದುಕು ನಿಂತೀತು ಗಾಳಿಗೆ ತಡೆದ ಗೂಡಾಗಿ

2006

[ಅಡಿ ಟಿಪ್ಪಣಿ: ಇದು ನಾಲ್ಕು ವರ್ಷದ ಹಿಂದೆ ಬರೆದ ಪದ್ಯ .ಸಣ್ಣವನಿದ್ದಾಗ ತಾಸುಗಟ್ಟಲೆ ಕಾಯುತ್ತ ಮಳ್ಳುಬಿದ್ದು ಗೀಜುಗನ ಗೂಡನ್ನು ನೋಡುತ್ತ  ಕುಳಿತಿರುವುದು ಕುಶಿಕೊಡುತ್ತಿತ್ತು,ಈಗಲೂ ಹಾಗೇ.ಗೀಜುಗನ ಗೂಡು ಯಾವತ್ತೂ ನನಗೆ ಕುತೂಹಲದ ಸಂಗತಿಯಾಗಿದೆ.ನನ್ನೊಳಗಿನ ತುಡಿತವೊಂದರ  ಅವ್ಯಕ್ತದ ಸಂಗತಿಯಾಗಿದೆ,ಚಲನದ ಸಂಗತಿಯಾಗಿದೆ.ಅದು ಬದುಕು ಮತ್ತು ಭರವಸೆಯ ಸಂಗತಿಯಾಗಿದೆ,ಜೀವನ ಪ್ರೀತಿಯ,ಮಮತೆಯ  ಸಂಗತಿಯಗಿದೆ.]


17 December, 2010

ಒಂದು ಪೆನ್ಸಿಲ್ ಸ್ಕೆಚ್


(ಒರಿಜಿನಲ್ ಸೈಜಿನಲ್ಲಿ ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ )

13 December, 2010

ಕನಸ ಬಾಜಾರದ ತುದಿಯಲ್ಲಿ

ನೆರಳೇ ಇಲ್ಲದ ದಾರಿಯಲ್ಲಿ
ಬಿರುಮಧ್ಯಾಹ್ನ
ಕರಿಡಾಂಬರು ಆರಿಹೋಗುವ ಬಿಸಿಲಲ್ಲಿ
ಇಂಗಿಹೋದ ಕನಸು ನನ್ನದಾಗಿತ್ತು

ಮರುದಿನ ಅದೇ ದಾರಿಯಲ್ಲಿ
ಸತ್ತುಬಿದ್ದ ಹೆಣಗಳಲ್ಲಿ
ಕನಸಿನ ನೆರಳುಗಳಿರಬೇಕು
ಕಂಡನೆನಪಾಗಿ ಬಿಕ್ಕಳಿಸಿ
ಕಿಟಕಿಗಳಿಲ್ಲದ ಮನೆಯೊಳಗೆ
ಉಸಿರಿಲ್ಲದೆ ಅತ್ತಿದ್ದೆ

ನಿಲುವಿಲ್ಲದ ನೆಲೆಯಲ್ಲಿ
ಮುಗಿಯದ ಹಾಗೆ ಈಗೆಲ್ಲ
ಎಷ್ಟೊಂದಿವೆ
ಕನಸುಬಾರದ ಜನರಿಗೆ ಶೋಕಿಗೆ
ಬೇಕೆಂದರೆ ಮಾರಾಟಕ್ಕೂ ಸಿಗುತ್ತವೆ
ಹತ್ತುರೂಪಾಯಿ ಕೊಟ್ಟರೆ ತೋರಿಸಿಹೋಗುತ್ತಾರೆ
ಬಗೆಬಗೆಯ ಸಲಕರಣೆ ಹಿಡಿದು
ಕನಸ ನನಸು ಮಾಡಲೆಂದೇ ಕೂತವರಿದ್ದಾರೆ

ಕನಸ ಬಾಜಾರದ ತುದಿಯಲ್ಲಿ
ಸ್ಮಶಾನವೊಂದಿದೆ
ಮಾರಾಟವಾಗದೆ ಉಳಿದವಕ್ಕೆ
ಅಲ್ಲೆಲ್ಲ
ಸಮಾಧಿಯ ಧೂಳೊರೆಸಿ
ಬರೆದ ಸಾಲುಗಳನ್ನು ಓದುವಾಗೆಲ್ಲ
ಇಂಥ ಸಾಲುಗಳೇ ಇಲ್ಲದ
ನನ್ನ ಕನಸಿನ ನೆನಪಾಗುತ್ತದೆ


30 November, 2010

ಕನಸಿನ ವಿಳಾಸಕ್ಕಾಗಿ

ಇವು ನನ್ನದೇ ತಲ್ಲಣಗಳ ಪ್ರತಿಮೆಗಳಂಥ ಯಾವುದೋ ಅರ್ಧಕ್ಕೇ ಬಿಟ್ಟ ಕವಿತೆಯ ಸಾಲುಗಳಂಥ,ಹಾಳೆಯ ಮೇಲೆ ಬಿಡಿಸಲಾಗದೆ ಉಳಿದ ಮನಸಿನ ಅರೆಬರೆ ಚಿತ್ರಗಳಂಥ ಏನೋ ಹೇಳಬೇಕೆಂದುಕೊಂಡು ಹೇಳಲಾಗದೇ ಉಳಿದುಹೋದ,ಹೀಗೇ ಬರೆದಿಟ್ಟು ಸಾಲುಗಟ್ಟಿದವುಗಳು.ಉದ್ದೇಶ ಮತ್ತು ಅರ್ಥ ಎರಡನ್ನೂ
ತಿಳಿದಂತೆ ಅರ್ಥೈಸಿಕೊಂಬುದು.


ಗೋಡೆಯ ಮೇಲಿನ ಚಿತ್ರಕೆಲ್ಲ ಚೌಕಟ್ಟು,ನಾಕಂಡ ಕನಸುಗಳು ಅದರೊಳಗೆ ಬಂಧಿಯಾಗಿವೆ.

ಎಲ್ಲರೆದುರೂ ಸಂಭಾವಿತನಾಗುವ ಹೊತ್ತಿಗೆ ಕನ್ನಡಿಯಲ್ಲಿ ಕಾಣುವ ಮುಖ ಬೇರೆಯದೇ ಆಗಿತ್ತು.

ಬೆಳಕಿನ ಮಾತನಾಡುತ್ತ ಕತ್ತಲಲ್ಲಿ ಕಳೆದುಹೋದವಳು ಹ್ಯಾಲೋಜನ್ ದೀಪದ ಸುತ್ತ ಸತ್ತ ಪತಂಗವಾಗಿದ್ದಾಳೆ.

ಸ್ತ್ರೀ ಸ್ವಾತಂತ್ರ್ಯ ಕನಸು ವಿಮಾನ ಎಂದೆಲ್ಲ ಮಾತನಾಡುತ್ತಿದ್ದವಳು ಒಂದು ದಿನ ಅಪ್ಪ ನೋಡಿದ ಹುಡುಗನೊಂದಿಗೇ ಮದುವೆಯಾದಳು.

ಭಟ್ಟರ ಜೋರುಮಂತ್ರ ಅರ್ಥವಾಗದೇ ಮದುಮಗಳ ಜರಿಸೀರೆಯ ಗೊಂಬೆಗಳು ತುಸು ಬೆದರಿವೆ.

