Showing posts with label ಹಬ್ಬಲಿಗೆ. Show all posts
Showing posts with label ಹಬ್ಬಲಿಗೆ. Show all posts

16 April, 2013

ಎನ್ನ ಹೊಸಬನ ಮಾಡಯ್ಯ ತಂದೆ..


(ಇದು 'ವಿಜಯವಾಣಿ' ಸಾಪ್ತಾಹಿಕ 'ವಿಜಯ ವಿಹಾರ'ದಲ್ಲಿ ಪ್ರಕಟವಾದ ಬರಹ, ಮೂಲ ಬರಹಕ್ಕಾಗಿ ಇಲ್ಲಿ ಕ್ಲಿಕ್ಕಿಸಿ)

ಇದೇ ಈಗಷ್ಟೇ ಕಳೆದಿದೆಯಲ್ಲ ಹೊಸ ಸಂವತ್ಸರದ ಯುಗಾದಿ. ನಮ್ಮಲ್ಲಿ ಹಲವರಲ್ಲಿ ಹಲವರು ಅಂದುಕೊಂಡಿದ್ದೆವಲ್ಲ ಹೊಸಾ ವರ್ಷ, ಹೊಸ ಹೊಸಾ ರೆಸಲ್ಯುಷನ್, ಹೊಸಾ ಲೈಫು ಶುರು ಮಾಡಬೇಕು ಅಂತ. ಆಯಿತು ಅಂದೇ ಕೊನೆ. ಹಾಗೆಯೇ ಅದನ್ನೆಲ್ಲ ಕಾಲಡಿಗೆ ಹಾಕಿ ಮರೆತಿದ್ದೇವೆ. ಈ ಹೊಸತು ಅಂದರೇನು, ಹೊಸಬನಾಗುವುದೆಂದರೆ ಏನಪ್ಪಾ?

ಒಮ್ಮೆಲೇ ಪ್ಲೇಟ್ ತಿರುಗಿ ಎಲ್ಲ ಬದಲಾಗಿಬಿಡುತ್ತದಾ? ಇದ್ದಕ್ಕಿದ್ದಂತೆ ಹೊಸ ಭಾಷೆಯೊಂದರಲ್ಲಿ ಬದುಕಿದಂತೆ ಬದುಕುವುದಾ? ನಿನ್ನೆ ಬದುಕಿದ್ದಿತ್ತಲ್ಲ, ಅದನ್ನೆಲ್ಲ ಬುಡಸಮೇತ ಕಿತ್ತು ಮನೆಯ ಹಿಂಬದಿಯಲ್ಲಿ ಕಾಂಪೋಂಡಿನಾಚೆ ಎಸೆದು ಬಂದುಬಿಡುವುದಾ? ಹಳತಾಗಬಾರದೆಂದು ಹೋರಾಡುತ್ತ ದಕ್ಕಿಸಿಕೊಂಡದ್ದೇ ಹೊಸತಾ? ಅದೇ ದೂಳು ತುಂಬಿದ ಶಹರದ ಮಾಸಲುಗಟ್ಟಿದ ಮನೆಗಳು, ಕಾರ್ಬನ್ ಡೈ ಆಕ್ಸೈಡ್ ಎಳೆದುಕೊಳ್ಳಲೂ ಜಾಗವಿಲ್ಲದಂತೆ ದೂಳು ತುಂಬಿಕೊಂಡ ಮರದೆಲೆಗಳು ತಿಂಗಳ ಒಂದೇ ಸಂಜೆಮಳೆಗೆ ತೊಪ್ಪೆ ತೊಯ್ದು ಫಳಫಳ ಹೊಳೆಯುತ್ತಾವಲ್ಲ, ಅದಾ ಹೊಸತಾಗುವಿಕೆ ? ಅದೇ ಮಳೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ಕಿನ ಪಾಕೀಟುಗಳು ತೇಲಿಹೋಗಿ ಈಗಷ್ಟೇ ಒಣಗಿ ನಿಂತ ಮಣ್ಣು ಹೊಸದಾಗುತ್ತದಾ? ಇಲ್ಲ ಹೊಚ್ಚಹೊಸ ಬಟ್ಟೆ ತೊಟ್ಟು ಬೆಳ್ಳಂಬೆಳಗ್ಗೆ ಹೊರಡುತ್ತೇವಲ್ಲ ಅದಾ?

ನಮಗೆ ಹೀಗೆ ಕೇಳುವ ರೂಡಿ `ಏನಪ್ಪಾ ಹೇಗಿದ್ದೀಯಾ?' ಅದಕ್ಕೆ ಅವನು ಹೇಳುತ್ತಿರುತ್ತಾನೆ: `ಏನಿಲ್ಲ ಮಾರಾಯಾ, ಅದೇ ಲೈಫು, ಅದೇ ಬೋರಿಂಗ್ ದಿನಚರಿ. ಹೊಸತೇನೂ ಇಲ್ಲ'. ಎಂದೂ ಮನೆಯಲ್ಲಿರದ ಗಂಡ ಈ ಭಾನುವಾರ ಮನೆಯಲ್ಲೇ ಇದ್ದರೆ ಹೊಸಬನಾಗಿ ಕಾಣುತ್ತಾನೆ. ಟಿ.ವಿ. ರಿಮೋಟ್ ಬಿಟ್ಟು ಮಗನ ಡ್ರಾಯಿಂಗ್ ಬುಕ್ಕಿನಲ್ಲಿನ ಓಡುತ್ತಲಿರುವ ಕಾರನ್ನು ನೋಡುತ್ತಿದ್ದರೆ ಮಗನಿಗೆ ಹೊಸ ಅಪ್ಪನಾಗಿ ಕಾಣುತ್ತಾನೆ. ಹಾಗಿದ್ದರೆ ಹೊಸತನವೆಂಬುದು ಸಾಪೇಕ್ಷವಾ? ನಾವಂತೂ ಅಕ್ಕಪಕ್ಕದಲ್ಲೇ ಇದ್ದೂ ಒಂದು ರೀತಿಯ ಅಪರಿಚಿತತೆಯಲ್ಲೇ ಬದುಕುತ್ತಿರುತ್ತೇವೆ. ಅದು ಹೊಸತನವಾ? ದಿನವೂ ಬಾಲ್ಕನಿಗೆ ಬಂದು ಟವೆಲ್ ಒಣಗಿಸುವ ಹೆಂಗಸಿಗೂ ಅದೇ ಸಮಯಕ್ಕೆ ನೈಟಿ ಒಣಗಿಸಬರುವ ಯುವತಿಗೂ ಒಬ್ಬರಲ್ಲೊಬ್ಬರಿಗೆ ಇರುವ ಕುತೂಹಲ ಹೊಸತಾ?
ಈ ಪ್ರಾಣಿ ಜಾತಿಯದಕ್ಕೆ ಹಾಗೆಯೇ ಹಳತಾಗಿಬಿಡುವ ಒಂದು ಪ್ರಕ್ರಿಯೆ ರೂಡಿಯಾಗಿರುತ್ತದೆ. ಅದೇ ಬಣ್ಣ, ವಾಸನೆ, ಶಬ್ದಗಳು ಹಳತಾಗಿಬಿಡುತ್ತವೆ. ಕಣ್ಣೆದುರಲ್ಲಿ ಸರಿದ ಸ್ಲೈಡುಗಳೆಲ್ಲ ಮರುನಿಮಿಷಕ್ಕೆ ಹಳತಾಗಿಬಿಡುತ್ತವೆ. ಇದೀಗ ಬಂದ ಸುದ್ದಿ ಕೇಳಿ ಮುಗಿಯುವಷ್ಟರಲ್ಲಿ ಹಳತು. ಟೀವಿಯಲ್ಲಿ ಏನುಂಟು ಹೊಸತು? ಅದೇ ಹಳೆ ಸೀರಿಯಲ್ಲು, ರಿಯಾಲಿಟಿ ಶೋ. ಅಂಥಾದ್ದರಲ್ಲಿ ಹೊಸತಾಗುವುದು ಎಂದರೇನು ಭಾಯ್?

ಹೊಸತನವೆನ್ನುವುದು ಒಂದು ರೀತಿಯಲ್ಲಿ ಕಂಬಳಿಹುಳ ಚಿಟ್ಟೆಯಾದಂತೆ. ಜೀವ ಅದೇ - ರೂಪು ಬೇರೆ, ಭಾವ ಬೇರೆ. ಸದ್ದಿರದೆ ಕತ್ತಲೊಂದು ಸರಿದು ಹೊಸ ಹಗಲಿನ ಕಮಾನು ತೆರೆದುಕೊಂಡಂತೆ, ಅವೆರಡರ ನಡುವೆ ಬದಲಾದದ್ದು ಎಲ್ಲಿ ಎಂದು ಹುಡುಕುತ್ತ ಕೂತರೆ ಸೋಲುತ್ತೇವೆ. ಎಲೆಗಳ ಬೊಗಸೆಯಲ್ಲಿ ಕಾಣುವ ಹೊಸದೊಂದು ಆಕಾಶ ನಾವಾಗಬೇಕು ಅಷ್ಟೇ. ತಿಂದು ಮುಸುರೆ ಮಾಡಿದ ಪಾತ್ರೆಗಳು ನೀರು ಹರಿದು ಹೊಸದಾಗುತ್ತವೆ. ಆಫೀಸಿನ ನಿನ್ನೆಯ ಗ್ಲಾಸಿನ ಬಾಗಿಲುಗಳು ಸೋಪಿನ ನೀರು ಚಿಮುಕಿಸಿಕೊಂಡು ಫಳ ಫಳ. ಫಿನಾಯಿಲ್‌ನಲ್ಲಿ ಈಗಷ್ಟೇ ತೊಳೆದ ನೆಲ ಫಳಾ ಫಳಾ... ಮತ್ತೆ ಮಳೆಯೆಂದರೆ ಹೊಸತು, ಕಿಟಕಿಯ ನಡುವಿನಿಂದ ಇಷ್ಟೇ ಒಳನುಗ್ಗಿ ನಮ್ಮ ಕೆನ್ನೆಗೂ ಎರಡು ಬಾರಿ ಸವರಿ ಗೆರೆಗೆರೆಯಾಗಿ ಕಿಟಕಿಯ ಹೊರಗೆ ಸುರಿವ ಮಳೆ ಬೆಚ್ಚಗಿನ ಹೊಸತು. ಬೆಳಗ್ಗೆ ಎದ್ದು ದಾಡಿಗೀಡಿ ಮಾಡಿಕೊಂಡ ಅವನು ಹೆಂಡತಿಯ ಪೌಡರನ್ನು ಅವಳಿಗೆ ಗೊತ್ತಾಗದಂತೆ ಇಷ್ಟೇ ಬಳಿದುಕೊಂಡು ಕನ್ನಡಿಯೆದುರು ಚೆಲ್ಲಿ ಏನೂ ಗೊತ್ತಿಲ್ಲದವನಂತೆ ಕನ್ನಡಿಯಲ್ಲಿ ಎರಡೆರಡು ಬಾರಿ ಮುಖ ನೋಡಿಕೊಂಡು ಒಳಗೊಳಗೇ ನಾಚುತ್ತಾ `ಪೆಹಲಾ.. ಪೆಹಲಾ ಪ್ಯಾರ್' ಎಂದೇನೋ ಗುನುಗುತ್ತಾ ಹೊರಡುತ್ತಾನೆ, ಹೊಸಬನಾಗುತ್ತಾನೆ.


