ಇವು ನನ್ನದೇ ತಲ್ಲಣಗಳ ಪ್ರತಿಮೆಗಳಂಥ ಯಾವುದೋ ಅರ್ಧಕ್ಕೇ ಬಿಟ್ಟ ಕವಿತೆಯ ಸಾಲುಗಳಂಥ,ಹಾಳೆಯ ಮೇಲೆ ಬಿಡಿಸಲಾಗದೆ ಉಳಿದ ಮನಸಿನ ಅರೆಬರೆ ಚಿತ್ರಗಳಂಥ ಏನೋ ಹೇಳಬೇಕೆಂದುಕೊಂಡು ಹೇಳಲಾಗದೇ ಉಳಿದುಹೋದ,ಹೀಗೇ ಬರೆದಿಟ್ಟು ಸಾಲುಗಟ್ಟಿದವುಗಳು.ಉದ್ದೇಶ ಮತ್ತು ಅರ್ಥ ಎರಡನ್ನೂ
ತಿಳಿದಂತೆ ಅರ್ಥೈಸಿಕೊಂಬುದು.
ಗೋಡೆಯ ಮೇಲಿನ ಚಿತ್ರಕೆಲ್ಲ ಚೌಕಟ್ಟು,ನಾಕಂಡ ಕನಸುಗಳು ಅದರೊಳಗೆ ಬಂಧಿಯಾಗಿವೆ.
ಎಲ್ಲರೆದುರೂ ಸಂಭಾವಿತನಾಗುವ ಹೊತ್ತಿಗೆ ಕನ್ನಡಿಯಲ್ಲಿ ಕಾಣುವ ಮುಖ ಬೇರೆಯದೇ ಆಗಿತ್ತು.
ಬೆಳಕಿನ ಮಾತನಾಡುತ್ತ ಕತ್ತಲಲ್ಲಿ ಕಳೆದುಹೋದವಳು ಹ್ಯಾಲೋಜನ್ ದೀಪದ ಸುತ್ತ ಸತ್ತ ಪತಂಗವಾಗಿದ್ದಾಳೆ.
ಸ್ತ್ರೀ ಸ್ವಾತಂತ್ರ್ಯ ಕನಸು ವಿಮಾನ ಎಂದೆಲ್ಲ ಮಾತನಾಡುತ್ತಿದ್ದವಳು ಒಂದು ದಿನ ಅಪ್ಪ ನೋಡಿದ ಹುಡುಗನೊಂದಿಗೇ ಮದುವೆಯಾದಳು.
ಭಟ್ಟರ ಜೋರುಮಂತ್ರ ಅರ್ಥವಾಗದೇ ಮದುಮಗಳ ಜರಿಸೀರೆಯ ಗೊಂಬೆಗಳು ತುಸು ಬೆದರಿವೆ.
ಕವಡೆಹಕ್ಕಿ ಕಚ್ಚಿಕೊಂಡ ಒಂದು ಕಂಬಳಿಹುಳದ ಮೈಗೆ ನಸುಗೆಂಪು ಮ್ಯಾಂಗನೀಸು ಧೂಳಿದೆ.
ಭತ್ತ ತಿಂದು ಹೋಗಲು ಬಂದ ಹಕ್ಕಿಗಳಿಗೆ ಬೀಜದ ಪೇಟೆಂಟಿನ ಬಗ್ಗೆ ಗೊತ್ತಿದ್ದಂತಿಲ್ಲ.
ಅಮ್ಮನ ಡಾನ್ಸ್ ಕ್ಲಾಸು, ಅಪ್ಪನ ಕಂಪ್ಯೂಟರ್ ಕ್ಲಾಸು, ಶಾಲೆ ಮಾಸ್ತರರ ಹೋಮ್ವರ್ಕು ಯಾರೋ ಹೇಳಿದ ಎಂಥದೋ ಕೋಚಿಂಗಿನ ಗದ್ದಲದಲ್ಲಿ ಗಾಳಿಪಟದ ಕನಸೊಂದು ಹಳತಾಗಿ ಬಣ್ಣಗೆಟ್ಟು ಹಾರಲಾಗದೆ ಉಳಿದುಬಿಟ್ಟಿದೆ.
ಹೊದೆಸಿದ ಮಾಡಿನ ಜೊತೆಜೊತೆಗೇ ಎಂದೋ ರಾತ್ರಿ ಕನಸ ಮರೆತವರನ್ನು ಇವರು ಯಾವುದೋ ವಿಳಾಸ ಕೇಳುತ್ತಿದ್ದಾರೆ.
ಊರೂರು ಸುತ್ತುವ ಲಾರಿಗೆ ಯಾವ ಊರಿನ ಹೆಸರೂ ಸರಿ ನೆನಪಿಲ್ಲ, ಸುತ್ತಿದೂರಿನ ನೆನಪಿಗೆ ಸವೆದ ಟೈರುಗಳಿವೆ.
ಕೆಲಸ ಕೊಡಿಸುತ್ತೇನೆಂದು ಹೋದ ಎಲ್ಲರ ವಿಳಾಸಗಳನ್ನೂ ಬರೆದಿಟ್ಟುಕೊಂಡ ತಂದೂರಿ ರೊಟ್ಟಿ ಸುಡುವ ಹುಡುಗನಿಗೆ ಮಾತ್ರ ಆ ಎಲ್ಲ ದೊಡ್ಡ ಲಾರಿಗಳ ನೆನಪಿದೆ.
