29 June, 2011

ಬಸ್‌ಸ್ಟ್ಯಾಂಡು

ಅದು ಒಂಥರಾ ಜಾಗ ಆ ಜಾಗ ಕಣ್ಣು ಬಿಡುವುದು ಈಗಷ್ಟೇ ಅಲ್ಲೆಲ್ಲೋ ಮೂಲೆಯಿಂದ ಎದ್ದುಕುಳಿತ ಹಮಾಲಿಗಳು, ರಾತ್ರಿ ಪಾಳಿಯ ಕಂಡಕ್ಟರುಗಳು ತಮ್ಮ ತಮ್ಮ ಟ್ರಾವೆಲಿಂಗ್‌ ಮನೆಯ ದಿನಚರಿಗಳನ್ನು ಹವಾಯಿ ಚಪ್ಪಲಿ,ಬ್ರಶ್ಶು,ಪೇಸ್ಟು ಹುಡುಕುವುದರೊಂದಿಗೆ ಶುರುಮಾಡುತ್ತಾರಲ್ಲಾ ಆಗ.ಅದರ ಹೆಸರು ಬಸ್‌ಸ್ಟ್ಯಾಂಡು.ಅಜ್ಜನ ಮನೆಗೆ ಹೋಗಲು ಬೆಳಬೆಳಿಗ್ಗೆಯೇ ಅಮ್ಮನೊಟ್ಟಿಗೆ ಬಂದ ಪುಟ್ಟನ ಕೇಕೆಯಿಂದ, ಅವಸರವಾಗಿ ಬಸ್ಸಿಗೆ ಓಡಿಬಂದ ಕಾಲೇಜು ಹುಡುಗಿಯ ಟಿಫಿನ್ ಬಾಕ್ಸು ಓಪನ್ ಆಗುವ ಘಮದಿಂದ,ಬಗೆಬಗೆಯ ಬಣ್ಣದ ಚಪ್ಪಲಿಗಳ ಟಪಟಪದಿಂದ,ಅಲ್ಲೇ ಚಿಲಿಪಿಲಿಗುಟ್ಟಾಗಲೇ ಇರುವು ಅರಿವಾಗುವ ಪುಟ್ಟ ಗುಬ್ಬಚ್ಚಿ,ಇಣಚಿಗಳಿಂದ ಆ ಬಸ್‌ಸ್ಟ್ಯಾಂಡಿಗೆ ಅಸ್ತಿತ್ವ. ಅಲ್ಲಿ ಯಾರು ಬರುವುದಿಲ್ಲ ಎನ್ನುವ ಹಾಗೆಯೇ ಇಲ್ಲ, ಅಜ್ಜ ಅಜ್ಜಿಯಿಂದ ಹಿಡಿದು ಹಾಲುಗಲ್ಲದ ಹಸುಳೆಯವರೆಗೆ ಅತಿಥಿಗಳು,ಸ್ವಾಮಿ ನಾರಾಯಣನಿಂದ ಹಿಡಿದು ಹರುಕು ಅಂಗಿಯ ಬೇಡುವ ಮುದುಕನವರೆಗೆ ಎಲ್ಲರಿಗೂ ಜಾಗ ಉಂಟು.ಅದನ್ನು ನಾವೆಲ್ಲ ಬಸ್‌ಸ್ಟ್ಯಾಂಡೆಂದು ಕರೆದರೆ ಬೀದಿಬದಿಯ ಕೂಲಿಯವನಿಗೆ,ಬೆಳಗಾಗೆದ್ದು ಪೇಪರ್ ಹಂಚುವವನಿಗೆಲ್ಲ ರಾತ್ರಿ ಮಲಗಲು ಅದೇ ಮನೆ .