ಹೊಸತು ಎಂದಕೂಡಲೇ ಹಳೆ ಫೋಟೋಗಳು ನೆನಪಾಗುತ್ತವೆ. ಆ ಫೋಟೋಗಳು ಹಳತಾಗಿರಬಹುದು, ಅದರೊಳಗಿನ ನಗು? ಅದು ಹಳತಾಗಲು ಸಾಧ್ಯವೇ? ಹೇಗೆ ನಗುತ್ತಿದ್ದೆ ನೋಡು ಎನ್ನುತ್ತ ಅದೇ ತರಹ ಈಗಲೂ `ಹೆ ಹೆ...' ಎಂದು ನಗುತ್ತೇವೆ ಎಂದಾದಮೇಲೆ ಹಳತಾಗುವ ಮಾತೆಲ್ಲಿ? ಬೆಳಗ್ಗೆ ಎದ್ದು ಬಾಗಿಲು ತೆರೆದು ಕಿಟಕಿಯ ಪರದೆ ಸರಿಸಿ ಹೊಸ ಹಗಲನ್ನು ನಮ್ಮೊಳಗೆ ಆವಾಹಿಸಿಕೊಳ್ಳುವ ಪರಿಯಿರುತ್ತದಲ್ಲ, ಅಲ್ಲಿಂದ ಆರಂಭವಾಗುತ್ತದೇನೊ ಹೊಸತನ. ಹೊರಗೆ ನೋಡಿದರೆ ಅರೇ.. ಎದುರು ಮನೆಯ ಅಂಗಳದಲ್ಲಿ ಸಾರಿಸಿಟ್ಟ ನೆಲಕ್ಕೆ ಹೊಚ್ಚ ಹೊಸ ರಂಗೋಲಿ. ರಸ್ತೆಯ ಹಳದಿದೀಪ ನಂದಿ ಬಾಗಿಲ ಬಳಿ ಬಂದರೆ ನೇತು ಹಾಕಿದ ಚೀಲದಲ್ಲಿ ಹಾಲಿನ ಪ್ಯಾಕೆಟ್ಟು, ಪ್ರಿಂಟಾಗಿ ಈಗಷ್ಟೇ ಹೊರಬಂದ ನಿಜಕ್ಕೂ ಬಿಸಿಬಿಸಿ ಪೇಪರ್ರು, ಒಳಗೆ ಸ್ಟೋವಿನ ಮೇಲೆ ಕುದಿಯುತ್ತಿರುವ ಬಿಸಿಬಿಸಿ ನೀರು. ಹೊಸತನದ ಬೆಳಕೊಂದು ಅಪರಿಮಿತ ಪ್ರೀತಿಯಲ್ಲಿ ಕತ್ತಲೆಯನ್ನು ಹಿಂದಕ್ಕೆ ತಳ್ಳುತ್ತ ಪದರು ಪದರಿನಲ್ಲಿಯೂ ಚಲಿಸತೊಡಗುತ್ತದೆ.

ನನಗೆ ಆ ಪುಸ್ತಕ ಓದುವಾಗ ಪ್ರತಿ ಬಾರಿ ಹೊಸತೆನಿಸುತ್ತದೆ, ಹೊಸದೇನೋ ಹೊಳೆಯುತ್ತದೆ ಎನ್ನುತ್ತೇವೆ. ಒಂದು ರಾಗ - ಮತ್ತೆ ಮತ್ತೆ ಕೇಳಿದಾಗಲೂ ಹೊಸತೇನೋ ಅನುಭವ. ಆ ಜಾಗಕ್ಕೆ ಹೋದರೆ ಏನೋ ಹೊಸತೆನಿಸುತ್ತದೆ ಎನ್ನುತ್ತೇವೆ. ಹೊಸತನವೆನ್ನುವುದು ಅನುಭವ, ಆ ಪುಸ್ತಕವನ್ನು ಮತ್ತೆ ಓದಿದಾಗ ನಾವು ಮತ್ತಷ್ಟು ಆಯಾಮಗಳಲ್ಲಿ ಕಾಣುತ್ತೇವೆ, ಮನಸ್ಸಿಗೆ ಬೇಕಾದ ಹೊಸವಿನ್ಯಾಸ ತೆರೆದುಕೊಳ್ಳುತ್ತದೆ. ಇದ್ದಲ್ಲೇ ಹೊಸಬರಾಗುತ್ತೇವೆ. ಹೊಸ ಗುರುತು ನಮ್ಮದಾಗುತ್ತದೆ. ಪುಟ್ಟಮಗುವನ್ನು ಎತ್ತಿಕೊಂಡಾಗ ನಾವೆಲ್ಲ ಹೊಸಮಕ್ಕಳಾಗುವುದಿಲ್ಲವೇ? ಒಣಹಾಕಿದ ಬಟ್ಟೆಯಿರುತ್ತದಲ್ಲ, ಅದಕ್ಕೆ ಇಷ್ಟೇ ಇಷ್ಟು ಕೆನ್ನೆ ತಾಗಿಸಿ ಒತ್ತಿಕೊಂಡರೆ ತಂಪು ತಂಪು. ಹೊಸತನವೆಂದರೆ ಅಂಥದ್ದು. ನಮ್ಮ ಸುತ್ತಲೇ ಹರಡಿರುತ್ತದೆ.

ನಾಳೆ ಬೆಳಗಾದರೆ ಮೊದಲೆಂದೂ ಆಡದ, ನಮಗೆ ಸಂಬಂಧಿಸಿಲ್ಲದ ಭಾಷೆಯಲ್ಲಿ ಮಾತಾಡತೊಡಗುತ್ತೇನೆ ಎಂದು ಹೊರಟರೆ ಅನಾಹುತವಾಗುತ್ತದೆ, ಹೊಸವರ್ಷದ ರೆಸಲ್ಯೂಷನಿನಂತೆ! ಮಹಾನಗರಗಳಲ್ಲಿ ಇಂದು ಸಿಕ್ಕ ಮುಖ ನಾಳೆ ಸಿಕ್ಕರೆ ಹೇಳಿ. ಅದೇ ಬಸ್ಸು, ಅದೇ ಸ್ಟೇಷನ್ನು, ಅದೇ ಕಾಯುವ ಜನ. ಆದರೆ ಮುಖಗಳು ಬೇರೆ ಬೇರೆ. ನಿನ್ನೆ ಪಕ್ಕದಲ್ಲಿ ನಿಂತು ತಮಾಷೆ ಮಾಡಿದವನು ಇಂದಿರುವುದಿಲ್ಲ. ಬಿಸಿಬಿಸಿ ಮಸಾಲೆದೋಸೆ, ಪಕ್ಕದಲ್ಲಿ ಜೊರ್ರನೆ ಹಾಲನ್ನೆತ್ತಿ ಸುರಿಯುತ್ತಿರುವ ಹುಡುಗನ ಕೈಲಿನ ಚಹಾ ಕೆಟಲಿನಿಂದ ಹೊರಡುವ ಕಂಪಿನ ಹಬೆ ಹೊಸತಲ್ಲದೆ ಮತ್ತಿನ್ನೇನು? ಅದೇ ನದಿಗೆ, ಹರಿವ ನೀರು ಹೊಸತು. ಇರುವಿಕೆಯೆಂಬುದು ಹೊಸದಲ್ಲ, ಹೊಸದೆಂದರೆ ಇರುತ್ತ ಬೆಳೆಯುವುದು. ಸ್ಕೂಲಿಗೆ ಹೊರಡಲು ರೆಡಿಯಾಗಿ ಆಡುತ್ತ ನಿಂತ ಪುಟ್ಟಿಯ ತಲೆಯನ್ನು ಮೆತ್ತಗೆ ನೇವರಿಸಿದಂತೆ, ಕಣ್ಣಿನಲ್ಲಿ ಕನಸು ರೆಕ್ಕೆ ಬಿಚ್ಚಿ ಚಲಿಸತೊಡಗುತ್ತದೆ. ಸುತ್ತಲಿನ ಹೊಸದೇ ಲಯವೊಂದರಲ್ಲಿ ನಾವೂ ಒಂದಾಗುತ್ತೇವೆ. ಬೆಚ್ಚಗಿನ ಬಯಕೆಗಳಿಂದ ಬದುಕನ್ನು ತಬ್ಬಿಕೊಳ್ಳಬೇಕು. ಜುಮುರುಮಳೆ ಹೊಸಕಂಪ ಹೊತ್ತು ತರುತ್ತದೆ.
`ಹೊಸತನವೆ ಬಾಳು; ಹಳಸಿಕೆಯಯೆಲ್ಲ ಸಾವು ಬಿಡು
ರಸವು ನವನವತೆಯಿಂದನುದಿನವು ಹೊಮ್ಮಿ
ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ
ಪಸರುತಿರೆ ಬಾಳ್ ಚೆಲುವು ಮಂಕುತಿಮ್ಮ'
ಎನ್ನುತ್ತಾರೆ ಡಿವಿಜಿ.
ಹೌದು, ಹೊಸತೆಂದರೇ ಹಾಗೆ. ನುಡಿಯಲ್ಲಿ ನೋಟದಲ್ಲಿ ಹೀಗೆ ಸ್ವಲ್ಪವೇ ದಿಟ್ಟಿಯಿಟ್ಟು ನೋಡಿದರೆ ಕಣ್ಣೆದುರಿನ ಮೂರ್ತ ಕನ್ನಡಿಯಲ್ಲಿ ಹೊಸ ನಾವು ನೀವು

29 June, 2011

ಬಸ್‌ಸ್ಟ್ಯಾಂಡು

ಅದು ಒಂಥರಾ ಜಾಗ ಆ ಜಾಗ ಕಣ್ಣು ಬಿಡುವುದು ಈಗಷ್ಟೇ ಅಲ್ಲೆಲ್ಲೋ ಮೂಲೆಯಿಂದ ಎದ್ದುಕುಳಿತ ಹಮಾಲಿಗಳು, ರಾತ್ರಿ ಪಾಳಿಯ ಕಂಡಕ್ಟರುಗಳು ತಮ್ಮ ತಮ್ಮ ಟ್ರಾವೆಲಿಂಗ್‌ ಮನೆಯ ದಿನಚರಿಗಳನ್ನು ಹವಾಯಿ ಚಪ್ಪಲಿ,ಬ್ರಶ್ಶು,ಪೇಸ್ಟು ಹುಡುಕುವುದರೊಂದಿಗೆ ಶುರುಮಾಡುತ್ತಾರಲ್ಲಾ ಆಗ.ಅದರ ಹೆಸರು ಬಸ್‌ಸ್ಟ್ಯಾಂಡು.ಅಜ್ಜನ ಮನೆಗೆ ಹೋಗಲು ಬೆಳಬೆಳಿಗ್ಗೆಯೇ ಅಮ್ಮನೊಟ್ಟಿಗೆ ಬಂದ ಪುಟ್ಟನ ಕೇಕೆಯಿಂದ, ಅವಸರವಾಗಿ ಬಸ್ಸಿಗೆ ಓಡಿಬಂದ ಕಾಲೇಜು ಹುಡುಗಿಯ ಟಿಫಿನ್ ಬಾಕ್ಸು ಓಪನ್ ಆಗುವ ಘಮದಿಂದ,ಬಗೆಬಗೆಯ ಬಣ್ಣದ ಚಪ್ಪಲಿಗಳ ಟಪಟಪದಿಂದ,ಅಲ್ಲೇ ಚಿಲಿಪಿಲಿಗುಟ್ಟಾಗಲೇ ಇರುವು ಅರಿವಾಗುವ ಪುಟ್ಟ ಗುಬ್ಬಚ್ಚಿ,ಇಣಚಿಗಳಿಂದ ಆ ಬಸ್‌ಸ್ಟ್ಯಾಂಡಿಗೆ ಅಸ್ತಿತ್ವ. ಅಲ್ಲಿ ಯಾರು ಬರುವುದಿಲ್ಲ ಎನ್ನುವ ಹಾಗೆಯೇ ಇಲ್ಲ, ಅಜ್ಜ ಅಜ್ಜಿಯಿಂದ ಹಿಡಿದು ಹಾಲುಗಲ್ಲದ ಹಸುಳೆಯವರೆಗೆ ಅತಿಥಿಗಳು,ಸ್ವಾಮಿ ನಾರಾಯಣನಿಂದ ಹಿಡಿದು ಹರುಕು ಅಂಗಿಯ ಬೇಡುವ ಮುದುಕನವರೆಗೆ ಎಲ್ಲರಿಗೂ ಜಾಗ ಉಂಟು.ಅದನ್ನು ನಾವೆಲ್ಲ ಬಸ್‌ಸ್ಟ್ಯಾಂಡೆಂದು ಕರೆದರೆ ಬೀದಿಬದಿಯ ಕೂಲಿಯವನಿಗೆ,ಬೆಳಗಾಗೆದ್ದು ಪೇಪರ್ ಹಂಚುವವನಿಗೆಲ್ಲ ರಾತ್ರಿ ಮಲಗಲು ಅದೇ ಮನೆ .ಆಂಥ ಬಸ್‌ಸ್ಟ್ಯಾಂಡುಗಳಲ್ಲಿ ಚಾದರ ಹಾಸಿ ಸುತ್ತಿ ಮಲಗಿ ಕನಸು ಕಾಣಬಹುದು ಎಂಬುದು ಕೆಟ್ಟಕನಸಿಗಿಂತಾ ಸುಂದರ..! ದಿನ ಬೆಳಗಾದರೆ ಸಾವಿರ ಹೊಸಮುಖಗಳು ಹುಡುಕಿಕೊಂಡು ಬರುವ ಬಸ್‌ಸ್ಟ್ಯಾಂಡೇ ಹಾಗೆ. ಗಿಜಿ ಗಿಜಿ ಕೇಳಿ ಅದಕ್ಕೆ ಬೇಜರಾಗಿಲ್ಲವೇ? ಆಗಿರಬಹುದು ಇಲ್ಲ ಅದೇ ಇಷ್ಟವಾಗಿರಬಹುದು. ಅಲ್ಲಿ ಬರುವ ಜನರದೇ ಒಂದು ವೆರಾಯಿಟಿ,ಪಟ್ಟೆ ಪಟ್ಟೇ ಅಂಗಿಯ ಶಿಸ್ತು ಬೂಟಿನ ಶಾಲೆ ಹುಡುಗರು,ಹೊಸಾ ಹೆಂಡತಿ ಕೈ ಅಡುಗೆಯ ಟಿಫಿನ್ ಬಾಕ್ಸನ್ನು ನಿಧಿಯೆಂದು ಕೈಲಿ ಹಿಡಿದಿರುವ ಯುವಕನಿಂದ, ಎರಡು ರುಪಾಯಿ ಸೇಂಗಾ ಬಿಚ್ಚಿಕೊಂಡು ತಿನ್ನುವ ಹುಡುಗರಿಂದ, ಕ್ಯಾಲೆಂಡರ್ ಮಾರಿ ಎರಡು ಮಕ್ಕಳನ್ನು ಸಾಕುವವನಿಗೆ ಅದೇ ಜಾಗ ಆಗಬೇಕು.ಈ ಬಸ್‌ಸ್ಟ್ಯಾಂಡಿನ ಸುತ್ತ ಹೊಸತೇ ಊರುಗಳು ಹುಟ್ಟಿಕೊಳ್ಳುತ್ತವೆ, ಬೆಂಗಳೂರೋ ಮಂಗಳೂರೋ ಬಸ್‌ಸ್ಟ್ಯಾಂಡಿನ ಸುತ್ತ ಬೆಳೆದ ಊರುಗಳೇ. ಅಲ್ಲೇ ಸುತ್ತ ದೋಸೆ ಅಂಗಡಿ,ಮಂಡಕ್ಕಿ ಶಾಪು,ಆಮ್ಲೆಟ್ಟಿನ ಟಪರಿ ಹೀಗೆ.ಅಗ್ಗದ ಸಾಮಾನುಗಳೇನಾದರೂ ಬೇಕಾದರೆ ಇತ್ತ ಬನ್ನಿ ಎನ್ನುವ ಹಾಗೆ.

