10 May, 2011

ಆಡುಮಳೆಯ ಜೊತೆಗೆ..

ಮೇ ತಿಂಗಳ ಸಂಜೆ ಮಳೆಯೆಂದರೇ ಹಾಗೆ,ಇಷ್ಟದ ಗೆಳತಿಯ ಹಾಗೆ.ಕಾಯಿಸುತ್ತದೆ,ಕಾಡಿಸುತ್ತದೆ,ಪ್ರೀತಿ ತೋರಿಸುತ್ತದೆ.ಬೇಕು ಬೇಕು ಎಂದೆನಿಸುತ್ತಿರುವ ಹಾಗೇ ನಾಳೆ ಬರುತ್ತೇನೆ ಎನ್ನುತ್ತಾ ಸದ್ದಿಲ್ಲದೇ ಹೊರಟುನಿಂತುಬಿಡುತ್ತದೆ.ಅದು ಜುಮುರು ಮಳೆ,ಅದು ಹನಿ ಮಳೆ,ಅದು ಕಿರಿಕಿರಿ ಮಳೆ,ಅದು ಪಿರಿಪಿರಿ ಮಳೆ, ಅದು ಮಗು ಮಳೆ, ಅದು ಗದ್ದಲದ ನಗು ನಗುತ್ತಾ ನಮ್ಮನ್ನೂ ನಗಿಸುವ ಪುಟ್ಟ ಹುಡುಗರಂಥ ಮಳೆ, ಬಯ್ದುಬಿಡಬೇಕೆಂದುಕೊಂಡರೂ ಮುದ್ದುಮಾಡಿಸಿಕೊಳ್ಳುತ್ತದೆ.ಈ ಮಳೆಯಲ್ಲಿ ನೆನಪಿನ ರಾಶಿಯಿದೆ.ಸುಸ್ತುಬಡಿದು ಪುದುಪುದು ಮನೆ ಸೇರಲು ಹೊರಟವರನ್ನು ನಿಲ್ಲಿಸಿ ತಲೆ ನೇವರಿಸುತ್ತದೆ,ಆರಾಗುವುದರೊಳಗೆ ಮನೆಸೇರಲೆಂದು ಪಾತ್ರೆ, ನೀರು,ಅಡುಗೆ ಸೀರಿಯಲ್ಲು ಎನ್ನುತ್ತ ಹೊರಟ ವ್ಯಾನಿಟಿ ಬ್ಯಾಗಿನ ಹೆಂಗಸರನ್ನೆಲ್ಲ ತಡೆದು ನಿಲ್ಲಿಸಿ ಬಯ್ಯಿಸಿಕೊಳ್ಳುತ್ತದೆ,ಇಲ್ಲ ಇಲ್ಲ ಎನ್ನುತ್ತಲೇ ಬೀಸಿ ಬರುವ ದಪ್ಪದಪ್ಪ ಹನಿಗಳು ತಾರಸಿಯನ್ನು ಟಪಟಪಿಸುತ್ತವೆ.ಈ ಮಳೆಗೆ ಕಿಟಕಿ ಬಾಲ್ಕನಿಗಳೆಂದರೆ ಬಲು ಅಕ್ಕರೆ,ಕಿಟಕಿಯೊಳಗೆಲ್ಲ ಇಣುಕದಿದ್ದರೆ ಸಮಾಧಾನವಿಲ್ಲ. ಈ ಮಳೆಗೆ ಕಿಟಕಿಯೇ ಇಲ್ಲದ ಕೋಟೆಯೊಳಗೆ ಕಂಪ್ಯೂಟರಿನ ವಿಂಡೋದಲ್ಲಿ ತಲೆಹುದುಗಿಸಿಕೊಂಡಿದ್ದವರೆಲ್ಲರನ್ನು ಬಾಲ್ಕನಿಗೆ ಕರೆದು ನಿಲ್ಲಿಸುವ ತಾಕತ್ತಿದೆ.
ಚಿತ್ರ: ನಾಗರಾಜ್ ಭಟ್

