ಛಂದ ಪುಸ್ತಕ ಪ್ರಕಟಿಸಿರುವ ಪದ್ಮನಾಭ ಭಟ್ ಕಥಾಸಂಕಲನಕ್ಕೆ ಮಾಡಿದ ಮುಖಪುಟ. ಪುಸ್ತಕ ಆಕೃತಿ, ನವಕರ್ನಾಟಕ ಇತ್ಯಾದಿ ಆನ್‍ಲೈನ್ ಪೋರ್ಟಲ್‍ಗಳಲ್ಲಿ ಹಾಗೂ ಹಲವು ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.
31 July, 2014
'ಕೇಪಿನ ಡಬ್ಬಿ' ಕಥಾಸಂಕಲನಕ್ಕೆ ಮಾಡಿದ ಮುಖಪುಟ
ಛಂದ ಪುಸ್ತಕ ಪ್ರಕಟಿಸಿರುವ ಪದ್ಮನಾಭ ಭಟ್ ಕಥಾಸಂಕಲನಕ್ಕೆ ಮಾಡಿದ ಮುಖಪುಟ. ಪುಸ್ತಕ ಆಕೃತಿ, ನವಕರ್ನಾಟಕ ಇತ್ಯಾದಿ ಆನ್‍ಲೈನ್ ಪೋರ್ಟಲ್‍ಗಳಲ್ಲಿ ಹಾಗೂ ಹಲವು ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.
ಜೂನ್ ೨೦೧೪ರ 'ಮಯೂರ'ಕ್ಕೆ ಬಿಡಿಸಿದ ಚಿತ್ರಗಳು
Posted by
venkat.bhats
at
Thursday, July 31, 2014
Labels:
illustration,
painting,
ಚಿತ್ರ,
ಮಯೂರ,
ರೂಪರೇಖೆ
No comments:
10 May, 2014
13 April, 2014
15 March, 2014
Canvas App / Serious Paint App Paintings
Thanks to these app developers:
https://play.google.com/store/apps/details?id=com.guynoir.PaintShopPro
https://play.google.com/store/apps/details?id=com.creativesciences.spaint.free
21 July, 2013
20 April, 2013
16 April, 2013
ಎನ್ನ ಹೊಸಬನ ಮಾಡಯ್ಯ ತಂದೆ..
(ಇದು 'ವಿಜಯವಾಣಿ' ಸಾಪ್ತಾಹಿಕ 'ವಿಜಯ ವಿಹಾರ'ದಲ್ಲಿ ಪ್ರಕಟವಾದ ಬರಹ, ಮೂಲ ಬರಹಕ್ಕಾಗಿ ಇಲ್ಲಿ ಕ್ಲಿಕ್ಕಿಸಿ)
ಇದೇ ಈಗಷ್ಟೇ ಕಳೆದಿದೆಯಲ್ಲ ಹೊಸ ಸಂವತ್ಸರದ ಯುಗಾದಿ. ನಮ್ಮಲ್ಲಿ ಹಲವರಲ್ಲಿ ಹಲವರು ಅಂದುಕೊಂಡಿದ್ದೆವಲ್ಲ ಹೊಸಾ ವರ್ಷ, ಹೊಸ ಹೊಸಾ ರೆಸಲ್ಯುಷನ್, ಹೊಸಾ ಲೈಫು ಶುರು ಮಾಡಬೇಕು ಅಂತ. ಆಯಿತು ಅಂದೇ ಕೊನೆ. ಹಾಗೆಯೇ ಅದನ್ನೆಲ್ಲ ಕಾಲಡಿಗೆ ಹಾಕಿ ಮರೆತಿದ್ದೇವೆ. ಈ ಹೊಸತು ಅಂದರೇನು, ಹೊಸಬನಾಗುವುದೆಂದರೆ ಏನಪ್ಪಾ?
ಒಮ್ಮೆಲೇ ಪ್ಲೇಟ್ ತಿರುಗಿ ಎಲ್ಲ ಬದಲಾಗಿಬಿಡುತ್ತದಾ? ಇದ್ದಕ್ಕಿದ್ದಂತೆ ಹೊಸ ಭಾಷೆಯೊಂದರಲ್ಲಿ ಬದುಕಿದಂತೆ ಬದುಕುವುದಾ? ನಿನ್ನೆ ಬದುಕಿದ್ದಿತ್ತಲ್ಲ, ಅದನ್ನೆಲ್ಲ ಬುಡಸಮೇತ ಕಿತ್ತು ಮನೆಯ ಹಿಂಬದಿಯಲ್ಲಿ ಕಾಂಪೋಂಡಿನಾಚೆ ಎಸೆದು ಬಂದುಬಿಡುವುದಾ? ಹಳತಾಗಬಾರದೆಂದು ಹೋರಾಡುತ್ತ ದಕ್ಕಿಸಿಕೊಂಡದ್ದೇ ಹೊಸತಾ? ಅದೇ ದೂಳು ತುಂಬಿದ ಶಹರದ ಮಾಸಲುಗಟ್ಟಿದ ಮನೆಗಳು, ಕಾರ್ಬನ್ ಡೈ ಆಕ್ಸೈಡ್ ಎಳೆದುಕೊಳ್ಳಲೂ ಜಾಗವಿಲ್ಲದಂತೆ ದೂಳು ತುಂಬಿಕೊಂಡ ಮರದೆಲೆಗಳು ತಿಂಗಳ ಒಂದೇ ಸಂಜೆಮಳೆಗೆ ತೊಪ್ಪೆ ತೊಯ್ದು ಫಳಫಳ ಹೊಳೆಯುತ್ತಾವಲ್ಲ, ಅದಾ ಹೊಸತಾಗುವಿಕೆ ? ಅದೇ ಮಳೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ಕಿನ ಪಾಕೀಟುಗಳು ತೇಲಿಹೋಗಿ ಈಗಷ್ಟೇ ಒಣಗಿ ನಿಂತ ಮಣ್ಣು ಹೊಸದಾಗುತ್ತದಾ? ಇಲ್ಲ ಹೊಚ್ಚಹೊಸ ಬಟ್ಟೆ ತೊಟ್ಟು ಬೆಳ್ಳಂಬೆಳಗ್ಗೆ ಹೊರಡುತ್ತೇವಲ್ಲ ಅದಾ?