ಎಲ್ಲ ಊರುಗಳನ್ನು ನೋಡಿ ಬರುವ ಬಸ್ಸು ಈ ಬಸ್‌ಸ್ಟ್ಯಾಂಡಿನಲ್ಲಿ ತಾಸುಗಟ್ಟಲೇ ನಿಂತು ಸುತ್ತಿದೂರಿನ ಕಥೆ ಹೇಳುತ್ತದೆ.ಅಲ್ಲಿ ಹಂಗೆ ಇಲ್ಲಿ ಹಿಂಗೆ,ಅಲ್ಲಿ ಗದ್ದೆ ಎಲ್ಲಾ ಕುಯಿಲು ಮುಗಿಸಿ ಭತ್ತದ ವಜ್ಜೆಗಳನ್ನು ಹರವಿಕೊಂಡು ನಿಂತಿದೆ,ಚಿಲಿಪಿಲಿ ಗುಬ್ಬಿಗಳನ್ನು ಮಾತನಾಡಿಸಿದೆ,ಆ ಊರಲ್ಲಿ ಮನೆಕಟ್ಟುತ್ತಿದ್ದಾರೆ ಅಂದಿದ್ದೆನಲ್ಲ, ಈಗ ಅಲ್ಲಿ ಮನೆ ಎಲ್ಲ ಎದ್ದು ನಿಂತು ಆ ಮನೆಯ ಸಣ್ಣ ಪಾಪುವೊಂದು ದಿನವೂ ಕೈಬೀಸದಿದ್ದರೆ ನನಗೂ ಸಮಾಧಾನವಿಲ್ಲ ಎನ್ನುವಂತೆ ಆಗಿದೆ ಗೊತ್ತಾ.., ಇಂದು ಮುಂಜಾನೆ ತಿರುವಿನ ಎದುರು ಜಿಂಕೆ ದಂಡು,ಈ ಪ್ಯಾಟೆಯಲ್ಲಿ ತಿರುಗುವುದು ಅಂದರೆ ಯಾರಿಗೂ ಬೇಡದ ಗೋಳು ಎಲ್ಲರಿಗೂ ನನ್ನ ರೋಡೇ ಆಗಬೇಕು ಹಾಗೆ, ಹೀಗೆ ಏನೇನೋ ಕತೆ.ಕೇಳಿನೋಡಿ ಈ ಬಸ್‌ಸ್ಟ್ಯಾಂಡಿನ ಬಳಿಯೂ ಅಂತದ್ದೇ ನೂರು ಕಥೆಗಳಿವೆ.ದಿನವೂ ಸೇರುವ ಪ್ರೇಮಿಗಳದು ಒಂದಾದರೆ, ಶಾಲೆ ಮಕ್ಕಳ ಶಾಲೆಯ ದಿನಚರಿಗಳ ಕತೆ ಇನ್ನೊಂದು, ಕೆಲ ಊರುಗಳಲ್ಲಿ ಬಸ್ಸಿನಿಂದ ಬಸ್ಸಿಗೆ ಮೂರು ತಾಸುಗಳ ಅಂತರವಿರುತ್ತದೆ,ನಡುವಿನ ವೇಳೆಯೇನಾದರೂ ಬಿಡುವ ಶಾಲೆಯಾದರೆ ಮಕ್ಕಳ ಹೋಮ್‌ವರ್ಕ್ ಅಲ್ಲೇ ನಡೆಯುವುದು.ನಾವೆಲ್ಲ ಹೈಸ್ಕೂಲಿಗೆ ಹೋಗುವಾಗ ಸಂಜೆ ತಾಸುಗಟ್ಟಲೆ ಬಸ್ಸಿಗೆ ಕಾಯಬೇಕಾಗುತ್ತಿತ್ತು, ಹುಡುಗಿಯರೆಲ್ಲ ಕಷ್ಟಪಟ್ಟು ಆಗಲೇ ಹೋಮ್‌ವರ್ಕ್‌ ಮಾಡುತ್ತಿದ್ದರೆ ಹುಡುಗರು ನಮ್ಮದನ್ನೂ ಅವರಿಗೇ ಬರೆಯಲು ಕೊಟ್ಟು ಕ್ರಿಕೆಟ್ ಆಡುವುದಿತ್ತು. ಬಸ್‌ಸ್ಟಾಂಡಿಗೆ ಎಲ್ಲ ಊರುಗಳನ್ನು ಒಂದೇ ಸೇರಿಸುವ ಉಮೇದಿ.ಬಸ್‌ಸ್ಟ್ಯಾಂಡಿನಲ್ಲಿ ಕೂತು ಹರಟದೇ ಹೋದ ಪ್ರೇಮಿಗಳು ನಿರ್ಭಾಗ್ಯರ ಲಿಸ್ಟಿಗೆ ಸೇರುತ್ತಾರೆ.ನಮ್ಮ ಊರಿನಲ್ಲೊಬ್ಬ ಹಮಾಲಿ ಕೆಲಸ ಮಾಡಿಕೊಂದಿದ್ದವನಿದ್ದ ಅವನದು ಯಾವ ಜಾತಿಯೊ ಪಾತಿಯೋ ಆದರೆ ಬಸ್‌ಸ್ಟ್ಯಾಂಡಿನಲ್ಲಿ ಯಾರು ಏನು ಲಗೇಜು ಹಿಡಿದು ನಿಂತಿದ್ದರೂ ಎದುರಿಗೆ ಹಾಜರಾಗುತ್ತಿದ್ದ ಅವನ ಹೆಸರು ಸರ್‌ನೇಮ್ ಎಲ್ಲ ಬಿಡಿ ಎಲ್ಲರೂ ಕರೆಯುವುದು ಬಸ್‌ಸ್ಟ್ಯಾಂಡ್ ಪಾಂಡು ಎಂದೇ, ಹಾಗೆ ಎಷ್ಟೋ ಜನರು ಹೊತ್ತಿನ ಅನ್ನ,ಐಡೆಂಟಿಟಿ ಕಂಡಿದ್ದು ಇದೇ ಬಸ್‌ಸ್ಟ್ಯಾಂಡ್‌ನಲ್ಲಿ.


ನಮ್ಮ ಊರುಗಳಲ್ಲಿ ಬಸ್‌ಸ್ಟ್ಯಾಂಡ್‌ಗಳು, ಬಸ್‌ಸ್ಟಾಪ್‌ಗಳಿಗೆ ಬೇರೆಯದೇ ರೂಪ, ದೊಡ್ಡ ಬಸ್ಸುಗಳನ್ನು ತಿರುಗಿಸಿ ತಿರುಗಿಸಿ ಆದ ಬಯಲನ್ನೇ ಬಸ್‌ಸ್ಟ್ಯಾಂಡೆಂದು ಕರೆಯುವುದು,ಆ ಬಸ್ಸುಗಳು ಹೋಗುವಾಗ ಟಾರುರಸ್ತೆಗೆ ನೂರು ಕಾಲುದಾರಿ,ಅವುಗಳ ಪಕ್ಕ ಒಂದು ಮರದ ಕೆಳಗೆ ಜಾಗ ಸ್ವಚ್ಚ ಮಾಡಿ ಗೂಟ ಹುಗಿದೋ, ಒಣಗಿದೆಲೆಯ ಕೊಂಬೆಯನ್ನು ನೇತುಹಾಕಿಯೋ ಗುರುತು ಮಾಡಿಟ್ಟು ನಾಲ್ಕು ಜನ ನಿಂತರೆ ಅದೇ ಬಸ್‌ಸ್ಟಾಪು. ಎಲ್ಲೆಲ್ಲೋ ಒಂದೆರಡು ಕಡೆ ವ್ಯವಸ್ಥಿತ ಬಸ್‌ಸ್ಟ್ಯಾಂಡುಗಳು ಸ್ಟಾಪುಗಳು ಇವೆ. ಇಂತ ಬಸ್‌ಸ್ಟ್ಯಾಂಡುಗಳ ವಯಕ್ತಿಕ ಹಿನ್ನೆಲೆಗಳ ಮೇಲೆ,ಅಲ್ಲಿ ನಿಲ್ಲುವ ಜನರ ಮೇಲೆ,ಪ್ರಣಯ ಕಥೆಗಳ ಮೇಲೆ ದಂತಕತೆಗಳ ಮೇಲೆ ಅವುಗಳ ನಟೋರಿಸಿಟಿಯೋ,ಪ್ರಸಿಧ್ಧಿಯೋ,ಅಡ್ಡನಾಮಗಳೋ ಇರುತ್ತವೆ. ಜಗತ್ತಿನ ಪರಮ ಸೀಕ್ರೇಟುಗಳು ಲೀಕಾಗುವ ಜಾಗವೂ ಅದೇ.

