20 April, 2013
16 April, 2013
ಎನ್ನ ಹೊಸಬನ ಮಾಡಯ್ಯ ತಂದೆ..
(ಇದು 'ವಿಜಯವಾಣಿ' ಸಾಪ್ತಾಹಿಕ 'ವಿಜಯ ವಿಹಾರ'ದಲ್ಲಿ ಪ್ರಕಟವಾದ ಬರಹ, ಮೂಲ ಬರಹಕ್ಕಾಗಿ ಇಲ್ಲಿ ಕ್ಲಿಕ್ಕಿಸಿ)
ಇದೇ ಈಗಷ್ಟೇ ಕಳೆದಿದೆಯಲ್ಲ ಹೊಸ ಸಂವತ್ಸರದ ಯುಗಾದಿ. ನಮ್ಮಲ್ಲಿ ಹಲವರಲ್ಲಿ ಹಲವರು ಅಂದುಕೊಂಡಿದ್ದೆವಲ್ಲ ಹೊಸಾ ವರ್ಷ, ಹೊಸ ಹೊಸಾ ರೆಸಲ್ಯುಷನ್, ಹೊಸಾ ಲೈಫು ಶುರು ಮಾಡಬೇಕು ಅಂತ. ಆಯಿತು ಅಂದೇ ಕೊನೆ. ಹಾಗೆಯೇ ಅದನ್ನೆಲ್ಲ ಕಾಲಡಿಗೆ ಹಾಕಿ ಮರೆತಿದ್ದೇವೆ. ಈ ಹೊಸತು ಅಂದರೇನು, ಹೊಸಬನಾಗುವುದೆಂದರೆ ಏನಪ್ಪಾ?
ಒಮ್ಮೆಲೇ ಪ್ಲೇಟ್ ತಿರುಗಿ ಎಲ್ಲ ಬದಲಾಗಿಬಿಡುತ್ತದಾ? ಇದ್ದಕ್ಕಿದ್ದಂತೆ ಹೊಸ ಭಾಷೆಯೊಂದರಲ್ಲಿ ಬದುಕಿದಂತೆ ಬದುಕುವುದಾ? ನಿನ್ನೆ ಬದುಕಿದ್ದಿತ್ತಲ್ಲ, ಅದನ್ನೆಲ್ಲ ಬುಡಸಮೇತ ಕಿತ್ತು ಮನೆಯ ಹಿಂಬದಿಯಲ್ಲಿ ಕಾಂಪೋಂಡಿನಾಚೆ ಎಸೆದು ಬಂದುಬಿಡುವುದಾ? ಹಳತಾಗಬಾರದೆಂದು ಹೋರಾಡುತ್ತ ದಕ್ಕಿಸಿಕೊಂಡದ್ದೇ ಹೊಸತಾ? ಅದೇ ದೂಳು ತುಂಬಿದ ಶಹರದ ಮಾಸಲುಗಟ್ಟಿದ ಮನೆಗಳು, ಕಾರ್ಬನ್ ಡೈ ಆಕ್ಸೈಡ್ ಎಳೆದುಕೊಳ್ಳಲೂ ಜಾಗವಿಲ್ಲದಂತೆ ದೂಳು ತುಂಬಿಕೊಂಡ ಮರದೆಲೆಗಳು ತಿಂಗಳ ಒಂದೇ ಸಂಜೆಮಳೆಗೆ ತೊಪ್ಪೆ ತೊಯ್ದು ಫಳಫಳ ಹೊಳೆಯುತ್ತಾವಲ್ಲ, ಅದಾ ಹೊಸತಾಗುವಿಕೆ ? ಅದೇ ಮಳೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ಕಿನ ಪಾಕೀಟುಗಳು ತೇಲಿಹೋಗಿ ಈಗಷ್ಟೇ ಒಣಗಿ ನಿಂತ ಮಣ್ಣು ಹೊಸದಾಗುತ್ತದಾ? ಇಲ್ಲ ಹೊಚ್ಚಹೊಸ ಬಟ್ಟೆ ತೊಟ್ಟು ಬೆಳ್ಳಂಬೆಳಗ್ಗೆ ಹೊರಡುತ್ತೇವಲ್ಲ ಅದಾ?
ನಮಗೆ ಹೀಗೆ ಕೇಳುವ ರೂಡಿ `ಏನಪ್ಪಾ ಹೇಗಿದ್ದೀಯಾ?' ಅದಕ್ಕೆ ಅವನು ಹೇಳುತ್ತಿರುತ್ತಾನೆ: `ಏನಿಲ್ಲ ಮಾರಾಯಾ, ಅದೇ ಲೈಫು, ಅದೇ ಬೋರಿಂಗ್ ದಿನಚರಿ. ಹೊಸತೇನೂ ಇಲ್ಲ'. ಎಂದೂ ಮನೆಯಲ್ಲಿರದ ಗಂಡ ಈ ಭಾನುವಾರ ಮನೆಯಲ್ಲೇ ಇದ್ದರೆ ಹೊಸಬನಾಗಿ ಕಾಣುತ್ತಾನೆ. ಟಿ.ವಿ. ರಿಮೋಟ್ ಬಿಟ್ಟು ಮಗನ ಡ್ರಾಯಿಂಗ್ ಬುಕ್ಕಿನಲ್ಲಿನ ಓಡುತ್ತಲಿರುವ ಕಾರನ್ನು ನೋಡುತ್ತಿದ್ದರೆ ಮಗನಿಗೆ ಹೊಸ ಅಪ್ಪನಾಗಿ ಕಾಣುತ್ತಾನೆ. ಹಾಗಿದ್ದರೆ ಹೊಸತನವೆಂಬುದು ಸಾಪೇಕ್ಷವಾ? ನಾವಂತೂ ಅಕ್ಕಪಕ್ಕದಲ್ಲೇ ಇದ್ದೂ ಒಂದು ರೀತಿಯ ಅಪರಿಚಿತತೆಯಲ್ಲೇ ಬದುಕುತ್ತಿರುತ್ತೇವೆ. ಅದು ಹೊಸತನವಾ? ದಿನವೂ ಬಾಲ್ಕನಿಗೆ ಬಂದು ಟವೆಲ್ ಒಣಗಿಸುವ ಹೆಂಗಸಿಗೂ ಅದೇ ಸಮಯಕ್ಕೆ ನೈಟಿ ಒಣಗಿಸಬರುವ ಯುವತಿಗೂ ಒಬ್ಬರಲ್ಲೊಬ್ಬರಿಗೆ ಇರುವ ಕುತೂಹಲ ಹೊಸತಾ?
ಈ ಪ್ರಾಣಿ ಜಾತಿಯದಕ್ಕೆ ಹಾಗೆಯೇ ಹಳತಾಗಿಬಿಡುವ ಒಂದು ಪ್ರಕ್ರಿಯೆ ರೂಡಿಯಾಗಿರುತ್ತದೆ. ಅದೇ ಬಣ್ಣ, ವಾಸನೆ, ಶಬ್ದಗಳು ಹಳತಾಗಿಬಿಡುತ್ತವೆ. ಕಣ್ಣೆದುರಲ್ಲಿ ಸರಿದ ಸ್ಲೈಡುಗಳೆಲ್ಲ ಮರುನಿಮಿಷಕ್ಕೆ ಹಳತಾಗಿಬಿಡುತ್ತವೆ. ಇದೀಗ ಬಂದ ಸುದ್ದಿ ಕೇಳಿ ಮುಗಿಯುವಷ್ಟರಲ್ಲಿ ಹಳತು. ಟೀವಿಯಲ್ಲಿ ಏನುಂಟು ಹೊಸತು? ಅದೇ ಹಳೆ ಸೀರಿಯಲ್ಲು, ರಿಯಾಲಿಟಿ ಶೋ. ಅಂಥಾದ್ದರಲ್ಲಿ ಹೊಸತಾಗುವುದು ಎಂದರೇನು ಭಾಯ್?
ಹೊಸತನವೆನ್ನುವುದು ಒಂದು ರೀತಿಯಲ್ಲಿ ಕಂಬಳಿಹುಳ ಚಿಟ್ಟೆಯಾದಂತೆ. ಜೀವ ಅದೇ - ರೂಪು ಬೇರೆ, ಭಾವ ಬೇರೆ. ಸದ್ದಿರದೆ ಕತ್ತಲೊಂದು ಸರಿದು ಹೊಸ ಹಗಲಿನ ಕಮಾನು ತೆರೆದುಕೊಂಡಂತೆ, ಅವೆರಡರ ನಡುವೆ ಬದಲಾದದ್ದು ಎಲ್ಲಿ ಎಂದು ಹುಡುಕುತ್ತ ಕೂತರೆ ಸೋಲುತ್ತೇವೆ. ಎಲೆಗಳ ಬೊಗಸೆಯಲ್ಲಿ ಕಾಣುವ ಹೊಸದೊಂದು ಆಕಾಶ ನಾವಾಗಬೇಕು ಅಷ್ಟೇ. ತಿಂದು ಮುಸುರೆ ಮಾಡಿದ ಪಾತ್ರೆಗಳು ನೀರು ಹರಿದು ಹೊಸದಾಗುತ್ತವೆ. ಆಫೀಸಿನ ನಿನ್ನೆಯ ಗ್ಲಾಸಿನ ಬಾಗಿಲುಗಳು ಸೋಪಿನ ನೀರು ಚಿಮುಕಿಸಿಕೊಂಡು ಫಳ ಫಳ. ಫಿನಾಯಿಲ್‌ನಲ್ಲಿ ಈಗಷ್ಟೇ ತೊಳೆದ ನೆಲ ಫಳಾ ಫಳಾ... ಮತ್ತೆ ಮಳೆಯೆಂದರೆ ಹೊಸತು, ಕಿಟಕಿಯ ನಡುವಿನಿಂದ ಇಷ್ಟೇ ಒಳನುಗ್ಗಿ ನಮ್ಮ ಕೆನ್ನೆಗೂ ಎರಡು ಬಾರಿ ಸವರಿ ಗೆರೆಗೆರೆಯಾಗಿ ಕಿಟಕಿಯ ಹೊರಗೆ ಸುರಿವ ಮಳೆ ಬೆಚ್ಚಗಿನ ಹೊಸತು. ಬೆಳಗ್ಗೆ ಎದ್ದು ದಾಡಿಗೀಡಿ ಮಾಡಿಕೊಂಡ ಅವನು ಹೆಂಡತಿಯ ಪೌಡರನ್ನು ಅವಳಿಗೆ ಗೊತ್ತಾಗದಂತೆ ಇಷ್ಟೇ ಬಳಿದುಕೊಂಡು ಕನ್ನಡಿಯೆದುರು ಚೆಲ್ಲಿ ಏನೂ ಗೊತ್ತಿಲ್ಲದವನಂತೆ ಕನ್ನಡಿಯಲ್ಲಿ ಎರಡೆರಡು ಬಾರಿ ಮುಖ ನೋಡಿಕೊಂಡು ಒಳಗೊಳಗೇ ನಾಚುತ್ತಾ `ಪೆಹಲಾ.. ಪೆಹಲಾ ಪ್ಯಾರ್' ಎಂದೇನೋ ಗುನುಗುತ್ತಾ ಹೊರಡುತ್ತಾನೆ, ಹೊಸಬನಾಗುತ್ತಾನೆ.