ಈ ಮಳೆ ಹದಿಹರೆಯದ ಮಳೆ,ಸುಮ್ಮನೆ ಸುರಿವ ಮಳೆಯಲ್ಲ, ತಾರಸಿಯಯ ಮೇಲೆ ಬೀಳುವುದಕ್ಕಿಂತ ಗೋಡೆಗೆ ಮುತ್ತಿಕ್ಕುವುದೇ ಪ್ರೀತಿ,ಬಾಲ್ಕನಿಯಗುಂಟ ಮುದ್ದಾಗಿ ಹನಿಸುತ್ತದೆ,ಹೊರಗಿಟ್ಟ ಚಪ್ಪಲಿಗಳನ್ನು ತೋಯಿಸುವುದಿಲ್ಲ,ನಿಂತ ಸೈಕಲ್ಲನ್ನು ತೋಯಿಸದೇ ಬಿಡುವುದಿಲ್ಲ,ಮನೆಸೇರಲು ಬಸ್ಸಿನಲ್ಲಿ ತುಂಬಿಕೊಂಡು ಬೆವರು ಸುರಿಸುವ ಜನರನ್ನು ಗಾಜಿನ ಹೋರಗಿಂದೇ ತಳಕ್-ತಳಕ್ ಎಂದು ತಾಕುತ್ತ ಎದೆಯ ಉಸಿರಿಗೆ ತಂಪನ್ನು ಸಂವಹನಿಸುತ್ತದೆ.ಆಫೀಸಿನಲ್ಲಿ ಬೈಸಿಕೊಂಡು ಜೀವನ ಬೇಸರವಾದ ಯುವಕನ ಅಂಗಿಯನ್ನು ನವಿರಾಗಿ ಒದ್ದೆಗೊಳಿಸುತ್ತದೆ.ಮೆಸ್ಸೇಜಿನಲ್ಲಿ ಹುದುಗಿ ನಗುತ್ತಿರುವ ಹುಡುಗಿಯ ಕೆನ್ನೆಯ ಮೇಲೆ ಹನಿಸುತ್ತದೆ,ಕಾಲೇಜು ಮುಗಿದು ಆಡಲು ನಿಂತ ಹುಡುಗರು ಇನ್ನೇನು ಗೆಲ್ಲಬೇಕೆಂಬ ಕ್ರಿಕೆಟ್ ಮ್ಯಾಚನ್ನು ಅಲ್ಲಿಗೇ ನಿಲ್ಲಿಸಿ ಮಜಾನೋಡುತ್ತದೆ.
ಮನೆಗೆ ಹಿಂತಿರುಗುವ ಪಾರಿವಾಳಗಳ ಬೂದುರೆಕ್ಕೆಗಳ ಮೇಲಿಂದ ಜಿಗಿದು ಸಂದಿಗೊಂದಿಗಳಲ್ಲಿ ಚಿಲಿಪಿಲಿಗುಟ್ಟುತ್ತಿದ್ದ ಎರಡೇ ಗುಬ್ಬಚ್ಚಿಗಳ ಕೊಕ್ಕನ್ನಷ್ಟೇ ತೋಯಿಸಿ ಕೆಳಗಿನ ಗೂಡಂಗಡಿಯವನ ಚಹಾ ಕೆಟಲಿನ ಮೇಲೆಯೇ ಬೀಳುತ್ತದೆ.ಹೊರಗಿಟ್ಟ ಬಿಂದಿಗೆಯ ಮೇಲೆಲ್ಲ ಬರ್ರನೆ ಸುರಿಯುತ್ತದೆ.ಒಬ್ಬಂಟಿ ಹುಡುಗನ ಕನಸಿನಲ್ಲಿನ ಬಾಡಿದ ಹೂವಿನ ಮೇಲೆಲ್ಲ ಬಿದ್ದು ಪ್ರೀತಿ ಚಿಗುರಿಸುತ್ತದೆ,ಒಣಗಿಹೋದ ಹೂಗಿಡದ ಎಲೆಯಮೇಲಿಂದ ಜಾರಿ ಬುಡದಲ್ಲಿ ಇಲ್ಲದಂತೆ ಮಾಯವಾಗುತ್ತದೆ.ಕೈಚಾಚಿ ನಿಂತ ಸಾವಿರ ಕಟ್ಟಡಗಳಿಂದ ತಪ್ಪಿಸಿಕೊಂಡು ಫ್ಲೋರು-ಫ್ಲೋರುಗಳನ್ನು ನೋಡದೇ ಲಿಫ್ಟಿನಲ್ಲಿ ಜಾರಿ ಬಂದವರನ್ನೂ,ಕಾಫಿಡೇಯಲ್ಲಿ ತಾಸು ಕೂತುಬಂದವರನ್ನೂ,ಎಲ್ಲ ಬಣ್ಣದಂಗಿಯಲ್ಲಿದ್ದರೂ ಕಾಣದ ಕಟ್ಟಡದ ಕೂಲಿಗಳನ್ನೂ ಬಿಡದೇ ತೋಯಿಸಿ ಹೆದ್ದಾರಿಯಲ್ಲಿ ಎಲ್ಲ ರಾಡಿಗಳನ್ನೂ ತೊಳೆಯುತ್ತ ಹರಿಯುತ್ತದೆ.ಗುಲಾಬಿ ಚಪ್ಪಲಿಗೆ ಹಳದಿ ಅಂಗಿಯನ್ನು ಜೊತೆ ಮಾಡುತ್ತದೆ.