ಕವಡೆಹಕ್ಕಿ ಕಚ್ಚಿಕೊಂಡ ಒಂದು ಕಂಬಳಿಹುಳದ ಮೈಗೆ ನಸುಗೆಂಪು ಮ್ಯಾಂಗನೀಸು ಧೂಳಿದೆ.

ಭತ್ತ ತಿಂದು ಹೋಗಲು ಬಂದ ಹಕ್ಕಿಗಳಿಗೆ ಬೀಜದ ಪೇಟೆಂಟಿನ ಬಗ್ಗೆ ಗೊತ್ತಿದ್ದಂತಿಲ್ಲ.

ಅಮ್ಮನ ಡಾನ್ಸ್ ಕ್ಲಾಸು, ಅಪ್ಪನ ಕಂಪ್ಯೂಟರ್ ಕ್ಲಾಸು, ಶಾಲೆ ಮಾಸ್ತರರ ಹೋಮ್‌ವರ್ಕು ಯಾರೋ ಹೇಳಿದ ಎಂಥದೋ ಕೋಚಿಂಗಿನ ಗದ್ದಲದಲ್ಲಿ ಗಾಳಿಪಟದ ಕನಸೊಂದು  ಹಳತಾಗಿ ಬಣ್ಣಗೆಟ್ಟು ಹಾರಲಾಗದೆ ಉಳಿದುಬಿಟ್ಟಿದೆ.

ಹೊದೆಸಿದ ಮಾಡಿನ ಜೊತೆಜೊತೆಗೇ ಎಂದೋ ರಾತ್ರಿ ಕನಸ ಮರೆತವರನ್ನು ಇವರು ಯಾವುದೋ ವಿಳಾಸ ಕೇಳುತ್ತಿದ್ದಾರೆ.

ಊರೂರು  ಸುತ್ತುವ ಲಾರಿಗೆ ಯಾವ ಊರಿನ ಹೆಸರೂ ಸರಿ ನೆನಪಿಲ್ಲ, ಸುತ್ತಿದೂರಿನ ನೆನಪಿಗೆ ಸವೆದ ಟೈರುಗಳಿವೆ.

ಕೆಲಸ ಕೊಡಿಸುತ್ತೇನೆಂದು ಹೋದ ಎಲ್ಲರ ವಿಳಾಸಗಳನ್ನೂ ಬರೆದಿಟ್ಟುಕೊಂಡ ತಂದೂರಿ ರೊಟ್ಟಿ  ಸುಡುವ ಹುಡುಗನಿಗೆ ಮಾತ್ರ ಆ ಎಲ್ಲ ದೊಡ್ಡ ಲಾರಿಗಳ ನೆನಪಿದೆ.

ಕಾರಿನಲ್ಲಿ ಬಂದವರು ಕೂಲಿಜನರ ಹಾಡುಗಳ ವಿಡಿಯೋ ಮಾಡಿಕೊಂಡಿದ್ದಾರೆ, ಕಾಲಿನ ನಂಜಿನ ಬಗ್ಗೆ ಏನಾದರು ಔಸಧಿ ಗೊತ್ತಿದೆಯಾ ಕೇಳಲು ಅವನಿಗೆ ಹಿಂಜರಿಕೆ.



ಅವಳಿಗಾಗಿ ಮಲ್ಲಿಗೆ ತರಹೋದ ಸಂತೆಯಲ್ಲಿ ಬರೀ ಕನ್ನಡಿಗಳು ಮಾರಾಟಕ್ಕಿವೆ.

ಕಳೆದುಹೋದ ಕನಸುಗಳು ಎಂದೂ ತೆರೆಯದಿದ್ದ ಕಿಟಕಿಯನ್ನು ತೆರೆದ ಕೂಡಲೆ ಕಂಡಿವೆ, ಸತ್ತ ಅವನ್ನು ಎಲ್ಲಾದರೂ ಎಸೆದುಬರಬೇಕಿದೆ.

ಅವರು ಮೋಡದ ಬಗ್ಗೆ ಕವಿತೆ ಕಟ್ಟಿ ಹಾಡಿದರು, ಮೋಡ ಸುರಿದು ಮಳೆಯಾಯಿತು,ಹರಿದ ನೀರಲ್ಲಿ ಜನ ತಮ್ಮ ಪಾಲು ಎಣಿಸಿದರು,ಸಾಲದೆಂದು ಭೂಮಿಯ ಬಗೆದರು.

ದಿನವೂ ಹುಡುಗ ಹುಡುಗಿಯರ ಜೋರು ಪ್ರೀತಿಯಲ್ಲಿ ನಲುಗಿದ ಕಾಫಿಡೆಯ ಗೋಡೆಗೆ ರಾತ್ರಿಯಹೊತ್ತಿಗೆ ಕಷ್ಟದ ನಿಟ್ಟುಸಿರು.

ಡೈಪರ್ಸ್ ಪ್ಯಾಮ್ಪರ್ಸ್‌ಗಳಿಂದ ತುಂಬಿಹೋದ ಮೆಡಿಕಲ್ ಶಾಪಿನಲ್ಲಿ ಜ್ವರದ ಗುಳಿಗೆ ಕೇಳಲು ಈಗಷ್ಟೆ ಪೇಟೆಯಲ್ಲಿರಲು ಕಲಿಯುತ್ತಿರುವ ಹಳ್ಳಿಹುಡುಗ ತುಸುನಾಚಿದ್ದಾನೆ.

ಶಾಪಿಂಗ್ ಮಾಲುಗಳು ಬಾಗಿಲು ತೆರೆದುಕೊಳ್ಳುವ ಸರೀಹೊತ್ತಿಗೆ ಹಳ್ಳಿಹುಡುಗ ಕಂಡಕನಸಿನ ವಿಳಾಸ ಹುಡುಕುತ್ತಿದ್ದಾನೆ.



( 9 ಜನವರಿ,2011ರ ವಿಜಯ ಕರ್ನಾಟಕ ಸಾಪ್ತಾಹಿಕ ಲವಲVKಯಲ್ಲಿ ಪ್ರಕಟಿತ )

24 November, 2010

ಆ ರಾತ್ರಿ ನಾನು ಕಂಡ ಕನಸಿನ ಹೆಸರು ನೀನು ಕಣೇ



ಪ್ರೀತಿಯ ಪೂರ್ಣಿ,


ನಿನ್ನ ಹೀಗೇಕೆ ಕರೆದನೆಂದರೆ ನನಗೆ ಈ ಹೆಸರು ಇಷ್ಟ ಮತ್ತು ನಿನ್ನ ನಿಜದ ಹೆಸರು ನಂಗೆ ಗೊತ್ತಿಲ್ಲ,ಹೀಗೆ ಕಾಗದದ ದೋಣಿ ಮಾಡಿ ಬಿಡುತ್ತಿದ್ದೇನೆ, ನಿನ್ನ ವಿಳಾಸದ ಕಿನಾರೆಗೆ ಬಂದೊಡನೆ ಒಂದು ಕಿರುನಗು, ಹಾಂ ಆ ನಗುವಿಗೆ ಒಂದು ಒಲವಿನ ದನಿ,ನೂರು ಕನಸಿನ ಮಣಿಮಾಲೆ. ನಿಜ ನಗ್ತೀಯಲ್ಲ?