ಕಾರಿನಲ್ಲಿ ಬಂದವರು ಕೂಲಿಜನರ ಹಾಡುಗಳ ವಿಡಿಯೋ ಮಾಡಿಕೊಂಡಿದ್ದಾರೆ, ಕಾಲಿನ ನಂಜಿನ ಬಗ್ಗೆ ಏನಾದರು ಔಸಧಿ ಗೊತ್ತಿದೆಯಾ ಕೇಳಲು ಅವನಿಗೆ ಹಿಂಜರಿಕೆ.
ಅವಳಿಗಾಗಿ ಮಲ್ಲಿಗೆ ತರಹೋದ ಸಂತೆಯಲ್ಲಿ ಬರೀ ಕನ್ನಡಿಗಳು ಮಾರಾಟಕ್ಕಿವೆ.
ಕಳೆದುಹೋದ ಕನಸುಗಳು ಎಂದೂ ತೆರೆಯದಿದ್ದ ಕಿಟಕಿಯನ್ನು ತೆರೆದ ಕೂಡಲೆ ಕಂಡಿವೆ, ಸತ್ತ ಅವನ್ನು ಎಲ್ಲಾದರೂ ಎಸೆದುಬರಬೇಕಿದೆ.
ಅವರು ಮೋಡದ ಬಗ್ಗೆ ಕವಿತೆ ಕಟ್ಟಿ ಹಾಡಿದರು, ಮೋಡ ಸುರಿದು ಮಳೆಯಾಯಿತು,ಹರಿದ ನೀರಲ್ಲಿ ಜನ ತಮ್ಮ ಪಾಲು ಎಣಿಸಿದರು,ಸಾಲದೆಂದು ಭೂಮಿಯ ಬಗೆದರು.
ದಿನವೂ ಹುಡುಗ ಹುಡುಗಿಯರ ಜೋರು ಪ್ರೀತಿಯಲ್ಲಿ ನಲುಗಿದ ಕಾಫಿಡೆಯ ಗೋಡೆಗೆ ರಾತ್ರಿಯಹೊತ್ತಿಗೆ ಕಷ್ಟದ ನಿಟ್ಟುಸಿರು.
ಡೈಪರ್ಸ್ ಪ್ಯಾಮ್ಪರ್ಸ್ಗಳಿಂದ ತುಂಬಿಹೋದ ಮೆಡಿಕಲ್ ಶಾಪಿನಲ್ಲಿ ಜ್ವರದ ಗುಳಿಗೆ ಕೇಳಲು ಈಗಷ್ಟೆ ಪೇಟೆಯಲ್ಲಿರಲು ಕಲಿಯುತ್ತಿರುವ ಹಳ್ಳಿಹುಡುಗ ತುಸುನಾಚಿದ್ದಾನೆ.
ಶಾಪಿಂಗ್ ಮಾಲುಗಳು ಬಾಗಿಲು ತೆರೆದುಕೊಳ್ಳುವ ಸರೀಹೊತ್ತಿಗೆ ಹಳ್ಳಿಹುಡುಗ ಕಂಡಕನಸಿನ ವಿಳಾಸ ಹುಡುಕುತ್ತಿದ್ದಾನೆ.
( 9 ಜನವರಿ,2011ರ ವಿಜಯ ಕರ್ನಾಟಕ ಸಾಪ್ತಾಹಿಕ ಲವಲVKಯಲ್ಲಿ ಪ್ರಕಟಿತ )
6 comments:
Good lines.. liked very much.
ಅವಳಿಗಾಗಿ ಮಲ್ಲಿಗೆ ತರಹೋದ ಸಂತೆಯಲ್ಲಿ ಬರೀ ಕನ್ನಡಿಗಳು ಮಾರಾಟಕ್ಕಿವೆ.
ಭಟ್ಟರ ಜೋರುಮಂತ್ರ ಅರ್ಥವಾಗದೇ ಮದುಮಗಳ ಜರಿಸೀರೆಯ ಗೊಂಬೆಗಳು ತುಸು ಬೆದರಿವೆ.
mechchuge galisida salugalu... :)
ನಿಮ್ಮ ಬ್ಲಾಗ್ ತುಂಬ ಚೆನ್ನಾಗಿದೆ.... ಆಪ್ತವೆನಿಸುವ ಬರವಣಿಗೆಗಳು...ಸೊಗಸಾದ ಚಿತ್ರಗಳು...
ಹಾಗೆಯೆ ನಿಮ್ಮ ಪ್ರೊಫೈಲ್ ಅದ್ಭುತ.. ನನಗಂತೂ ಹೊಟ್ಟೆಕಿಚ್ಚಾಯ್ತು.. :)
ಅಭಿನಂದನೆಗಳು ಭಟ್ರೇ...
ತೇಜಕ್ಕ- ಬರೆದ ಪ್ರತಿ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇನೆ. ಹೀಗೆ ಬರುತ್ತಿರಿ.
ಅಂಜು- ವೆಲ್ಕಮ್ ಮತ್ತು ಥ್ಯಾಂಕ್ಸ್.
ದತ್ತಾ3- ಧನ್ಯವಾದಗಳು.ನಿಮ್ಮ ಕಮೆಂಟ್ ಓದಿ ಕುಶಿಪಟ್ಟೆ.
ವೆಂಕಟ್,
ಸಾಲುಗಳು ಒಂದಕ್ಕಿಂತ ಒಂದು ಚೆಂದ ಇವೆ :)
ಎಷ್ಟು ಚಂದ ಇದ್ದು ಗೊತ್ತಿದ್ದ? ಒಂದೊಂದು ಸಾಲುಗಳೂ ಅದ್ಭುತ. ಅದರಲ್ಲೂ ಭಟ್ಟರ ಜೋರು ಮಂತ್ರಕ್ಕೆ.. . . ವೆರಿ ಗುಡ್. ಕೀಪ್ ಗೋಯಿಂಗ್.
ಗೀವಾಣಿ
Post a Comment