ಆಂಥ ಬಸ್‌ಸ್ಟ್ಯಾಂಡುಗಳಲ್ಲಿ ಚಾದರ ಹಾಸಿ ಸುತ್ತಿ ಮಲಗಿ ಕನಸು ಕಾಣಬಹುದು ಎಂಬುದು ಕೆಟ್ಟಕನಸಿಗಿಂತಾ ಸುಂದರ..! ದಿನ ಬೆಳಗಾದರೆ ಸಾವಿರ ಹೊಸಮುಖಗಳು ಹುಡುಕಿಕೊಂಡು ಬರುವ ಬಸ್‌ಸ್ಟ್ಯಾಂಡೇ ಹಾಗೆ. ಗಿಜಿ ಗಿಜಿ ಕೇಳಿ ಅದಕ್ಕೆ ಬೇಜರಾಗಿಲ್ಲವೇ? ಆಗಿರಬಹುದು ಇಲ್ಲ ಅದೇ ಇಷ್ಟವಾಗಿರಬಹುದು. ಅಲ್ಲಿ ಬರುವ ಜನರದೇ ಒಂದು ವೆರಾಯಿಟಿ,ಪಟ್ಟೆ ಪಟ್ಟೇ ಅಂಗಿಯ ಶಿಸ್ತು ಬೂಟಿನ ಶಾಲೆ ಹುಡುಗರು,ಹೊಸಾ ಹೆಂಡತಿ ಕೈ ಅಡುಗೆಯ ಟಿಫಿನ್ ಬಾಕ್ಸನ್ನು ನಿಧಿಯೆಂದು ಕೈಲಿ ಹಿಡಿದಿರುವ ಯುವಕನಿಂದ, ಎರಡು ರುಪಾಯಿ ಸೇಂಗಾ ಬಿಚ್ಚಿಕೊಂಡು ತಿನ್ನುವ ಹುಡುಗರಿಂದ, ಕ್ಯಾಲೆಂಡರ್ ಮಾರಿ ಎರಡು ಮಕ್ಕಳನ್ನು ಸಾಕುವವನಿಗೆ ಅದೇ ಜಾಗ ಆಗಬೇಕು.ಈ ಬಸ್‌ಸ್ಟ್ಯಾಂಡಿನ ಸುತ್ತ ಹೊಸತೇ ಊರುಗಳು ಹುಟ್ಟಿಕೊಳ್ಳುತ್ತವೆ, ಬೆಂಗಳೂರೋ ಮಂಗಳೂರೋ ಬಸ್‌ಸ್ಟ್ಯಾಂಡಿನ ಸುತ್ತ ಬೆಳೆದ ಊರುಗಳೇ. ಅಲ್ಲೇ ಸುತ್ತ ದೋಸೆ ಅಂಗಡಿ,ಮಂಡಕ್ಕಿ ಶಾಪು,ಆಮ್ಲೆಟ್ಟಿನ ಟಪರಿ ಹೀಗೆ.ಅಗ್ಗದ ಸಾಮಾನುಗಳೇನಾದರೂ ಬೇಕಾದರೆ ಇತ್ತ ಬನ್ನಿ ಎನ್ನುವ ಹಾಗೆ.