ಶಾಲೆ ಬಿಟ್ಟು ದಾರಿತುಂಬ ಕೇಕೆ ಹಾಕಿ ನಡೆದಿದ್ದ ನೀಲಿ ಅಂಗಿಗಳ ಪಾಟೀಚೀಲಗಳನ್ನು ತೋಯಿಸುತ್ತದೆ,ಪಾಟೀಚೀಲದಲ್ಲಿನ ಡ್ರಾಯಿಂಗು ಪುಸ್ತಕದ ಸ್ಕೆಚ್‌ಪೆನ್ನಿನ ಚಿತ್ರವನ್ನು ಹುಡುಕಿ ಕೆಂಬಣ್ಣದ ಮನೆಯನ್ನೂ ನೀಲಿ ಆಕಾಶವನ್ನೂ ಒಂದುಮಾಡುತ್ತದೆ,ಜಗಳ ಮಾಡಿಕೊಂಡ ಟಾಮೆಂಜರಿಗಳ ಬಾಲಗಳಾನ್ನು ಜೋಡಿಸುತ್ತದೆ,ಪಾಟೀಚೀಲಗಳನ್ನು ಎದೆಗವಚಿಕೊಂಡು ಓಡುವ ಹುಡುಗರಿಗೆಂದೇ ತಗೋ ಎಂದು ಆಡುಮಾವಿನ ಹಣ್ಣುಗಳನ್ನು ರಾಶಿ ರಾಶಿ ಬೀಳಿಸುತ್ತದೆ.ಬಿಸಿಲಲ್ಲಿ ಸುಡುತ್ತ ನಿಂತ ಗೋಡೆಯ ಚಿತ್ರಗಳನ್ನೆಲ್ಲ ತೋಯಿಸುತ್ತದೆ.ರಸ್ತೆಬದಿಯ ತುಂಬ ಬೊಂಬೆಗಳನ್ನು  ಹರಡಿಕೊಂಡು ಕೂತವನನ್ನು ಪಜೀತಿಗಿಟ್ಟು ಕಾಡುತ್ತದೆ,ಬಿಸಿಲಿಗೆ ಕರಗಿದ ಕರಿಡಾಂಬರೂ ಈ ಮಳೆಗೆ ಕಾತರಿಸುತ್ತದೆ.ಬಸ್‌ಸ್ಟ್ಯಾಂಡಿನ ಬೆಂಚುಗಳನೆಲ್ಲ ತೋಯಿಸಿ ದಪ್ಪದಪ್ಪ ಹೆಂಗಸರನೆಲ್ಲ ಕಾಯಲು ನಿಲ್ಲಿಸುತ್ತದೆ. ಗಾಡಿಗಳ ಅವಸರಕ್ಕೆ ಎದ್ದು ಹೊಗೆಯಾಡುವ ಧೂಳನ್ನೆಲ್ಲ ಕೂತ್ಕೋ ಸುಮ್ಮನೆ ಎಂದು ಕೂರಿಸಿ ಮೊದಲ ಮಣ್ಣ ಕಂಪನ್ನು ಹರಡುತ್ತದೆ.ಮದುವೆ ಚಪ್ಪರದ ಒಳಗೆ ಹುಡುಗಿಯರನ್ನು ಹುಡುಕಿ ಸಣ್ಣಗೆ ಹಣುಕುತ್ತದೆ. ತಾರಸಿಯ ಮೇಲೆ ಗರಿಗರಿ ಒಣಗಿದ ಹಸಿರು,ಕೆಂಪು, ನೀಲಿ ಬಟ್ಟೆಗಳನ್ನು ರಪಾರಪಾ ತೋಯಿಸುತ್ತದೆ,ಅಮ್ಮನ ಪಕ್ಕ ಕುಳಿತ ಎರಡು ಜಡೆಯ ಪುಟ್ಟಿಯನ್ನು ಬಾಗಿ ಮುತ್ತಿಕ್ಕುತ್ತದೆ. ವರ್ಷಕ್ಕೊಂದೇ ಪಾರ್ಟಿ ಕೊಡಿಸುವ ಗೆಳೆಯ ಈ ಬಾರಿಯೂ ಬಚಾವಾಗುವಂತೆ ಮಾಡಿಬಿಡುತ್ತದೆ.ನಾಲ್ವರಿದ್ದರೆ ಮಾಡಿನ ತುಂಬ ಗದ್ದಲ, ಇಬ್ಬರಿದ್ದರೆ ಹಂಚಿಕೋ ಪ್ರೀತಿ.ಇಲ್ಲಿ ದೊಡ್ಡದೊಡ್ಡ ಹನಿಗಳ ಮಳೆ ಕಣೇ ಎಂದು ಗೆಳತಿಗೆ ಮರೆಯದೇ ಹೇಳಬೇಕೆನಿಸುತ್ತದೆ,ನಾನೂ ಬರುತ್ತೇನೆ ಕಣೋ ಎಂದು ರಚ್ಚೆಹಿಡಿಯಲಿ ಎಂಬ ಆಸೆ.ಏಕೆಂದರೆ ಈ ಮಳೇಯೇ ಹಾಗೆ.ಈಗತಾನೆ ಬಿದ್ದಮಳೆ ಕನಸೆಂಬಂತೆ ಇಲ್ಲವಾಗುತ್ತದೆ.ದೋಣಿಮಾಡಿ ಬಿಡುವ ಹಾಗೆ ಸುರಿಯದಿದ್ದರೂ ಮೇ ತಿಂಗಳ ಮಳೇಯೇ ಕೇಳಿಸಿಕೋ ನಾನು ನಿನ್ನನ್ನು ಪ್ರೀತಿಸುತ್ತೇನೆ.