ನಮಗೆ ಹೀಗೆ ಕೇಳುವ ರೂಡಿ `ಏನಪ್ಪಾ ಹೇಗಿದ್ದೀಯಾ?' ಅದಕ್ಕೆ ಅವನು ಹೇಳುತ್ತಿರುತ್ತಾನೆ: `ಏನಿಲ್ಲ ಮಾರಾಯಾ, ಅದೇ ಲೈಫು, ಅದೇ ಬೋರಿಂಗ್ ದಿನಚರಿ. ಹೊಸತೇನೂ ಇಲ್ಲ'. ಎಂದೂ ಮನೆಯಲ್ಲಿರದ ಗಂಡ ಈ ಭಾನುವಾರ ಮನೆಯಲ್ಲೇ ಇದ್ದರೆ ಹೊಸಬನಾಗಿ ಕಾಣುತ್ತಾನೆ. ಟಿ.ವಿ. ರಿಮೋಟ್ ಬಿಟ್ಟು ಮಗನ ಡ್ರಾಯಿಂಗ್ ಬುಕ್ಕಿನಲ್ಲಿನ ಓಡುತ್ತಲಿರುವ ಕಾರನ್ನು ನೋಡುತ್ತಿದ್ದರೆ ಮಗನಿಗೆ ಹೊಸ ಅಪ್ಪನಾಗಿ ಕಾಣುತ್ತಾನೆ. ಹಾಗಿದ್ದರೆ ಹೊಸತನವೆಂಬುದು ಸಾಪೇಕ್ಷವಾ? ನಾವಂತೂ ಅಕ್ಕಪಕ್ಕದಲ್ಲೇ ಇದ್ದೂ ಒಂದು ರೀತಿಯ ಅಪರಿಚಿತತೆಯಲ್ಲೇ ಬದುಕುತ್ತಿರುತ್ತೇವೆ. ಅದು ಹೊಸತನವಾ? ದಿನವೂ ಬಾಲ್ಕನಿಗೆ ಬಂದು ಟವೆಲ್ ಒಣಗಿಸುವ ಹೆಂಗಸಿಗೂ ಅದೇ ಸಮಯಕ್ಕೆ ನೈಟಿ ಒಣಗಿಸಬರುವ ಯುವತಿಗೂ ಒಬ್ಬರಲ್ಲೊಬ್ಬರಿಗೆ ಇರುವ ಕುತೂಹಲ ಹೊಸತಾ?
ಈ ಪ್ರಾಣಿ ಜಾತಿಯದಕ್ಕೆ ಹಾಗೆಯೇ ಹಳತಾಗಿಬಿಡುವ ಒಂದು ಪ್ರಕ್ರಿಯೆ ರೂಡಿಯಾಗಿರುತ್ತದೆ. ಅದೇ ಬಣ್ಣ, ವಾಸನೆ, ಶಬ್ದಗಳು ಹಳತಾಗಿಬಿಡುತ್ತವೆ. ಕಣ್ಣೆದುರಲ್ಲಿ ಸರಿದ ಸ್ಲೈಡುಗಳೆಲ್ಲ ಮರುನಿಮಿಷಕ್ಕೆ ಹಳತಾಗಿಬಿಡುತ್ತವೆ. ಇದೀಗ ಬಂದ ಸುದ್ದಿ ಕೇಳಿ ಮುಗಿಯುವಷ್ಟರಲ್ಲಿ ಹಳತು. ಟೀವಿಯಲ್ಲಿ ಏನುಂಟು ಹೊಸತು? ಅದೇ ಹಳೆ ಸೀರಿಯಲ್ಲು, ರಿಯಾಲಿಟಿ ಶೋ. ಅಂಥಾದ್ದರಲ್ಲಿ ಹೊಸತಾಗುವುದು ಎಂದರೇನು ಭಾಯ್?