ಎಲ್ಲ ಊರುಗಳನ್ನು ನೋಡಿ ಬರುವ ಬಸ್ಸು ಈ ಬಸ್‌ಸ್ಟ್ಯಾಂಡಿನಲ್ಲಿ ತಾಸುಗಟ್ಟಲೇ ನಿಂತು ಸುತ್ತಿದೂರಿನ ಕಥೆ ಹೇಳುತ್ತದೆ.ಅಲ್ಲಿ ಹಂಗೆ ಇಲ್ಲಿ ಹಿಂಗೆ,ಅಲ್ಲಿ ಗದ್ದೆ ಎಲ್ಲಾ ಕುಯಿಲು ಮುಗಿಸಿ ಭತ್ತದ ವಜ್ಜೆಗಳನ್ನು ಹರವಿಕೊಂಡು ನಿಂತಿದೆ,ಚಿಲಿಪಿಲಿ ಗುಬ್ಬಿಗಳನ್ನು ಮಾತನಾಡಿಸಿದೆ,ಆ ಊರಲ್ಲಿ ಮನೆಕಟ್ಟುತ್ತಿದ್ದಾರೆ ಅಂದಿದ್ದೆನಲ್ಲ, ಈಗ ಅಲ್ಲಿ ಮನೆ ಎಲ್ಲ ಎದ್ದು ನಿಂತು ಆ ಮನೆಯ ಸಣ್ಣ ಪಾಪುವೊಂದು ದಿನವೂ ಕೈಬೀಸದಿದ್ದರೆ ನನಗೂ ಸಮಾಧಾನವಿಲ್ಲ ಎನ್ನುವಂತೆ ಆಗಿದೆ ಗೊತ್ತಾ.., ಇಂದು ಮುಂಜಾನೆ ತಿರುವಿನ ಎದುರು ಜಿಂಕೆ ದಂಡು,ಈ ಪ್ಯಾಟೆಯಲ್ಲಿ ತಿರುಗುವುದು ಅಂದರೆ ಯಾರಿಗೂ ಬೇಡದ ಗೋಳು ಎಲ್ಲರಿಗೂ ನನ್ನ ರೋಡೇ ಆಗಬೇಕು ಹಾಗೆ, ಹೀಗೆ ಏನೇನೋ ಕತೆ.ಕೇಳಿನೋಡಿ ಈ ಬಸ್‌ಸ್ಟ್ಯಾಂಡಿನ ಬಳಿಯೂ ಅಂತದ್ದೇ ನೂರು ಕಥೆಗಳಿವೆ.ದಿನವೂ ಸೇರುವ ಪ್ರೇಮಿಗಳದು ಒಂದಾದರೆ, ಶಾಲೆ ಮಕ್ಕಳ ಶಾಲೆಯ ದಿನಚರಿಗಳ ಕತೆ ಇನ್ನೊಂದು, ಕೆಲ ಊರುಗಳಲ್ಲಿ ಬಸ್ಸಿನಿಂದ ಬಸ್ಸಿಗೆ ಮೂರು ತಾಸುಗಳ ಅಂತರವಿರುತ್ತದೆ,ನಡುವಿನ ವೇಳೆಯೇನಾದರೂ ಬಿಡುವ ಶಾಲೆಯಾದರೆ ಮಕ್ಕಳ ಹೋಮ್‌ವರ್ಕ್ ಅಲ್ಲೇ ನಡೆಯುವುದು.ನಾವೆಲ್ಲ ಹೈಸ್ಕೂಲಿಗೆ ಹೋಗುವಾಗ ಸಂಜೆ ತಾಸುಗಟ್ಟಲೆ ಬಸ್ಸಿಗೆ ಕಾಯಬೇಕಾಗುತ್ತಿತ್ತು, ಹುಡುಗಿಯರೆಲ್ಲ ಕಷ್ಟಪಟ್ಟು ಆಗಲೇ ಹೋಮ್‌ವರ್ಕ್‌ ಮಾಡುತ್ತಿದ್ದರೆ ಹುಡುಗರು ನಮ್ಮದನ್ನೂ ಅವರಿಗೇ ಬರೆಯಲು ಕೊಟ್ಟು ಕ್ರಿಕೆಟ್ ಆಡುವುದಿತ್ತು. ಬಸ್‌ಸ್ಟಾಂಡಿಗೆ ಎಲ್ಲ ಊರುಗಳನ್ನು ಒಂದೇ ಸೇರಿಸುವ ಉಮೇದಿ.