('ವಿಜಯ ಕರ್ನಾಟಕ'ದ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟವಾದ ಬರಹ )

03 May, 2011

ಒಂದೇ ಬಸ್ಸಿನಲ್ಲಿ

ಸಪಾಟು ಬೀದಿಯೆಲ್ಲ
ಬಾಗಿಲು  ಮೆಟ್ಟಿಲು ಅಂತ ತುಂಬಿದೆ
ಒಂದೇ ಕಡೆ ಇದ್ದವರು,ಇಲ್ಲಿ ಇಲ್ಲದವರು
ಪಾತ್ರೆ ಪಗಡಿ  ಟಿಕಲಿ  ಬಾಕ್ಸು
ಅಂತ ಬೇರೆ ಮನೆಮಾಡಿಕೊಂಡು
ಉಣ್ಣುತ್ತಿದ್ದಾರೆ.

ಈ ಗೋಡೆಗೂ ಎಂಥ ತಾಕತ್ತು ನೋಡಿ
ಅದರದ್ದೇ ಅಕ್ಕಪಕ್ಕ
ಎಲ್ಲ ಬದಲಾಗಿಬಿಡುತ್ತದೆ
ಆ ಕಡೆ ನಿಮ್ಮ ಫೆಮಿಲಿ
ಈಕಡೆ ನಮ್ಮದು
ಮಾತು ಮುಗಿದಾಗ ಅಗುಳಿ ಹಾಕಿಕೊಳ್ಳಿ

ಕದತೆರೆದವರು ನೆನಪುಮಾಡಿಕೊಂಡು
ನಕ್ಕರೆ ನೆನಪು ಇಲ್ಲವಾದರೆ ಯಾರೋ
ಯಾರ ನೆನಪನ್ನು ಯಾರು ಇಟ್ಟುಕೊಳ್ಳಬೇಕು
ಗಂಡ ಹೆಂಡತಿ
ಪ್ರೀತಿಯಿಂದ ಮಾತನಾಡಿ ವರ್ಷವಾಯಿತು
ಒಂದೇ ಮಾಡಿನ ಕೆಳಗಿದ್ದಾರೆ ಎಂಬುದು ನಿಜ
ಒಂದೇ ರೇಖೆಯ ಮೇಲೆ ನಡೆಯುವುದು ಕಷ್ಟಾ ಮಾರಾಯ