ಜಯನಗರದ ಬಸ್ ಸ್ಟಾಂಡಿನಲ್ಲಿ ನಮ್ಮ ಏರಿಯಾದ ಬಸ್ಸು ಎಂದಿನಂತೇ ತಡವಾಗಿ ಬಸ್ಸಿಗೆ ಕಾಯುವವರ ಸಂಖ್ಯೆ ಕ್ಷಣಕ್ಕೂ ಹೆಚ್ಚುತ್ತಾ ಅಗಲೇ ಎರಡು ಬಸ್ಸಿನ ಜನ ಜಮಾಯಿಸಿದ್ದರು. ಆಗ ನಡೆದು ಬಂದಿದ್ದೆ, ದಟ್ಟ ಹಸಿರಿನ ಸಲ್ವಾರು,ಆ ಸಂಜೆ ಬೆಳಕಲ್ಲೂ ಹೊಳೆವ ಹಾಲಿನಂಥ ಮೈಬಣ್ಣ, ಮೃದು ದೇಹದ ನೀನು. ಕಿವಿಗೆ ಸಣ್ಣ ಓಲೆ,ಹೆಗಲಿಗೆ ಪುಟ್ಟ ಬ್ಯಾಗು,ಭುಜದ ಮೇಲೆ ಹರಿದಾಡಿಕೊಂಡಿರುವ ಹೊಳೆವ ಕೂದಲು, ಕೈಯಲ್ಲಿ ಮೊಬೈಲು ಹಿಡಿದು ನೀನು ನಿಧಾನ ಬರುತ್ತಿದ್ದರೆ ನನಗೆ ನಿನ್ನಿಂದ ಒಂಚೂರೂ ಕಣ್ಣು ಸರಿಸಲಾಗಲಿಲ್ಲ,ನನ್ನ ಪಾಲಿಗೆ ಸಮಯ ನಿಂತುಹೋಗಿತ್ತು, ಜನರ ಮಧ್ಯೆ ದಾರಿ ಮಾಡಿಕೊಂಡು ಬಂದ ನೀನು ನಂಗೆ ಹತ್ತಿರವೇ ನಿಂತೆ,ನಿನ್ನ ಕೆನ್ನೆ ಮೇಲಣ ಕಪ್ಪು ಮಚ್ಚೆ ಸ್ಪಷ್ಟ ಕಾಣಿಸುವಷ್ಟು ಹತ್ತಿರ. ಅರೆಮಂದ ಬೆಳಕಲ್ಲಿ ನಡೆದು ಬಂದ ಅಚ್ಚರಿಯ ಹಾಗೆ ನಿಂತಿದ್ದೆ ನೀನು. ಸುತ್ತಲಿನ ವಾತಾವರಣಕ್ಕೇ ಹೊಸ ಹುರುಪು ಬಂದಹಾಗಿತ್ತು,ಖರೆ ಹೇಳ್ತೇನೆ ನೀನಿದ್ದಷ್ಟು ಹೊತ್ತೂ ನನಗೆ ನಿನ್ನ ಬಿಟ್ಟು ಬೇರೆನನ್ನೂ ನೋಡಲಾಗಲಿಲ್ಲ.


ನಿನ್ನ ಆ ಪುಟ್ಟ ಕಣ್ಣುಗಳಲ್ಲಿ ಏನೊ ಸೆಳೆತವಿದೆ ಹುಡುಗೀ,ತುಸುನಕ್ಕರೂ ಗುಳಿಬೀಳುವ ನಿನ್ನ ಕೆನ್ನೆ,ಸುಳಿವ ಗಾಳಿಯ ನಿರಂತರ ಕಾಡಿಸುತ್ತಿದ್ದ ನಿನ್ನ ಮುಂಗುರುಳು ನಿನ್ನ ಹೆಸರ ವಿನ್ಯಾಸವ ಬರೆಯುತಿತ್ತು.ಆ ಮೃದು ಕೆನ್ನೆಯ ಮೇಲೆ ಸುಳಿದಾಡುವ ಗಾಳಿಯಾಗಬಾರದೆ ಎನಿಸಿತ್ತು.ಜಯನಗರದ ಥಂಡಿಗಾಳಿಗೆ ನೀನು ಕೈಕಟ್ಟಿ ನಿಂತಿದ್ದೆ, ನಿನ್ನ ಕಿವಿಯೊಳಗಿನ ಇಯರ್‌ಫೊನ್ ಅದಾವ ಒಲವಿನ ಹಾಡು ಹೇಳುತ್ತಿತ್ತು? ನಿನ್ನ ಗುಲಾಬಿಯಂಥ ಪಾದ, ಆ ಕಾಲುಗಳಿಗೆ ಚಂದದ ಗೆಜ್ಜೆಗಳಿವೆ. ಹೌದು ಗೆಜ್ಜೆಗಳಿವೆ ಅಲ್ವಾ? ನೀನು ಬಸ್ಸಿಗಾಗಿ ಸಹಜ ನನ್ನತ್ತ ತಿರುಗಿದಾಗಲೆಲ್ಲ ನನ್ನನ್ನೇ ನೋಡುತ್ತಿರುವಿಯೆಂದು ಬರಿದೆ ಒಳಗೊಳಗೆ ಖುಶಿಪಟ್ಟು ನಾನು ಕಣ್ತಪ್ಪಿಸಿದ್ದೆ ಗೊತ್ತಾ,ನೀನು ಮಾತ್ರ ಯಾಕೆ ಏನೂ ಗೊತ್ತಿಲ್ಲದವಳಂತೆ ಬರಿ ಬಸ್ಸಿಗಾಗಿ ಕಾತರಿಸಿದ್ದಿ,ಎಷ್ಟು ಹಿಂಸೆಯಾಗುತ್ತಿತ್ತು ಗೊತ್ತಾ.

ನಿನ್ನನ್ನೇ ನೋಡುತ್ತಿದ್ದ ನನ್ನ ಕಂಡೆಯಲ್ಲವಾ ನೀನು?