ಹೊಸತು ಎಂದಕೂಡಲೇ ಹಳೆ ಫೋಟೋಗಳು ನೆನಪಾಗುತ್ತವೆ. ಆ ಫೋಟೋಗಳು ಹಳತಾಗಿರಬಹುದು, ಅದರೊಳಗಿನ ನಗು? ಅದು ಹಳತಾಗಲು ಸಾಧ್ಯವೇ? ಹೇಗೆ ನಗುತ್ತಿದ್ದೆ ನೋಡು ಎನ್ನುತ್ತ ಅದೇ ತರಹ ಈಗಲೂ `ಹೆ ಹೆ...' ಎಂದು ನಗುತ್ತೇವೆ ಎಂದಾದಮೇಲೆ ಹಳತಾಗುವ ಮಾತೆಲ್ಲಿ? ಬೆಳಗ್ಗೆ ಎದ್ದು ಬಾಗಿಲು ತೆರೆದು ಕಿಟಕಿಯ ಪರದೆ ಸರಿಸಿ ಹೊಸ ಹಗಲನ್ನು ನಮ್ಮೊಳಗೆ ಆವಾಹಿಸಿಕೊಳ್ಳುವ ಪರಿಯಿರುತ್ತದಲ್ಲ, ಅಲ್ಲಿಂದ ಆರಂಭವಾಗುತ್ತದೇನೊ ಹೊಸತನ. ಹೊರಗೆ ನೋಡಿದರೆ ಅರೇ.. ಎದುರು ಮನೆಯ ಅಂಗಳದಲ್ಲಿ ಸಾರಿಸಿಟ್ಟ ನೆಲಕ್ಕೆ ಹೊಚ್ಚ ಹೊಸ ರಂಗೋಲಿ. ರಸ್ತೆಯ ಹಳದಿದೀಪ ನಂದಿ ಬಾಗಿಲ ಬಳಿ ಬಂದರೆ ನೇತು ಹಾಕಿದ ಚೀಲದಲ್ಲಿ ಹಾಲಿನ ಪ್ಯಾಕೆಟ್ಟು, ಪ್ರಿಂಟಾಗಿ ಈಗಷ್ಟೇ ಹೊರಬಂದ ನಿಜಕ್ಕೂ ಬಿಸಿಬಿಸಿ ಪೇಪರ್ರು, ಒಳಗೆ ಸ್ಟೋವಿನ ಮೇಲೆ ಕುದಿಯುತ್ತಿರುವ ಬಿಸಿಬಿಸಿ ನೀರು. ಹೊಸತನದ ಬೆಳಕೊಂದು ಅಪರಿಮಿತ ಪ್ರೀತಿಯಲ್ಲಿ ಕತ್ತಲೆಯನ್ನು ಹಿಂದಕ್ಕೆ ತಳ್ಳುತ್ತ ಪದರು ಪದರಿನಲ್ಲಿಯೂ ಚಲಿಸತೊಡಗುತ್ತದೆ.
ನನಗೆ ಆ ಪುಸ್ತಕ ಓದುವಾಗ ಪ್ರತಿ ಬಾರಿ ಹೊಸತೆನಿಸುತ್ತದೆ, ಹೊಸದೇನೋ ಹೊಳೆಯುತ್ತದೆ ಎನ್ನುತ್ತೇವೆ. ಒಂದು ರಾಗ - ಮತ್ತೆ ಮತ್ತೆ ಕೇಳಿದಾಗಲೂ ಹೊಸತೇನೋ ಅನುಭವ. ಆ ಜಾಗಕ್ಕೆ ಹೋದರೆ ಏನೋ ಹೊಸತೆನಿಸುತ್ತದೆ ಎನ್ನುತ್ತೇವೆ. ಹೊಸತನವೆನ್ನುವುದು ಅನುಭವ, ಆ ಪುಸ್ತಕವನ್ನು ಮತ್ತೆ ಓದಿದಾಗ ನಾವು ಮತ್ತಷ್ಟು ಆಯಾಮಗಳಲ್ಲಿ ಕಾಣುತ್ತೇವೆ, ಮನಸ್ಸಿಗೆ ಬೇಕಾದ ಹೊಸವಿನ್ಯಾಸ ತೆರೆದುಕೊಳ್ಳುತ್ತದೆ. ಇದ್ದಲ್ಲೇ ಹೊಸಬರಾಗುತ್ತೇವೆ. ಹೊಸ ಗುರುತು ನಮ್ಮದಾಗುತ್ತದೆ. ಪುಟ್ಟಮಗುವನ್ನು ಎತ್ತಿಕೊಂಡಾಗ ನಾವೆಲ್ಲ ಹೊಸಮಕ್ಕಳಾಗುವುದಿಲ್ಲವೇ? ಒಣಹಾಕಿದ ಬಟ್ಟೆಯಿರುತ್ತದಲ್ಲ, ಅದಕ್ಕೆ ಇಷ್ಟೇ ಇಷ್ಟು ಕೆನ್ನೆ ತಾಗಿಸಿ ಒತ್ತಿಕೊಂಡರೆ ತಂಪು ತಂಪು. ಹೊಸತನವೆಂದರೆ ಅಂಥದ್ದು. ನಮ್ಮ ಸುತ್ತಲೇ ಹರಡಿರುತ್ತದೆ.
ನಾಳೆ ಬೆಳಗಾದರೆ ಮೊದಲೆಂದೂ ಆಡದ, ನಮಗೆ ಸಂಬಂಧಿಸಿಲ್ಲದ ಭಾಷೆಯಲ್ಲಿ ಮಾತಾಡತೊಡಗುತ್ತೇನೆ ಎಂದು ಹೊರಟರೆ ಅನಾಹುತವಾಗುತ್ತದೆ, ಹೊಸವರ್ಷದ ರೆಸಲ್ಯೂಷನಿನಂತೆ! ಮಹಾನಗರಗಳಲ್ಲಿ ಇಂದು ಸಿಕ್ಕ ಮುಖ ನಾಳೆ ಸಿಕ್ಕರೆ ಹೇಳಿ. ಅದೇ ಬಸ್ಸು, ಅದೇ ಸ್ಟೇಷನ್ನು, ಅದೇ ಕಾಯುವ ಜನ. ಆದರೆ ಮುಖಗಳು ಬೇರೆ ಬೇರೆ. ನಿನ್ನೆ ಪಕ್ಕದಲ್ಲಿ ನಿಂತು ತಮಾಷೆ ಮಾಡಿದವನು ಇಂದಿರುವುದಿಲ್ಲ. ಬಿಸಿಬಿಸಿ ಮಸಾಲೆದೋಸೆ, ಪಕ್ಕದಲ್ಲಿ ಜೊರ್ರನೆ ಹಾಲನ್ನೆತ್ತಿ ಸುರಿಯುತ್ತಿರುವ ಹುಡುಗನ ಕೈಲಿನ ಚಹಾ ಕೆಟಲಿನಿಂದ ಹೊರಡುವ ಕಂಪಿನ ಹಬೆ ಹೊಸತಲ್ಲದೆ ಮತ್ತಿನ್ನೇನು? ಅದೇ ನದಿಗೆ, ಹರಿವ ನೀರು ಹೊಸತು. ಇರುವಿಕೆಯೆಂಬುದು ಹೊಸದಲ್ಲ, ಹೊಸದೆಂದರೆ ಇರುತ್ತ ಬೆಳೆಯುವುದು. ಸ್ಕೂಲಿಗೆ ಹೊರಡಲು ರೆಡಿಯಾಗಿ ಆಡುತ್ತ ನಿಂತ ಪುಟ್ಟಿಯ ತಲೆಯನ್ನು ಮೆತ್ತಗೆ ನೇವರಿಸಿದಂತೆ, ಕಣ್ಣಿನಲ್ಲಿ ಕನಸು ರೆಕ್ಕೆ ಬಿಚ್ಚಿ ಚಲಿಸತೊಡಗುತ್ತದೆ. ಸುತ್ತಲಿನ ಹೊಸದೇ ಲಯವೊಂದರಲ್ಲಿ ನಾವೂ ಒಂದಾಗುತ್ತೇವೆ. ಬೆಚ್ಚಗಿನ ಬಯಕೆಗಳಿಂದ ಬದುಕನ್ನು ತಬ್ಬಿಕೊಳ್ಳಬೇಕು. ಜುಮುರುಮಳೆ ಹೊಸಕಂಪ ಹೊತ್ತು ತರುತ್ತದೆ.
`ಹೊಸತನವೆ ಬಾಳು; ಹಳಸಿಕೆಯಯೆಲ್ಲ ಸಾವು ಬಿಡು
ರಸವು ನವನವತೆಯಿಂದನುದಿನವು ಹೊಮ್ಮಿ
ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ
ಪಸರುತಿರೆ ಬಾಳ್ ಚೆಲುವು ಮಂಕುತಿಮ್ಮ'
ಎನ್ನುತ್ತಾರೆ ಡಿವಿಜಿ.
ಹೌದು, ಹೊಸತೆಂದರೇ ಹಾಗೆ. ನುಡಿಯಲ್ಲಿ ನೋಟದಲ್ಲಿ ಹೀಗೆ ಸ್ವಲ್ಪವೇ ದಿಟ್ಟಿಯಿಟ್ಟು ನೋಡಿದರೆ ಕಣ್ಣೆದುರಿನ ಮೂರ್ತ ಕನ್ನಡಿಯಲ್ಲಿ ಹೊಸ ನಾವು ನೀವು
17 February, 2013
19 December, 2012
song of the body,song of the soul..
When you dance,I wish
you a wave o' the sea, that
you might
ever do nothing but
that
-William Shakespeare
'ಛಂದ ಪುಸ್ತಕ' ಪ್ರಕಟಿಸಿದ ಜಯಶ್ರೀ ಭಟ್ ಅನುವಾದಿಸಿದ 'ಮಾವೋನ ಕೊನೆಯ ನರ್ತಕ' ಪುಸ್ತಕಕ್ಕೆ ರಚಿಸಿದ್ದ ಚಿತ್ರಗಳಿವು
01 November, 2012
15 October, 2012
ಇಲ್ಲಸ್ಟ್ರೇಷನ್
"..ದೂರ ದೂರದವರೆಗೆ ಹಬ್ಬಿ ನಿಂತ
ತೋಟಗಳು, ನಡುಬಾಗಿಸಿದ ರೈತರು.
ಹೀಗೆ ಹೂಜಿ ಒಂದು ಬಲಿಷ್ಠ ರಾಷ್ಟ್ರ.
ಒಮ್ಮೊಮ್ಮೆ ಅದರ ಖಾಲಿತನ ತುಂಬಲಿಕ್ಕೆ
ತಯಾರಿ ನಡೆಯುತ್ತೆ. ಅದು
ರಾಜನ ಅಧಿಕಾರಕ್ಕೆ
ಸೂಳೆಯ ಮೊಲೆತುರಿತಕ್ಕೆ
ವಿದೂಷಕನ ವ್ಯಂಗ್ಯಕ್ಕೆ.."
-ರವಿ ದ್ರಾವಿಡ (ಒಂದು ಹೂಜಿ ಮತ್ತು ಕವಣೆ ಏಟು)
* ಇದು ರವಿ ದ್ರಾವಿಡರ 'ಒಂದು ಹೂಜಿ ಮತ್ತು ಕವಣೆ ಏಟು' ಕವಿತೆಗೆ ಬಿಡಿಸಿದ ಇಲ್ಲಸ್ಟ್ರೇಷನ್, ಮೇಲಿನವು ಇದೇ ಕವಿತೆಯಿಂದ ಆಯ್ದ ಸಾಲುಗಳು.
Posted by
venkat.bhats
at
Monday, October 15, 2012
Labels:
art,
illustration,
ಕವಿತೆ,
ಚಿತ್ರ,
ರವಿ ದ್ರಾವಿಡ
No comments:
12 October, 2012
02 October, 2012
ಬೇರು-ಬಿಳಲು
ನಮ್ಮಲ್ಲಿ ಹಲವರು ಹೊಟ್ಟೆಪಾಡಿಗೋ ಅನಿವಾರ್ಯಕ್ಕೋ ಕಟ್ಟುಬಿದ್ದು ನಮ್ಮ ಮೂಲವನ್ನು ಬಿಟ್ಟು ಬಂದವರು,ನಾವು ಮೂಲದೆಡೆಗೆ ತುಡಿಯುತ್ತಲೇ ಇಲ್ಲಿನ ನಗರೀಕರಣ ವ್ಯವಸ್ಥೆಗೆ, ಯಾಂತ್ರಿಕತೆಯ,ಜಾಗತೀಕರಣ, ಉದಾರೀಕರಣ,ಬಂಡವಾಳಶಾಹಿತ್ವದ ಅನಿವಾರ್ಯಕ್ಕೆ ಒಗ್ಗಿಕೊಳ್ಳುತ್ತ ದಿನೇದಿನೇ ನಮ್ಮ ನೈಜತೆಯನ್ನ ಕಳೆದುಕೊಳ್ಳುತ್ತಿದ್ದೇವೆ, ಸಮಯವೋ ಮೇಲಧಿಕಾರಿಯೋ ಯಾವುದೋ ಕಾಣದ ಕೈ ನಮಗೂ ತಿಳಿಯದಂತೆ ನಮ್ಮನ್ನು ನಿಯಂತ್ರಿಸುತ್ತಿದೆ, ಎಲ್ಲಿಯವರೆಗೆಂದರೆ ಈ ನಿಯಂತ್ರಣವಿಲ್ಲದೇ ಅಸ್ತಿತ್ವವಿಲ್ಲವೆಂಬಂತೆ. ಕೊನೆಕೊನೆಗೆ ಬಣ್ಣವಿಲ್ಲದ ಒಂದು ಪೀಳಿಗೆ ನಮ್ಮದಾಗುತ್ತ ನಡೆದಿದೆ, ಬೇರೂ ಇಲ್ಲ ಬಿಳುಲೂ ಇಲ್ಲ. ಇಂತದ್ದೇ ಪರಿಸರವೂ ಸುತ್ತ ಬೆಳೆಯುತ್ತ ಬಂದಂತೆ ಬೇರಿನ ಹಂಗಿಲ್ಲದ ಯಾಂತ್ರಿಕತೆಯೇ ಪ್ರಿಯವಾಗುತ್ತ ನಮ್ಮನ್ನು ನಾವು ನಿರ್ವಾತದಲ್ಲಿ ಬಂದಿಸಿಕೊಳ್ಳುತ್ತ ಸಾಗಿದ್ದೇವೆ,ನಿಧಿಯಂತೆ ಅವುಚಿಕೊಂಡು ತಂದಿದ್ದ ಕನಸುಗಳು ನಮ್ಮ ಪರಿವೆಯೇ ಇಲ್ಲದೇ ಬಣ್ಣಕಳೆದುಕೊಂಡ ಗೊಂಬೆಗಳಾಗುತ್ತಿವೆ.ಸತ್ವಹೀನತೆಯೊಳಗೆ ಕುಳಿತು ನಮ್ಮ ಒಳತುಡಿತವನ್ನು ಗ್ರಹಿಸುವ ಸೂಕ್ಷ್ಮತೆಯನ್ನ ಕಳೆದುಕೊಳ್ಳುತ್ತ ನಾವೇ ನಮ್ಮನ್ನು ಸ್ಪಂದಿಸದಷ್ಟು ಘನೀಭವಿಸುವ ಪ್ರಕ್ರಿಯೆಗೆ ಒಡ್ಡಿಕೊಳ್ಳುತ್ತ ನಡೆದಿದ್ದೇವೆ.