ಒಂದೊಂದಾಗಿ ಬಾಗಿಲ ಮರೆಯಿಂದ
ಹೊರಬಂದವರು
ಹೊಸ ಶರ್ಟು-ಪ್ಯಾಂಟು
ಅಂದುಕೊಂಡರೆ ಹೊಸಾ ಮುಖ
ಇಲ್ಲವಾದರೆ ಅದೇ ಹಳತು

ಅದೋ ಅವನ  ಕೈಲಿ ಹಳೇ ಮೈಸೂರು ಸಿಲ್ಕಿನ ಪ್ಲಾಸ್ಟಿಕ್ ಕೊಟ್ಟೆ
ಹಿಂದಿನವನ ಕೈಲಿ ರೇಡಿಯೋದಂಥ ಮೊಬೈಲು
ವಾಲುವವನ ಕಣ್ಣಲ್ಲಿ ನಿನ್ನೆ ರಾತ್ರಿಯದೆ ತೇಲುವ ಜಗತ್ತು
ಕಸ ಹೊಡಿಯುತ್ತಿದ್ದವರನ್ನು ನುಣುಪಾಗಿ ದಾಟಿ
ಮಾಯವಾಗುತ್ತಿದ್ದಾರೆ ಕಪ್ಪು ಬೂಟಿನ ಮಂದಿ
ತಳ್ಳುಗಾಡಿಯ ಹುಡುಗ ಎಡಗಾಲಿನ ಹವಾಯಿ ಚಪ್ಪಲಿ ಹುಡುಕುತ್ತಿದ್ದಾನೆ
ಪಾಟೀಚೀಲ ಹಿಡಿದ ಅಮ್ಮ ಕಾಳಜಿ ಮಾಡಿದರೆ
ದೊಡ್ಡವನಾಗಿದ್ದೇನೆ ಎಂದು ಕೈ ಜಾರಿಸಿಕೊಂಡು
ಕೆಂಪುಚಡ್ಡಿಯ ಹುಡುಗ ರಸ್ತೆ ದಾಟುತ್ತಾನೆ

ಗ್ಯಾಸಿನವನು ಹತ್ತು ರುಪಾಯಿ ಕಡಿಮೆ ಅಂತ ತಗೊಂಡಿದಾನೆ
ಒಂದೇ ಬಸ್ಸಿನಲ್ಲಿ ಹೋಗಿದ್ವಿ ಅಂತ ನಕ್ಕಿದ್ದಾನೆ
ಅಲ್ಲಿ ಮೇಲೆ ಹಬ್ಬಿದ
ವಾಯರನ್ನು ಹಿಡಿದು ನಡೆದರೆ ಎಲ್ಲರೂ ನಮ್ಮವರೇ

ಬೋರಿಸರ  ಅಪ್ಪ ಮಾಡಿಸಿದ್ದಲ್ವೆ 
ನಮ್ಮನೆಯವರೇ ಹಬ್ಬಕ್ಕೆ ಕೊಡಿಸಿದ್ದು
ಎಂದು ನಾಚಿದ್ದಾಳೆ
ಆ ಗೋಡೆ ಈ ಗೋಡೆಯ ನಡುವೆ ನಿಂತು
ಬೇರೆ ಗೋಡೆಯ ಜನರ ಬಗ್ಗೆ  ಹಂಗಂತೆ ಮಾರಾಯ್ತಿ
ಅಂತ ಕತೆ ಹೇಳಿ ಬಾಗಿಲು ಹಾಕಿಕೊಂಡು ಟಿವಿ ಹಚ್ಚಿದ್ದಾರೆ.

ಬುಧ್ಧಿವಂತನಂತೆ ಮಾರಾಯ ನೀನು
ಪ್ರೀತಿಗೀತಿ ಅಂತೆಲ್ಲ ಆಡ್ತಾರೆ ಎಲ್ಲ ಹಾರ್ಮೋನು
ಅಂತ ನಗುವುದಿದೆಯಲ್ಲ-
ಸೂಪರ್ನೋವಾ,ಕಪ್ಪು ರಂದ್ರ ಅಂತೆಲ್ಲ ಲೆಕ್ಚರ್ ಕೊಡಬೇಡ
ಒಂದು ಸಾರಿಯಾದರೂ ಶುದ್ಧ ನಕ್ಷತ್ರಗಳನ್ನು ನೋಡು.