ನೀನು ಅಲ್ಲೆ ಬಳಿಯಿದ್ದ ಕಂಟ್ರೋಲರ್ ಬಳಿ ಏನೊ ಕೇಳಿದೆ ಸಣ್ಣಗೆ,ಎಷ್ಟು ಚಂದಾಗಿ ಮಾತನಾಡುತ್ತೀ ಹುಡುಗೀ ನೀನು.ಬಂದ ಉಳಿದ ರೂಟಿನ ಬಸ್ಸುಗಳನ್ನು ಕಂಡಾಗಲೆಲ್ಲ ದೇವರೆ ಇವಳು ಈ ಬಸ್ಸಿಗೆ ಹೋಗದಿರಲಿ ಅಂದುಕೊಳ್ಳುತ್ತಿದ್ದೆ,ಆ ಎಲ್ಲ ಬಂದ ಬಸ್ಸುಗಳನ್ನು ನೀನು ಬಿಟ್ಟಾಗ ಇವಳು ನಮ್ಮ ರೂಟಿಗೇ ಹೋಗುವವಳು ಎಂದು ಖಾತ್ರಿಯಾಗಿ ಎಲ್ಲಿಲ್ಲದ ಖುಷಿಯಾಗಿತ್ತು.ನಿನ್ನ ನೋಡುತ್ತ, ನಿನ್ನ ಕೆನ್ನೆನೋಡುತ್ತ ಎಲ್ಲೋ ಕನಸಿನೊಳಗೆ ಹೊರಟ ನನಗೆ ಬಸ್ ಬದಿದ್ದೇ ಗೊತ್ತಾಗಲಿಲ್ಲ.ಅಷ್ಟರಲ್ಲಿ ತುಂಬಿದ ಜನಸಾಗರ ಬರೋ ಎನ್ನುತ್ತ ಬಸ್ಸಿನ ಬಾಗಿಲ ಬಳಿ ನುಗ್ಗಿದರು.ನನಗೆ ಕೊನೆಯೇ ಗತಿಯಾಯ್ತು. ನೀನು ಮಾತ್ರ ಮುಂಬದಿಗೆ ಹೀಗೆ ದಾರಿ ಮಾಡಿಕೊಂಡು ಒಳಹತ್ತಿದೆ, ಆಗಲೆ ಕಣೆ ಹೊರಗೆ ನಿಂತಿದ್ದ ನನ್ನನ್ನು ನೀನು ತಿರುಗಿ ನೋಡಿದ್ದು,ನಾನಂತು ನೀನು ನನ್ನನ್ನೆ ನೋಡಿದ್ದೆಂದೆ ಅಂದುಕೊಂಡುಬಿಟ್ಟಿದ್ದೇನಾದ್ದರಿಂದ ಅದನ್ನು ಬದಲಿಸಲಾಗದು.ನೀನು ಸೀಟು ಸಿಕ್ಕಿ ಎಲ್ಲೋ ಕೂತೆಯೆಂದುಕೊಂಡೆ. ಜಗಳ ಗಿಗಳ ಮಾಡದೇ ನಿಧಾನವಾಗಿ ಬಸ್ ಹತ್ತಿ ಸಂಭಾವಿತನಾಗಿದ್ದೆ ಗೊತ್ತಾ ನಾನು,ಜನ ತಳ್ಳಿಕೊಂಡು ನನ್ನ ಹಿಂದೆಲ್ಲೋ ಒಂದು ಸೀಟಿನ ಬಳಿ ತಂದು ನಿಲಿಸಿದ್ದರು.ನಾನು ಬಸ್ಸಲ್ಲಿ ಬಾಗಿ ಹಣುಕಿ ನಿನ್ನ ಹುಡುಕಿದೆ ಕಣೆ,ಬಸ್ಸು ಇನ್ನರ್ಧ ಗಂಟೆ ತಡವಾಗಿ ಬರಬಾರದಿತ್ತೆ ಅಂದುಕೊಂಡು ಕಳವಳಿಸಿದ್ದೆ.ನೀನು ಅಲ್ಲೆ ಡ್ರೈವರ್ ಸೀಟಿನ ಹಿಂಬದಿ ನಿಂತಿದ್ದೆ.ಆಗಲೂ ನಿನ್ನ ಬಿಳಿಗೆನ್ನೆ ನನಗೆ ಸ್ಪಷ್ಟವಾಗಿ ಕಾಣುತಿತ್ತು. ನಂತರ ನಿನಗೆಲ್ಲೋ ಸೀಟು ಸಿಕ್ಕಿದಾಗ ನೀನು ನನಗೆ ಕಾಣದಾದೆ,ನಾನು ನಿನ್ನ ಹುಡುಕಲೆತ್ನಿಸಿ ಪಕ್ಕದವನ ಬಳಿ ಬಯ್ಸಿಕೊಂಡಿದ್ದೆ.

ಕಡೆಗೆ ಆ ರಶ್ಶಿನಲ್ಲಿ ನೀನೆಲ್ಲಿಳಿದೆಯೋ ಗೊತ್ತಾಗಲಿಲ್ಲ. ಆಗ ರಶ್ಶಿನ ಜನರನ್ನು ಒಳಗೊಳಗೆ ಬಯ್ದುಕೊಂಡಿದ್ದೆ.

ಮನೆ ತಲುಪಿದಾಗ ಎಂದಿನ ಸುಸ್ತು ಮಾತ್ರ ನನ್ನಲ್ಲಿರಲಿಲ್ಲ. "I miss you" ಅಂತ ಮನಸ್ಸು ಮಾತ್ರ ನೂರುಸಾರಿ ಒಳಗೇ ಕೂಗಿ ಹೇಳುತ್ತಿತ್ತು. ಮರುದಿನಕ್ಕೆ ನಾನು ಇನ್ನೂ ಹಾಕಿರದ ಹೊಸಾ ಬಟ್ಟೆಯನ್ನೆ ರೆಡಿ ಮಾಡಿಕೊಂಡಿದ್ದೆ,ನಾಳೆ ಮಾತ್ರ ಹೇಗಾದರೂ ಮಾಡಿ ಬಸ್ಸಿನ ಬಗ್ಗೆ ಕೇಳುವವನಹಾಗೆ ಮಾಡಿ ನಿನ್ನ ಮಾತನಾಡಿಸಬೇಕೆಂದು ಹುಸಿಧೈರ್ಯದಲ್ಲಿ ಅಂದುಕೊಂಡು ಒಳಗೊಳಗೇ ಎದೆಬಡಿತ ಹೆಚ್ಚಿಸಿಕೊಂಡಿದ್ದೆ.ನಿನ್ನ ಕಡೆ ಒಂದು ಸುಮ್ಮನೆ ಸ್ಮೈಲ್ ಹರಿಬಿಡಬೇಕು,ನೀನು ಚಂದ ಕಾಣುತ್ತಿ ಎಂದು ಸಣ್ಣಗೆ ಹೇಳಬೇಕು ಎಂದೆಲ್ಲ ಅಂದುಕೊಂಡಿದ್ದೆ. ಅಂದುರಾತ್ರಿ ನನ್ನ ಕನಸಲ್ಲಿ ನೀನು ನಸುಗೆಂಪು ಸಲ್ವಾರ್ ತೊಟ್ಟು ನಿಂತ ಹಾಗೆ,ಅದರ ದುಪಟ್ಟಾದ ಮೇಲೆ ನವಿಲುಹೂವಿನ ಚಿತ್ರವಿದ್ದ ಹಾಗೆಲ್ಲ ಕಂಡು ಗಾಳಿಗೆ ಹಾರುತ್ತ ಆ ದುಪಟ್ಟಾ ನನ್ನೊಳಗೆ ನೂರು ಕನಸಿನ ಸಾಧ್ಯತೆಗಳನ್ನು ಬರೆದಿತ್ತು.

ಆ ರಾತ್ರಿ ನಾನು ಕಂಡ ಕನಸಿನ ಹೆಸರು ನೀನು ಕಣೆ ಹುಡುಗೀ..!