ಅಲ್ಲಿ ಹಳೇ ಹಾಡಿನ ಗುಂಗು ಮತ್ತು ಹರೆಯದ ಹುಡುಗಿಯರ ದಂಡು. ಆ ಮೂಲೆಯ ಕಂಬದ ಬಳಿ ಹೊಸಾ ಪ್ರೇಮಿಗಳ ಯುಗಳ ಗೀತ. ಮನೆ ಸಾಮಾನು,ಮಗಳಿಗೆ ಪೆಟ್ಟಿಕೋಟು, ಅಂಗಿ, ಹೊಸಾಪಾತ್ರೆ ತಂದುಕುಳಿತ ಗಂಡಹೆಂಡತಿಗೆ ಬಸ್ಸು ಇನ್ನೆರಡು ಗಳಿಗೆ ತಡೆದು ಬರಲಿ ಎಂಬ ಆಸೆ.ಸೂರ್ಯ ಆಕಡೆಗಿಂದ ಹುಟ್ಟಿ ಈಕಡೆ ಮುಳುಗುವ ಒಳಗೆ ಎಷ್ಟು ಜನರ ಉಸಿರುಗಳ ಉಸ್ತುವಾರಿ ವಹಿಸಿಕೊಳ್ಳುತ್ತದೆ ಈ ಬಸ್‌ಸ್ಟ್ಯಾಂಡು.ಮುದ್ದು ಕಂದನನ್ನು ಎತ್ತಿಕೊಂಡು ಬಸ್ಸು ಹಿಡಿಯಲು ಓಡುತ್ತಿದ್ದ ತಾಯಿಯ ಪ್ರೀತಿ ಈ ಬಸ್‌ಸ್ಟ್ಯಾಂಡಿನಲ್ಲೂ ಹರಡಿದೆ.ಬಸ್ಸಿಗಾಗಿ ಕಾಯುತ್ತ ನಿಂತ ಎಲ್ಲ ಜನಗಳ ಸ್ನಿಗ್ಧ ಆಸೆ ಅಲ್ಲಿ ನೆಲೆಗೊಳ್ಳುತ್ತವೆ.ಕತ್ತಲು ರಾತ್ರಿಯಾದರೆ ಮತ್ತೆ ಹಾಸಿಗೆಯಲ್ಲದ ಹಾಸಿಗೆ ಬಿಚ್ಚಿಕೊಂಡಾಗ ಬಸ್‌ಸ್ಟ್ಯಾಂಡಿನಲ್ಲಿ ಆ ರಾತ್ರಿಯ ಕೊನೇ ಬಸ್ಸನ್ನು  ಆಗಷ್ಟೇ ಬೀಳ್ಕೊಟ್ಟು ಬಂದು ನಿಂತ ಬಸ್ಸುಗಳು ಪಿಸುದನಿಯಲ್ಲಿ ಕಥೆ ಹೇಳುತ್ತ ಅಲ್ಲೇ ಒರಗಿದ ನೀಲಿ ಬಸ್ಸಿನ ಡ್ರೈವರನನ್ನು ಮಲಗಿಸುತ್ತವೆ.ಹಳ್ಳಿಯ ಬಸ್‌ಸ್ಟ್ಯಾಂಡುಗಳಲ್ಲಿ ದಾರಿತಪ್ಪಿದ ಎಮ್ಮೆಗಳು ಮೆಲುಕು ಹಾಕುತ್ತ  ಸಂಗೀತಾ ಐ ಲವ್ವ್‌ ಯೂ ಎಂಬ ಭಗ್ನ ಪ್ರೇಮಿಯ ಡೊಂಕು ಬರಹವನ್ನು ಓದುತ್ತಾ ಮಲಗಿರುತ್ತವೆ.

10 May, 2011

ಆಡುಮಳೆಯ ಜೊತೆಗೆ..

ಮೇ ತಿಂಗಳ ಸಂಜೆ ಮಳೆಯೆಂದರೇ ಹಾಗೆ,ಇಷ್ಟದ ಗೆಳತಿಯ ಹಾಗೆ.ಕಾಯಿಸುತ್ತದೆ,ಕಾಡಿಸುತ್ತದೆ,ಪ್ರೀತಿ ತೋರಿಸುತ್ತದೆ.ಬೇಕು ಬೇಕು ಎಂದೆನಿಸುತ್ತಿರುವ ಹಾಗೇ ನಾಳೆ ಬರುತ್ತೇನೆ ಎನ್ನುತ್ತಾ ಸದ್ದಿಲ್ಲದೇ ಹೊರಟುನಿಂತುಬಿಡುತ್ತದೆ.ಅದು ಜುಮುರು ಮಳೆ,ಅದು ಹನಿ ಮಳೆ,ಅದು ಕಿರಿಕಿರಿ ಮಳೆ,ಅದು ಪಿರಿಪಿರಿ ಮಳೆ, ಅದು ಮಗು ಮಳೆ, ಅದು ಗದ್ದಲದ ನಗು ನಗುತ್ತಾ ನಮ್ಮನ್ನೂ ನಗಿಸುವ ಪುಟ್ಟ ಹುಡುಗರಂಥ ಮಳೆ, ಬಯ್ದುಬಿಡಬೇಕೆಂದುಕೊಂಡರೂ ಮುದ್ದುಮಾಡಿಸಿಕೊಳ್ಳುತ್ತದೆ.ಈ ಮಳೆಯಲ್ಲಿ ನೆನಪಿನ ರಾಶಿಯಿದೆ.ಸುಸ್ತುಬಡಿದು ಪುದುಪುದು ಮನೆ ಸೇರಲು ಹೊರಟವರನ್ನು ನಿಲ್ಲಿಸಿ ತಲೆ ನೇವರಿಸುತ್ತದೆ,ಆರಾಗುವುದರೊಳಗೆ ಮನೆಸೇರಲೆಂದು ಪಾತ್ರೆ, ನೀರು,ಅಡುಗೆ ಸೀರಿಯಲ್ಲು ಎನ್ನುತ್ತ ಹೊರಟ ವ್ಯಾನಿಟಿ ಬ್ಯಾಗಿನ ಹೆಂಗಸರನ್ನೆಲ್ಲ ತಡೆದು ನಿಲ್ಲಿಸಿ ಬಯ್ಯಿಸಿಕೊಳ್ಳುತ್ತದೆ,ಇಲ್ಲ ಇಲ್ಲ ಎನ್ನುತ್ತಲೇ ಬೀಸಿ ಬರುವ ದಪ್ಪದಪ್ಪ ಹನಿಗಳು ತಾರಸಿಯನ್ನು ಟಪಟಪಿಸುತ್ತವೆ.ಈ ಮಳೆಗೆ ಕಿಟಕಿ ಬಾಲ್ಕನಿಗಳೆಂದರೆ ಬಲು ಅಕ್ಕರೆ,ಕಿಟಕಿಯೊಳಗೆಲ್ಲ ಇಣುಕದಿದ್ದರೆ ಸಮಾಧಾನವಿಲ್ಲ. ಈ ಮಳೆಗೆ ಕಿಟಕಿಯೇ ಇಲ್ಲದ ಕೋಟೆಯೊಳಗೆ ಕಂಪ್ಯೂಟರಿನ ವಿಂಡೋದಲ್ಲಿ ತಲೆಹುದುಗಿಸಿಕೊಂಡಿದ್ದವರೆಲ್ಲರನ್ನು ಬಾಲ್ಕನಿಗೆ ಕರೆದು ನಿಲ್ಲಿಸುವ ತಾಕತ್ತಿದೆ.
ಚಿತ್ರ: ನಾಗರಾಜ್ ಭಟ್

ಈ ಮಳೆ ಹದಿಹರೆಯದ ಮಳೆ,ಸುಮ್ಮನೆ ಸುರಿವ ಮಳೆಯಲ್ಲ, ತಾರಸಿಯಯ ಮೇಲೆ ಬೀಳುವುದಕ್ಕಿಂತ ಗೋಡೆಗೆ ಮುತ್ತಿಕ್ಕುವುದೇ ಪ್ರೀತಿ,ಬಾಲ್ಕನಿಯಗುಂಟ ಮುದ್ದಾಗಿ ಹನಿಸುತ್ತದೆ,ಹೊರಗಿಟ್ಟ ಚಪ್ಪಲಿಗಳನ್ನು ತೋಯಿಸುವುದಿಲ್ಲ,ನಿಂತ ಸೈಕಲ್ಲನ್ನು ತೋಯಿಸದೇ ಬಿಡುವುದಿಲ್ಲ,ಮನೆಸೇರಲು ಬಸ್ಸಿನಲ್ಲಿ ತುಂಬಿಕೊಂಡು ಬೆವರು ಸುರಿಸುವ ಜನರನ್ನು ಗಾಜಿನ ಹೋರಗಿಂದೇ ತಳಕ್-ತಳಕ್ ಎಂದು ತಾಕುತ್ತ ಎದೆಯ ಉಸಿರಿಗೆ ತಂಪನ್ನು ಸಂವಹನಿಸುತ್ತದೆ.ಆಫೀಸಿನಲ್ಲಿ ಬೈಸಿಕೊಂಡು ಜೀವನ ಬೇಸರವಾದ ಯುವಕನ ಅಂಗಿಯನ್ನು ನವಿರಾಗಿ ಒದ್ದೆಗೊಳಿಸುತ್ತದೆ.ಮೆಸ್ಸೇಜಿನಲ್ಲಿ ಹುದುಗಿ ನಗುತ್ತಿರುವ ಹುಡುಗಿಯ ಕೆನ್ನೆಯ ಮೇಲೆ ಹನಿಸುತ್ತದೆ,ಕಾಲೇಜು ಮುಗಿದು ಆಡಲು ನಿಂತ ಹುಡುಗರು ಇನ್ನೇನು ಗೆಲ್ಲಬೇಕೆಂಬ ಕ್ರಿಕೆಟ್ ಮ್ಯಾಚನ್ನು ಅಲ್ಲಿಗೇ ನಿಲ್ಲಿಸಿ ಮಜಾನೋಡುತ್ತದೆ.
ಮನೆಗೆ ಹಿಂತಿರುಗುವ ಪಾರಿವಾಳಗಳ ಬೂದುರೆಕ್ಕೆಗಳ ಮೇಲಿಂದ ಜಿಗಿದು ಸಂದಿಗೊಂದಿಗಳಲ್ಲಿ ಚಿಲಿಪಿಲಿಗುಟ್ಟುತ್ತಿದ್ದ ಎರಡೇ ಗುಬ್ಬಚ್ಚಿಗಳ ಕೊಕ್ಕನ್ನಷ್ಟೇ ತೋಯಿಸಿ ಕೆಳಗಿನ ಗೂಡಂಗಡಿಯವನ ಚಹಾ ಕೆಟಲಿನ ಮೇಲೆಯೇ ಬೀಳುತ್ತದೆ.ಹೊರಗಿಟ್ಟ ಬಿಂದಿಗೆಯ ಮೇಲೆಲ್ಲ ಬರ್ರನೆ ಸುರಿಯುತ್ತದೆ.ಒಬ್ಬಂಟಿ ಹುಡುಗನ ಕನಸಿನಲ್ಲಿನ ಬಾಡಿದ ಹೂವಿನ ಮೇಲೆಲ್ಲ ಬಿದ್ದು ಪ್ರೀತಿ ಚಿಗುರಿಸುತ್ತದೆ,ಒಣಗಿಹೋದ ಹೂಗಿಡದ ಎಲೆಯಮೇಲಿಂದ ಜಾರಿ ಬುಡದಲ್ಲಿ ಇಲ್ಲದಂತೆ ಮಾಯವಾಗುತ್ತದೆ.ಕೈಚಾಚಿ ನಿಂತ ಸಾವಿರ ಕಟ್ಟಡಗಳಿಂದ ತಪ್ಪಿಸಿಕೊಂಡು ಫ್ಲೋರು-ಫ್ಲೋರುಗಳನ್ನು ನೋಡದೇ ಲಿಫ್ಟಿನಲ್ಲಿ ಜಾರಿ ಬಂದವರನ್ನೂ,ಕಾಫಿಡೇಯಲ್ಲಿ ತಾಸು ಕೂತುಬಂದವರನ್ನೂ,ಎಲ್ಲ ಬಣ್ಣದಂಗಿಯಲ್ಲಿದ್ದರೂ ಕಾಣದ ಕಟ್ಟಡದ ಕೂಲಿಗಳನ್ನೂ ಬಿಡದೇ ತೋಯಿಸಿ ಹೆದ್ದಾರಿಯಲ್ಲಿ ಎಲ್ಲ ರಾಡಿಗಳನ್ನೂ ತೊಳೆಯುತ್ತ ಹರಿಯುತ್ತದೆ.ಗುಲಾಬಿ ಚಪ್ಪಲಿಗೆ ಹಳದಿ ಅಂಗಿಯನ್ನು ಜೊತೆ ಮಾಡುತ್ತದೆ.