ಇದು 'ಮುಗುಳು' ಪತ್ರಿಕೆಗೆ ಮಾಡಿದ ಚಿತ್ರ, ಈ ಸಲದ ಮುಗುಳು ಒಳ್ಳೊಳ್ಳೇ ಲೇಖನಗಳಿಂದ ಕೂಡಿದೆ. ಈ ಇ ಪೇಪರ್ ವರ್ಶನ್‌ನಲಿಂಕಿನಲ್ಲಿ ಬಿಡುವಾದಾಗ ನೀವೂ ಮುಗುಳು ಓದಬಹುದು, ಡೌನ್‌ಲೋಡ್ ಕೂಡ ಮಾಡಿಟ್ಟುಕೊಳ್ಳಬಹುದು.
Posted by
venkat.bhats
at
Tuesday, October 02, 2012
Labels:
art,
ಅನಿಸಿಕೆ,
ಚಿತ್ರ,
ಮುಗುಳು,
ರೂಪರೇಖೆ
No comments:
30 September, 2012
16 September, 2012
ಜಗತ್ತಿನ ಕಣ್ಣಿನಲ್ಲಿ ಕಾವ್ಯವನ್ನು ನೋಡುವ ಕವಿ..
ರಮೇಶ್ ಅರೋಲಿಯವರಿಗೆ,
ಆರಾಮಿದ್ದೀರಾ? ನಿಮ್ಮ ಕವನ ಸಂಕಲನ 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೇ ಇಟ್ಟುಕೊಳ್ಳಿ' ಯನ್ನು ಓದಿದೆ. ಇಷ್ಟವಾಯ್ತು ಮತ್ತು ತುಂಬ ಖುಷಿಯಾಯ್ತು. ಕಲವೊಮ್ಮೆ ಇಷ್ಟವಾದ ಬರಹಗಳ ಬಗ್ಗೆ ಅನ್ನಿಸಿದ್ದನ್ನು ಹಂಚಿಕೊಳ್ಳುತ್ತಿರುತ್ತೇನೆ. ಇದೂ ಹಾಗೇ ಒಂದು ಅನಿಸಿಕೆಯೇ ಹೊರತು ಗಂಭೀರವಾಗಿ ತೆಗೆದುಕೊಳ್ಳಬೇಕಾದದ್ದಲ್ಲ.
ನಿಮ್ಮ ಕಾವ್ಯ ಭಾಷೆಯಲ್ಲಿ ಗುಂಗು ಹಿಡಿಸುವ ಗಝಲ್‌ಗಳ ಮತ್ತಿದೆ. ಮತ್ತೆ ಮತ್ತೆ ಕಾಡುವ ದಟ್ಟ ವಿಷಾದವಿದೆ. ಹರಿತ ಅಲಗುಗಳ ಪ್ರತಿರೋಧವಿದೆ. ಜೊತೆಗೆ ಮತ್ತೆ ಮತ್ತೆ ಮಜಾಕ್ಕೆ ಕೂಡ ಓದಿಕೊಳ್ಳಬೇಕೆನಿಸುವ ಲಯ ಲಾಲಿತ್ಯ ಇದೆ. ಈ ವಿಶಿಷ್ಟ ಸಂಕರಗಳಿಂದಲೇ ನಿಮ್ಮ ಕಾವ್ಯ ಆಪ್ತವಾಗುತ್ತದೆ, ಬೆರಗು ಹುಟ್ಟಿಸುತ್ತದೆ.
ನೀವು ಈ ಜಗತ್ತಿನ ಜಂಜಡಗಳಿಂದ, ಗದ್ದಲಗಳಿಂದ ಬೇರೆ ಕೂತು ನಿರ್ವಾತದಲ್ಲಿ ಕಾವ್ಯವನ್ನು ಕೇವಲ 'ಕಟ್ಟುವ ಕಲೆ'ಯಾಗಿ ಪ್ರಾಕ್ಟಿಸ್ ಮಾಡುತ್ತಾ ಕಳೆದುಹೋಗುವ ಕವಿಯಲ್ಲ. ಸುತ್ತಲಿನ ಜಗತ್ತಿಗೆ, ಅದರ ಆಗು ಹೋಗುಗಳಿಗೆ ತೆರೆದುಕೊಂಡು ಅದಕ್ಕೆ ತೀವ್ರವಾಗಿ ಸ್ಪಂದಿಸುವ ಒತ್ತಡದಲ್ಲಿ ಬರೆಯುವ ಮತ್ತು ಈ ಜಗದ ಎಲ್ಲ ಕ್ರೌರ್ಯಗಳ, ದುರಂತ ನೋವು ದಾರುಣತೆಗಳ ಜೊತೆಯಲ್ಲೇ ತಾನೂ ಬೆಳೆಯಬೇಕು ಎಂಬ ಎಚ್ಚರವಿರುವ ಸಹೃದಯಿ. (ನಿಮ್ಮ ಅನೇಕ ಕವನಗಳ ಕೊನೆಗೆ ಕೊಟ್ಟಿರುವ ಟಿಪ್ಪಣಿಯೂ ಇದಕ್ಕೆ ಪುಷ್ಟಿ ನೀಡುತ್ತದೆ) ನೇರವಾಗಿ ಹೇಳಬೇಕೆಂದರೆ ನಿಮಗೆ ಶ್ರೇಷ್ಠ ಕವಿಯಾಗಿ ಆ ಕಣ್ಣಿಂದ ಜಗತ್ತನ್ನು ನೋಡುವುದಕ್ಕಿಂತ ಒಳ್ಳೆಯ ಮನುಷ್ಯನಾಗಿ ಜಗತ್ತಿನ ಕಣ್ಣಲ್ಲಿ ಕಾವ್ಯವನ್ನು ನೋಡುವುದು ಮುಖ್ಯ ಅಂದುಕೊಂಡವರು ನೀವು ಅನ್ನಿಸಿತು.
ಸಂಕಲನದ 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೇ ಇಟ್ಟುಕೊಳ್ಳಿ' ಎಂಬ ಹೆಸರೇ ವಿಚಿತ್ರ ಸೆಳೆಯುವ ಹಾಗಿದೆ. ಮೊದಲ ಕವನ 'ದುಃಖ ದಾಖಲಿಸುವವನೇ ಇದನ್ನು ಬರೆದಿಟ್ಟುಕೋ' ದಲ್ಲಿನ
"ಇನ್ನು ತೀರ್ಪು ನಿನ್ನಿಚ್ಛೆಯಂತೇ ಬರೆದುಕೊಂಡಲ್ಲಿ
ಪ್ರತಿಸಲ ನಾನೇಕೆ ಅಚ್ಚರಿಪಡಲಿ"
ಎಂಬ ಸಾಲು ಪ್ರಶ್ನೆಯಷ್ಟೇ ಅಲ್ಲ ಉತ್ತರವೂ ಕೂಡ ಆಗಿ ಪಕ್ಷಪಾತದ ತೀರ್ಪೂ ನಿರೀಕ್ಷಿತವಾಗುವ ದುರಂತವನ್ನು ರಾಚುವಂತಿದೆ.
![]() |
| ಚಿತ್ರ ಕೃಪೆ: http://naditeera.blogspot.in |
'ಮಂಡಿಯೂರಿದ್ದಾಳೆ ಕಿಸಾಗೋತಮಿ ಜೀವಕ್ಕಲ್ಲ' ಕವನದಲ್ಲಿ ಬರುವ ಸಾಲು "ಮಂಡಿಯೂರಿ ಕಿಸಾಗೋತಮಿಯಾಗುತ್ತಾಳೆ". 'ಆಗುತ್ತಾಳೆ' ಅಂದರೆ ಅವಳು ಕಿಸಾಗೋತಮಿಯೇ ಅಲ್ಲ. ಇಲ್ಲಿ ಕಿಸಾಗೋತಮಿ ಕೇವಲ ಗತಕಾಲದ ಕತೆ ಅಥವಾ ಪ್ರತಿಮೆಯಷ್ಟೇ ಅಲ್ಲದೇ ಒಂದು 'ಸಂದರ್ಭ'ವಾಗಿ ಯಾರು ಬೇಕಾದರೂ ಹಾಯಬೇಕಾಗಿಬರಬಹುದಾದ 'ಮನಸ್ಥಿತಿ'ಯಾಗಿ ಹೊಳೆಯುವ ರೀತಿ ತುಂಬ ಇಷ್ಟವಾಯ್ತು. ಅಲ್ಲದೇ ಕಿಸಾಗೋತಮಿ ಹೆಸರಿನ ಆ ಸಿಚುವೇಶನ್ನಿಗೆ ಬುದ್ಧನ ಎಲ್ಲ ಬೋಧೆಗಳಿಗೆ ರಪ್ಪನೇ ಎದುರಾಗಿ 'ಗೋರಿಗಳ ಮೇಲೆ ಕಟ್ಟಿದ ಊರ ತೊರೆದು' ಮತ್ತೆ ಆಸೆಯ ಮೂಲವ ನೆನೆದು' ಹೊರಡುವಂತೇ ಮಾಡುವ ಶಕ್ತಿಯಿರುವುದು ಬೆರಗಿಗೆ ಕಾರಣವಾಯ್ತು.
'ಹಾಗೇ ಉಸಿರಾಟದಲ್ಲೇಕೋ ಸಂದೇಹವೀಗ
ಹುಡುಗನಿಗೆ ಅನುಮಾನ
ತೋಪಿನಲಿ ತೂರಿಬಿಟ್ಟ ಮುತ್ತು
ಆಕೆ ತನಗೆ ತಲುಪಿಲ್ಲ ಎಂದಾಗ!' (ಸ್ಮಶಾನಗಳು ಮುಚ್ಚಲಿವೆ ಮನುಷ್ಯರಿದ್ದರೆ ಕಳುಹಿಸಿ)
ಇಲ್ಲಿ ಕ್ರೌರ್ಯ ಮತ್ತು ಹೇಗೆ ಒಟ್ಟೊಟ್ಟಿಗೇ ಉಕ್ಕುತ್ತವೆ ನೋಡಿ. ಒಂಥರಾ ಚೆಂದದ ಬೆಕ್ಕು ಒಮ್ಮೆಲೇ ಪಂಜನ್ನು ಹೊರಚಾಚಿ ಪರಚಿದಾಗ ಅದು ಬೆರೆಯೇ ಆಗಿ ಕಾಣತೊಡಗುತ್ತಲ್ಲ ಹಂಗೆ. "ತೋಪಿನಲ್ಲಿ ತೂರಿಬಿಟ್ಟ ಮುತ್ತು" ಇಲ್ಲಿ ತೂರಿಬಿಟ್ಟ ಮುತ್ತು ಎಷ್ಟು ನವಿರಾದ ಕಲ್ಪನೆಯನ್ನು ಮನದಲ್ಲಿ ಮೂಡಿಸುತ್ತದೆಯೋ, ಅದರ ಹಿಂದಿನ ಶಬ್ದ "ತೋಪಿನಲ್ಲಿ" ಅಷ್ಟೇ ತೀವ್ರವಾಗಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಮತ್ತು ಈ ದಾರುಣತೆ ನಿಮ್ಮ ಕಾವ್ಯದಲ್ಲಿ ಎಷ್ಟು ಸಹಜವಾಗಿ ಬರುತ್ತದೆ ಎಂಬುದು ಅಚ್ಚರಿ ಹುಟ್ಟಿಸಿತು.