ಮರುದಿನ ಆಫೀಸಿನಿಂದ ಬೇಗ ಹೊರಟಿದ್ದೆ ನಿನ್ನ ಸಮಯದಲ್ಲೆ ಅಲ್ಲಿರಲೆಂದು.
ಆದಿನ ಹಾಗು ಸುಳ್ಳು ಹೇಳಬಾರದೆಂದರೆ ಇಂದಿಗೂ ನನ್ನ ಜಗತ್ತು ಅಂದರೆ ನೀನು, ಬರೀ ನೀನು ಮಾತ್ರ, ನಿನ್ನ ಹಸಿರು ದುಪಟ್ಟಾ,ಕಿವಿಯೋಲೆ, ಕೆನ್ನೆಗುಳಿ, ಚಂದದ ನಿನ್ನ ಕಣ್ಣು.
ಆ ಬಸ್ ಸ್ಟ್ಯಾಂಡ್ನಲ್ಲಿ ನಾನು ನಿನಗೆ ಹುಡುಕತೊಡಗಿದ್ದೆ, ಅದರೆ ನೀನು ಮಾತ್ರ ಬರಲಿಲ್ಲ, ಸಮಯ ಸರಿಯಾಗಿಯೆ ಇತ್ತು. ನಿ ಬಂದಿದ್ದ ಹಾದಿಯೆಲ್ಲ ಹುಡುಕಿ ಕಾದಿದ್ದೆ. ಅಷ್ಟರಲ್ಲೇ ಹೊರಟುಬಿಟ್ಟಿದ್ದೆಯಾ?

ನೀನಿಲ್ಲದೆ ಆ ಬುಸ್ ಸ್ಟ್ಯಾಂಡಿಗೆ ಚೆಲುವಿಲ್ಲ, ನಿನಗೆ ಬಸ್ಸಿನ ಬರುವ ಹೇಳಿದ ಆ ಕಂಟ್ರೋಲರನೂ ಸಪ್ಪಗಿದ್ದಾನೆ,ನೀ ನಿಂತಿದ್ದಿಯಲ್ಲ ಆ ಜಾಗ ಹಾಗೇ ಖಾಲಿಯಿದೆ ಕಣೆ,ಬಸ್ಸಿಗೂ ಅಂದಿನ ಹುರುಪಿಲ್ಲ.

ಈಗ ಕೂಡ ನಿನ್ನ ದಟ್ಟ ಹಸಿರು ಸಲ್ವಾರ್,ತುದಿಗೆ ಕನ್ನಡಿಗಳಿದ್ದ ದುಪಟ್ಟಾ, ಹಾಂ ನೀನು ಹಾಕಿದ್ದೀಯಲ್ಲ ಆ ಕಾಲ್ಗೆಜ್ಜೆ,ಕಿವಿಯೋಲೆ, ಕೆನ್ನೆಮಚ್ಚೆ ಈಗತಾನೆ ನೋಡಿದ್ದೇನೆನುವ ಹಾಗೆ ನಿಚ್ಚಳ ನೆನಪಿದೆ ಕಣೆ.ಯಾವ ಜನದ ಗದ್ದಲವಿದ್ದರೂ ನಿನ್ನ ಗುರುತಿಸಿಬಿಡುತ್ತೇನೆ.


ಒಮ್ಮೆ ಮತ್ತೆ ಬಂದುಬಿಡೇ, ನೀನು ಚಂದದ ಹುಡುಗಿಯೆಂದು ಹೇಳಲಿಕ್ಕಿದೆ,ಕೆನ್ನೆಗುಳಿ ನೋಡಲಿಕ್ಕಿದೆ.ನಿನ್ನ ಕಪ್ಪು ಕಣ್ಣುಗಳಲ್ಲಿ ಕಳೆದುಹೋಗಲಿಕುಂಟು.

ಹೀಗೆ ಕರೆದು ಮಾತನಾಡಿಸಬೇಕೆನುವಷ್ಟರಲ್ಲಿ ಕನಸುಗಳಾಚೆ ಸರಿದುಬಿಟ್ಟೆಯಲ್ಲೆ,ನಿನ್ನ ಕನಸುಗಳಲ್ಲದೆ ಬೇರಾವ ಕನಸನ್ನೂ ನಾನು ಬಯಸಿಲ್ಲ ಗೆಳತೀ,ನಿನ್ನ ಕಂಡಾಗಿನಿಂದ ನನ್ನ ಕನಸಿನ ಪ್ರತಿ ಅಧ್ಯಾಯದ ಮೊದಲ ಹಾಗು ಕೊನೆಯ ಪದ ನೀನು.ನಿನ್ನ ನೋಡಿದ ಆ ಬಸ್ಸ್ಟ್ಯಾಂಡ್ ಈಗ ನನ್ನ ಕನಸಿನ ಒಂದು ನವಿರು ಅಂಗವಾಗಿಬಿಟ್ಟಿದೆ ಅದೇ ಜಾಗ, ಅದೇ ಜನ,ಅವೇ ಬಸ್ಸುಗಳು,ಅದೇ ಗಾಳಿ ಆದರೆ ಅದರೆಡೆಗಿನ ನನ್ನ ನೋಟ ಬೇರೇನೆ ಆಗಿಬಿಟ್ಟಿದೆ. ಅದರೆಡೆಗೆ ನನ್ನ ಕಣ್ಣಲ್ಲಿ ಸದ್ದಿಲ್ಲದೇ ಒಂದು ಪ್ರೀತಿ ನಿಂತುಬಿಟ್ಟಿದೆ,ಅಲ್ಲಿ ಕಾಯುವ ಪ್ರತಿಗಳಿಗೆಯೂ ನೀನು ನೆನಪಾಗುತ್ತಿ,ನಿನ್ನ ಮುದ್ದು ಮುಖಕ್ಕಾಗಿ ಹುಡುಕುವ ನನ್ನ ಕಾತರಗಳಿಂದ ನನ್ನ ಕಾಪಾಡು ಹುಡುಗೀ.


ದಿನನಿತ್ಯ ಬಸ್ಸಿಗೆ ನನ್ನ ಜೊತೆ ಕಾಯುವ ನೂರು ಜನರಲ್ಲಿ ನಿನ್ನ ಹಸಿರು ದುಪಟ್ಟಾಕ್ಕಾಗಿ ಹುಡುಕುತ್ತೇನೆ.ನಿನ್ನ ಬಗ್ಗೆ ಬರೆಯಬೇಕೆಂದುಕೊಂಡ ಎಲ್ಲ ಕವಿತೆಯ ಸಾಲುಗಳೂ ನನ್ನಕಣ್ಣಲ್ಲಿ ನಿನ್ನ ಕಾಣುವಿಕೆಯನ್ನು ರಚ್ಚೆಹಿಡಿದು ನಿರುಕಿಸುತಿವೆ. ಒಂದು ದಿನ ಮತ್ತೆ ಹೀಗೆ ಬಂದುಬಿಡೆ.

                                                                                           ಇಂತಿ,
                                                                                           ನಿನ್ನ ಬರುವಿಕೆಯ ಹಂಬಲಿಸಿ ಕಾದಿರುವ ನಾನು.