ಶಾಲೆ ಬಿಟ್ಟು ದಾರಿತುಂಬ ಕೇಕೆ ಹಾಕಿ ನಡೆದಿದ್ದ ನೀಲಿ ಅಂಗಿಗಳ ಪಾಟೀಚೀಲಗಳನ್ನು ತೋಯಿಸುತ್ತದೆ,ಪಾಟೀಚೀಲದಲ್ಲಿನ ಡ್ರಾಯಿಂಗು ಪುಸ್ತಕದ ಸ್ಕೆಚ್‌ಪೆನ್ನಿನ ಚಿತ್ರವನ್ನು ಹುಡುಕಿ ಕೆಂಬಣ್ಣದ ಮನೆಯನ್ನೂ ನೀಲಿ ಆಕಾಶವನ್ನೂ ಒಂದುಮಾಡುತ್ತದೆ,ಜಗಳ ಮಾಡಿಕೊಂಡ ಟಾಮೆಂಜರಿಗಳ ಬಾಲಗಳಾನ್ನು ಜೋಡಿಸುತ್ತದೆ,ಪಾಟೀಚೀಲಗಳನ್ನು ಎದೆಗವಚಿಕೊಂಡು ಓಡುವ ಹುಡುಗರಿಗೆಂದೇ ತಗೋ ಎಂದು ಆಡುಮಾವಿನ ಹಣ್ಣುಗಳನ್ನು ರಾಶಿ ರಾಶಿ ಬೀಳಿಸುತ್ತದೆ.ಬಿಸಿಲಲ್ಲಿ ಸುಡುತ್ತ ನಿಂತ ಗೋಡೆಯ ಚಿತ್ರಗಳನ್ನೆಲ್ಲ ತೋಯಿಸುತ್ತದೆ.ರಸ್ತೆಬದಿಯ ತುಂಬ ಬೊಂಬೆಗಳನ್ನು  ಹರಡಿಕೊಂಡು ಕೂತವನನ್ನು ಪಜೀತಿಗಿಟ್ಟು ಕಾಡುತ್ತದೆ,ಬಿಸಿಲಿಗೆ ಕರಗಿದ ಕರಿಡಾಂಬರೂ ಈ ಮಳೆಗೆ ಕಾತರಿಸುತ್ತದೆ.ಬಸ್‌ಸ್ಟ್ಯಾಂಡಿನ ಬೆಂಚುಗಳನೆಲ್ಲ ತೋಯಿಸಿ ದಪ್ಪದಪ್ಪ ಹೆಂಗಸರನೆಲ್ಲ ಕಾಯಲು ನಿಲ್ಲಿಸುತ್ತದೆ. ಗಾಡಿಗಳ ಅವಸರಕ್ಕೆ ಎದ್ದು ಹೊಗೆಯಾಡುವ ಧೂಳನ್ನೆಲ್ಲ ಕೂತ್ಕೋ ಸುಮ್ಮನೆ ಎಂದು ಕೂರಿಸಿ ಮೊದಲ ಮಣ್ಣ ಕಂಪನ್ನು ಹರಡುತ್ತದೆ.ಮದುವೆ ಚಪ್ಪರದ ಒಳಗೆ ಹುಡುಗಿಯರನ್ನು ಹುಡುಕಿ ಸಣ್ಣಗೆ ಹಣುಕುತ್ತದೆ. ತಾರಸಿಯ ಮೇಲೆ ಗರಿಗರಿ ಒಣಗಿದ ಹಸಿರು,ಕೆಂಪು, ನೀಲಿ ಬಟ್ಟೆಗಳನ್ನು ರಪಾರಪಾ ತೋಯಿಸುತ್ತದೆ,ಅಮ್ಮನ ಪಕ್ಕ ಕುಳಿತ ಎರಡು ಜಡೆಯ ಪುಟ್ಟಿಯನ್ನು ಬಾಗಿ ಮುತ್ತಿಕ್ಕುತ್ತದೆ. ವರ್ಷಕ್ಕೊಂದೇ ಪಾರ್ಟಿ ಕೊಡಿಸುವ ಗೆಳೆಯ ಈ ಬಾರಿಯೂ ಬಚಾವಾಗುವಂತೆ ಮಾಡಿಬಿಡುತ್ತದೆ.ನಾಲ್ವರಿದ್ದರೆ ಮಾಡಿನ ತುಂಬ ಗದ್ದಲ, ಇಬ್ಬರಿದ್ದರೆ ಹಂಚಿಕೋ ಪ್ರೀತಿ.ಇಲ್ಲಿ ದೊಡ್ಡದೊಡ್ಡ ಹನಿಗಳ ಮಳೆ ಕಣೇ ಎಂದು ಗೆಳತಿಗೆ ಮರೆಯದೇ ಹೇಳಬೇಕೆನಿಸುತ್ತದೆ,ನಾನೂ ಬರುತ್ತೇನೆ ಕಣೋ ಎಂದು ರಚ್ಚೆಹಿಡಿಯಲಿ ಎಂಬ ಆಸೆ.ಏಕೆಂದರೆ ಈ ಮಳೇಯೇ ಹಾಗೆ.ಈಗತಾನೆ ಬಿದ್ದಮಳೆ ಕನಸೆಂಬಂತೆ ಇಲ್ಲವಾಗುತ್ತದೆ.ದೋಣಿಮಾಡಿ ಬಿಡುವ ಹಾಗೆ ಸುರಿಯದಿದ್ದರೂ ಮೇ ತಿಂಗಳ ಮಳೇಯೇ ಕೇಳಿಸಿಕೋ ನಾನು ನಿನ್ನನ್ನು ಪ್ರೀತಿಸುತ್ತೇನೆ.


('ವಿಜಯ ಕರ್ನಾಟಕ'ದ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟವಾದ ಬರಹ )

29 January, 2011

ನೀಲಿ ಅಂತರ್ದೇಶಿ ಬಿಚ್ಚಿಟ್ಟ ನೆನಪಿನ ಗಂಟು


ಮ್ಮ ಊರೇ ಹಾಗೆ ಮೈಲುದೂರದಲ್ಲಿ ದ್ವೀಪಗಳ ಹಾಗೆ ಒಂಟಿಮನೆಗಳು,ನಮ್ಮ ಊರಷ್ಟೇ ಅಲ್ಲ ಮಲೆನಾಡೆಂಬ ಮಲೆನಾಡಿನ ಸೊಬಗೇ ಅದು.ಕೆಲವೊಂದು ಮನೆಗಳನ್ನು ತಲುಪಲು ಒಂದಿಡೀ ಹೊತ್ತು ನಡೆಯಬೇಕು,ಬೈಕು ಸೈಕಲ್ಲುಗಳು ಎಲ್ಲೆಡೆ ಹೋದಾವೆಂಬಹಾಗಿಲ್ಲ, ಮಳೆಗಾಲವಾದರೆ ಎಂದಿನ ದಾರಿಯೆಲ್ಲ ಹಳ್ಳಕೊಳ್ಳದ ಪಾಲಾಗಿ ತಂದ ಸೈಕಲ್ಲುಗಳನ್ನು ಆಚೆಯೇ ಸುರಿವ ಮಳೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೊಸದಾರಿಯಲ್ಲೆ ನಡೆಯಬೇಕು.ಅಂತ ಊರಲ್ಲಿ ಹೊರಊರಿನೊಂದಿಗೆ ಬೆಸುಗೆಯ ಪರಮ ಸಂಪರ್ಕದ ಕೊಂಡಿಯೆಂದರೆ ಅಂಚೆಕಛೇರಿ,ಇಂದಿನ ಟೆಲಿಫೋನ್ ಯುಗದಲ್ಲೂ ಬಹಳಕಡೆ ಈ ಸ್ಥಿತಿ ಭಿನ್ನವಾಗೇನೂ ಇಲ್ಲ.ಅಂಥ ಅಂಚೆ ಕಚೇರಿಯಲ್ಲಿ ನನ್ನಪ್ಪ ಪೋಸ್ಟ್ ಮಾಸ್ತರು, ಅವನಿಗೂ- ಊರ ಜನಕ್ಕೂ ಅದು ಕೇವಲ ನೌಕರಿಯಾಗಿಯಷ್ಟೇ ಉಳಿದಿಲ್ಲ,ಅವರ ಬದುಕೆಂಬ ಬದುಕೇ ಬೆಸೆದುಕೊಂಡಿದೆ, ಎಷ್ಟರ ಮಟ್ಟಿಗೆಂದರೆ ಪೋಸ್ಟಾಪೀಸೆಂದರೆ ಭಟ್ಟರೆಂಬ ಹಾಗೆ ಅದು ಅವರ ಬದುಕಲ್ಲಿ ಹಾಸುಹೊಕ್ಕಾಗಿದೆ. ಅವನ ಯಾವ ಹೊಸ ಅಂಗಿಗೂ ಪೋಸ್ಟಿನ ಸಿಖ್ಖದ ವಿಶಿಷ್ಟ ಕರಿಮಸಿ ಹತ್ತಿಲ್ಲವೆಂಬುದಿಲ್ಲ. ಹಿಂದೆಲ್ಲ ಊರ ಶಾಲೆಗೆ ಬರುವ ಮಾಸ್ತರರನ್ನೇ ಪೋಸ್ಟ್‌ಮಾಸ್ತರರನ್ನಾಗಿ ನೇಮಿಸಿಬಿಡುತ್ತಲಿದ್ದರು, ಅಂತಿಪ್ಪ ಮಾಸ್ತರರ ಶಿಷ್ಯನಾದ ಅಪ್ಪನಿಗೆ ಹುಡುಗ ಹುಶಾರಿಯಿದ್ದಾನೆ ಎಂದು ಆ ಕಾಲದಲ್ಲಿ ಒಂದುಮಟ್ಟಿಗೆ ದೊಡ್ಡದೆಂಬಂಥ ಈ ಪೋಸ್ಟಾಪೀಸಿನ ನೌಕರಿ ಸಿಕ್ಕಿದ್ದಿತ್ತು. ಪೋಸ್ಟಾಪಿಸಿಗೆ ಬೇರೆ ಆಫೀಸಾಗಲೀ ಬಿಲ್ಡಿಂಗಾಗಲೀ ಇಲ್ಲ, ಮನೆಯ ಹೊರಗಿನ ಒಂದು ಸಣ್ಣ ಖೋಲಿಯೇ ಸಣ್ಣ ಸಣ್ಣ ಕಪಾಟು, ಟ್ರಂಕು, ಕ್ಯಾಲೆಂಡರು,ಖಾಕಿ ಚೀಲ,ತಕ್ಕಡಿ-ತೂಕದ ಕಲ್ಲು, ಠಸ್ಸೆಯ ಬಾಕ್ಸು ಹೀಕೆ ಸಕಲ ಅಲಂಕಾರಿಕ ಸಲಕರಣೆಯನ್ನು ತನ್ನಲ್ಲಿ ಹರಡಿಕೊಂಡು  ಒಂದು ಚಿಕ್ಕ ಕೆಂಬಣ್ಣದ ಬೋರ್ಡನ್ನು ಹೊರಗೋಡೆಗೆ ತಗುಲಿಹಾಕಿಕೊಂಡು ಪೋಸ್ಟಾಪೀಸಾಗಿ ರೂಪುಗೊಂಡುಬಿಟ್ಟಿತ್ತು.ಹಾಗಾಗಿ ಪೋಸ್ಟಾಪೀಸು ಮನೆಯ ಅವಿಭಾಜ್ಯ ಅಂಗವೂ ಆಗಿತ್ತು.

ಅಂಥ ಊರುಗಳಲ್ಲಿ ಈ ಅಂಚೆಯಣ್ಣನ ಕೆಲಸ ಬರೀ ಪತ್ರಹಂಚುವುದಕ್ಕಷ್ಟೇ ಸೀಮಿತವಾಗಿರುವುದಿಲ್ಲ, ಹೆಚ್ಚೂಕಡಿಮೆ ಎಲ್ಲ ಮನೆಗಳಿಗೂ ತಿರುಗುವವನಾದ್ದರಿಂದ ಅಪ್ಪನ ಬಳಿ ಊರಿನ ತಾಜಾ ಸುದ್ದಿಗಳಿರುತ್ತವೆ. ಅಲ್ಲೆಲ್ಲೋ ಹೊಸದಾಗಿ ಟಾರುರಸ್ತೆ ಮಾಡುತ್ತಿರುವ ಬಗ್ಗೆ, ದೊಡ್ಡಮನೆಯ ಶಿವರಾಮಣ್ಣ ಬೋರ್ವೆಲ್ಲ್ ಹೊಡೆಸುತ್ತಿರುವ ಬಗ್ಗೆ, ಶಂಕರಭಾವನ ಮಗಳನ್ನು ಪೇಟೆಯ ಗಂಡಿನ ಕಡೆಯವರು ನೋಡಲು ಬಂದ ಗುಟ್ಟಿನ ಸುದ್ದಿಯಿಂದ ಹಿಡಿದು ಮೇಲಿನ ಬಜೆಮನೆ ಕೆರೆಯಲ್ಲಿ ಸಿದ್ದಿ ಹುಡುಗರು ಮೀನುಹಿಡಿಯುತ್ತಿರುವುದು, ದೇವಸ್ತಾನದ ಆಚೆಗಿನ ದೊಡ್ಡಮರಕ್ಕೆ ಜೇನುಬಂದಿದ್ದು, ಒಮ್ಮೊಮ್ಮೆ ಕಬ್ಬಿನ ಗದ್ದೆಯ ಕಡೆ ಬಂದ ಆನೆಯ ವಿಷಯದವರೆಗೆ.ಯಾರಯಾರಮನೆಯಲ್ಲಿ ಯಾರ್ಯಾರಿಗೆ ಓಟುಹಾಕುವ ಬಗ್ಗೆ ಮಾತು ನಡೆಯುತ್ತಿದೆ ಎಂಬ ಪಂಚಾಯತ್  ಚುಣಾವಣೆಗೆ ನಿಂತವರು ಕೇಳುವ ಒಳವಿಚಾರಗಳಿಂದ ಹಿಡಿದು  'ಎಲ್ಲಾದರೂ ಒಳ್ಳೇ ಹೋರಿ-ಮಣಕ ಕೊಡುವ ಸುದ್ದಿ ಗೊತ್ತಾದ್ರೆ ಹೇಳೋ' ಎನ್ನುವವರೂ ಇರುತ್ತಿದ್ದರು. ಅದರದ್ದೇ ವಿಶಿಷ್ಟವಾದ ಖಾಕಿ ಚೀಲಗಳಲ್ಲಿ ದಿನವೂ ಬರುವ ಪತ್ರಗಳಲ್ಲೂ ಬಹಳ ವೆರಾಯಿಟಿ;ದೊಡ್ಡ ಜಮೀನ್ದಾರರಿಗಷ್ಟೇ ಬರುವ ಬ್ಯಾಂಕಿನ ಅಢಾವೆ ಪತ್ರಿಕೆಗಳೂ,ಬೇಡವೆಂದರೂ ಬರುತ್ತಲೇ ಇರುವ ಬ್ಯಾಂಕಿನ,ಎಲ್‌ಐಸಿಯ ನೋಟೀಸುಗಳು,ಪ್ರೀತಿಯ ಜಾನ್ಹವಿಗೆ ಪೇಟೆಯಲ್ಲಿ ಕೆಲಸಕ್ಕಿರುವ ಪ್ರಕಾಶ ಬರೆದ ಪ್ರೇಮಪತ್ರವೂ,ಡೇಟ್‌ಬಾರ್ ಆದ ಇನ್ವಿಟೇಷನ್‌ಗಳು, ಸಣ್ಣ ಪುಟ್ಟ ಹಸಿರು,ಹಳದಿ ಪತ್ರಗಳು,ಸರಕಾರಿ ಪತ್ರಗಳು ಹೀಗೆ ಹಲವು ಉಸಿರಿನ ಭಾವನೆಗಳನ್ನು, ಕತೆಗಳನ್ನು ತನ್ನೊಡನೆ ಹೊತ್ತು‍ತರುತ್ತವೆ.