'ಹಸಿವೆಗೆ ಉಪಮೆಗಳ
ಹುಡುಕಿ ಹಸಿದುಕೊಂಡಿರಿ ನೀವು
ಬಿಡಿ ಅದ್ಹೇಗೆ ಅರ್ಥವಾದೇವು
ಅರ್ಧರಾತ್ರಿಯ ಅನಾಥ ಪ್ರತಿಮೆಗಳು ನಾವು!" (ಮರ್ಕ್ಯೂರಿ ಲೈಟಿನಡಿಗೆ)
ನಿಮ್ಮ ಕಾವ್ಯಕ್ಕೆ ಅವರ ತೀರ್ಪಿನ ಫಲಿತಾಂಶ ಮೊದಲೇ ಅರಿತೂ, ಸದಾ ಹಾಲುಗಲ್ಲದ ಮೇಲೆ ನಳಿಕೆ ಹಿಡಿಯುವ ಕ್ರೌರ್ಯದ ಎದುರೂ ನಿರ್ಲಿಪ್ತವಾಗಿರಬಲ್ಲ ಮತ್ತು ಅಷ್ಟೇ ತಣ್ಣಗೇ "ಕಾಯಿದೆಗಳ ಹೊರಡಿಸಿ ನಿಷೇಧಿಸಲಾಗದು ನಿಟ್ಟುಸಿರು" ಎಂದು ಧೈರ್ಯವಾಗಿ ಹೇಳುವ ತಣ್ಣನೆಯ ಆದರೆ ಗಟ್ಟಿ ದನಿಯಿದೆ ಅನ್ನಿಸಿತು.
ಇವಿಷ್ಟೇ ಅಲ್ಲ ಸಂಕಲನದ ಇನ್ನು ಬಹಳ ಕವಿತೆಗಳು ತುಂಬಾ ಇಷ್ಟವಾದವು. ಈ ಸಂಕಲನ ಓದಿದ ಮೇಲೆ ನಿಮ್ಮ ಮುಂದಿನ ಬರವಣಿಗೆಯ ಮೇಲೆ ವಿಶ್ವಾಸಪೂರ್ಣ ಕುತೂಹಲ ಹುಟ್ಟಿದೆ. ಇನ್ನೂ ಒಳ್ಳೆಯ ಕವಿತೆಗಳನ್ನು ಬರೆಯಿರಿ.. ಶುಭವಾಗಲಿ.
ಪ್ರೀತಿಯಿಂದ,
ಪದ್ಮನಾಭ ಭಟ್, ಶೇವ್ಕಾರ್.
-----------------------------------------------------------------------------------------------------------
(ಇದು 'ರೂಪಾಂತರ'ದ ಅತಿಥಿ ಬರಹ. ಪದ್ಮನಾಭ ಭಟ್, ನಮ್ಮ ನಡುವಿನ ಉತ್ಸಾಹಿ ಯುವ ಬರಹಗಾರ, ಸೂಕ್ಷ್ಮ ಸಂವೇದನಾಶೀಲ ಓದುಗ, ಭಾವಜೀವಿ. ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿ)
08 July, 2012
10 June, 2012
26 May, 2012
19 May, 2012
14 May, 2012
05 May, 2012
29 April, 2012
23 April, 2012
14 April, 2012
29 June, 2011
ಬಸ್‌ಸ್ಟ್ಯಾಂಡು
ಅದು ಒಂಥರಾ ಜಾಗ ಆ ಜಾಗ ಕಣ್ಣು ಬಿಡುವುದು ಈಗಷ್ಟೇ ಅಲ್ಲೆಲ್ಲೋ ಮೂಲೆಯಿಂದ ಎದ್ದುಕುಳಿತ ಹಮಾಲಿಗಳು, ರಾತ್ರಿ ಪಾಳಿಯ ಕಂಡಕ್ಟರುಗಳು ತಮ್ಮ ತಮ್ಮ ಟ್ರಾವೆಲಿಂಗ್ ಮನೆಯ ದಿನಚರಿಗಳನ್ನು ಹವಾಯಿ ಚಪ್ಪಲಿ,ಬ್ರಶ್ಶು,ಪೇಸ್ಟು ಹುಡುಕುವುದರೊಂದಿಗೆ ಶುರುಮಾಡುತ್ತಾರಲ್ಲಾ ಆಗ.ಅದರ ಹೆಸರು ಬಸ್‌ಸ್ಟ್ಯಾಂಡು.ಅಜ್ಜನ ಮನೆಗೆ ಹೋಗಲು ಬೆಳಬೆಳಿಗ್ಗೆಯೇ ಅಮ್ಮನೊಟ್ಟಿಗೆ ಬಂದ ಪುಟ್ಟನ ಕೇಕೆಯಿಂದ, ಅವಸರವಾಗಿ ಬಸ್ಸಿಗೆ ಓಡಿಬಂದ ಕಾಲೇಜು ಹುಡುಗಿಯ ಟಿಫಿನ್ ಬಾಕ್ಸು ಓಪನ್ ಆಗುವ ಘಮದಿಂದ,ಬಗೆಬಗೆಯ ಬಣ್ಣದ ಚಪ್ಪಲಿಗಳ ಟಪಟಪದಿಂದ,ಅಲ್ಲೇ ಚಿಲಿಪಿಲಿಗುಟ್ಟಾಗಲೇ ಇರುವು ಅರಿವಾಗುವ ಪುಟ್ಟ ಗುಬ್ಬಚ್ಚಿ,ಇಣಚಿಗಳಿಂದ ಆ ಬಸ್‌ಸ್ಟ್ಯಾಂಡಿಗೆ ಅಸ್ತಿತ್ವ. ಅಲ್ಲಿ ಯಾರು ಬರುವುದಿಲ್ಲ ಎನ್ನುವ ಹಾಗೆಯೇ ಇಲ್ಲ, ಅಜ್ಜ ಅಜ್ಜಿಯಿಂದ ಹಿಡಿದು ಹಾಲುಗಲ್ಲದ ಹಸುಳೆಯವರೆಗೆ ಅತಿಥಿಗಳು,ಸ್ವಾಮಿ ನಾರಾಯಣನಿಂದ ಹಿಡಿದು ಹರುಕು ಅಂಗಿಯ ಬೇಡುವ ಮುದುಕನವರೆಗೆ ಎಲ್ಲರಿಗೂ ಜಾಗ ಉಂಟು.ಅದನ್ನು ನಾವೆಲ್ಲ ಬಸ್‌ಸ್ಟ್ಯಾಂಡೆಂದು ಕರೆದರೆ ಬೀದಿಬದಿಯ ಕೂಲಿಯವನಿಗೆ,ಬೆಳಗಾಗೆದ್ದು ಪೇಪರ್ ಹಂಚುವವನಿಗೆಲ್ಲ ರಾತ್ರಿ ಮಲಗಲು ಅದೇ ಮನೆ .ಆಂಥ ಬಸ್‌ಸ್ಟ್ಯಾಂಡುಗಳಲ್ಲಿ ಚಾದರ ಹಾಸಿ ಸುತ್ತಿ ಮಲಗಿ ಕನಸು ಕಾಣಬಹುದು ಎಂಬುದು ಕೆಟ್ಟಕನಸಿಗಿಂತಾ ಸುಂದರ..! ದಿನ ಬೆಳಗಾದರೆ ಸಾವಿರ ಹೊಸಮುಖಗಳು ಹುಡುಕಿಕೊಂಡು ಬರುವ ಬಸ್‌ಸ್ಟ್ಯಾಂಡೇ ಹಾಗೆ. ಗಿಜಿ ಗಿಜಿ ಕೇಳಿ ಅದಕ್ಕೆ ಬೇಜರಾಗಿಲ್ಲವೇ? ಆಗಿರಬಹುದು ಇಲ್ಲ ಅದೇ ಇಷ್ಟವಾಗಿರಬಹುದು. ಅಲ್ಲಿ ಬರುವ ಜನರದೇ ಒಂದು ವೆರಾಯಿಟಿ,ಪಟ್ಟೆ ಪಟ್ಟೇ ಅಂಗಿಯ ಶಿಸ್ತು ಬೂಟಿನ ಶಾಲೆ ಹುಡುಗರು,ಹೊಸಾ ಹೆಂಡತಿ ಕೈ ಅಡುಗೆಯ ಟಿಫಿನ್ ಬಾಕ್ಸನ್ನು ನಿಧಿಯೆಂದು ಕೈಲಿ ಹಿಡಿದಿರುವ ಯುವಕನಿಂದ, ಎರಡು ರುಪಾಯಿ ಸೇಂಗಾ ಬಿಚ್ಚಿಕೊಂಡು ತಿನ್ನುವ ಹುಡುಗರಿಂದ, ಕ್ಯಾಲೆಂಡರ್ ಮಾರಿ ಎರಡು ಮಕ್ಕಳನ್ನು ಸಾಕುವವನಿಗೆ ಅದೇ ಜಾಗ ಆಗಬೇಕು.ಈ ಬಸ್‌ಸ್ಟ್ಯಾಂಡಿನ ಸುತ್ತ ಹೊಸತೇ ಊರುಗಳು ಹುಟ್ಟಿಕೊಳ್ಳುತ್ತವೆ, ಬೆಂಗಳೂರೋ ಮಂಗಳೂರೋ ಬಸ್‌ಸ್ಟ್ಯಾಂಡಿನ ಸುತ್ತ ಬೆಳೆದ ಊರುಗಳೇ. ಅಲ್ಲೇ ಸುತ್ತ ದೋಸೆ ಅಂಗಡಿ,ಮಂಡಕ್ಕಿ ಶಾಪು,ಆಮ್ಲೆಟ್ಟಿನ ಟಪರಿ ಹೀಗೆ.ಅಗ್ಗದ ಸಾಮಾನುಗಳೇನಾದರೂ ಬೇಕಾದರೆ ಇತ್ತ ಬನ್ನಿ ಎನ್ನುವ ಹಾಗೆ.