ಹೊಸತನವೆನ್ನುವುದು ಒಂದು ರೀತಿಯಲ್ಲಿ ಕಂಬಳಿಹುಳ ಚಿಟ್ಟೆಯಾದಂತೆ. ಜೀವ ಅದೇ - ರೂಪು ಬೇರೆ, ಭಾವ ಬೇರೆ. ಸದ್ದಿರದೆ ಕತ್ತಲೊಂದು ಸರಿದು ಹೊಸ ಹಗಲಿನ ಕಮಾನು ತೆರೆದುಕೊಂಡಂತೆ, ಅವೆರಡರ ನಡುವೆ ಬದಲಾದದ್ದು ಎಲ್ಲಿ ಎಂದು ಹುಡುಕುತ್ತ ಕೂತರೆ ಸೋಲುತ್ತೇವೆ. ಎಲೆಗಳ ಬೊಗಸೆಯಲ್ಲಿ ಕಾಣುವ ಹೊಸದೊಂದು ಆಕಾಶ ನಾವಾಗಬೇಕು ಅಷ್ಟೇ. ತಿಂದು ಮುಸುರೆ ಮಾಡಿದ ಪಾತ್ರೆಗಳು ನೀರು ಹರಿದು ಹೊಸದಾಗುತ್ತವೆ. ಆಫೀಸಿನ ನಿನ್ನೆಯ ಗ್ಲಾಸಿನ ಬಾಗಿಲುಗಳು ಸೋಪಿನ ನೀರು ಚಿಮುಕಿಸಿಕೊಂಡು ಫಳ ಫಳ. ಫಿನಾಯಿಲ್‌ನಲ್ಲಿ ಈಗಷ್ಟೇ ತೊಳೆದ ನೆಲ ಫಳಾ ಫಳಾ... ಮತ್ತೆ ಮಳೆಯೆಂದರೆ ಹೊಸತು, ಕಿಟಕಿಯ ನಡುವಿನಿಂದ ಇಷ್ಟೇ ಒಳನುಗ್ಗಿ ನಮ್ಮ ಕೆನ್ನೆಗೂ ಎರಡು ಬಾರಿ ಸವರಿ ಗೆರೆಗೆರೆಯಾಗಿ ಕಿಟಕಿಯ ಹೊರಗೆ ಸುರಿವ ಮಳೆ ಬೆಚ್ಚಗಿನ ಹೊಸತು. ಬೆಳಗ್ಗೆ ಎದ್ದು ದಾಡಿಗೀಡಿ ಮಾಡಿಕೊಂಡ ಅವನು ಹೆಂಡತಿಯ ಪೌಡರನ್ನು ಅವಳಿಗೆ ಗೊತ್ತಾಗದಂತೆ ಇಷ್ಟೇ ಬಳಿದುಕೊಂಡು ಕನ್ನಡಿಯೆದುರು ಚೆಲ್ಲಿ ಏನೂ ಗೊತ್ತಿಲ್ಲದವನಂತೆ ಕನ್ನಡಿಯಲ್ಲಿ ಎರಡೆರಡು ಬಾರಿ ಮುಖ ನೋಡಿಕೊಂಡು ಒಳಗೊಳಗೇ ನಾಚುತ್ತಾ `ಪೆಹಲಾ.. ಪೆಹಲಾ ಪ್ಯಾರ್' ಎಂದೇನೋ ಗುನುಗುತ್ತಾ ಹೊರಡುತ್ತಾನೆ, ಹೊಸಬನಾಗುತ್ತಾನೆ.
ಹೊಸತು ಎಂದಕೂಡಲೇ ಹಳೆ ಫೋಟೋಗಳು ನೆನಪಾಗುತ್ತವೆ. ಆ ಫೋಟೋಗಳು ಹಳತಾಗಿರಬಹುದು, ಅದರೊಳಗಿನ ನಗು? ಅದು ಹಳತಾಗಲು ಸಾಧ್ಯವೇ? ಹೇಗೆ ನಗುತ್ತಿದ್ದೆ ನೋಡು ಎನ್ನುತ್ತ ಅದೇ ತರಹ ಈಗಲೂ `ಹೆ ಹೆ...' ಎಂದು ನಗುತ್ತೇವೆ ಎಂದಾದಮೇಲೆ ಹಳತಾಗುವ ಮಾತೆಲ್ಲಿ? ಬೆಳಗ್ಗೆ ಎದ್ದು ಬಾಗಿಲು ತೆರೆದು ಕಿಟಕಿಯ ಪರದೆ ಸರಿಸಿ ಹೊಸ ಹಗಲನ್ನು ನಮ್ಮೊಳಗೆ ಆವಾಹಿಸಿಕೊಳ್ಳುವ ಪರಿಯಿರುತ್ತದಲ್ಲ, ಅಲ್ಲಿಂದ ಆರಂಭವಾಗುತ್ತದೇನೊ ಹೊಸತನ. ಹೊರಗೆ ನೋಡಿದರೆ ಅರೇ.. ಎದುರು ಮನೆಯ ಅಂಗಳದಲ್ಲಿ ಸಾರಿಸಿಟ್ಟ ನೆಲಕ್ಕೆ ಹೊಚ್ಚ ಹೊಸ ರಂಗೋಲಿ. ರಸ್ತೆಯ ಹಳದಿದೀಪ ನಂದಿ ಬಾಗಿಲ ಬಳಿ ಬಂದರೆ ನೇತು ಹಾಕಿದ ಚೀಲದಲ್ಲಿ ಹಾಲಿನ ಪ್ಯಾಕೆಟ್ಟು, ಪ್ರಿಂಟಾಗಿ ಈಗಷ್ಟೇ ಹೊರಬಂದ ನಿಜಕ್ಕೂ ಬಿಸಿಬಿಸಿ ಪೇಪರ್ರು, ಒಳಗೆ ಸ್ಟೋವಿನ ಮೇಲೆ ಕುದಿಯುತ್ತಿರುವ ಬಿಸಿಬಿಸಿ ನೀರು. ಹೊಸತನದ ಬೆಳಕೊಂದು ಅಪರಿಮಿತ ಪ್ರೀತಿಯಲ್ಲಿ ಕತ್ತಲೆಯನ್ನು ಹಿಂದಕ್ಕೆ ತಳ್ಳುತ್ತ ಪದರು ಪದರಿನಲ್ಲಿಯೂ ಚಲಿಸತೊಡಗುತ್ತದೆ.