ಬಸ್‌ಸ್ಟ್ಯಾಂಡಿನಲ್ಲಿ ಕೂತು ಹರಟದೇ ಹೋದ ಪ್ರೇಮಿಗಳು ನಿರ್ಭಾಗ್ಯರ ಲಿಸ್ಟಿಗೆ ಸೇರುತ್ತಾರೆ.ನಮ್ಮ ಊರಿನಲ್ಲೊಬ್ಬ ಹಮಾಲಿ ಕೆಲಸ ಮಾಡಿಕೊಂದಿದ್ದವನಿದ್ದ ಅವನದು ಯಾವ ಜಾತಿಯೊ ಪಾತಿಯೋ ಆದರೆ ಬಸ್‌ಸ್ಟ್ಯಾಂಡಿನಲ್ಲಿ ಯಾರು ಏನು ಲಗೇಜು ಹಿಡಿದು ನಿಂತಿದ್ದರೂ ಎದುರಿಗೆ ಹಾಜರಾಗುತ್ತಿದ್ದ ಅವನ ಹೆಸರು ಸರ್‌ನೇಮ್ ಎಲ್ಲ ಬಿಡಿ ಎಲ್ಲರೂ ಕರೆಯುವುದು ಬಸ್‌ಸ್ಟ್ಯಾಂಡ್ ಪಾಂಡು ಎಂದೇ, ಹಾಗೆ ಎಷ್ಟೋ ಜನರು ಹೊತ್ತಿನ ಅನ್ನ,ಐಡೆಂಟಿಟಿ ಕಂಡಿದ್ದು ಇದೇ ಬಸ್‌ಸ್ಟ್ಯಾಂಡ್‌ನಲ್ಲಿ.


ನಮ್ಮ ಊರುಗಳಲ್ಲಿ ಬಸ್‌ಸ್ಟ್ಯಾಂಡ್‌ಗಳು, ಬಸ್‌ಸ್ಟಾಪ್‌ಗಳಿಗೆ ಬೇರೆಯದೇ ರೂಪ, ದೊಡ್ಡ ಬಸ್ಸುಗಳನ್ನು ತಿರುಗಿಸಿ ತಿರುಗಿಸಿ ಆದ ಬಯಲನ್ನೇ ಬಸ್‌ಸ್ಟ್ಯಾಂಡೆಂದು ಕರೆಯುವುದು,ಆ ಬಸ್ಸುಗಳು ಹೋಗುವಾಗ ಟಾರುರಸ್ತೆಗೆ ನೂರು ಕಾಲುದಾರಿ,ಅವುಗಳ ಪಕ್ಕ ಒಂದು ಮರದ ಕೆಳಗೆ ಜಾಗ ಸ್ವಚ್ಚ ಮಾಡಿ ಗೂಟ ಹುಗಿದೋ, ಒಣಗಿದೆಲೆಯ ಕೊಂಬೆಯನ್ನು ನೇತುಹಾಕಿಯೋ ಗುರುತು ಮಾಡಿಟ್ಟು ನಾಲ್ಕು ಜನ ನಿಂತರೆ ಅದೇ ಬಸ್‌ಸ್ಟಾಪು. ಎಲ್ಲೆಲ್ಲೋ ಒಂದೆರಡು ಕಡೆ ವ್ಯವಸ್ಥಿತ ಬಸ್‌ಸ್ಟ್ಯಾಂಡುಗಳು ಸ್ಟಾಪುಗಳು ಇವೆ. ಇಂತ ಬಸ್‌ಸ್ಟ್ಯಾಂಡುಗಳ ವಯಕ್ತಿಕ ಹಿನ್ನೆಲೆಗಳ ಮೇಲೆ,ಅಲ್ಲಿ ನಿಲ್ಲುವ ಜನರ ಮೇಲೆ,ಪ್ರಣಯ ಕಥೆಗಳ ಮೇಲೆ ದಂತಕತೆಗಳ ಮೇಲೆ ಅವುಗಳ ನಟೋರಿಸಿಟಿಯೋ,ಪ್ರಸಿಧ್ಧಿಯೋ,ಅಡ್ಡನಾಮಗಳೋ ಇರುತ್ತವೆ. ಜಗತ್ತಿನ ಪರಮ ಸೀಕ್ರೇಟುಗಳು ಲೀಕಾಗುವ ಜಾಗವೂ ಅದೇ.