ಎಲ್ಲ ಊರುಗಳನ್ನು ನೋಡಿ ಬರುವ ಬಸ್ಸು ಈ ಬಸ್‌ಸ್ಟ್ಯಾಂಡಿನಲ್ಲಿ ತಾಸುಗಟ್ಟಲೇ ನಿಂತು ಸುತ್ತಿದೂರಿನ ಕಥೆ ಹೇಳುತ್ತದೆ.ಅಲ್ಲಿ ಹಂಗೆ ಇಲ್ಲಿ ಹಿಂಗೆ,ಅಲ್ಲಿ ಗದ್ದೆ ಎಲ್ಲಾ ಕುಯಿಲು ಮುಗಿಸಿ ಭತ್ತದ ವಜ್ಜೆಗಳನ್ನು ಹರವಿಕೊಂಡು ನಿಂತಿದೆ,ಚಿಲಿಪಿಲಿ ಗುಬ್ಬಿಗಳನ್ನು ಮಾತನಾಡಿಸಿದೆ,ಆ ಊರಲ್ಲಿ ಮನೆಕಟ್ಟುತ್ತಿದ್ದಾರೆ ಅಂದಿದ್ದೆನಲ್ಲ, ಈಗ ಅಲ್ಲಿ ಮನೆ ಎಲ್ಲ ಎದ್ದು ನಿಂತು ಆ ಮನೆಯ ಸಣ್ಣ ಪಾಪುವೊಂದು ದಿನವೂ ಕೈಬೀಸದಿದ್ದರೆ ನನಗೂ ಸಮಾಧಾನವಿಲ್ಲ ಎನ್ನುವಂತೆ ಆಗಿದೆ ಗೊತ್ತಾ.., ಇಂದು ಮುಂಜಾನೆ ತಿರುವಿನ ಎದುರು ಜಿಂಕೆ ದಂಡು,ಈ ಪ್ಯಾಟೆಯಲ್ಲಿ ತಿರುಗುವುದು ಅಂದರೆ ಯಾರಿಗೂ ಬೇಡದ ಗೋಳು ಎಲ್ಲರಿಗೂ ನನ್ನ ರೋಡೇ ಆಗಬೇಕು ಹಾಗೆ, ಹೀಗೆ ಏನೇನೋ ಕತೆ.ಕೇಳಿನೋಡಿ ಈ ಬಸ್‌ಸ್ಟ್ಯಾಂಡಿನ ಬಳಿಯೂ ಅಂತದ್ದೇ ನೂರು ಕಥೆಗಳಿವೆ.ದಿನವೂ ಸೇರುವ ಪ್ರೇಮಿಗಳದು ಒಂದಾದರೆ, ಶಾಲೆ ಮಕ್ಕಳ ಶಾಲೆಯ ದಿನಚರಿಗಳ ಕತೆ ಇನ್ನೊಂದು, ಕೆಲ ಊರುಗಳಲ್ಲಿ ಬಸ್ಸಿನಿಂದ ಬಸ್ಸಿಗೆ ಮೂರು ತಾಸುಗಳ ಅಂತರವಿರುತ್ತದೆ,ನಡುವಿನ ವೇಳೆಯೇನಾದರೂ ಬಿಡುವ ಶಾಲೆಯಾದರೆ ಮಕ್ಕಳ ಹೋಮ್‌ವರ್ಕ್ ಅಲ್ಲೇ ನಡೆಯುವುದು.ನಾವೆಲ್ಲ ಹೈಸ್ಕೂಲಿಗೆ ಹೋಗುವಾಗ ಸಂಜೆ ತಾಸುಗಟ್ಟಲೆ ಬಸ್ಸಿಗೆ ಕಾಯಬೇಕಾಗುತ್ತಿತ್ತು, ಹುಡುಗಿಯರೆಲ್ಲ ಕಷ್ಟಪಟ್ಟು ಆಗಲೇ ಹೋಮ್‌ವರ್ಕ್ ಮಾಡುತ್ತಿದ್ದರೆ ಹುಡುಗರು ನಮ್ಮದನ್ನೂ ಅವರಿಗೇ ಬರೆಯಲು ಕೊಟ್ಟು ಕ್ರಿಕೆಟ್ ಆಡುವುದಿತ್ತು. ಬಸ್‌ಸ್ಟಾಂಡಿಗೆ ಎಲ್ಲ ಊರುಗಳನ್ನು ಒಂದೇ ಸೇರಿಸುವ ಉಮೇದಿ.ಬಸ್‌ಸ್ಟ್ಯಾಂಡಿನಲ್ಲಿ ಕೂತು ಹರಟದೇ ಹೋದ ಪ್ರೇಮಿಗಳು ನಿರ್ಭಾಗ್ಯರ ಲಿಸ್ಟಿಗೆ ಸೇರುತ್ತಾರೆ.ನಮ್ಮ ಊರಿನಲ್ಲೊಬ್ಬ ಹಮಾಲಿ ಕೆಲಸ ಮಾಡಿಕೊಂದಿದ್ದವನಿದ್ದ ಅವನದು ಯಾವ ಜಾತಿಯೊ ಪಾತಿಯೋ ಆದರೆ ಬಸ್‌ಸ್ಟ್ಯಾಂಡಿನಲ್ಲಿ ಯಾರು ಏನು ಲಗೇಜು ಹಿಡಿದು ನಿಂತಿದ್ದರೂ ಎದುರಿಗೆ ಹಾಜರಾಗುತ್ತಿದ್ದ ಅವನ ಹೆಸರು ಸರ್‌ನೇಮ್ ಎಲ್ಲ ಬಿಡಿ ಎಲ್ಲರೂ ಕರೆಯುವುದು ಬಸ್‌ಸ್ಟ್ಯಾಂಡ್ ಪಾಂಡು ಎಂದೇ, ಹಾಗೆ ಎಷ್ಟೋ ಜನರು ಹೊತ್ತಿನ ಅನ್ನ,ಐಡೆಂಟಿಟಿ ಕಂಡಿದ್ದು ಇದೇ ಬಸ್‌ಸ್ಟ್ಯಾಂಡ್‌ನಲ್ಲಿ.
ಎಲ್ಲ ಊರುಗಳನ್ನು ನೋಡಿ ಬರುವ ಬಸ್ಸು ಈ ಬಸ್‌ಸ್ಟ್ಯಾಂಡಿನಲ್ಲಿ ತಾಸುಗಟ್ಟಲೇ ನಿಂತು ಸುತ್ತಿದೂರಿನ ಕಥೆ ಹೇಳುತ್ತದೆ.ಅಲ್ಲಿ ಹಂಗೆ ಇಲ್ಲಿ ಹಿಂಗೆ,ಅಲ್ಲಿ ಗದ್ದೆ ಎಲ್ಲಾ ಕುಯಿಲು ಮುಗಿಸಿ ಭತ್ತದ ವಜ್ಜೆಗಳನ್ನು ಹರವಿಕೊಂಡು ನಿಂತಿದೆ,ಚಿಲಿಪಿಲಿ ಗುಬ್ಬಿಗಳನ್ನು ಮಾತನಾಡಿಸಿದೆ,ಆ ಊರಲ್ಲಿ ಮನೆಕಟ್ಟುತ್ತಿದ್ದಾರೆ ಅಂದಿದ್ದೆನಲ್ಲ, ಈಗ ಅಲ್ಲಿ ಮನೆ ಎಲ್ಲ ಎದ್ದು ನಿಂತು ಆ ಮನೆಯ ಸಣ್ಣ ಪಾಪುವೊಂದು ದಿನವೂ ಕೈಬೀಸದಿದ್ದರೆ ನನಗೂ ಸಮಾಧಾನವಿಲ್ಲ ಎನ್ನುವಂತೆ ಆಗಿದೆ ಗೊತ್ತಾ.., ಇಂದು ಮುಂಜಾನೆ ತಿರುವಿನ ಎದುರು ಜಿಂಕೆ ದಂಡು,ಈ ಪ್ಯಾಟೆಯಲ್ಲಿ ತಿರುಗುವುದು ಅಂದರೆ ಯಾರಿಗೂ ಬೇಡದ ಗೋಳು ಎಲ್ಲರಿಗೂ ನನ್ನ ರೋಡೇ ಆಗಬೇಕು ಹಾಗೆ, ಹೀಗೆ ಏನೇನೋ ಕತೆ.ಕೇಳಿನೋಡಿ ಈ ಬಸ್‌ಸ್ಟ್ಯಾಂಡಿನ ಬಳಿಯೂ ಅಂತದ್ದೇ ನೂರು ಕಥೆಗಳಿವೆ.ದಿನವೂ ಸೇರುವ ಪ್ರೇಮಿಗಳದು ಒಂದಾದರೆ, ಶಾಲೆ ಮಕ್ಕಳ ಶಾಲೆಯ ದಿನಚರಿಗಳ ಕತೆ ಇನ್ನೊಂದು, ಕೆಲ ಊರುಗಳಲ್ಲಿ ಬಸ್ಸಿನಿಂದ ಬಸ್ಸಿಗೆ ಮೂರು ತಾಸುಗಳ ಅಂತರವಿರುತ್ತದೆ,ನಡುವಿನ ವೇಳೆಯೇನಾದರೂ ಬಿಡುವ ಶಾಲೆಯಾದರೆ ಮಕ್ಕಳ ಹೋಮ್‌ವರ್ಕ್ ಅಲ್ಲೇ ನಡೆಯುವುದು.ನಾವೆಲ್ಲ ಹೈಸ್ಕೂಲಿಗೆ ಹೋಗುವಾಗ ಸಂಜೆ ತಾಸುಗಟ್ಟಲೆ ಬಸ್ಸಿಗೆ ಕಾಯಬೇಕಾಗುತ್ತಿತ್ತು, ಹುಡುಗಿಯರೆಲ್ಲ ಕಷ್ಟಪಟ್ಟು ಆಗಲೇ ಹೋಮ್‌ವರ್ಕ್ ಮಾಡುತ್ತಿದ್ದರೆ ಹುಡುಗರು ನಮ್ಮದನ್ನೂ ಅವರಿಗೇ ಬರೆಯಲು ಕೊಟ್ಟು ಕ್ರಿಕೆಟ್ ಆಡುವುದಿತ್ತು. ಬಸ್‌ಸ್ಟಾಂಡಿಗೆ ಎಲ್ಲ ಊರುಗಳನ್ನು ಒಂದೇ ಸೇರಿಸುವ ಉಮೇದಿ.ಬಸ್‌ಸ್ಟ್ಯಾಂಡಿನಲ್ಲಿ ಕೂತು ಹರಟದೇ ಹೋದ ಪ್ರೇಮಿಗಳು ನಿರ್ಭಾಗ್ಯರ ಲಿಸ್ಟಿಗೆ ಸೇರುತ್ತಾರೆ.ನಮ್ಮ ಊರಿನಲ್ಲೊಬ್ಬ ಹಮಾಲಿ ಕೆಲಸ ಮಾಡಿಕೊಂದಿದ್ದವನಿದ್ದ ಅವನದು ಯಾವ ಜಾತಿಯೊ ಪಾತಿಯೋ ಆದರೆ ಬಸ್‌ಸ್ಟ್ಯಾಂಡಿನಲ್ಲಿ ಯಾರು ಏನು ಲಗೇಜು ಹಿಡಿದು ನಿಂತಿದ್ದರೂ ಎದುರಿಗೆ ಹಾಜರಾಗುತ್ತಿದ್ದ ಅವನ ಹೆಸರು ಸರ್‌ನೇಮ್ ಎಲ್ಲ ಬಿಡಿ ಎಲ್ಲರೂ ಕರೆಯುವುದು ಬಸ್‌ಸ್ಟ್ಯಾಂಡ್ ಪಾಂಡು ಎಂದೇ, ಹಾಗೆ ಎಷ್ಟೋ ಜನರು ಹೊತ್ತಿನ ಅನ್ನ,ಐಡೆಂಟಿಟಿ ಕಂಡಿದ್ದು ಇದೇ ಬಸ್‌ಸ್ಟ್ಯಾಂಡ್‌ನಲ್ಲಿ.
ನಮ್ಮ ಊರುಗಳಲ್ಲಿ ಬಸ್‌ಸ್ಟ್ಯಾಂಡ್‌ಗಳು, ಬಸ್‌ಸ್ಟಾಪ್‌ಗಳಿಗೆ ಬೇರೆಯದೇ ರೂಪ, ದೊಡ್ಡ ಬಸ್ಸುಗಳನ್ನು ತಿರುಗಿಸಿ ತಿರುಗಿಸಿ ಆದ ಬಯಲನ್ನೇ ಬಸ್‌ಸ್ಟ್ಯಾಂಡೆಂದು ಕರೆಯುವುದು,ಆ ಬಸ್ಸುಗಳು ಹೋಗುವಾಗ ಟಾರುರಸ್ತೆಗೆ ನೂರು ಕಾಲುದಾರಿ,ಅವುಗಳ ಪಕ್ಕ ಒಂದು ಮರದ ಕೆಳಗೆ ಜಾಗ ಸ್ವಚ್ಚ ಮಾಡಿ ಗೂಟ ಹುಗಿದೋ, ಒಣಗಿದೆಲೆಯ ಕೊಂಬೆಯನ್ನು ನೇತುಹಾಕಿಯೋ ಗುರುತು ಮಾಡಿಟ್ಟು ನಾಲ್ಕು ಜನ ನಿಂತರೆ ಅದೇ ಬಸ್‌ಸ್ಟಾಪು. ಎಲ್ಲೆಲ್ಲೋ ಒಂದೆರಡು ಕಡೆ ವ್ಯವಸ್ಥಿತ ಬಸ್‌ಸ್ಟ್ಯಾಂಡುಗಳು ಸ್ಟಾಪುಗಳು ಇವೆ. ಇಂತ ಬಸ್‌ಸ್ಟ್ಯಾಂಡುಗಳ ವಯಕ್ತಿಕ ಹಿನ್ನೆಲೆಗಳ ಮೇಲೆ,ಅಲ್ಲಿ ನಿಲ್ಲುವ ಜನರ ಮೇಲೆ,ಪ್ರಣಯ ಕಥೆಗಳ ಮೇಲೆ ದಂತಕತೆಗಳ ಮೇಲೆ ಅವುಗಳ ನಟೋರಿಸಿಟಿಯೋ,ಪ್ರಸಿಧ್ಧಿಯೋ,ಅಡ್ಡನಾಮಗಳೋ ಇರುತ್ತವೆ. ಜಗತ್ತಿನ ಪರಮ ಸೀಕ್ರೇಟುಗಳು ಲೀಕಾಗುವ ಜಾಗವೂ ಅದೇ.