ನನಗೆ ಆ ಪುಸ್ತಕ ಓದುವಾಗ ಪ್ರತಿ ಬಾರಿ ಹೊಸತೆನಿಸುತ್ತದೆ, ಹೊಸದೇನೋ ಹೊಳೆಯುತ್ತದೆ ಎನ್ನುತ್ತೇವೆ. ಒಂದು ರಾಗ - ಮತ್ತೆ ಮತ್ತೆ ಕೇಳಿದಾಗಲೂ ಹೊಸತೇನೋ ಅನುಭವ. ಆ ಜಾಗಕ್ಕೆ ಹೋದರೆ ಏನೋ ಹೊಸತೆನಿಸುತ್ತದೆ ಎನ್ನುತ್ತೇವೆ. ಹೊಸತನವೆನ್ನುವುದು ಅನುಭವ, ಆ ಪುಸ್ತಕವನ್ನು ಮತ್ತೆ ಓದಿದಾಗ ನಾವು ಮತ್ತಷ್ಟು ಆಯಾಮಗಳಲ್ಲಿ ಕಾಣುತ್ತೇವೆ, ಮನಸ್ಸಿಗೆ ಬೇಕಾದ ಹೊಸವಿನ್ಯಾಸ ತೆರೆದುಕೊಳ್ಳುತ್ತದೆ. ಇದ್ದಲ್ಲೇ ಹೊಸಬರಾಗುತ್ತೇವೆ. ಹೊಸ ಗುರುತು ನಮ್ಮದಾಗುತ್ತದೆ. ಪುಟ್ಟಮಗುವನ್ನು ಎತ್ತಿಕೊಂಡಾಗ ನಾವೆಲ್ಲ ಹೊಸಮಕ್ಕಳಾಗುವುದಿಲ್ಲವೇ? ಒಣಹಾಕಿದ ಬಟ್ಟೆಯಿರುತ್ತದಲ್ಲ, ಅದಕ್ಕೆ ಇಷ್ಟೇ ಇಷ್ಟು ಕೆನ್ನೆ ತಾಗಿಸಿ ಒತ್ತಿಕೊಂಡರೆ ತಂಪು ತಂಪು. ಹೊಸತನವೆಂದರೆ ಅಂಥದ್ದು. ನಮ್ಮ ಸುತ್ತಲೇ ಹರಡಿರುತ್ತದೆ.
ನಾಳೆ ಬೆಳಗಾದರೆ ಮೊದಲೆಂದೂ ಆಡದ, ನಮಗೆ ಸಂಬಂಧಿಸಿಲ್ಲದ ಭಾಷೆಯಲ್ಲಿ ಮಾತಾಡತೊಡಗುತ್ತೇನೆ ಎಂದು ಹೊರಟರೆ ಅನಾಹುತವಾಗುತ್ತದೆ, ಹೊಸವರ್ಷದ ರೆಸಲ್ಯೂಷನಿನಂತೆ! ಮಹಾನಗರಗಳಲ್ಲಿ ಇಂದು ಸಿಕ್ಕ ಮುಖ ನಾಳೆ ಸಿಕ್ಕರೆ ಹೇಳಿ. ಅದೇ ಬಸ್ಸು, ಅದೇ ಸ್ಟೇಷನ್ನು, ಅದೇ ಕಾಯುವ ಜನ. ಆದರೆ ಮುಖಗಳು ಬೇರೆ ಬೇರೆ. ನಿನ್ನೆ ಪಕ್ಕದಲ್ಲಿ ನಿಂತು ತಮಾಷೆ ಮಾಡಿದವನು ಇಂದಿರುವುದಿಲ್ಲ. ಬಿಸಿಬಿಸಿ ಮಸಾಲೆದೋಸೆ, ಪಕ್ಕದಲ್ಲಿ ಜೊರ್ರನೆ ಹಾಲನ್ನೆತ್ತಿ ಸುರಿಯುತ್ತಿರುವ ಹುಡುಗನ ಕೈಲಿನ ಚಹಾ ಕೆಟಲಿನಿಂದ ಹೊರಡುವ ಕಂಪಿನ ಹಬೆ ಹೊಸತಲ್ಲದೆ ಮತ್ತಿನ್ನೇನು? ಅದೇ ನದಿಗೆ, ಹರಿವ ನೀರು ಹೊಸತು. ಇರುವಿಕೆಯೆಂಬುದು ಹೊಸದಲ್ಲ, ಹೊಸದೆಂದರೆ ಇರುತ್ತ ಬೆಳೆಯುವುದು. ಸ್ಕೂಲಿಗೆ ಹೊರಡಲು ರೆಡಿಯಾಗಿ ಆಡುತ್ತ ನಿಂತ ಪುಟ್ಟಿಯ ತಲೆಯನ್ನು ಮೆತ್ತಗೆ ನೇವರಿಸಿದಂತೆ, ಕಣ್ಣಿನಲ್ಲಿ ಕನಸು ರೆಕ್ಕೆ ಬಿಚ್ಚಿ ಚಲಿಸತೊಡಗುತ್ತದೆ. ಸುತ್ತಲಿನ ಹೊಸದೇ ಲಯವೊಂದರಲ್ಲಿ ನಾವೂ ಒಂದಾಗುತ್ತೇವೆ. ಬೆಚ್ಚಗಿನ ಬಯಕೆಗಳಿಂದ ಬದುಕನ್ನು ತಬ್ಬಿಕೊಳ್ಳಬೇಕು. ಜುಮುರುಮಳೆ ಹೊಸಕಂಪ ಹೊತ್ತು ತರುತ್ತದೆ.