ಪೋಸ್ಟಾಪೀಸಿನಲ್ಲಿ ಅಪ್ಪ
ನಾನು ದೂರದೂರಿನ ಕಾಲೇಜು ಸೇರಿದ ಆರಂಭದ ದಿನಗಳಲ್ಲಿ ಮನೆಗೆ ಪತ್ರಬರೆಯುವುದನ್ನೂ, ಕೆಲವೊಮ್ಮೆ ಹಾಸ್ಟೆಲಿನ ಗೆಳೆಯರಿಗೆ ಪೋಸ್ಟ್‌ಮಾಡಿ ಎಂದು ಪತ್ರಗಳನ್ನು ಕೊಡುವಾಗ ವಿಚಿತ್ರ ಹಾಗೂ ಅಚ್ಚರಿ ಎಂಬಂತೆ ನೋಡುತ್ತಿದ್ದರು,ಆದರೆ ನಾನು ಮಾತ್ರ ಪ್ರತೀ ಸಲ ಮನೆಗೆ ಹೋದಾಗ  ಖಾಲಿ ಅಂತರ್ದೇಶಿ ಪತ್ರಗಳನ್ನು ತರಲು ಮರೆಯುತ್ತಿರಲಿಲ್ಲ.ನನ್ನ ಹೆಸರಿಗೆ ಬರುತ್ತಿದ್ದ ಮನೆಯವರ ಹಾಗೂ ಅದೂ ಇದು ಪತ್ರಗಳಿಂದ ನನಗೆ ಅಲ್ಲಿನ ಪೋಸ್ಟ್‌ಮಾಸ್ತರರೂ ಪರಿಚಯವಾಗಿದ್ದಿತ್ತು, ಅಂತ ಪತ್ರಗಳಿಗೆ ಕಾಯುತ್ತಿದ್ದ ದಿನಗಳಿದ್ದವು. ನಾವಂತೂ ಪತ್ರಬರೆಯುವ ಹೊಸವಿಧಾನಗಳನ್ನು ಸೃಸ್ಟಿಸಿದ್ದೆವು, ಅದೊಂಥರಾ ಸಾಪ್ತಹಿಕ ದಿನಪತ್ರಿಕೆಯಂತೆ ಬಹಳಷ್ಟು ಸಂಗತಿಗಳನ್ನು ಒಳಗೊಂಡಿರುತ್ತಿತ್ತು. ನಂತರದ ದಿನಗಳಲ್ಲಿ ಮೊಬೈಲುಗಳು ಕೈಸಿಕ್ಕಿ ಪತ್ರಬರೆಯುವುದೇ ಮರೆತು ಹೋಗಿದೆ. 'ನಾನು ಕ್ಷೇಮ, ನಿಮ್ಮ ಕ್ಷೇಮಸಮಾಚಾರ ತಿಳಿಸಿ' ಎಂದೆಲ್ಲ ಹೇಳುವ ಪತ್ರಗಳು ಗಿಗಾಬೈಟಿನ ಸ್ಪೀಡಿನ ಎಲೆಕ್ಟ್ರಾನ್ ಯುಗದಲ್ಲಿ ಬಾಲಿಶವಾಗಿಯೂ ಹಳತಾಗಿಯೂ ಕಾಣುವುದೂ ಹೌದು.ಪಟ್ಟುಬಿದ್ದು ಬರೆಯುತ್ತೇನೆಂದರೆ ಹಳೆಪ್ರೀತಿಯ ನೆನಪಲ್ಲಷ್ಟೇ ಬದುಕುತ್ತಿರುವ ಗಂಡಹೆಂಡತಿಯ ಈಗಿನ ಪ್ರೀತಿಯಂತಾಗಿಬಿಡಬಹುದಷ್ಟೆ. ನಮ್ಮದೇ ಸ್ವಂತ ವಿಳಾಸಗಳಿಲ್ಲದ ಈ ನಗರಿಯಲ್ಲಿ ನನ್ನ ಮೂಲೆಸೇರಿದ ಸೂಟ್‌ಕೇಸಿನಲ್ಲಿನ ನೀಲಿಬಣ್ಣದ ಅಂತರ್ದೇಶಿಯೊಂದು ಕಂಡು ಇದನ್ನೆಲ್ಲ ಮತ್ತೆ ನೆನಪಿಸಿತು. ತನಗಿಲ್ಲದ ವಿಳಾಸದಲ್ಲಿನ ನೂರು ಮುಖಗಳ ಹಾಗೆ ಕಣ್ಣ ಮುಂದೆ ಅಪ್ಪನ ದೈನಿಕದ ಕೆಲ ದೃಶ್ಯಗಳು ನನ್ನಪಾಲಿನ ಎಲ್ಲಕ್ಕೂ ಮೀರಿದ ಜೀವನಪ್ರೀತಿಯ ಚಲಿಸುವ ಚಿತ್ರಗಳಂತೆ ಹಾದು ಹೋದವು.

ಅಪ್ಪ ಬೆಳ್ಳಂಬೆಳಗ್ಗೆಯೇ ತನ್ನ ನೆಚ್ಚಿನ ಪೋಸ್ಟಾಪೀಸಿನಲ್ಲಿ ಎಂದಿನ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾನೆ. ಎದುರಿಗೆ ಠಸ್ಸೆಯ ಡಬ್ಬ,ಪಕ್ಕದಲ್ಲಿ ಅರಗಿನ ಸೀಲುಮಾಡಲು ಬೇಕಾಗುವ ಸಣ್ಣ ಲಾಟೀನು ದೀಪ ಹಗಲಲ್ಲೂ ಸಣ್ಣಗೆ ಉರಿಯುತ್ತಿದೆ. ಟಕ್ಕ-ಟಕ್ಕ ಟಕ ಎಂಬ ಠಸ್ಸೆಯ ಸದ್ದು ಮಾತ್ರ ಹಳ್ಳಿಯ ಆ ಎಲ್ಲ ಪತ್ರಗಳಿಗೆ ಪೇಟೆಯಕಡೆಹೋಗುವ ಕಟ್ಟಕಡೆಯ ಪರವಾನಿಗೆಯನ್ನು ಸಾಕಾರಗೊಳಿಸುತ್ತ ಮೆಲ್ಲಗೆ ಕಣ್ಣೊಡೆಯುತ್ತಿರುವ ಪರಮ ಆಲಸಿ ಹಗಲಿನಲ್ಲಿ ಒಂದು ಕಾಯಕದ ದಿವ್ಯಗಳಿಗೆಯ ರೂಪಕದಂತೆ ಹರಡಿಕೊಳ್ಳುತ್ತಲಿದೆ.

'ಅಜ್ಜೀ, ನಿನ್ನಮಗ ಹಣ ಕಳುಹಿಸಿದ್ದಾನೆ' ಎನ್ನುತ್ತ ಮನಿಆರ್ಡರ್ ಕೊಡಬಂದ ಪೋಸ್ಟ್‌ಭಟ್ಟರ ಬಳಿ ಮಗ ಮತ್ತೇನಾದರೂ ಬರೆದಿದ್ದಾನೆಯೇ ಎಂದು  ಗೌರಜ್ಜಿ ಬೊಚ್ಚುಬಾಯಿಯಲ್ಲಿ ಕೇಳಿದ್ದಾಳೆ, ಮಗ ಏನೂ ಬರೆದಿಲ್ಲವೆಂಬುದು ಗೊತ್ತಿದ್ದ ಪೋಸ್ಟ್‌ಭಟ್ಟರು ವಿಷಯ ಮರೆಸಲು ನಿನ್ನ ಮಂಡಿನೋವು ಹೇಗಿದೆ ಎಂದು ಕೇಳುತ್ತಿದ್ದಾರೆ. ಮೆತ್ತಗೆ ನಗುತ್ತಾ ಅಜ್ಜಿ ತನ್ನ ಕವಳದ ಸಂಚಿಯಿಂದ ತೆಗೆದ ಐದರ ನಾಣ್ಯವನ್ನು ಬೇಡವೆಂದರೂ ಭಟ್ಟರ ಕೈಲಿ ಹಿಡಿಸುತ್ತಿದ್ದಾಳೆ. 

'ಹೋಯ್ ಶಂಕ್ರಜ್ಜ ನಿನಗೇನೋ ಪತ್ರ ಬಂದಿತ್ತಂತೆ ಪೋಸ್ಟ್‌ಭಟ್ಟರು ನಿನ್ನ ಹುಡುಕ್ಕಬಂದಿದ್ರು, ಹೋಗಿ ನೋಡಿ ಬಾ' ಎಂದ ಮಾಬ್ಲನ ಮಾತಿಗೆ ತನ್ನನ್ನು ಪೇಟೆಗ ಕರೆಯಿಸಿಕೊಳ್ಳುತ್ತೇನೆಂದು ಹೇಳಿ ಹೋದ ಮಗನೇ ಬರೆದ ಪತ್ರವಿರಬೇಕು ಎಂದುಕೊಂಡು ಎಲ್ಲಿಯದೋ ಒಂದು ಆಪ್ತವಾದ ಜೀವದುಸಿರಿನ ಬುತ್ತಿಯಂತ ಆಸೆಯಲ್ಲಿ ಪತ್ರವನ್ನು ಭಟ್ಟರಲ್ಲಿಯೇ ಓದಿಸುವಾ ಎನ್ನುತ್ತಾ ಪೋಸ್ಟ್‌ಭಟ್ರಮನೆಗೇ ಬಂದು ಬಟವಾಡೆಗೆ ಹೋದ ಭಟ್ಟರ ಬರುವನ್ನೇ ಕಾಯುತ್ತಿದ್ದಾನೆ,ಪೋಸ್ಟ್‌ಭಟ್ಟರು ಮಧ್ಯಾನ್ನವಾದರೂ ಬರದಿದ್ದಾಗ 'ಅವ ಹೋದಲ್ಲೇ ಬಾಕಿಯಾಗಿರಬೇಕು' ಎನ್ನುತ್ತ ಭಟ್ಟರ ಅಮ್ಮ ಬಡಿಸಿದ ಊಟಮಾಡಿದ ಶಂಕ್ರಜ್ಜ ಕೂತಲ್ಲಿಯೇ ಮಧ್ಯಾನ್ಹದ ಜೋಂಪು ನಿದ್ರೆಗೆ ಜಾರಿದ್ದಾನೆ.