ಅಲ್ಲಿ ಹಳೇ ಹಾಡಿನ ಗುಂಗು ಮತ್ತು ಹರೆಯದ ಹುಡುಗಿಯರ ದಂಡು. ಆ ಮೂಲೆಯ ಕಂಬದ ಬಳಿ ಹೊಸಾ ಪ್ರೇಮಿಗಳ ಯುಗಳ ಗೀತ. ಮನೆ ಸಾಮಾನು,ಮಗಳಿಗೆ ಪೆಟ್ಟಿಕೋಟು, ಅಂಗಿ, ಹೊಸಾಪಾತ್ರೆ ತಂದುಕುಳಿತ ಗಂಡಹೆಂಡತಿಗೆ ಬಸ್ಸು ಇನ್ನೆರಡು ಗಳಿಗೆ ತಡೆದು ಬರಲಿ ಎಂಬ ಆಸೆ.ಸೂರ್ಯ ಆಕಡೆಗಿಂದ ಹುಟ್ಟಿ ಈಕಡೆ ಮುಳುಗುವ ಒಳಗೆ ಎಷ್ಟು ಜನರ ಉಸಿರುಗಳ ಉಸ್ತುವಾರಿ ವಹಿಸಿಕೊಳ್ಳುತ್ತದೆ ಈ ಬಸ್‌ಸ್ಟ್ಯಾಂಡು.ಮುದ್ದು ಕಂದನನ್ನು ಎತ್ತಿಕೊಂಡು ಬಸ್ಸು ಹಿಡಿಯಲು ಓಡುತ್ತಿದ್ದ ತಾಯಿಯ ಪ್ರೀತಿ ಈ ಬಸ್‌ಸ್ಟ್ಯಾಂಡಿನಲ್ಲೂ ಹರಡಿದೆ.ಬಸ್ಸಿಗಾಗಿ ಕಾಯುತ್ತ ನಿಂತ ಎಲ್ಲ ಜನಗಳ ಸ್ನಿಗ್ಧ ಆಸೆ ಅಲ್ಲಿ ನೆಲೆಗೊಳ್ಳುತ್ತವೆ.ಕತ್ತಲು ರಾತ್ರಿಯಾದರೆ ಮತ್ತೆ ಹಾಸಿಗೆಯಲ್ಲದ ಹಾಸಿಗೆ ಬಿಚ್ಚಿಕೊಂಡಾಗ ಬಸ್‌ಸ್ಟ್ಯಾಂಡಿನಲ್ಲಿ ಆ ರಾತ್ರಿಯ ಕೊನೇ ಬಸ್ಸನ್ನು ಆಗಷ್ಟೇ ಬೀಳ್ಕೊಟ್ಟು ಬಂದು ನಿಂತ ಬಸ್ಸುಗಳು ಪಿಸುದನಿಯಲ್ಲಿ ಕಥೆ ಹೇಳುತ್ತ ಅಲ್ಲೇ ಒರಗಿದ ನೀಲಿ ಬಸ್ಸಿನ ಡ್ರೈವರನನ್ನು ಮಲಗಿಸುತ್ತವೆ.ಹಳ್ಳಿಯ ಬಸ್‌ಸ್ಟ್ಯಾಂಡುಗಳಲ್ಲಿ ದಾರಿತಪ್ಪಿದ ಎಮ್ಮೆಗಳು ಮೆಲುಕು ಹಾಕುತ್ತ ಸಂಗೀತಾ ಐ ಲವ್ವ್ ಯೂ ಎಂಬ ಭಗ್ನ ಪ್ರೇಮಿಯ ಡೊಂಕು ಬರಹವನ್ನು ಓದುತ್ತಾ ಮಲಗಿರುತ್ತವೆ.
22 May, 2011
10 May, 2011
ಆಡುಮಳೆಯ ಜೊತೆಗೆ..
ಮೇ ತಿಂಗಳ ಸಂಜೆ ಮಳೆಯೆಂದರೇ ಹಾಗೆ,ಇಷ್ಟದ ಗೆಳತಿಯ ಹಾಗೆ.ಕಾಯಿಸುತ್ತದೆ,ಕಾಡಿಸುತ್ತದೆ,ಪ್ರೀತಿ ತೋರಿಸುತ್ತದೆ.ಬೇಕು ಬೇಕು ಎಂದೆನಿಸುತ್ತಿರುವ ಹಾಗೇ ನಾಳೆ ಬರುತ್ತೇನೆ ಎನ್ನುತ್ತಾ ಸದ್ದಿಲ್ಲದೇ ಹೊರಟುನಿಂತುಬಿಡುತ್ತದೆ.ಅದು ಜುಮುರು ಮಳೆ,ಅದು ಹನಿ ಮಳೆ,ಅದು ಕಿರಿಕಿರಿ ಮಳೆ,ಅದು ಪಿರಿಪಿರಿ ಮಳೆ, ಅದು ಮಗು ಮಳೆ, ಅದು ಗದ್ದಲದ ನಗು ನಗುತ್ತಾ ನಮ್ಮನ್ನೂ ನಗಿಸುವ ಪುಟ್ಟ ಹುಡುಗರಂಥ ಮಳೆ, ಬಯ್ದುಬಿಡಬೇಕೆಂದುಕೊಂಡರೂ ಮುದ್ದುಮಾಡಿಸಿಕೊಳ್ಳುತ್ತದೆ.ಈ ಮಳೆಯಲ್ಲಿ ನೆನಪಿನ ರಾಶಿಯಿದೆ.ಸುಸ್ತುಬಡಿದು ಪುದುಪುದು ಮನೆ ಸೇರಲು ಹೊರಟವರನ್ನು ನಿಲ್ಲಿಸಿ ತಲೆ ನೇವರಿಸುತ್ತದೆ,ಆರಾಗುವುದರೊಳಗೆ ಮನೆಸೇರಲೆಂದು ಪಾತ್ರೆ, ನೀರು,ಅಡುಗೆ ಸೀರಿಯಲ್ಲು ಎನ್ನುತ್ತ ಹೊರಟ ವ್ಯಾನಿಟಿ ಬ್ಯಾಗಿನ ಹೆಂಗಸರನ್ನೆಲ್ಲ ತಡೆದು ನಿಲ್ಲಿಸಿ ಬಯ್ಯಿಸಿಕೊಳ್ಳುತ್ತದೆ,ಇಲ್ಲ ಇಲ್ಲ ಎನ್ನುತ್ತಲೇ ಬೀಸಿ ಬರುವ ದಪ್ಪದಪ್ಪ ಹನಿಗಳು ತಾರಸಿಯನ್ನು ಟಪಟಪಿಸುತ್ತವೆ.ಈ ಮಳೆಗೆ ಕಿಟಕಿ ಬಾಲ್ಕನಿಗಳೆಂದರೆ ಬಲು ಅಕ್ಕರೆ,ಕಿಟಕಿಯೊಳಗೆಲ್ಲ ಇಣುಕದಿದ್ದರೆ ಸಮಾಧಾನವಿಲ್ಲ. ಈ ಮಳೆಗೆ ಕಿಟಕಿಯೇ ಇಲ್ಲದ ಕೋಟೆಯೊಳಗೆ ಕಂಪ್ಯೂಟರಿನ ವಿಂಡೋದಲ್ಲಿ ತಲೆಹುದುಗಿಸಿಕೊಂಡಿದ್ದವರೆಲ್ಲರನ್ನು ಬಾಲ್ಕನಿಗೆ ಕರೆದು ನಿಲ್ಲಿಸುವ ತಾಕತ್ತಿದೆ.
ಈ ಮಳೆ ಹದಿಹರೆಯದ ಮಳೆ,ಸುಮ್ಮನೆ ಸುರಿವ ಮಳೆಯಲ್ಲ, ತಾರಸಿಯಯ ಮೇಲೆ ಬೀಳುವುದಕ್ಕಿಂತ ಗೋಡೆಗೆ ಮುತ್ತಿಕ್ಕುವುದೇ ಪ್ರೀತಿ,ಬಾಲ್ಕನಿಯಗುಂಟ ಮುದ್ದಾಗಿ ಹನಿಸುತ್ತದೆ,ಹೊರಗಿಟ್ಟ ಚಪ್ಪಲಿಗಳನ್ನು ತೋಯಿಸುವುದಿಲ್ಲ,ನಿಂತ ಸೈಕಲ್ಲನ್ನು ತೋಯಿಸದೇ ಬಿಡುವುದಿಲ್ಲ,ಮನೆಸೇರಲು ಬಸ್ಸಿನಲ್ಲಿ ತುಂಬಿಕೊಂಡು ಬೆವರು ಸುರಿಸುವ ಜನರನ್ನು ಗಾಜಿನ ಹೋರಗಿಂದೇ ತಳಕ್-ತಳಕ್ ಎಂದು ತಾಕುತ್ತ ಎದೆಯ ಉಸಿರಿಗೆ ತಂಪನ್ನು ಸಂವಹನಿಸುತ್ತದೆ.ಆಫೀಸಿನಲ್ಲಿ ಬೈಸಿಕೊಂಡು ಜೀವನ ಬೇಸರವಾದ ಯುವಕನ ಅಂಗಿಯನ್ನು ನವಿರಾಗಿ ಒದ್ದೆಗೊಳಿಸುತ್ತದೆ.ಮೆಸ್ಸೇಜಿನಲ್ಲಿ ಹುದುಗಿ ನಗುತ್ತಿರುವ ಹುಡುಗಿಯ ಕೆನ್ನೆಯ ಮೇಲೆ ಹನಿಸುತ್ತದೆ,ಕಾಲೇಜು ಮುಗಿದು ಆಡಲು ನಿಂತ ಹುಡುಗರು ಇನ್ನೇನು ಗೆಲ್ಲಬೇಕೆಂಬ ಕ್ರಿಕೆಟ್ ಮ್ಯಾಚನ್ನು ಅಲ್ಲಿಗೇ ನಿಲ್ಲಿಸಿ ಮಜಾನೋಡುತ್ತದೆ.
ಮನೆಗೆ ಹಿಂತಿರುಗುವ ಪಾರಿವಾಳಗಳ ಬೂದುರೆಕ್ಕೆಗಳ ಮೇಲಿಂದ ಜಿಗಿದು ಸಂದಿಗೊಂದಿಗಳಲ್ಲಿ ಚಿಲಿಪಿಲಿಗುಟ್ಟುತ್ತಿದ್ದ ಎರಡೇ ಗುಬ್ಬಚ್ಚಿಗಳ ಕೊಕ್ಕನ್ನಷ್ಟೇ ತೋಯಿಸಿ ಕೆಳಗಿನ ಗೂಡಂಗಡಿಯವನ ಚಹಾ ಕೆಟಲಿನ ಮೇಲೆಯೇ ಬೀಳುತ್ತದೆ.ಹೊರಗಿಟ್ಟ ಬಿಂದಿಗೆಯ ಮೇಲೆಲ್ಲ ಬರ್ರನೆ ಸುರಿಯುತ್ತದೆ.ಒಬ್ಬಂಟಿ ಹುಡುಗನ ಕನಸಿನಲ್ಲಿನ ಬಾಡಿದ ಹೂವಿನ ಮೇಲೆಲ್ಲ ಬಿದ್ದು ಪ್ರೀತಿ ಚಿಗುರಿಸುತ್ತದೆ,ಒಣಗಿಹೋದ ಹೂಗಿಡದ ಎಲೆಯಮೇಲಿಂದ ಜಾರಿ ಬುಡದಲ್ಲಿ ಇಲ್ಲದಂತೆ ಮಾಯವಾಗುತ್ತದೆ.ಕೈಚಾಚಿ ನಿಂತ ಸಾವಿರ ಕಟ್ಟಡಗಳಿಂದ ತಪ್ಪಿಸಿಕೊಂಡು ಫ್ಲೋರು-ಫ್ಲೋರುಗಳನ್ನು ನೋಡದೇ ಲಿಫ್ಟಿನಲ್ಲಿ ಜಾರಿ ಬಂದವರನ್ನೂ,ಕಾಫಿಡೇಯಲ್ಲಿ ತಾಸು ಕೂತುಬಂದವರನ್ನೂ,ಎಲ್ಲ ಬಣ್ಣದಂಗಿಯಲ್ಲಿದ್ದರೂ ಕಾಣದ ಕಟ್ಟಡದ ಕೂಲಿಗಳನ್ನೂ ಬಿಡದೇ ತೋಯಿಸಿ ಹೆದ್ದಾರಿಯಲ್ಲಿ ಎಲ್ಲ ರಾಡಿಗಳನ್ನೂ ತೊಳೆಯುತ್ತ ಹರಿಯುತ್ತದೆ.ಗುಲಾಬಿ ಚಪ್ಪಲಿಗೆ ಹಳದಿ ಅಂಗಿಯನ್ನು ಜೊತೆ ಮಾಡುತ್ತದೆ.
ಶಾಲೆ ಬಿಟ್ಟು ದಾರಿತುಂಬ ಕೇಕೆ ಹಾಕಿ ನಡೆದಿದ್ದ ನೀಲಿ ಅಂಗಿಗಳ ಪಾಟೀಚೀಲಗಳನ್ನು ತೋಯಿಸುತ್ತದೆ,ಪಾಟೀಚೀಲದಲ್ಲಿನ ಡ್ರಾಯಿಂಗು ಪುಸ್ತಕದ ಸ್ಕೆಚ್‌ಪೆನ್ನಿನ ಚಿತ್ರವನ್ನು ಹುಡುಕಿ ಕೆಂಬಣ್ಣದ ಮನೆಯನ್ನೂ ನೀಲಿ ಆಕಾಶವನ್ನೂ ಒಂದುಮಾಡುತ್ತದೆ,ಜಗಳ ಮಾಡಿಕೊಂಡ ಟಾಮೆಂಜರಿಗಳ ಬಾಲಗಳಾನ್ನು ಜೋಡಿಸುತ್ತದೆ,ಪಾಟೀಚೀಲಗಳನ್ನು ಎದೆಗವಚಿಕೊಂಡು ಓಡುವ ಹುಡುಗರಿಗೆಂದೇ ತಗೋ ಎಂದು ಆಡುಮಾವಿನ ಹಣ್ಣುಗಳನ್ನು ರಾಶಿ ರಾಶಿ ಬೀಳಿಸುತ್ತದೆ.ಬಿಸಿಲಲ್ಲಿ ಸುಡುತ್ತ ನಿಂತ ಗೋಡೆಯ ಚಿತ್ರಗಳನ್ನೆಲ್ಲ ತೋಯಿಸುತ್ತದೆ.ರಸ್ತೆಬದಿಯ ತುಂಬ ಬೊಂಬೆಗಳನ್ನು ಹರಡಿಕೊಂಡು ಕೂತವನನ್ನು ಪಜೀತಿಗಿಟ್ಟು ಕಾಡುತ್ತದೆ,ಬಿಸಿಲಿಗೆ ಕರಗಿದ ಕರಿಡಾಂಬರೂ ಈ ಮಳೆಗೆ ಕಾತರಿಸುತ್ತದೆ.ಬಸ್‌ಸ್ಟ್ಯಾಂಡಿನ ಬೆಂಚುಗಳನೆಲ್ಲ ತೋಯಿಸಿ ದಪ್ಪದಪ್ಪ ಹೆಂಗಸರನೆಲ್ಲ ಕಾಯಲು ನಿಲ್ಲಿಸುತ್ತದೆ. ಗಾಡಿಗಳ ಅವಸರಕ್ಕೆ ಎದ್ದು ಹೊಗೆಯಾಡುವ ಧೂಳನ್ನೆಲ್ಲ ಕೂತ್ಕೋ ಸುಮ್ಮನೆ ಎಂದು ಕೂರಿಸಿ ಮೊದಲ ಮಣ್ಣ ಕಂಪನ್ನು ಹರಡುತ್ತದೆ.ಮದುವೆ ಚಪ್ಪರದ ಒಳಗೆ ಹುಡುಗಿಯರನ್ನು ಹುಡುಕಿ ಸಣ್ಣಗೆ ಹಣುಕುತ್ತದೆ. ತಾರಸಿಯ ಮೇಲೆ ಗರಿಗರಿ ಒಣಗಿದ ಹಸಿರು,ಕೆಂಪು, ನೀಲಿ ಬಟ್ಟೆಗಳನ್ನು ರಪಾರಪಾ ತೋಯಿಸುತ್ತದೆ,ಅಮ್ಮನ ಪಕ್ಕ ಕುಳಿತ ಎರಡು ಜಡೆಯ ಪುಟ್ಟಿಯನ್ನು ಬಾಗಿ ಮುತ್ತಿಕ್ಕುತ್ತದೆ. ವರ್ಷಕ್ಕೊಂದೇ ಪಾರ್ಟಿ ಕೊಡಿಸುವ ಗೆಳೆಯ ಈ ಬಾರಿಯೂ ಬಚಾವಾಗುವಂತೆ ಮಾಡಿಬಿಡುತ್ತದೆ.ನಾಲ್ವರಿದ್ದರೆ ಮಾಡಿನ ತುಂಬ ಗದ್ದಲ, ಇಬ್ಬರಿದ್ದರೆ ಹಂಚಿಕೋ ಪ್ರೀತಿ.ಇಲ್ಲಿ ದೊಡ್ಡದೊಡ್ಡ ಹನಿಗಳ ಮಳೆ ಕಣೇ ಎಂದು ಗೆಳತಿಗೆ ಮರೆಯದೇ ಹೇಳಬೇಕೆನಿಸುತ್ತದೆ,ನಾನೂ ಬರುತ್ತೇನೆ ಕಣೋ ಎಂದು ರಚ್ಚೆಹಿಡಿಯಲಿ ಎಂಬ ಆಸೆ.ಏಕೆಂದರೆ ಈ ಮಳೇಯೇ ಹಾಗೆ.ಈಗತಾನೆ ಬಿದ್ದಮಳೆ ಕನಸೆಂಬಂತೆ ಇಲ್ಲವಾಗುತ್ತದೆ.ದೋಣಿಮಾಡಿ ಬಿಡುವ ಹಾಗೆ ಸುರಿಯದಿದ್ದರೂ ಮೇ ತಿಂಗಳ ಮಳೇಯೇ ಕೇಳಿಸಿಕೋ ನಾನು ನಿನ್ನನ್ನು ಪ್ರೀತಿಸುತ್ತೇನೆ.
('ವಿಜಯ ಕರ್ನಾಟಕ'ದ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟವಾದ ಬರಹ )
03 May, 2011
ಒಂದೇ ಬಸ್ಸಿನಲ್ಲಿ
ಸಪಾಟು ಬೀದಿಯೆಲ್ಲ
ಬಾಗಿಲು ಮೆಟ್ಟಿಲು ಅಂತ ತುಂಬಿದೆ
ಒಂದೇ ಕಡೆ ಇದ್ದವರು,ಇಲ್ಲಿ ಇಲ್ಲದವರು
ಪಾತ್ರೆ ಪಗಡಿ ಟಿಕಲಿ ಬಾಕ್ಸು
ಅಂತ ಬೇರೆ ಮನೆಮಾಡಿಕೊಂಡು
ಉಣ್ಣುತ್ತಿದ್ದಾರೆ.
ಈ ಗೋಡೆಗೂ ಎಂಥ ತಾಕತ್ತು ನೋಡಿ
ಅದರದ್ದೇ ಅಕ್ಕಪಕ್ಕ
ಎಲ್ಲ ಬದಲಾಗಿಬಿಡುತ್ತದೆ
ಆ ಕಡೆ ನಿಮ್ಮ ಫೆಮಿಲಿ
ಈಕಡೆ ನಮ್ಮದು
ಮಾತು ಮುಗಿದಾಗ ಅಗುಳಿ ಹಾಕಿಕೊಳ್ಳಿ
ಕದತೆರೆದವರು ನೆನಪುಮಾಡಿಕೊಂಡು
ನಕ್ಕರೆ ನೆನಪು ಇಲ್ಲವಾದರೆ ಯಾರೋ
ಯಾರ ನೆನಪನ್ನು ಯಾರು ಇಟ್ಟುಕೊಳ್ಳಬೇಕು
ಗಂಡ ಹೆಂಡತಿ
ಪ್ರೀತಿಯಿಂದ ಮಾತನಾಡಿ ವರ್ಷವಾಯಿತು
ಒಂದೇ ಮಾಡಿನ ಕೆಳಗಿದ್ದಾರೆ ಎಂಬುದು ನಿಜ
ಒಂದೇ ರೇಖೆಯ ಮೇಲೆ ನಡೆಯುವುದು ಕಷ್ಟಾ ಮಾರಾಯ
ಒಂದೊಂದಾಗಿ ಬಾಗಿಲ ಮರೆಯಿಂದ
ಹೊರಬಂದವರು
ಹೊಸ ಶರ್ಟು-ಪ್ಯಾಂಟು
ಅಂದುಕೊಂಡರೆ ಹೊಸಾ ಮುಖ
ಇಲ್ಲವಾದರೆ ಅದೇ ಹಳತು
ಅದೋ ಅವನ ಕೈಲಿ ಹಳೇ ಮೈಸೂರು ಸಿಲ್ಕಿನ ಪ್ಲಾಸ್ಟಿಕ್ ಕೊಟ್ಟೆ
ಹಿಂದಿನವನ ಕೈಲಿ ರೇಡಿಯೋದಂಥ ಮೊಬೈಲು
ವಾಲುವವನ ಕಣ್ಣಲ್ಲಿ ನಿನ್ನೆ ರಾತ್ರಿಯದೆ ತೇಲುವ ಜಗತ್ತು
ಕಸ ಹೊಡಿಯುತ್ತಿದ್ದವರನ್ನು ನುಣುಪಾಗಿ ದಾಟಿ
ಮಾಯವಾಗುತ್ತಿದ್ದಾರೆ ಕಪ್ಪು ಬೂಟಿನ ಮಂದಿ
ತಳ್ಳುಗಾಡಿಯ ಹುಡುಗ ಎಡಗಾಲಿನ ಹವಾಯಿ ಚಪ್ಪಲಿ ಹುಡುಕುತ್ತಿದ್ದಾನೆ
ಪಾಟೀಚೀಲ ಹಿಡಿದ ಅಮ್ಮ ಕಾಳಜಿ ಮಾಡಿದರೆ
ದೊಡ್ಡವನಾಗಿದ್ದೇನೆ ಎಂದು ಕೈ ಜಾರಿಸಿಕೊಂಡು
ಕೆಂಪುಚಡ್ಡಿಯ ಹುಡುಗ ರಸ್ತೆ ದಾಟುತ್ತಾನೆ
ಗ್ಯಾಸಿನವನು ಹತ್ತು ರುಪಾಯಿ ಕಡಿಮೆ ಅಂತ ತಗೊಂಡಿದಾನೆ
ಒಂದೇ ಬಸ್ಸಿನಲ್ಲಿ ಹೋಗಿದ್ವಿ ಅಂತ ನಕ್ಕಿದ್ದಾನೆ
ಅಲ್ಲಿ ಮೇಲೆ ಹಬ್ಬಿದ
ವಾಯರನ್ನು ಹಿಡಿದು ನಡೆದರೆ ಎಲ್ಲರೂ ನಮ್ಮವರೇ
ಬೋರಿಸರ ಅಪ್ಪ ಮಾಡಿಸಿದ್ದಲ್ವೆ
ನಮ್ಮನೆಯವರೇ ಹಬ್ಬಕ್ಕೆ ಕೊಡಿಸಿದ್ದು
ಎಂದು ನಾಚಿದ್ದಾಳೆ
ಆ ಗೋಡೆ ಈ ಗೋಡೆಯ ನಡುವೆ ನಿಂತು
ಬೇರೆ ಗೋಡೆಯ ಜನರ ಬಗ್ಗೆ ಹಂಗಂತೆ ಮಾರಾಯ್ತಿ
ಅಂತ ಕತೆ ಹೇಳಿ ಬಾಗಿಲು ಹಾಕಿಕೊಂಡು ಟಿವಿ ಹಚ್ಚಿದ್ದಾರೆ.
ಬುಧ್ಧಿವಂತನಂತೆ ಮಾರಾಯ ನೀನು
ಪ್ರೀತಿಗೀತಿ ಅಂತೆಲ್ಲ ಆಡ್ತಾರೆ ಎಲ್ಲ ಹಾರ್ಮೋನು
ಅಂತ ನಗುವುದಿದೆಯಲ್ಲ-
ಸೂಪರ್ನೋವಾ,ಕಪ್ಪು ರಂದ್ರ ಅಂತೆಲ್ಲ ಲೆಕ್ಚರ್ ಕೊಡಬೇಡ
ಒಂದು ಸಾರಿಯಾದರೂ ಶುದ್ಧ ನಕ್ಷತ್ರಗಳನ್ನು ನೋಡು.