15 November, 2010

ದಳಗಳಿಗಂಟಿದ ಕನಸ ಹರಡಿಕೊಂಡು ಕೂತಿದ್ದವಳು

ಚಿಟ್ಟೆಯ ರೆಕ್ಕೆ ಕಟ್ಟಿಕೊಂಡು ಹಾರಿದವಳು
ಕೊಳದ ಬಳಿ ತನ್ನಂತದ್ದೇ ಹುಡುಗಿಯರ ಕಂಡು ಕೆಳಗಿಳಿದಳು

ಹೆಸರೇನೆಂದು ಕೇಳಿದೆ
ಓ, ನನಗೆ ಹೆಸರೇ ಇಲ್ಲವೆಂದು ಜೋರಾಗಿ ನಕ್ಕಳು

ಜನ ನಿನ್ನ ಏನಂತ ಕರೀತಾರೆ
ಜನ ನನ್ನ ಹೆಸರಿಡಿದು ಕರೆಯುವುದೇ ಕಡಿಮೆ ಎಂದಳು

ಹೋಗಲಿ ನಾನು ನಿನ್ನ ಏನಂತ ಕರೆಯಲಿ
ನಿನಗಿಷ್ಟವಾದ ಹಾಗೆ, ಜನರೂ ಅವರಿಗಿಷ್ಟವಾದ ಹಾಗೇ ಕರೆಯುತ್ತಾರೆ

ನವಿಲುಗರಿ ತೋರಿಸುತ್ತೇನೆಂದು  ಕರೆದೊಯ್ದಳು
ಗರಿ ಮಾತ್ರ ಎಷ್ಟು ಹುಡುಕಿದರೂ ಸಿಗಲಿಲ್ಲ

ಮಳೆ ಎಂದರೆ ಇಷ್ಟವೆಂದವಳು
ಮಳೆಬರುವಾಗ ಯಾಕೋ ಜೋರಾಗಿ ಅಳುತ್ತಿದ್ದಳು

ಕಂಬಳಿಹುಳವೆ ಚಿಟ್ಟೆಯಾಗುತ್ತದೆ ಎಂದಾಗ
ಕತ್ತಲಲ್ಲಿ ಬಣ್ಣಗಳು ಕಾಣುವುದಿಲ್ಲವೆಂದೇನೇನೋ ಹೇಳುತ್ತಿದ್ದಳು

ಜಾಜಿ ಮಲ್ಲಿಗೆ, ದಾಸವಾಳ ಸಂಪಿಗೆ ಸೇವಂತಿಗೆಗಳ
ದಳಗಳಿಗಂಟಿದ ಕನಸ ಹರಡಿಕೊಂಡು ಕೂತಿದ್ದವಳು
ಇಂದು ಮಾತ್ರ ಸುಮ್ಮನೆ ಕೂತುಬಿಟ್ಟಿದ್ದಳು


10 November, 2010

ನಿನ್ನ ಕಣ್ಣ ಬಗೆಗಿನ ಮಾತು


ನಿನ್ನ ಕಣ್ಣಲ್ಲಿ ಏನಿಲ್ಲ ಹೇಳು 
ಆಗಾಧ ಸಾಗರವಿದೆ,
ಅದರೊಡಲಿನ ಪುಟ್ಟ ಹಸಿರು ಮೀನಿದೆ
ಮೀನ ರೆಕ್ಕೆಯ ಚಲನವಿದೆ

ಭುವಿಯಿಂದ ಬಾನಿಗೆ ಬಾಗಿದ
ಮಳೆಬಿಲ್ಲಿದೆ ನಿನ್ನ ಕಣ್ಣಲಿ,
ಮೋಡದ ಹನಿಮಳೆಯಿದೆ
ಒದ್ದೆ ಮಳೆಯ ಉಸಿರಿದೆ
ಗಿಡದ ಹಸಿರಿದೆ
ಮೊದಲ ಮಳೆಯ ಮಣ್ಣ ಕಂಪಿದೆ  

ನನ್ನ ಕನಸಿನ ನಾಳೆಗಳಿವೆ
ನಿನ್ನ ಕಣ್ಣಲಿ,
ನೂರು ಬಾರಿ ಹೇಳಬೇಕೆನಿಸುವ
ನನ್ನದೇ ಭಾಷೆಯ ಎರಡು ಪದಗಳಿವೆ 

ರಭಸದಿ ಹರಿವ ನದಿಯ ಅವಸರವಿದೆ,
ಸಣ್ಣ ತೊರೆಯ ನೀರವತೆಯಿದೆ
ನನ್ನ ನಿರಂತರ ಮಾತಿದೆ
ಎಲ್ಲ ಹೇಳುವ ನಿನ್ನ ಮೌನದ ದನಿಯಿದೆ

ನೂರು ಹೂವರಳಿದ ನಗುವಿದೆ
ನಿಂದೆ ಕೈಬಳೆಯ ಘನನವಿದೆ
ನನ್ನ ಉಸಿರು ಹೆಚ್ಚಿದ ಕ್ಷಣಗಳಿವೆ
ನಿನ್ನ ಒದ್ದೆ ಕೂದಲಿನ ಸಡಿಲ ಹಿಡಿತವಿದೆ

ನಿಚ್ಚಳ ಆಗಸದಂತ 
ಸೆಳೆವ ನಿನ್ನ ಕಣ್ಣುಗಳಲ್ಲಿ 
ನನ್ನೆದೆಯ ಚಡಪಡಿಕೆಯಿದೆ,
ಅದರೊಳಗಿನ ಕನವರಿಕೆಯಿದೆ
ನಿನ್ನೆಡೆಗೆ ನನ್ನನೆಳೆವ 
ಆ ನಿರಂತರ ಸೆಳಕಿದೆ

04 November, 2010

ಮನದಲ್ಲಿ ಬೆಳಗಲಿ ಹಣತೆ


ಜಿಡ್ಡುಗಟ್ಟಿದ ಹಣತೆಗಳನೆಲ್ಲ
ತೊಳೆದುಬಿಡಿ
ಹಳೆಬಟ್ಟೆಗಳಿಂದ ಹೊಸೆದ ಬತ್ತಿ
ಹೊಚ್ಚ ಹೊಸ ದೀಪವಾಗಲಿ
ಹೊಸ ಬದುಕು ಬೆಳಗಲಿ

ಕನಸಿನ ನಕ್ಷತ್ರಕಡ್ಡಿ
ಹೊತ್ತಿಸುತ್ತ
ಪ್ರತಿ ಮಗುವೂ
ಮನೆಯ ಹಣತೆಯಾಗಲಿ
ಬೆಂಕಿ ಪೆಟ್ಟಿಗೆಯಲ್ಲಿನ ಕಡ್ಡಿಗಳೆಲ್ಲ
ಹಣತೆ ಹಚ್ಚುವುದಕ್ಕೆ ಸಾಕಾಗಲಿ
ಊರ ಸುಡುವ ಬೆಂಕಿ
ಎಲ್ಲೂ ಹತ್ತದಿರಲಿ

ಮನದ ಬಾಗಿಲಲಿ ಬೆಳಗಲಿ
ಆಕಾಶಬುಟ್ಟಿ
ತಿಮಿರವನೋಡಿಸಿ ಎಲ್ಲರನು ಕಾಯಲಿ 

ಹೊಟ್ಟೆ ಕಿಚ್ಚಿನ ಬೆಂಕಿ
ಕೋಮುದ್ವೇಷದ ಬೆಂಕಿ
ಪ್ರೀತಿಯ ಮಳೆಗೆ ನಂದಲಿ
ಹೊಸ್ತಿಲಲಿ ಉರಿಯಲಿ
ಹಣತೆ
ಮನೆ ಮನದಲ್ಲಿ ದೀಪಾವಳಿ

We the people ನಾವು ಜನಗಳು





25 October, 2010

ಬಯಲುಸೀಮೆಯ ರೈತ


   ಧಾರವಾಡದ ಗೆಳತಿ ರೇಣು ಕ್ಲಿಕ್ಕಿಸಿದ  ಬಯಲುಸೀಮೆಯ ರೈತ ನನ್ನ ಪೆನ್ಸಿಲ್ಲಿನಲ್ಲಿ - ದೈನಿಕದ ಕ್ಷಣ  ನಮ್ಮೆಲ್ಲರ ಬಾಳಿಗೆ ಶಕ್ತಿ ಕೊಡುವಂತದ್ದು.