`ಹೊಸತನವೆ ಬಾಳು; ಹಳಸಿಕೆಯಯೆಲ್ಲ ಸಾವು ಬಿಡು
ರಸವು ನವನವತೆಯಿಂದನುದಿನವು ಹೊಮ್ಮಿ
ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ
ಪಸರುತಿರೆ ಬಾಳ್ ಚೆಲುವು ಮಂಕುತಿಮ್ಮ'
ಎನ್ನುತ್ತಾರೆ ಡಿವಿಜಿ.
ಹೌದು, ಹೊಸತೆಂದರೇ ಹಾಗೆ. ನುಡಿಯಲ್ಲಿ ನೋಟದಲ್ಲಿ ಹೀಗೆ ಸ್ವಲ್ಪವೇ ದಿಟ್ಟಿಯಿಟ್ಟು ನೋಡಿದರೆ ಕಣ್ಣೆದುರಿನ ಮೂರ್ತ ಕನ್ನಡಿಯಲ್ಲಿ ಹೊಸ ನಾವು ನೀವು
17 February, 2013
19 December, 2012
song of the body,song of the soul..
When you dance,I wish
you a wave o' the sea, that
you might
ever do nothing but
that
-William Shakespeare
'ಛಂದ ಪುಸ್ತಕ' ಪ್ರಕಟಿಸಿದ ಜಯಶ್ರೀ ಭಟ್ ಅನುವಾದಿಸಿದ 'ಮಾವೋನ ಕೊನೆಯ ನರ್ತಕ' ಪುಸ್ತಕಕ್ಕೆ ರಚಿಸಿದ್ದ ಚಿತ್ರಗಳಿವು
01 November, 2012
15 October, 2012
ಇಲ್ಲಸ್ಟ್ರೇಷನ್
"..ದೂರ ದೂರದವರೆಗೆ ಹಬ್ಬಿ ನಿಂತ
ತೋಟಗಳು, ನಡುಬಾಗಿಸಿದ ರೈತರು.
ಹೀಗೆ ಹೂಜಿ ಒಂದು ಬಲಿಷ್ಠ ರಾಷ್ಟ್ರ.
ಒಮ್ಮೊಮ್ಮೆ ಅದರ ಖಾಲಿತನ ತುಂಬಲಿಕ್ಕೆ
ತಯಾರಿ ನಡೆಯುತ್ತೆ. ಅದು
ರಾಜನ ಅಧಿಕಾರಕ್ಕೆ
ಸೂಳೆಯ ಮೊಲೆತುರಿತಕ್ಕೆ
ವಿದೂಷಕನ ವ್ಯಂಗ್ಯಕ್ಕೆ.."
-ರವಿ ದ್ರಾವಿಡ (ಒಂದು ಹೂಜಿ ಮತ್ತು ಕವಣೆ ಏಟು)
* ಇದು ರವಿ ದ್ರಾವಿಡರ 'ಒಂದು ಹೂಜಿ ಮತ್ತು ಕವಣೆ ಏಟು' ಕವಿತೆಗೆ ಬಿಡಿಸಿದ ಇಲ್ಲಸ್ಟ್ರೇಷನ್, ಮೇಲಿನವು ಇದೇ ಕವಿತೆಯಿಂದ ಆಯ್ದ ಸಾಲುಗಳು.
Posted by
venkat.bhats
at
Monday, October 15, 2012
Labels:
art,
illustration,
ಕವಿತೆ,
ಚಿತ್ರ,
ರವಿ ದ್ರಾವಿಡ
No comments:
12 October, 2012
02 October, 2012
ಬೇರು-ಬಿಳಲು
ನಮ್ಮಲ್ಲಿ ಹಲವರು ಹೊಟ್ಟೆಪಾಡಿಗೋ ಅನಿವಾರ್ಯಕ್ಕೋ ಕಟ್ಟುಬಿದ್ದು ನಮ್ಮ ಮೂಲವನ್ನು ಬಿಟ್ಟು ಬಂದವರು,ನಾವು ಮೂಲದೆಡೆಗೆ ತುಡಿಯುತ್ತಲೇ ಇಲ್ಲಿನ ನಗರೀಕರಣ ವ್ಯವಸ್ಥೆಗೆ, ಯಾಂತ್ರಿಕತೆಯ,ಜಾಗತೀಕರಣ, ಉದಾರೀಕರಣ,ಬಂಡವಾಳಶಾಹಿತ್ವದ ಅನಿವಾರ್ಯಕ್ಕೆ ಒಗ್ಗಿಕೊಳ್ಳುತ್ತ ದಿನೇದಿನೇ ನಮ್ಮ ನೈಜತೆಯನ್ನ ಕಳೆದುಕೊಳ್ಳುತ್ತಿದ್ದೇವೆ, ಸಮಯವೋ ಮೇಲಧಿಕಾರಿಯೋ ಯಾವುದೋ ಕಾಣದ ಕೈ ನಮಗೂ ತಿಳಿಯದಂತೆ ನಮ್ಮನ್ನು ನಿಯಂತ್ರಿಸುತ್ತಿದೆ, ಎಲ್ಲಿಯವರೆಗೆಂದರೆ ಈ ನಿಯಂತ್ರಣವಿಲ್ಲದೇ ಅಸ್ತಿತ್ವವಿಲ್ಲವೆಂಬಂತೆ. ಕೊನೆಕೊನೆಗೆ ಬಣ್ಣವಿಲ್ಲದ ಒಂದು ಪೀಳಿಗೆ ನಮ್ಮದಾಗುತ್ತ ನಡೆದಿದೆ, ಬೇರೂ ಇಲ್ಲ ಬಿಳುಲೂ ಇಲ್ಲ. ಇಂತದ್ದೇ ಪರಿಸರವೂ ಸುತ್ತ ಬೆಳೆಯುತ್ತ ಬಂದಂತೆ ಬೇರಿನ ಹಂಗಿಲ್ಲದ ಯಾಂತ್ರಿಕತೆಯೇ ಪ್ರಿಯವಾಗುತ್ತ ನಮ್ಮನ್ನು ನಾವು ನಿರ್ವಾತದಲ್ಲಿ ಬಂದಿಸಿಕೊಳ್ಳುತ್ತ ಸಾಗಿದ್ದೇವೆ,ನಿಧಿಯಂತೆ ಅವುಚಿಕೊಂಡು ತಂದಿದ್ದ ಕನಸುಗಳು ನಮ್ಮ ಪರಿವೆಯೇ ಇಲ್ಲದೇ ಬಣ್ಣಕಳೆದುಕೊಂಡ ಗೊಂಬೆಗಳಾಗುತ್ತಿವೆ.ಸತ್ವಹೀನತೆಯೊಳಗೆ ಕುಳಿತು ನಮ್ಮ ಒಳತುಡಿತವನ್ನು ಗ್ರಹಿಸುವ ಸೂಕ್ಷ್ಮತೆಯನ್ನ ಕಳೆದುಕೊಳ್ಳುತ್ತ ನಾವೇ ನಮ್ಮನ್ನು ಸ್ಪಂದಿಸದಷ್ಟು ಘನೀಭವಿಸುವ ಪ್ರಕ್ರಿಯೆಗೆ ಒಡ್ಡಿಕೊಳ್ಳುತ್ತ ನಡೆದಿದ್ದೇವೆ.
ಇದು 'ಮುಗುಳು' ಪತ್ರಿಕೆಗೆ ಮಾಡಿದ ಚಿತ್ರ, ಈ ಸಲದ ಮುಗುಳು ಒಳ್ಳೊಳ್ಳೇ ಲೇಖನಗಳಿಂದ ಕೂಡಿದೆ. ಈ ಇ ಪೇಪರ್ ವರ್ಶನ್‌ನಲಿಂಕಿನಲ್ಲಿ ಬಿಡುವಾದಾಗ ನೀವೂ ಮುಗುಳು ಓದಬಹುದು, ಡೌನ್‌ಲೋಡ್ ಕೂಡ ಮಾಡಿಟ್ಟುಕೊಳ್ಳಬಹುದು.
Posted by
venkat.bhats
at
Tuesday, October 02, 2012
Labels:
art,
ಅನಿಸಿಕೆ,
ಚಿತ್ರ,
ಮುಗುಳು,
ರೂಪರೇಖೆ
No comments:
30 September, 2012
16 September, 2012
ಜಗತ್ತಿನ ಕಣ್ಣಿನಲ್ಲಿ ಕಾವ್ಯವನ್ನು ನೋಡುವ ಕವಿ..
ರಮೇಶ್ ಅರೋಲಿಯವರಿಗೆ,
ಆರಾಮಿದ್ದೀರಾ? ನಿಮ್ಮ ಕವನ ಸಂಕಲನ 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೇ ಇಟ್ಟುಕೊಳ್ಳಿ' ಯನ್ನು ಓದಿದೆ. ಇಷ್ಟವಾಯ್ತು ಮತ್ತು ತುಂಬ ಖುಷಿಯಾಯ್ತು. ಕಲವೊಮ್ಮೆ ಇಷ್ಟವಾದ ಬರಹಗಳ ಬಗ್ಗೆ ಅನ್ನಿಸಿದ್ದನ್ನು ಹಂಚಿಕೊಳ್ಳುತ್ತಿರುತ್ತೇನೆ. ಇದೂ ಹಾಗೇ ಒಂದು ಅನಿಸಿಕೆಯೇ ಹೊರತು ಗಂಭೀರವಾಗಿ ತೆಗೆದುಕೊಳ್ಳಬೇಕಾದದ್ದಲ್ಲ.
ನಿಮ್ಮ ಕಾವ್ಯ ಭಾಷೆಯಲ್ಲಿ ಗುಂಗು ಹಿಡಿಸುವ ಗಝಲ್‌ಗಳ ಮತ್ತಿದೆ. ಮತ್ತೆ ಮತ್ತೆ ಕಾಡುವ ದಟ್ಟ ವಿಷಾದವಿದೆ. ಹರಿತ ಅಲಗುಗಳ ಪ್ರತಿರೋಧವಿದೆ. ಜೊತೆಗೆ ಮತ್ತೆ ಮತ್ತೆ ಮಜಾಕ್ಕೆ ಕೂಡ ಓದಿಕೊಳ್ಳಬೇಕೆನಿಸುವ ಲಯ ಲಾಲಿತ್ಯ ಇದೆ. ಈ ವಿಶಿಷ್ಟ ಸಂಕರಗಳಿಂದಲೇ ನಿಮ್ಮ ಕಾವ್ಯ ಆಪ್ತವಾಗುತ್ತದೆ, ಬೆರಗು ಹುಟ್ಟಿಸುತ್ತದೆ.