ಅಲ್ಲಿ ಹಳೇ ಹಾಡಿನ ಗುಂಗು ಮತ್ತು ಹರೆಯದ ಹುಡುಗಿಯರ ದಂಡು. ಆ ಮೂಲೆಯ ಕಂಬದ ಬಳಿ ಹೊಸಾ ಪ್ರೇಮಿಗಳ ಯುಗಳ ಗೀತ. ಮನೆ ಸಾಮಾನು,ಮಗಳಿಗೆ ಪೆಟ್ಟಿಕೋಟು, ಅಂಗಿ, ಹೊಸಾಪಾತ್ರೆ ತಂದುಕುಳಿತ ಗಂಡಹೆಂಡತಿಗೆ ಬಸ್ಸು ಇನ್ನೆರಡು ಗಳಿಗೆ ತಡೆದು ಬರಲಿ ಎಂಬ ಆಸೆ.ಸೂರ್ಯ ಆಕಡೆಗಿಂದ ಹುಟ್ಟಿ ಈಕಡೆ ಮುಳುಗುವ ಒಳಗೆ ಎಷ್ಟು ಜನರ ಉಸಿರುಗಳ ಉಸ್ತುವಾರಿ ವಹಿಸಿಕೊಳ್ಳುತ್ತದೆ ಈ ಬಸ್‌ಸ್ಟ್ಯಾಂಡು.ಮುದ್ದು ಕಂದನನ್ನು ಎತ್ತಿಕೊಂಡು ಬಸ್ಸು ಹಿಡಿಯಲು ಓಡುತ್ತಿದ್ದ ತಾಯಿಯ ಪ್ರೀತಿ ಈ ಬಸ್‌ಸ್ಟ್ಯಾಂಡಿನಲ್ಲೂ ಹರಡಿದೆ.ಬಸ್ಸಿಗಾಗಿ ಕಾಯುತ್ತ ನಿಂತ ಎಲ್ಲ ಜನಗಳ ಸ್ನಿಗ್ಧ ಆಸೆ ಅಲ್ಲಿ ನೆಲೆಗೊಳ್ಳುತ್ತವೆ.ಕತ್ತಲು ರಾತ್ರಿಯಾದರೆ ಮತ್ತೆ ಹಾಸಿಗೆಯಲ್ಲದ ಹಾಸಿಗೆ ಬಿಚ್ಚಿಕೊಂಡಾಗ ಬಸ್‌ಸ್ಟ್ಯಾಂಡಿನಲ್ಲಿ ಆ ರಾತ್ರಿಯ ಕೊನೇ ಬಸ್ಸನ್ನು  ಆಗಷ್ಟೇ ಬೀಳ್ಕೊಟ್ಟು ಬಂದು ನಿಂತ ಬಸ್ಸುಗಳು ಪಿಸುದನಿಯಲ್ಲಿ ಕಥೆ ಹೇಳುತ್ತ ಅಲ್ಲೇ ಒರಗಿದ ನೀಲಿ ಬಸ್ಸಿನ ಡ್ರೈವರನನ್ನು ಮಲಗಿಸುತ್ತವೆ.ಹಳ್ಳಿಯ ಬಸ್‌ಸ್ಟ್ಯಾಂಡುಗಳಲ್ಲಿ ದಾರಿತಪ್ಪಿದ ಎಮ್ಮೆಗಳು ಮೆಲುಕು ಹಾಕುತ್ತ  ಸಂಗೀತಾ ಐ ಲವ್ವ್‌ ಯೂ ಎಂಬ ಭಗ್ನ ಪ್ರೇಮಿಯ ಡೊಂಕು ಬರಹವನ್ನು ಓದುತ್ತಾ ಮಲಗಿರುತ್ತವೆ.