ಓ ನೀಲಿ ಮರಗಳೇ

ತೊಟ್ಟ ಬಟ್ಟೆ ಇಷ್ಟೂ ಕೆಡದ ಹಾಗೆ




ಕಸ ಹಾಕಲು ಬರುತ್ತಾರೆ  ಜನ
ತಿಂದು ಉಳಿದ ಮುಸುರೆ  
ಎಲ್ಲೋ ಕಸಿದ ತಿನಿಸು
ಬಿಸ್ಕತ್ತು ಕೊಟ್ಟೆ ಚೆಲ್ಲಾಪಿಲ್ಲಿ

ಉಟ್ಟ ಬಿಟ್ಟ ಸೀರೆ ಅಂಗಿ
 ಹರುಕು ಮುರುಕು ಮಂಡೆಕಸ
ಬಾಟ್ಲಿ,ಪಾರ್ಟಿ ಫ್ಯಾಷನ್ನು
ಮಾಡಿಬಿಟ್ಟ ಹೊಲಸನೆಲ್ಲ

ನಕಲಿ ನೋಟು, ತನಿಕೆ
ಫೈಲು ನ್ಯೂಸು ಪೇಪರ್ರು
ಮೆಟ್ಟಿ ಕೊಂದ ಯಾರದೋ ಕೈ
ಬಸಿದ ಉಸಿರು,ಫಳಫಳ
ಹೊಳೆವ ಹಳೆಯ ಭಾಷೆಯನೆಲ್ಲ

ಶಸ್ತ್ರ ಅಸ್ತ್ರ ಔಷ್ದಿ ಗಿವ್ಸ್ಡಿ
ಶವದ ಪೆಟ್ಟಿಗೆಗೆ ಜಾಸ್ತಿ ಕಮ್ಮಿ                                        
ಮುರುಕು ಚಪ್ಲಿ
ಹರಿದ ದೈನಿಕದ ತುಂಡು
ಉಳಿದುಕೊಂಡ ಪೌರುಷತ್ವದ ಟಾನಿಕ್ಕುಗಳನೆಲ್ಲ


 ಹೊಲಸು ಬೂದಿ ಒಲೆಯ ತುಂಬ
ಸುಳ್ಳು ಸೆಡವು ಉದ್ಧಾರದ
ಮಾತು ರಾಜಕೀಯ

ಜನ ಕಸ ಎಸೆಯಲು ಬರುತ್ತಿದ್ದಾರೆ

ಗವ್ವನೆಂಬ ಕತ್ತಲಲ್ಲಿ
ಸಂಜೆ ನಸುಕಿನಲ್ಲಿ
ಕೆಂಪು ಕೆಸರು ಮರೆತ ಹೆಸರು
ಭಿಕ್ಷೆ, ಸಾಲದ ಪತ್ರ ಎಲ್ಲವನ್ನು
ಹೊರಗೆ ಚೆಲ್ಲಿಬಿಟ್ಟರೆ
ನಮ್ಮ ಮನೆ ಎಷ್ಟು ಸ್ವಚ್ಛ

ಗಡಿಯ ತಂಟೆಯಲ್ಲಿ
ಒಡೆದ ಕನ್ನಡಿ ಹಿಡಿದು
ಗಗನಚುಂಬಿಗಳ ಸಂದಣಿಯಿಂದ
ಹೋರಾಡಿ ಗಳಿಸಿಕೊಂಡ
ಜೀವವಿಲ್ಲದ ತಮ್ಮವೇ
ಅಕ್ಷರಗಳನ್ನು ಮುಚ್ಚಿತಂದು
ಎಸೆದು ಹೋಗುತ್ತಾರೆ

ಅನರ್ಥವೆಂದು ಕಂಡ ಕನಸನೆಲ್ಲ,
ಆಸೆ ನಿರಾಸೆಗಳೊಳಗೆ ತಪ್ಪಿಹೋದ
ವಿಳಾಸಗಳನೆಲ್ಲ,

ನಾಳೆ ಎಸೆಯಲೋ
ಇನ್ನಷ್ಟು ಮಾಡಿಯೇ ಒಯ್ಯಲೋ
ಎನ್ನುತ್ತಾ ತೊಟ್ಟ ಬಟ್ಟೆ
ಇಷ್ಟೂ ಕೆಡದ ಹಾಗೆ
ಕಸ ಎಸೆಯಲು ಬರುತ್ತಾರೆ ಜನ
ವೆರಾಯಿಟಿ ವೆರಾಯಿಟಿ ಕಸ


















( 22 ಅಕ್ಟೋಬರ್,೨೦೧೦ರ ಕೆಂಡಸಂಪಿಗೆಯಲ್ಲಿ ಪ್ರಕಟಿತ )

21 October, 2010

ನಮ್ಮೊಳಗಿನ ಬುದ್ಧ



ಬುದ್ಧ ಯಾರಿಗೆ ಗೊತ್ತಿಲ್ಲ,
ಪುಟ್ಟ ಮಗುವೂ ಹೇಳುತ್ತದೆ-
ನಟ್ಟ ನಡುರಾತ್ರಿ ಎದ್ದುಹೋದನಂತೆ
ಬೋಧಿವೃಕ್ಷದಡಿ ಜ್ಞಾನವಾಯ್ತಂತೆ
ಬುದ್ಧನೆಂದರೆ ಶಾಂತಿ ಅಹಿಂಸೆ

ಕ್ರೌರ್ಯವೇ ಹೆಸರಾದವರು
ಜೀವ ವ್ಯಾಪಾರದವರು
ಹಣದಾಸೆಗೆ ಸಂತತೆಯ ಮರೆತವರೂ
ಹೇಳುತ್ತಾರೆ ಬುದ್ಧ ಗೊತ್ತೆಂದು
ಮತ್ಸರದ ಕಿಚ್ಚಂತ ಎದೆಯವರು
ಬಾಂಬಿನ ಭಾಷೆಯವರು
ಓಟಿನ ರಾಜಕೀಯದವರೂ
ಕ್ಲಬ್ಬು ಪಬ್ಬಲ್ಲೂ ಇಷ್ಟುದ್ದ
ಕೊರೆಯುತ್ತಾರೆ ಬುದ್ಧನ ಬಗ್ಗೆ,
ಕೇಳಿದರೆ ನಕ್ಕಾನು ಬುದ್ಧ



ಬುದ್ಧನೆಂದರೆ ಇಷ್ಟೆ ಅಲ್ಲ,

ಕಣ್ತೆರೆದು ನೋಡಿಕೊಂಡರೆ
ಒಮ್ಮೆ ನಮ್ಮೊಳಗಿನ ಬೆಳಕ,
ಒಣಜೀವದೊಳಗೆ ಪ್ರೀತಿ ತುಂಬಿ,
ಹರಿಯಬಿಟ್ಟರೆ ಅದನು ಎದೆಯಿಂದ ಎದೆಗೆ,
ಎಚ್ಚರಾದರೆ ನಮ್ಮೊಳಗಿನ ಮಾನವ
ನಮ್ಮೊಳಗಿನ ನಿರಮ್ಮಳತೆಯಾಗಿ,
ನೆಮ್ಮದಿಯಾಗಿ ಇರುತ್ತಾನೆ.
ಜಗದಳುವಿಗ ಕಾರಣ ಕಂಡುಕೊಂಡವ
ನಮ್ಮವನೆ ಆಗುತ್ತಾನೆ.