 'ಏನು, ಕಾರ್ಯಕ್ರಮ ಮುಗಿದನಂತರ ತಂದುಕೊಡುತ್ತೀರಲ್ಲ ಈ ಪತ್ರವನ್ನು' ಎಂದು ಸಿಡಿಮಿಡಿಗುಟ್ಟ ಗೋಪಾಲಣ್ಣನಿಗೆ ಅದು ನಮ್ಮ ಪೋಸ್ಟಿಗೂ ಇಂದೇ ಬಂದದ್ದು ಮಾರಾಯ ಎಂದು ಹೇಳಲೂ ಆಗದೇ ಅಪ್ಪ ಹೊರಬಂದಿದ್ದಾನೆ, ಶನಿವಾರದ ಶಾಲೆ ಮುಗಿಸಿ ಬಂದ ಕುಣಬಿಯ ಹುಡುಗನೊಬ್ಬ ದಣಪೆಯ ಹೊರಗೆ ನಿಲ್ಲಿಸಿದ್ದ ಪೋಸ್ಟ್‌ಭಟ್ಟರ ಸೈಕಲ್ಲಿನ ಸ್ಟ್ಯಾಂಡ್ ತೆಗೆದಿದ್ದಾನೆ,ತನ್ನಳತೆಗಿಂತ ದೊಡ್ಡದಾದ ಸೈಕಲ್ಲನ್ನು ಹಿಡಿದು ನಿಲ್ಲಿಸಿ ಹತ್ತಿ ಪೆಡಲ್ ತುಳಿಯತೊಡಗಿದ್ದಾನೆ,ಇನ್ನೊಂದೇ ರೌಂಡು ಎನ್ನುತ್ತ ಮೂರ್ನಾಲ್ಕು ರೌಂಡ್ ಮುಗಿಸಿ ರೊಯ್ಯೆಂದು ಪತ್ರ ಕೊಟ್ಟು ಬಂದ ಅಪ್ಪನ ಬಳಿಯೇ ತಂದು ನಿಲಿಸಿದ್ದಾನೆ,ತುಸು ಅಂಜಿಕೆಯಿಂದ ಕೂಡಿದ ಅವನ ಮುಖದಲ್ಲಿನ ಪುಟ್ಟ ಮಾಯದ ನಗುವೊಂದು ನೀರವವನ್ನು ದಾಟಿ ನಿಧಾನವಾಗಿ ಅಪ್ಪನ ಮೋರೆಯನ್ನು ತಾಕಿಕೊಂಡು ಸಣ್ಣಗೆ ಅರಳತೊಡಗಿದೆ.

ಅಪ್ಪ ದೂರದ ನಾಗರಕಾನಿನ ಕಾಡಿನಲ್ಲಿರುವ ಪುನಿಯಜ್ಜನ ಪಾಲಿನ ಸರ್ಕಾರದ ಕಡೆಗಿನ ಅತಿದೊಡ್ಡ ಸಹಾಯವಾದ ವೃದ್ಧಾಪ್ಯ ವೇತನವನ್ನು ಕೊಡಹೋದವನು ಜೋರುಮಳೆಯಲ್ಲಿ ತೊಯ್ದುಬಂದಿದ್ದಾನೆ,ಅವನು ತನ್ನ ತೊಯ್ಯುವಿಕೆಯನ್ನೂ ಮರೆತು ಜೊತೆಗೆ ಒಯ್ದಿದ್ದ ಉಳಿದ ಪತ್ರಗಳನ್ನೆಲ್ಲ ಒಂದುರೀತಿಯ ಭಯದಿಂದ ಕೂಡಿದ ಕಾಳಜಿಯಲ್ಲಿ ಒಂದೊಂದನ್ನೆ ಹರವುತ್ತಿದ್ದರೆ,ಶಾಲೆಯಿಂದ ಅಮ್ಮನ ಜೊತೆ ಮನೆಗೆ ಬರುವಾಗ ಸಂಜೆಮಳೆಗೆ ಅರ್ಧಂಬರ್ಧ ತೊಯ್ದ ಇನ್ನೂ ಆಡುವ ಮೂಡಿನಲ್ಲೆ ಇರುವ ಪುಟಾಣಿಗಳಂತೆ ಕಾಣುತ್ತಿವೆ ಆ ಪತ್ರಗಳು.

30 November, 2010

ಕನಸಿನ ವಿಳಾಸಕ್ಕಾಗಿ

ಇವು ನನ್ನದೇ ತಲ್ಲಣಗಳ ಪ್ರತಿಮೆಗಳಂಥ ಯಾವುದೋ ಅರ್ಧಕ್ಕೇ ಬಿಟ್ಟ ಕವಿತೆಯ ಸಾಲುಗಳಂಥ,ಹಾಳೆಯ ಮೇಲೆ ಬಿಡಿಸಲಾಗದೆ ಉಳಿದ ಮನಸಿನ ಅರೆಬರೆ ಚಿತ್ರಗಳಂಥ ಏನೋ ಹೇಳಬೇಕೆಂದುಕೊಂಡು ಹೇಳಲಾಗದೇ ಉಳಿದುಹೋದ,ಹೀಗೇ ಬರೆದಿಟ್ಟು ಸಾಲುಗಟ್ಟಿದವುಗಳು.ಉದ್ದೇಶ ಮತ್ತು ಅರ್ಥ ಎರಡನ್ನೂ
ತಿಳಿದಂತೆ ಅರ್ಥೈಸಿಕೊಂಬುದು.


ಗೋಡೆಯ ಮೇಲಿನ ಚಿತ್ರಕೆಲ್ಲ ಚೌಕಟ್ಟು,ನಾಕಂಡ ಕನಸುಗಳು ಅದರೊಳಗೆ ಬಂಧಿಯಾಗಿವೆ.

ಎಲ್ಲರೆದುರೂ ಸಂಭಾವಿತನಾಗುವ ಹೊತ್ತಿಗೆ ಕನ್ನಡಿಯಲ್ಲಿ ಕಾಣುವ ಮುಖ ಬೇರೆಯದೇ ಆಗಿತ್ತು.

ಬೆಳಕಿನ ಮಾತನಾಡುತ್ತ ಕತ್ತಲಲ್ಲಿ ಕಳೆದುಹೋದವಳು ಹ್ಯಾಲೋಜನ್ ದೀಪದ ಸುತ್ತ ಸತ್ತ ಪತಂಗವಾಗಿದ್ದಾಳೆ.

ಸ್ತ್ರೀ ಸ್ವಾತಂತ್ರ್ಯ ಕನಸು ವಿಮಾನ ಎಂದೆಲ್ಲ ಮಾತನಾಡುತ್ತಿದ್ದವಳು ಒಂದು ದಿನ ಅಪ್ಪ ನೋಡಿದ ಹುಡುಗನೊಂದಿಗೇ ಮದುವೆಯಾದಳು.

ಭಟ್ಟರ ಜೋರುಮಂತ್ರ ಅರ್ಥವಾಗದೇ ಮದುಮಗಳ ಜರಿಸೀರೆಯ ಗೊಂಬೆಗಳು ತುಸು ಬೆದರಿವೆ.

ಕವಡೆಹಕ್ಕಿ ಕಚ್ಚಿಕೊಂಡ ಒಂದು ಕಂಬಳಿಹುಳದ ಮೈಗೆ ನಸುಗೆಂಪು ಮ್ಯಾಂಗನೀಸು ಧೂಳಿದೆ.

ಭತ್ತ ತಿಂದು ಹೋಗಲು ಬಂದ ಹಕ್ಕಿಗಳಿಗೆ ಬೀಜದ ಪೇಟೆಂಟಿನ ಬಗ್ಗೆ ಗೊತ್ತಿದ್ದಂತಿಲ್ಲ.

ಅಮ್ಮನ ಡಾನ್ಸ್ ಕ್ಲಾಸು, ಅಪ್ಪನ ಕಂಪ್ಯೂಟರ್ ಕ್ಲಾಸು, ಶಾಲೆ ಮಾಸ್ತರರ ಹೋಮ್‌ವರ್ಕು ಯಾರೋ ಹೇಳಿದ ಎಂಥದೋ ಕೋಚಿಂಗಿನ ಗದ್ದಲದಲ್ಲಿ ಗಾಳಿಪಟದ ಕನಸೊಂದು  ಹಳತಾಗಿ ಬಣ್ಣಗೆಟ್ಟು ಹಾರಲಾಗದೆ ಉಳಿದುಬಿಟ್ಟಿದೆ.

ಹೊದೆಸಿದ ಮಾಡಿನ ಜೊತೆಜೊತೆಗೇ ಎಂದೋ ರಾತ್ರಿ ಕನಸ ಮರೆತವರನ್ನು ಇವರು ಯಾವುದೋ ವಿಳಾಸ ಕೇಳುತ್ತಿದ್ದಾರೆ.

ಊರೂರು  ಸುತ್ತುವ ಲಾರಿಗೆ ಯಾವ ಊರಿನ ಹೆಸರೂ ಸರಿ ನೆನಪಿಲ್ಲ, ಸುತ್ತಿದೂರಿನ ನೆನಪಿಗೆ ಸವೆದ ಟೈರುಗಳಿವೆ.

ಕೆಲಸ ಕೊಡಿಸುತ್ತೇನೆಂದು ಹೋದ ಎಲ್ಲರ ವಿಳಾಸಗಳನ್ನೂ ಬರೆದಿಟ್ಟುಕೊಂಡ ತಂದೂರಿ ರೊಟ್ಟಿ  ಸುಡುವ ಹುಡುಗನಿಗೆ ಮಾತ್ರ ಆ ಎಲ್ಲ ದೊಡ್ಡ ಲಾರಿಗಳ ನೆನಪಿದೆ.

ಕಾರಿನಲ್ಲಿ ಬಂದವರು ಕೂಲಿಜನರ ಹಾಡುಗಳ ವಿಡಿಯೋ ಮಾಡಿಕೊಂಡಿದ್ದಾರೆ, ಕಾಲಿನ ನಂಜಿನ ಬಗ್ಗೆ ಏನಾದರು ಔಸಧಿ ಗೊತ್ತಿದೆಯಾ ಕೇಳಲು ಅವನಿಗೆ ಹಿಂಜರಿಕೆ.



ಅವಳಿಗಾಗಿ ಮಲ್ಲಿಗೆ ತರಹೋದ ಸಂತೆಯಲ್ಲಿ ಬರೀ ಕನ್ನಡಿಗಳು ಮಾರಾಟಕ್ಕಿವೆ.

ಕಳೆದುಹೋದ ಕನಸುಗಳು ಎಂದೂ ತೆರೆಯದಿದ್ದ ಕಿಟಕಿಯನ್ನು ತೆರೆದ ಕೂಡಲೆ ಕಂಡಿವೆ, ಸತ್ತ ಅವನ್ನು ಎಲ್ಲಾದರೂ ಎಸೆದುಬರಬೇಕಿದೆ.

ಅವರು ಮೋಡದ ಬಗ್ಗೆ ಕವಿತೆ ಕಟ್ಟಿ ಹಾಡಿದರು, ಮೋಡ ಸುರಿದು ಮಳೆಯಾಯಿತು,ಹರಿದ ನೀರಲ್ಲಿ ಜನ ತಮ್ಮ ಪಾಲು ಎಣಿಸಿದರು,ಸಾಲದೆಂದು ಭೂಮಿಯ ಬಗೆದರು.

ದಿನವೂ ಹುಡುಗ ಹುಡುಗಿಯರ ಜೋರು ಪ್ರೀತಿಯಲ್ಲಿ ನಲುಗಿದ ಕಾಫಿಡೆಯ ಗೋಡೆಗೆ ರಾತ್ರಿಯಹೊತ್ತಿಗೆ ಕಷ್ಟದ ನಿಟ್ಟುಸಿರು.

ಡೈಪರ್ಸ್ ಪ್ಯಾಮ್ಪರ್ಸ್‌ಗಳಿಂದ ತುಂಬಿಹೋದ ಮೆಡಿಕಲ್ ಶಾಪಿನಲ್ಲಿ ಜ್ವರದ ಗುಳಿಗೆ ಕೇಳಲು ಈಗಷ್ಟೆ ಪೇಟೆಯಲ್ಲಿರಲು ಕಲಿಯುತ್ತಿರುವ ಹಳ್ಳಿಹುಡುಗ ತುಸುನಾಚಿದ್ದಾನೆ.

ಶಾಪಿಂಗ್ ಮಾಲುಗಳು ಬಾಗಿಲು ತೆರೆದುಕೊಳ್ಳುವ ಸರೀಹೊತ್ತಿಗೆ ಹಳ್ಳಿಹುಡುಗ ಕಂಡಕನಸಿನ ವಿಳಾಸ ಹುಡುಕುತ್ತಿದ್ದಾನೆ.



