ಉಪಗ್ರಹಕ್ಕೆ ಕನಸಿನ ರೆಕ್ಕೆಗಳಿವೆ
ಕತ್ತಲಲ್ಲಿ ಮರೆತ ಬಟ್ಟೆಗಳು
ರಾತ್ರಿಯ ಜೊತೆ ಕನಸು ಕಾಣುತ್ತಿವೆ
ಒಳಗೆ ಇಸ್ತ್ರಿ ಮಾಡಿಟ್ಟ ಬಟ್ಟೆಗಳು
ಸೆಕೆಗೆ ಬೆವತಿವೆ
--
ಹಗಲು ರಾತ್ರಿ ವ್ಯತ್ಯಾಸ ಗೊತ್ತಾಗದ
ರಾತ್ರಿಪಾಳಿಯ ಹುಡುಗನ ಕೆಂಪುಕಣ್ಣಿನಲ್ಲಿನ
ಹಗಲಿನ ಕನಸುಗಳಿಗೆ ಯಾವ ಪದಗಳೂ ಇಲ್ಲ
--
ಆ ಎಲ್ಲ ನಕ್ಷತ್ರಕಡ್ಡಿ ಹೊತ್ತಿಸುವ
ಕನಸುಗಳು ಕಳೆದಿದ್ದು
ಟಿವಿ ನ್ಯೂಸಲ್ಲಿ ಮೈಮುರಿಯುತ್ತಿರುವ
ಇದೇ ಪೇಟೆಯಲ್ಲಿ
--
ಊರೂರು ಸುತ್ತುವ ಲಾರಿಗೆ ಮಾತ್ರ
ಯಾವ ಊರಿನ ಹೆಸರೂ ನೆನಪಿಲ್ಲ
--
ಶಾಪಿಂಗ್ ಮಾಲಿನ
ಬಾಗಿಲು ತೆರೆದುಕೊಳ್ಳುವ ಹೊತ್ತಿಗೆ
ಹಳ್ಳಿ ಹುಡುಗ ಕಂಡ ಕನಸಿನ
ವಿಳಾಸ ಹುಡುಕಿ ಅಲೆಯುತ್ತಿದ್ದಾನೆ
--
ಹೈವೆಬದಿಯ ತಂದೂರಿ ರೊಟ್ಟಿ ಸುಡುವ
ಹುಡುಗನಿಗೆ ಮಾತ್ರ ಎಲ್ಲ ದೊಡ್ಡ ಲಾರಿಗಳ
ನೆನಪಿದೆ
--
ಸುಮ್ಮನೆ ಕರೆದುನೋಡು
ನೀನಿದ್ದಲ್ಲಿಗೇ ಬರುತ್ತದೆ,
ಭೂಗೋಳದ ನೆತ್ತಿಯ ಮೇಲೆ ಸುತ್ತುವ
ಉಪಗ್ರಹಕ್ಕೆ ಕನಸಿನ ರೆಕ್ಕೆಗಳಿವೆ.
____________________________
[ಅಡಿಟಿಪ್ಪಣಿ: ನನಗನಿಸಿದ ಸಾಲುಗಳನ್ನು ಹಾಗೇ ಬರೆದಿಟ್ಟಿದ್ದೆ, ಒಂದೇ ಶೀರ್ಶಿಕೆಯಡಿ ಬರುವಂಥದ್ದನ್ನೆಲ್ಲ ಜೋಡಿಸಿದಾಗ ಕವಿತೆಯ ತರ ಕಂಡು ನಾಲ್ಕು ತಿಂಗಳ ಹಿಂದೆ 'ಮಯೂರ'ಕ್ಕೆ ಕಳುಹಿಸಿದ್ದೆ,ಪುಣ್ಯಕ್ಕೆ ಸಂಪಾದಕರಿಗೂ ಹಾಗೇ ಅನಿಸಿ ಈ ಜನವರಿ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ.ಕಳುಹಿಸಿಯಾದ ನಂತರ ಇದನ್ನು ಇನ್ನಷ್ಟು ತಿದ್ದಿ ತೀಡಿದ್ದರೆ ಕವಿತೆಯಾಗಬಹುದಿತ್ತು ಅನ್ನಿಸಿತ್ತು,ಹಾಗೆ ತಿದ್ದಿದಾಗಲೂ ಏನೂ ಸುಧಾರಣೆ ಕಾಣದೆ ಕವಿತೆಯಾಗಿಸುವ ಅಸೆ ಕೈಬಿಟ್ಟು ಇಲ್ಲಿನ ಕೆಲ ಸಾಲುಗಳ ಜೊತೆ ಉಳಿದ ಕೆಲವನ್ನೂ ಸೇರಿಸಿ ಕನಸಿನ ವಿಳಾಸಕ್ಕಾಗಿ ಎಂಬ ಶೀರ್ಶಿಕೆಯಡಿ ಬ್ಲಾಗಿನಲ್ಲಿ ಪೋಸ್ಟ್ ಮಾಡಿದ್ದೆ. ಮಯೂರದಲ್ಲಿ ನನ್ನ ಕವನ ನೋಡುವುದು ನನ್ನ ಬಹುದಿನದ ಹಂಬಲವಾಗಿತ್ತು, ಅಲ್ಲಿ ಪ್ರಕಟವಾದ ಕವಿತೆಯ ಜೊತೆಗೇ ನಾನು ತಿದ್ದಿಟ್ಟಿದ್ದ ಕವಿತೆಯಂಥದ್ದನ್ನೂ ಇರಲಿ ಎಂದು ಇಲ್ಲಿ ಹಾಕಿದ್ದೇನೆ. ಯಾವುದಕ್ಕೂ ನಿಮ್ಮ ಅನಿಸಿಕೆ/ಸಲಹೆ ತಿಳಿಸಿ]
ಕ್ಯಾಲೆಂಡರಿನ ಲೆಕ್ಕದಲ್ಲಿ ಮತ್ತೊಂದು ಇಸವಿಯನ್ನು ಹಿಂದೆ ತಳ್ಳುತ್ತ ಹೊಸದೊಂದು ನಾಳೆಗೆ ತೆರೆದುಕೊಳ್ಳುವ ಸಮಯದಲ್ಲಿ ನಿಮ್ಮನ್ನೆಲ್ಲ ನೆನೆಯುತ್ತ,ಹೊಸ ಹುರುಪೊಂದು ಅನುದಿನವೂ ನಿಮ್ಮ ಕೈಹಿಡಿದು ನಡೆಸಲೆನ್ನುವ ಆಶಯದೊಂದಿಗೆ ಈ ವರ್ಷಕ್ಕೆ ಕೋರುವ ವಿದಾಯವು.