ಮತ್ತು ಹೇಳಿಕೊಳ್ಳಬಹುದು
ಬುದ್ಧ ನಮಗೂ ಗೊತ್ತೆಂದು.





















                                                                           ೨೦೦೮

( 07 ಸಪ್ಟೆಂಬರ್,2008ರ ಕರ್ಮವೀರದಲ್ಲಿ ಪ್ರಕಟಿತ )

13 October, 2010

ಕೆಲವು ಚಿತ್ರಗಳು









ಹೆಸರು ಮರೆಯಬೇಕಿದೆ

 ಹೊತ್ತೇರಿ ಇಳಿದರೂ ಕಾದು ಕುಳಿತಿದ್ದೆ
ಕಾರಿನ ಕಪ್ಪು ಗಾಜಿನ ಹೊರಗೆ
ಒಳಗೆ ನೀನಿಲ್ಲದ್ದು ನನಗೆ ತಿಳಿಯಲೇ ಇಲ್ಲ
                    0
ನೀನೊಲಿದರೆ ಕೊರಡು ಕೊನರುವುದೆಂದು
ಹಗಲೂ ರಾತ್ರಿ ಕಾದಿದ್ದೆ
ಅದು ಗೆದ್ದಲು ಹಿಡಿದು ಹೋದದ್ದು ನನಗೆ ಗೊತ್ತಾಗಲೇ ಇಲ್ಲ
                   0
ನಿರೀಕ್ಷೆಯಲ್ಲಿ ಹಚ್ಚಿಟ್ಟ ಹೊಸ್ತಿಲ ದೀಪ
ಆಗಲೇ ನಂದಿರಬೇಕು, ಪ್ರೀತಿ ಕಳೆದಮೇಲೆ
ನವಿಲುಗರಿ ನೆಲಗುಡಿಸಲಿಕ್ಕೇ ಲಾಯಕ್ಕಲ್ಲವೇ
                   0
ಪ್ರೀತಿ ಪ್ರಣತಿಯಂಥದ್ದು
ಎಂದಿದ್ದೆ ನೀನುಕರಗಿ ಉರಿದೆ ನಾನು
ನೀ ಮೈಯಷ್ಟೇ ಕಾಯಿಸಿಕೊಂಡೆ
                   0
ನಿನ್ನ ಬಗ್ಗೆ ಬರೆದ ಕವಿತೆಯ
ಮೊದಲ ಚರಣ ಗೆದ್ದಲು ತಿಂದು ಹೋಗಿದೆ
ಕವಿತೆಯ ಹೆಸರೂ ಮರೆಯಬೇಕಿದೆ
                  0
ಕಳೆದು ಹೋದರೆ ಹೋಗಲೆಂದು ಬಿಸಾಡಿದ್ದ 
ನೆನಪು ಮಾತ್ರ ಆಗಾಗ 
ಮಂಚದ ಬಳಿ ಕಾಲಿಗೆ ಸಿಕ್ಕುತ್ತವೆ 
                  0
ನನ್ನ ಗೋರಿಯ ಮೇಲೆ ಅರಳಿದ ಗುಲಾಬಿಯನ್ನು 
ಹೂವಿನಂಥ ಹುಡುಗಿಯರಿಗೆ ಹಂಚಿ 
ನೀನು, ಪ್ರೀತಿಯ ಬಗ್ಗೆ ತಿಳಿಸುತ್ತಿದ್ದೀಯಂತೆ 
                  0
ಪ್ರೀತಿಯಲ್ಲಿ ನೆಪವಿಲ್ಲವೆಂದು
ಹೇಳಿದ್ದೆ ನೀನು, ನಂಬಿದ್ದೆ ನಾನು
ನೀ ಹೋಗಿದ್ದರ ಕಾರಣ ಕೇಳಿರಲಿಲ್ಲ
                  0
ಹುಚ್ಚು ಪ್ರೀತಿಯಲ್ಲಿ ಅಂದುಕೊಂಡಿದ್ದೆ
ಸತ್ತರೆ ಸಮಾಧಿ ನಿನ್ನ ಮನೆಯಿರುವ ಬೀದಿಯಲ್ಲೇ ಎಂದು,
ಪುಣ್ಯಕ್ಕೆ ಈಗ ಅಲ್ಲಿ ಜಾಗವಿಲ್ಲ
                 0
ಬಾಗಿಲ ಕದವನ್ನು ಆಗಲೇ ಮುಚ್ಚಿದ್ದೇನೆ
ಬರುವನೆಂದು ಕಾದು ಕುಳಿತೇ
ಬದುಕು ಮುಗಿಯಬಾರದಲ್ಲ.



















( ಕನ್ನಡಪ್ರಭ ಸಾಪ್ತಾಹಿಕದಲ್ಲಿ ಪ್ರಕಟಿತ )

08 October, 2010

ಲಜ್ಜೆಗೆಂಪಾದ ನಿನ್ನ ಮೋರೆ ನೆನಪಾಗಿ

ಅಲ್ಲದ ಹೊತ್ತಲ್ಲಿ ನಿನ್ನ ನೀಲಿ ಕಿವಿಯೋಲೆ ನೆನಪಾಗಿದೆ
ಮಾತೆ ಬೇಡವೆಂದು ಮುನಿಸಿದರೂ ಒಂದೆ ನಿನ್ನ ಮಾತಿಗೆ ಕಾಯಬೇಕೆನಿಸಿದೆ
ನಿಶೆಯ ನೀರವತೆಯಲೂ ನಿನ್ನ ಇನಿದನಿಯ ಹುಡುಕಬೇಕೆನಿಸಿದೆ

ನಿನ್ನ ಬಿಳಿಗೆನ್ನೆಯ ಮೇಲಿನ ಕರಿಮಚ್ಚೆ ತನಗೆ ತಾನೇ ಉಪಮೆಯಾಗಿದೆ
ನಿನ್ನ ನವಿರು ಹೆಜ್ಜೆಯ ಗೆಜ್ಜೆಸದ್ದು ಕಿವಿತುಂಬ ತುಂಬಿದೆ

ಲಜ್ಜೆಗೆಂಪಾದ ನಿನ್ನ ಮೋರೆ ನೆನಪಾಗಿ
ಕೊಳಕನೆನ್ನುತ ಕೊಟ್ಟ ಮುತ್ತೊಂದು ನನ್ನ ನಾಚುವಂತೆ ಕಾಡಿದೆ