( 9 ಜನವರಿ,2011ರ ವಿಜಯ ಕರ್ನಾಟಕ ಸಾಪ್ತಾಹಿಕ ಲವಲVKಯಲ್ಲಿ ಪ್ರಕಟಿತ )

08 October, 2010

ಗೋಡೆಯ ಮೇಲೆ ಬರೆದ ಸಾವಿರ ಕಣ್ಣಿನ ಹಕ್ಕಿ..

ಧೋ ಸುರಿವ ಮಳೆಯ ನಡುವೆ ದಟ್ಟ ಕಾಡಿನಲ್ಲಿ ತಮ್ಮವೇ ಲೋಕದ ಒಂಟಿಮನೆಗಳಲ್ಲಿ ಕವಳ ಹಾಕುತ್ತ, ಅಡಿಕೆ ಸುಲಿಯುತ್ತ ಕೂತ ಜನಸಾಗರವಾಗುತ್ತೇನೆಂದು  ಹೊರಟ ಹಳ್ಳಮಳೆಯ ರಭಸಕ್ಕೆ ತತ್ತರಿಸುತ್ತಿರುವ ಗಿಡಮರ,ಪಡಸಾಲೆಯಲ್ಲಿ ಹೊಡಚಲಿನ ಸಣ್ಣ ಶಾಖಕ್ಕೆ  ಒಣಗುತ್ತಿರುವ ಕಂಬಳಿ ಕೊಪ್ಪೆ, ಅಲ್ಲೇ ಬೆಚ್ಚಗೆ ಬಾಲ ಸುತ್ತಿ ಮಲಗಿದ ಬೆಕ್ಕು, ಅದೋ ಅಲ್ಲೊಬ್ಬ ಪೋರ ಈಗಷ್ಟೇ ಶಾಲೆಯಿಂದ ಬಂದು ಪಾಟೀಚೀಲ ಇಡಲೂ ಪುರುಸೊತ್ತಿಲ್ಲದೆ ಗಣಿತ ಪಟ್ಟಿಯ ಕೊನೆ ಹಾಳೆ ಹರಿದು ದೋಣಿ ಮಾಡಿ ಬಿಡಲು ಹೊರಟಿದ್ದಾನೆ. ಅವನವೇ  ಕನಸುಗಳು  ದೋಣಿಯಾಗಲು ಕಾತರಿಸಿವೆ.


ಪುಟ್ಟ ಪೂರ್ವಿ ನಾಳೆ ಶಾಲೆಗೆ ಹೋದಕೂಡಲೇ ಅಕ್ಕೋರಿಗೆ ಕೊಡಲು ದಂಡೆ ಮಾಡಿಕೊಡೆಂದು ಆಯಿಯ ಕಾಡಿದ್ದಾಳೆಮಾಚಣ್ಣ ಕಂಬಳಿಕೊಪ್ಪೆಯೊಳಗೆ ನೆನೆಯುತ್ತ ಈಗಷ್ಟೇ ಮನೆಗೆ ಬರುತ್ತಿದ್ದಾನೆ,ಹೆಂಡತಿ ಕೊಡಲಿರುವ ಬೆಚ್ಚಗಿನ ಚಹ ನೆನಪಿಸಿಕೊಳ್ಳುತ್ತ

 ಕೊಟ್ಟಿಗೆಯಲ್ಲಿ ಇಂದಷ್ಟೇ ಜನಿಸಿದ ಗೌರಿಯ ಪುಟ್ಟ ಕರು ಇಂದೇ ಎದ್ದು ನಿಲ್ಲುತ್ತೇನೆನುತ ಬೀಳುತ್ತಲೇ ಅಂಬೆಗಾಲಿಕ್ಕಿ ತಾಲೀಮು ನಡೆಸುತ್ತಿದೆ, ಗೌರಿ ಪ್ರೀತಿಯಿಂದ ಕರುವಿನ ಮೋರೆ ನೆಕ್ಕುತ್ತಿದೆ, ಗೆದ್ದೆ ನಾಟಿಗೆ ಬಂದ ದೇವಕಿಗೆ ಗದ್ದೆ ತುದಿಯ ಡೊಂಬಿನಲ್ಲಿ  ಕೈಯಗಲದ ಏಡಿಯೊಂದು  ಸಿಕ್ಕಿದೆ, ದೂರದ ಹೈವೆಯ ಅಂಚಿನಲ್ಲಿ ಕೆಂಪು ರಾಡಿ ನೀರು ಮ್ಯಾಂಗನೀಸ್ ಧೂಳನೆಲ್ಲ ಹೊತ್ತು ಸಾಗಿದೆ. ಯಾರೂ ನೋಡುತ್ತಿಲ್ಲವೆನ್ದುಕೊಂಡ ಗೋಡೆಗೆ ಮಸಿಯಿಂದ ಬರೆದ ಸಾವಿರ ಕಣ್ಣಿನ ನವಿಲು ಗರಿಬಿಚ್ಚಿ ನರ್ತಿಸಲನುವಾಗಿದೆ.

ಬಕುಲದ ಹೂವಿನಂಥ ಗಂಧವೊಂದು ತೇಲಿಕೊಂಡು ಬಂದಿದೆ, ದೈನಿಕದ ದಿವ್ಯ ಗಳಿಗೆಗಳನ್ನು ನೆನಪಿಸುತ್ತ ಸಾಗಿದೆ.



( 24 ಅಕ್ಟೋಬರ್, 2010ರ ವಿಜಯ ಕರ್ನಾಟಕದ ಸಪ್ತಾಹಿಕ ಲವಲvkಯಲ್ಲಿ ಪ್ರಕಟಿತ )

02 October, 2010

ನನ್ನೊಳಗೆ ನನ್ನನ್ನು ಬಿಡುಗಡೆಗೊಳಿಸುತ್ತ

ಈ ಒಂದು ಮುಖಕ್ಕೆ ಹಲವು ರೂಪ, ಒಳಗನ್ನು  ಕಾಣುತ್ತ ಹೊರಗಣ ಒಳಗನ್ನು ನೋಡುವ ಯತ್ನದ ರೂಪಆ ರೂಪದ್ದೇ ಆಟಅವುಗಳ ಹಿಂದೆ  ಒಂದು ಕಥೆ ಇರುತ್ತದೆ, ಮಾಯಾಕಥೆ, ಆ ಕಥೆಯಲ್ಲಿ ಒಬ್ಬ ಮನುಷ್ಯ ಕಾಣುತ್ತಾನೆ, ಸುಮ್ಮನೇ ಕೂರಲಾಗದ  ಮನುಷ್ಯಹಿಂದೆ ಅಂಥದ್ದೇ ಹದಿನೆಂಟಕ್ಷೋಹಿಣಿ ಸೈನ್ಯ- ಅಲ್ಲೆಲ್ಲ ನಮ್ಮದೇ ಮುಖ. ಅದರ ರೂಪಗಳು ಬದಲಾಗುತ್ತಲೇ ಇರುತ್ತವೆ, ಮಾಯಾ ರೂಪ. .ಆ ಮನುಷ್ಯನೂ ಆ ರೂಪಗಳೂ ನಮ್ಮನ್ನು ನಿರಂತರ ಕಾಡುತ್ತಿರುತ್ತವೆ,  ಮಾಯೆಯ ಹಾಗೆ. ನಿರಂತರ  ಕಾಯುತ್ತಿರುತ್ತವೆ..

ನನ್ನೊಳಗಿನ ಮನುಷ್ಯ  ನಿರಂತರ ರೂಪಾಂತರಗೊಳ್ಳುತ್ತಲೇ  ಇರುತ್ತಾನೆ,ಕನ್ನಡಿಯೊಳಗಿನ ಮುಖದ ಹಾಗೆ ನನ್ನ ತೋರಿಸುತ್ತಾನೆ.ರೂಪ ರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, ಅನಿಕೇತನವಾಗುವ ತವಕದಲ್ಲಿ..




ಸ್ಥಿರತೆ ಬೇಸರವಾಗಿ ಸಾಗರಕ್ಕೆ ಸಾಗರವೇ ಆವಿಯಾಗಿ ಮೋಡವಾಗಿ ಯಕ್ಷರ ಜೊತೆ ವಿಶ್ವಪರ್ಯಟನೆಗೆ ಹೊರಡುತ್ತದೆ.ಎಲ್ಲ ರೂಹುಗಳನ್ನು ಅನುಭವಿಸಿ ಕಲೆಸಿ ,ಮಥಿಸಿ, ನಮ್ಮೆಲ್ಲರ ಕನಸುಗಳನ್ನು ಹೊತ್ತು ಅಲೆಯುತ್ತದೆ. ಕೊನೆಗೊಮ್ಮೆ ಅಲೆದಾಟ ಸಾಕಾಗಿ ಮಳೆಯಾಗಿ ಹನಿಸುತ್ತದೆ, ನೆಲದ ಹರುಕನೆಲ್ಲ ಹೊಲಿಯುತ್ತ ಸಾಗುತ್ತದೆ, ಬೊಗಸೆಯೊಳಗಿನ ಕೆಲಹನಿಗಳು ಎದೆಯೊಳಗೆ ಶಾಶ್ವತವಾಗುತ್ತವೆ. ಎಲ್ಲ ಕೂಡಿ ನದಿಯಾಗಿ ಹರಿಯುತ್ತದೆ ಹೀಗೆ ಹರಿದು ಉಪ್ಪುಪ್ಪು ಸಮುದ್ರ ಸೇರುತ್ತದೆ, ಅರಿವಿನ ಆಘಾದವಾಗುತ್ತದೆ.

ಹೀಗೆ ಮುಖವೂ ರೂಪಾಂತರಗೊಳ್ಳುತ್ತ  ಮುಖವಾಡಗಳಲ್ಲಡಗಿದ ಚಹರೆಗಳನ್ನು ಹೊರಗೆಡುವುತ್ತಾ ಏನೂ ಉಳಿಯದ ಹಾಗೆ ಎಲ್ಲವನ್ನೂ ಕಳಚುತ್ತ ನಡೆಯುತ್ತದೆ, ನಿತ್ಯತೆಯೆಡೆಗೆ.

ದೇವತೆಯೇ ಎನ್ನನು ನಿರಂತರ ಅರಿವಿನೆಡೆಗೆ ರೂಪಾಂತರಗೊಳಿಸುತ್ತಿರು.  


ಸ್ವಚ್ಚ  ಇಸ್ತ್ರಿಯಲ್ಲಿ,ಸೆಂಟಿನ ಘಮದಲ್ಲಿ ನಿಗದಿಯಾಗಿಬಿಟ್ಟ ಭಾವನೆಗಳಿಂದ  ಹಳೆಯ ಅಂಗಿಯಂಥ ಆಪ್ತವಾದ ಭಾವನೆಗಳಿಗೆ ನನ್ನನ್ನು ರೂಪಾಂತರಗೊಳಿಸು.

ಎಲ್ಲರಿಗೂ ಒಂದು
ಪ್ರಶಾಂತ ನಿದ್ದೆ ಕೊಡು,
ಸುಳ್ಳೇ ಕನಸುಗಳಿಲ್ಲದ ನಿದ್ದೆ

ನನಗೊಂದು ಅಂಗಿ ಕೊಡು
 ನನ್ನದೇ ಅಳತೆಯದು

ಬೆತ್ತದೇಟಾದರೂ
 ಸರಿಯೇ
 ಸಾಲೆ ಮಾಸ್ತರರ ಬಳಿಯೇ ಕಳಿಸು

ಅಂಗಡಿಯಿಂದಾದರೂ
ಸರಿಯೇ
ನನಗೊಂದು ಗುಬ್ಬಚ್ಚಿ ಕೊಡಿಸು

ಆಸೆಬುರುಕ
 ಹಸಿವುಗಳಿಂದ
ನಗರವನ್ನು ರಕ್ಷಿಸು

ಒಂದು
ಸೂಜಿ ದಾರ
ಹರಿದ ನಮ್ಮನೆಲ್ಲ ಹೊಲಿಯಲು


ನನಗೇ ಗೊತ್ತಿಲ್ಲದ  ಅಕ್ಷರಗಳನ್ನು  ಟೈಪಿಸಲಾಗದೆ ಒದ್ದಾಡುತ್ತಿರುವ ನಾನು, ರುಮುಗುಡುವ  ಸಿ ರೂಮಿನಿನಿಂದ ಹೊರಗೆ, ತಂತಿಗಳ ಮೇಲೆ ಕುಳಿತ ಗುಬ್ಬಿಗಳ ಚಿಂವ್ ಚಿಂವ್ ಕಲರವದ ಮಾಂತ್ರಿಕ ರಾಗದತ್ತ ಒಯ್ಯುವ ರೂಪಾಂತರಕ್ಕಾಗಿ ಆರ್ತನಾಗಿ ಕಾದಿದ್ದೇನೆ..