22 December, 2010

ಗಾಳಿಗೆ ತಡೆದ ಗೀಜುಗನ ಗೂಡಾಗಿ

ಎಲ್ಲ ಮರೆತು ಹೋಗಿತ್ತು
ಜಂಜಡವೇ ಬದುಕಾಗಿ
ಏನೋ ನೆನಪಾಗಿ ಹೋಗಿ ನೋಡಿದರೆ
ಗೀಜುಗನ ಗೂಡು ಹರಿದು ಬಿದ್ದಿತ್ತು
ಮೊಟ್ಟೆ ಮರಿ ಎಲ್ಲಿ ಹೋದವು?

ಅಲ್ಲಲ್ಲಿ ಹಾರುತ್ತ ಚಿಲಿಪಿಲಿ ಕೂಗುತ್ತ
ಅನುಕ್ಷಣವೂ ಜೀವದುಸಿರಿನಂತೆ
ಅಂಟು ಗಂಟಿಲ್ಲದ ಬರೀ ನಂಟಿನ
ಗೀಜುಗನ ಗೂಡಿತ್ತಲ್ಲ

ಒಡಲೊಳಗಣ ಕನಸೆಲ್ಲ ನನಸಾದ ಹಾಗೆ
ತುದಿಟೊಂಗೆಗೆ ಜೋತುಬಿದ್ದ
ಸುಳಿವ ಗಾಳಿಯ ದನಿಯಾಗಿ
ಗೀಜುಗನ ಗೂಡಿತ್ತಲ್ಲ

ಕನಸಿನ ಚಿಲಿಪಿಲಿಯೆಲ್ಲ ಬೇಸರವಾಗಿ
ಗಾಳಿಮರ ಮರೆತು ಹಾರಿದವೆ ಗೀಜುಗ
ಸ್ತಬ್ಧ ಗಾಳಿಯನಷ್ಟೆ ಉಳಿಸಿ
ಮರದ ನಂಟು ಮುಗಿದ ಹಾಗೆ

ಇಲ್ಲ ಹಕ್ಕಿ ಗೂಡು ಬಿಡಲಿಲ್ಲ,ಹಕ್ಕಿಯ ಉಸಿರು ಬೀಳಲಿಲ್ಲ.ಒಮ್ಮೆ ತೆರೆದರೆ ಮುಚ್ಚಿದ ಕಣ್ಣು ನಮ್ಮೊಳಗನ ಒಳಗಾಗಿ ಕಾಣುವುದು ಗೀಜುಗನ ಗೂಡು.ಸೋತ ಭಾರದ ಬದುಕು ಹಗುರಾಗಿ ನಿರಮ್ಮಳ ಕೂರಲು ಗೂಡು ಸಿಗಬಹುದು,ನಿರಾಳ ಬಯಲಲ್ಲೂ ಸುಳಿವ ಗಾಳಿಯ ಹಾಡಾಗಿ.ಜೀವದೆಳೆ ಜೊತೆಯಾಗಿ ಇರಬಹುದು ಗಾಳಿಗೆ ತಡೆದು.ಇಲ್ಲ ಹಕ್ಕಿ ಗೂಡು ಬೀಳಲಿಲ್ಲ, ಹಕ್ಕಿ ಗೂಡ ಬಿಡಲಿಲ್ಲ.

ನಮ್ಮ ನಡುವಿನ ನಂಟ ಹೊಲಿದರೆ
ಆಸೆಬುರುಕು ಹಸಿವ ಕಳೆದರೆ
ಕಂಡ ಕನಸು ಚಿಂವ್ವೆನ್ನುತ್ತ
ನಮ್ಮ ನಡೆಸೀತು ನಾಳೆಗಳಿಗೆ
ಎದೆಯ ದುಗುಡ ಮರೆಸುವ ಜೋಗುಳದಂತೆ
ಅನುದಿನವೂ ಗೀಜುಗನ ಹಾಡು ಸಿಕ್ಕೀತು
ಬದುಕು ನಿಂತೀತು ಗಾಳಿಗೆ ತಡೆದ ಗೂಡಾಗಿ

2006

[ಅಡಿ ಟಿಪ್ಪಣಿ: ಇದು ನಾಲ್ಕು ವರ್ಷದ ಹಿಂದೆ ಬರೆದ ಪದ್ಯ .ಸಣ್ಣವನಿದ್ದಾಗ ತಾಸುಗಟ್ಟಲೆ ಕಾಯುತ್ತ ಮಳ್ಳುಬಿದ್ದು ಗೀಜುಗನ ಗೂಡನ್ನು ನೋಡುತ್ತ  ಕುಳಿತಿರುವುದು ಕುಶಿಕೊಡುತ್ತಿತ್ತು,ಈಗಲೂ ಹಾಗೇ.ಗೀಜುಗನ ಗೂಡು ಯಾವತ್ತೂ ನನಗೆ ಕುತೂಹಲದ ಸಂಗತಿಯಾಗಿದೆ.ನನ್ನೊಳಗಿನ ತುಡಿತವೊಂದರ  ಅವ್ಯಕ್ತದ ಸಂಗತಿಯಾಗಿದೆ,ಚಲನದ ಸಂಗತಿಯಾಗಿದೆ.ಅದು ಬದುಕು ಮತ್ತು ಭರವಸೆಯ ಸಂಗತಿಯಾಗಿದೆ,ಜೀವನ ಪ್ರೀತಿಯ,ಮಮತೆಯ  ಸಂಗತಿಯಗಿದೆ.]


4 comments:

ತೇಜಸ್ವಿನಿ ಹೆಗಡೆ said...

"ಕಂಡ ಕನಸು ಚಿಂವ್ವೆನ್ನುತ್ತ
ನಮ್ಮ ನಡೆಸೀತು ನಾಳೆಗಳಿಗೆ"

ಈ ಸಾಲುಗಳು ತುಂಬಾ ಇಷ್ಟವಾದವು...

ಗೀಜಗನ ಗೂಡು ಬೀಳದಿರಲಿ... ಚೆನ್ನಾಗಿದೆ ಕವನ.

venkat.bhats said...

thanks a lot for the comment

Pataragitti (ಪಾತರಗಿತ್ತಿ) said...

ಗೀಜಗನ ಗೂಡು ನಿಜಕ್ಕೂ ಒಂದು ವಿಸ್ಮಯದ ಕೇಂದ್ರ

ಅರ್ಥಗರ್ಭಿತವಾಗಿದೆ ಕವನ..ಧನ್ಯವಾದಗಳು

venkat.bhats said...

ಚಿಟ್ಟೆಮನೆಯವರಿಗೆ ಧನ್ಯವಾದಗಳು