ನೀವು ಈ ಜಗತ್ತಿನ ಜಂಜಡಗಳಿಂದ, ಗದ್ದಲಗಳಿಂದ ಬೇರೆ ಕೂತು ನಿರ್ವಾತದಲ್ಲಿ ಕಾವ್ಯವನ್ನು ಕೇವಲ 'ಕಟ್ಟುವ ಕಲೆ'ಯಾಗಿ ಪ್ರಾಕ್ಟಿಸ್ ಮಾಡುತ್ತಾ ಕಳೆದುಹೋಗುವ ಕವಿಯಲ್ಲ. ಸುತ್ತಲಿನ ಜಗತ್ತಿಗೆ, ಅದರ ಆಗು ಹೋಗುಗಳಿಗೆ ತೆರೆದುಕೊಂಡು ಅದಕ್ಕೆ ತೀವ್ರವಾಗಿ ಸ್ಪಂದಿಸುವ ಒತ್ತಡದಲ್ಲಿ ಬರೆಯುವ ಮತ್ತು ಈ ಜಗದ ಎಲ್ಲ ಕ್ರೌರ್ಯಗಳ, ದುರಂತ ನೋವು ದಾರುಣತೆಗಳ ಜೊತೆಯಲ್ಲೇ ತಾನೂ ಬೆಳೆಯಬೇಕು ಎಂಬ ಎಚ್ಚರವಿರುವ ಸಹೃದಯಿ. (ನಿಮ್ಮ ಅನೇಕ ಕವನಗಳ ಕೊನೆಗೆ ಕೊಟ್ಟಿರುವ ಟಿಪ್ಪಣಿಯೂ ಇದಕ್ಕೆ ಪುಷ್ಟಿ ನೀಡುತ್ತದೆ) ನೇರವಾಗಿ ಹೇಳಬೇಕೆಂದರೆ ನಿಮಗೆ ಶ್ರೇಷ್ಠ ಕವಿಯಾಗಿ ಆ ಕಣ್ಣಿಂದ ಜಗತ್ತನ್ನು ನೋಡುವುದಕ್ಕಿಂತ ಒಳ್ಳೆಯ ಮನುಷ್ಯನಾಗಿ ಜಗತ್ತಿನ ಕಣ್ಣಲ್ಲಿ ಕಾವ್ಯವನ್ನು ನೋಡುವುದು ಮುಖ್ಯ ಅಂದುಕೊಂಡವರು ನೀವು ಅನ್ನಿಸಿತು.
ಸಂಕಲನದ 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೇ ಇಟ್ಟುಕೊಳ್ಳಿ' ಎಂಬ ಹೆಸರೇ ವಿಚಿತ್ರ ಸೆಳೆಯುವ ಹಾಗಿದೆ. ಮೊದಲ ಕವನ 'ದುಃಖ ದಾಖಲಿಸುವವನೇ ಇದನ್ನು ಬರೆದಿಟ್ಟುಕೋ' ದಲ್ಲಿನ
"ಇನ್ನು ತೀರ್ಪು ನಿನ್ನಿಚ್ಛೆಯಂತೇ ಬರೆದುಕೊಂಡಲ್ಲಿ
ಪ್ರತಿಸಲ ನಾನೇಕೆ ಅಚ್ಚರಿಪಡಲಿ"
ಎಂಬ ಸಾಲು ಪ್ರಶ್ನೆಯಷ್ಟೇ ಅಲ್ಲ ಉತ್ತರವೂ ಕೂಡ ಆಗಿ ಪಕ್ಷಪಾತದ ತೀರ್ಪೂ ನಿರೀಕ್ಷಿತವಾಗುವ ದುರಂತವನ್ನು ರಾಚುವಂತಿದೆ.
![]() |
| ಚಿತ್ರ ಕೃಪೆ: http://naditeera.blogspot.in |
'ಮಂಡಿಯೂರಿದ್ದಾಳೆ ಕಿಸಾಗೋತಮಿ ಜೀವಕ್ಕಲ್ಲ' ಕವನದಲ್ಲಿ ಬರುವ ಸಾಲು "ಮಂಡಿಯೂರಿ ಕಿಸಾಗೋತಮಿಯಾಗುತ್ತಾಳೆ". 'ಆಗುತ್ತಾಳೆ' ಅಂದರೆ ಅವಳು ಕಿಸಾಗೋತಮಿಯೇ ಅಲ್ಲ. ಇಲ್ಲಿ ಕಿಸಾಗೋತಮಿ ಕೇವಲ ಗತಕಾಲದ ಕತೆ ಅಥವಾ ಪ್ರತಿಮೆಯಷ್ಟೇ ಅಲ್ಲದೇ ಒಂದು 'ಸಂದರ್ಭ'ವಾಗಿ ಯಾರು ಬೇಕಾದರೂ ಹಾಯಬೇಕಾಗಿಬರಬಹುದಾದ 'ಮನಸ್ಥಿತಿ'ಯಾಗಿ ಹೊಳೆಯುವ ರೀತಿ ತುಂಬ ಇಷ್ಟವಾಯ್ತು. ಅಲ್ಲದೇ ಕಿಸಾಗೋತಮಿ ಹೆಸರಿನ ಆ ಸಿಚುವೇಶನ್ನಿಗೆ ಬುದ್ಧನ ಎಲ್ಲ ಬೋಧೆಗಳಿಗೆ ರಪ್ಪನೇ ಎದುರಾಗಿ 'ಗೋರಿಗಳ ಮೇಲೆ ಕಟ್ಟಿದ ಊರ ತೊರೆದು' ಮತ್ತೆ ಆಸೆಯ ಮೂಲವ ನೆನೆದು' ಹೊರಡುವಂತೇ ಮಾಡುವ ಶಕ್ತಿಯಿರುವುದು ಬೆರಗಿಗೆ ಕಾರಣವಾಯ್ತು.
'ಹಾಗೇ ಉಸಿರಾಟದಲ್ಲೇಕೋ ಸಂದೇಹವೀಗ
ಹುಡುಗನಿಗೆ ಅನುಮಾನ
ತೋಪಿನಲಿ ತೂರಿಬಿಟ್ಟ ಮುತ್ತು
ಆಕೆ ತನಗೆ ತಲುಪಿಲ್ಲ ಎಂದಾಗ!' (ಸ್ಮಶಾನಗಳು ಮುಚ್ಚಲಿವೆ ಮನುಷ್ಯರಿದ್ದರೆ ಕಳುಹಿಸಿ)
ಇಲ್ಲಿ ಕ್ರೌರ್ಯ ಮತ್ತು ಹೇಗೆ ಒಟ್ಟೊಟ್ಟಿಗೇ ಉಕ್ಕುತ್ತವೆ ನೋಡಿ. ಒಂಥರಾ ಚೆಂದದ ಬೆಕ್ಕು ಒಮ್ಮೆಲೇ ಪಂಜನ್ನು ಹೊರಚಾಚಿ ಪರಚಿದಾಗ ಅದು ಬೆರೆಯೇ ಆಗಿ ಕಾಣತೊಡಗುತ್ತಲ್ಲ ಹಂಗೆ. "ತೋಪಿನಲ್ಲಿ ತೂರಿಬಿಟ್ಟ ಮುತ್ತು" ಇಲ್ಲಿ ತೂರಿಬಿಟ್ಟ ಮುತ್ತು ಎಷ್ಟು ನವಿರಾದ ಕಲ್ಪನೆಯನ್ನು ಮನದಲ್ಲಿ ಮೂಡಿಸುತ್ತದೆಯೋ, ಅದರ ಹಿಂದಿನ ಶಬ್ದ "ತೋಪಿನಲ್ಲಿ" ಅಷ್ಟೇ ತೀವ್ರವಾಗಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಮತ್ತು ಈ ದಾರುಣತೆ ನಿಮ್ಮ ಕಾವ್ಯದಲ್ಲಿ ಎಷ್ಟು ಸಹಜವಾಗಿ ಬರುತ್ತದೆ ಎಂಬುದು ಅಚ್ಚರಿ ಹುಟ್ಟಿಸಿತು.
'ಹಸಿವೆಗೆ ಉಪಮೆಗಳ
ಹುಡುಕಿ ಹಸಿದುಕೊಂಡಿರಿ ನೀವು
ಬಿಡಿ ಅದ್ಹೇಗೆ ಅರ್ಥವಾದೇವು
ಅರ್ಧರಾತ್ರಿಯ ಅನಾಥ ಪ್ರತಿಮೆಗಳು ನಾವು!" (ಮರ್ಕ್ಯೂರಿ ಲೈಟಿನಡಿಗೆ)
ನಿಮ್ಮ ಕಾವ್ಯಕ್ಕೆ ಅವರ ತೀರ್ಪಿನ ಫಲಿತಾಂಶ ಮೊದಲೇ ಅರಿತೂ, ಸದಾ ಹಾಲುಗಲ್ಲದ ಮೇಲೆ ನಳಿಕೆ ಹಿಡಿಯುವ ಕ್ರೌರ್ಯದ ಎದುರೂ ನಿರ್ಲಿಪ್ತವಾಗಿರಬಲ್ಲ ಮತ್ತು ಅಷ್ಟೇ ತಣ್ಣಗೇ "ಕಾಯಿದೆಗಳ ಹೊರಡಿಸಿ ನಿಷೇಧಿಸಲಾಗದು ನಿಟ್ಟುಸಿರು" ಎಂದು ಧೈರ್ಯವಾಗಿ ಹೇಳುವ ತಣ್ಣನೆಯ ಆದರೆ ಗಟ್ಟಿ ದನಿಯಿದೆ ಅನ್ನಿಸಿತು.
ಇವಿಷ್ಟೇ ಅಲ್ಲ ಸಂಕಲನದ ಇನ್ನು ಬಹಳ ಕವಿತೆಗಳು ತುಂಬಾ ಇಷ್ಟವಾದವು. ಈ ಸಂಕಲನ ಓದಿದ ಮೇಲೆ ನಿಮ್ಮ ಮುಂದಿನ ಬರವಣಿಗೆಯ ಮೇಲೆ ವಿಶ್ವಾಸಪೂರ್ಣ ಕುತೂಹಲ ಹುಟ್ಟಿದೆ. ಇನ್ನೂ ಒಳ್ಳೆಯ ಕವಿತೆಗಳನ್ನು ಬರೆಯಿರಿ.. ಶುಭವಾಗಲಿ.
ಪ್ರೀತಿಯಿಂದ,
ಪದ್ಮನಾಭ ಭಟ್, ಶೇವ್ಕಾರ್.
-----------------------------------------------------------------------------------------------------------
(ಇದು 'ರೂಪಾಂತರ'ದ ಅತಿಥಿ ಬರಹ. ಪದ್ಮನಾಭ ಭಟ್, ನಮ್ಮ ನಡುವಿನ ಉತ್ಸಾಹಿ ಯುವ ಬರಹಗಾರ, ಸೂಕ್ಷ್ಮ ಸಂವೇದನಾಶೀಲ ಓದುಗ, ಭಾವಜೀವಿ. ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿ)
08 July, 2012
10 June, 2012
Subscribe to:
Posts (Atom)




.jpg)













