01 March, 2011
29 January, 2011
ನೀಲಿ ಅಂತರ್ದೇಶಿ ಬಿಚ್ಚಿಟ್ಟ ನೆನಪಿನ ಗಂಟು
ನಮ್ಮ ಊರೇ ಹಾಗೆ ಮೈಲುದೂರದಲ್ಲಿ ದ್ವೀಪಗಳ ಹಾಗೆ ಒಂಟಿಮನೆಗಳು,ನಮ್ಮ ಊರಷ್ಟೇ ಅಲ್ಲ ಮಲೆನಾಡೆಂಬ ಮಲೆನಾಡಿನ ಸೊಬಗೇ ಅದು.ಕೆಲವೊಂದು ಮನೆಗಳನ್ನು ತಲುಪಲು ಒಂದಿಡೀ ಹೊತ್ತು ನಡೆಯಬೇಕು,ಬೈಕು ಸೈಕಲ್ಲುಗಳು ಎಲ್ಲೆಡೆ ಹೋದಾವೆಂಬಹಾಗಿಲ್ಲ, ಮಳೆಗಾಲವಾದರೆ ಎಂದಿನ ದಾರಿಯೆಲ್ಲ ಹಳ್ಳಕೊಳ್ಳದ ಪಾಲಾಗಿ ತಂದ ಸೈಕಲ್ಲುಗಳನ್ನು ಆಚೆಯೇ ಸುರಿವ ಮಳೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೊಸದಾರಿಯಲ್ಲೆ ನಡೆಯಬೇಕು.ಅಂತ ಊರಲ್ಲಿ ಹೊರಊರಿನೊಂದಿಗೆ ಬೆಸುಗೆಯ ಪರಮ ಸಂಪರ್ಕದ ಕೊಂಡಿಯೆಂದರೆ ಅಂಚೆಕಛೇರಿ,ಇಂದಿನ ಟೆಲಿಫೋನ್ ಯುಗದಲ್ಲೂ ಬಹಳಕಡೆ ಈ ಸ್ಥಿತಿ ಭಿನ್ನವಾಗೇನೂ ಇಲ್ಲ.ಅಂಥ ಅಂಚೆ ಕಚೇರಿಯಲ್ಲಿ ನನ್ನಪ್ಪ ಪೋಸ್ಟ್ ಮಾಸ್ತರು, ಅವನಿಗೂ- ಊರ ಜನಕ್ಕೂ ಅದು ಕೇವಲ ನೌಕರಿಯಾಗಿಯಷ್ಟೇ ಉಳಿದಿಲ್ಲ,ಅವರ ಬದುಕೆಂಬ ಬದುಕೇ ಬೆಸೆದುಕೊಂಡಿದೆ, ಎಷ್ಟರ ಮಟ್ಟಿಗೆಂದರೆ ಪೋಸ್ಟಾಪೀಸೆಂದರೆ ಭಟ್ಟರೆಂಬ ಹಾಗೆ ಅದು ಅವರ ಬದುಕಲ್ಲಿ ಹಾಸುಹೊಕ್ಕಾಗಿದೆ. ಅವನ ಯಾವ ಹೊಸ ಅಂಗಿಗೂ ಪೋಸ್ಟಿನ ಸಿಖ್ಖದ ವಿಶಿಷ್ಟ ಕರಿಮಸಿ ಹತ್ತಿಲ್ಲವೆಂಬುದಿಲ್ಲ. ಹಿಂದೆಲ್ಲ ಊರ ಶಾಲೆಗೆ ಬರುವ ಮಾಸ್ತರರನ್ನೇ ಪೋಸ್ಟ್‌ಮಾಸ್ತರರನ್ನಾಗಿ ನೇಮಿಸಿಬಿಡುತ್ತಲಿದ್ದರು, ಅಂತಿಪ್ಪ ಮಾಸ್ತರರ ಶಿಷ್ಯನಾದ ಅಪ್ಪನಿಗೆ ಹುಡುಗ ಹುಶಾರಿಯಿದ್ದಾನೆ ಎಂದು ಆ ಕಾಲದಲ್ಲಿ ಒಂದುಮಟ್ಟಿಗೆ ದೊಡ್ಡದೆಂಬಂಥ ಈ ಪೋಸ್ಟಾಪೀಸಿನ ನೌಕರಿ ಸಿಕ್ಕಿದ್ದಿತ್ತು. ಪೋಸ್ಟಾಪಿಸಿಗೆ ಬೇರೆ ಆಫೀಸಾಗಲೀ ಬಿಲ್ಡಿಂಗಾಗಲೀ ಇಲ್ಲ, ಮನೆಯ ಹೊರಗಿನ ಒಂದು ಸಣ್ಣ ಖೋಲಿಯೇ ಸಣ್ಣ ಸಣ್ಣ ಕಪಾಟು, ಟ್ರಂಕು, ಕ್ಯಾಲೆಂಡರು,ಖಾಕಿ ಚೀಲ,ತಕ್ಕಡಿ-ತೂಕದ ಕಲ್ಲು, ಠಸ್ಸೆಯ ಬಾಕ್ಸು ಹೀಕೆ ಸಕಲ ಅಲಂಕಾರಿಕ ಸಲಕರಣೆಯನ್ನು ತನ್ನಲ್ಲಿ ಹರಡಿಕೊಂಡು ಒಂದು ಚಿಕ್ಕ ಕೆಂಬಣ್ಣದ ಬೋರ್ಡನ್ನು ಹೊರಗೋಡೆಗೆ ತಗುಲಿಹಾಕಿಕೊಂಡು ಪೋಸ್ಟಾಪೀಸಾಗಿ ರೂಪುಗೊಂಡುಬಿಟ್ಟಿತ್ತು.ಹಾಗಾಗಿ ಪೋಸ್ಟಾಪೀಸು ಮನೆಯ ಅವಿಭಾಜ್ಯ ಅಂಗವೂ ಆಗಿತ್ತು.
ಅಂಥ ಊರುಗಳಲ್ಲಿ ಈ ಅಂಚೆಯಣ್ಣನ ಕೆಲಸ ಬರೀ ಪತ್ರಹಂಚುವುದಕ್ಕಷ್ಟೇ ಸೀಮಿತವಾಗಿರುವುದಿಲ್ಲ, ಹೆಚ್ಚೂಕಡಿಮೆ ಎಲ್ಲ ಮನೆಗಳಿಗೂ ತಿರುಗುವವನಾದ್ದರಿಂದ ಅಪ್ಪನ ಬಳಿ ಊರಿನ ತಾಜಾ ಸುದ್ದಿಗಳಿರುತ್ತವೆ. ಅಲ್ಲೆಲ್ಲೋ ಹೊಸದಾಗಿ ಟಾರುರಸ್ತೆ ಮಾಡುತ್ತಿರುವ ಬಗ್ಗೆ, ದೊಡ್ಡಮನೆಯ ಶಿವರಾಮಣ್ಣ ಬೋರ್ವೆಲ್ಲ್ ಹೊಡೆಸುತ್ತಿರುವ ಬಗ್ಗೆ, ಶಂಕರಭಾವನ ಮಗಳನ್ನು ಪೇಟೆಯ ಗಂಡಿನ ಕಡೆಯವರು ನೋಡಲು ಬಂದ ಗುಟ್ಟಿನ ಸುದ್ದಿಯಿಂದ ಹಿಡಿದು ಮೇಲಿನ ಬಜೆಮನೆ ಕೆರೆಯಲ್ಲಿ ಸಿದ್ದಿ ಹುಡುಗರು ಮೀನುಹಿಡಿಯುತ್ತಿರುವುದು, ದೇವಸ್ತಾನದ ಆಚೆಗಿನ ದೊಡ್ಡಮರಕ್ಕೆ ಜೇನುಬಂದಿದ್ದು, ಒಮ್ಮೊಮ್ಮೆ ಕಬ್ಬಿನ ಗದ್ದೆಯ ಕಡೆ ಬಂದ ಆನೆಯ ವಿಷಯದವರೆಗೆ.ಯಾರಯಾರಮನೆಯಲ್ಲಿ ಯಾರ್ಯಾರಿಗೆ ಓಟುಹಾಕುವ ಬಗ್ಗೆ ಮಾತು ನಡೆಯುತ್ತಿದೆ ಎಂಬ ಪಂಚಾಯತ್ ಚುಣಾವಣೆಗೆ ನಿಂತವರು ಕೇಳುವ ಒಳವಿಚಾರಗಳಿಂದ ಹಿಡಿದು 'ಎಲ್ಲಾದರೂ ಒಳ್ಳೇ ಹೋರಿ-ಮಣಕ ಕೊಡುವ ಸುದ್ದಿ ಗೊತ್ತಾದ್ರೆ ಹೇಳೋ' ಎನ್ನುವವರೂ ಇರುತ್ತಿದ್ದರು. ಅದರದ್ದೇ ವಿಶಿಷ್ಟವಾದ ಖಾಕಿ ಚೀಲಗಳಲ್ಲಿ ದಿನವೂ ಬರುವ ಪತ್ರಗಳಲ್ಲೂ ಬಹಳ ವೆರಾಯಿಟಿ;ದೊಡ್ಡ ಜಮೀನ್ದಾರರಿಗಷ್ಟೇ ಬರುವ ಬ್ಯಾಂಕಿನ ಅಢಾವೆ ಪತ್ರಿಕೆಗಳೂ,ಬೇಡವೆಂದರೂ ಬರುತ್ತಲೇ ಇರುವ ಬ್ಯಾಂಕಿನ,ಎಲ್‌ಐಸಿಯ ನೋಟೀಸುಗಳು,ಪ್ರೀತಿಯ ಜಾನ್ಹವಿಗೆ ಪೇಟೆಯಲ್ಲಿ ಕೆಲಸಕ್ಕಿರುವ ಪ್ರಕಾಶ ಬರೆದ ಪ್ರೇಮಪತ್ರವೂ,ಡೇಟ್‌ಬಾರ್ ಆದ ಇನ್ವಿಟೇಷನ್‌ಗಳು, ಸಣ್ಣ ಪುಟ್ಟ ಹಸಿರು,ಹಳದಿ ಪತ್ರಗಳು,ಸರಕಾರಿ ಪತ್ರಗಳು ಹೀಗೆ ಹಲವು ಉಸಿರಿನ ಭಾವನೆಗಳನ್ನು, ಕತೆಗಳನ್ನು ತನ್ನೊಡನೆ ಹೊತ್ತುತರುತ್ತವೆ.
![]() |
| ಪೋಸ್ಟಾಪೀಸಿನಲ್ಲಿ ಅಪ್ಪ |
ನಾನು ದೂರದೂರಿನ ಕಾಲೇಜು ಸೇರಿದ ಆರಂಭದ ದಿನಗಳಲ್ಲಿ ಮನೆಗೆ ಪತ್ರಬರೆಯುವುದನ್ನೂ, ಕೆಲವೊಮ್ಮೆ ಹಾಸ್ಟೆಲಿನ ಗೆಳೆಯರಿಗೆ ಪೋಸ್ಟ್‌ಮಾಡಿ ಎಂದು ಪತ್ರಗಳನ್ನು ಕೊಡುವಾಗ ವಿಚಿತ್ರ ಹಾಗೂ ಅಚ್ಚರಿ ಎಂಬಂತೆ ನೋಡುತ್ತಿದ್ದರು,ಆದರೆ ನಾನು ಮಾತ್ರ ಪ್ರತೀ ಸಲ ಮನೆಗೆ ಹೋದಾಗ ಖಾಲಿ ಅಂತರ್ದೇಶಿ ಪತ್ರಗಳನ್ನು ತರಲು ಮರೆಯುತ್ತಿರಲಿಲ್ಲ.ನನ್ನ ಹೆಸರಿಗೆ ಬರುತ್ತಿದ್ದ ಮನೆಯವರ ಹಾಗೂ ಅದೂ ಇದು ಪತ್ರಗಳಿಂದ ನನಗೆ ಅಲ್ಲಿನ ಪೋಸ್ಟ್‌ಮಾಸ್ತರರೂ ಪರಿಚಯವಾಗಿದ್ದಿತ್ತು, ಅಂತ ಪತ್ರಗಳಿಗೆ ಕಾಯುತ್ತಿದ್ದ ದಿನಗಳಿದ್ದವು. ನಾವಂತೂ ಪತ್ರಬರೆಯುವ ಹೊಸವಿಧಾನಗಳನ್ನು ಸೃಸ್ಟಿಸಿದ್ದೆವು, ಅದೊಂಥರಾ ಸಾಪ್ತಹಿಕ ದಿನಪತ್ರಿಕೆಯಂತೆ ಬಹಳಷ್ಟು ಸಂಗತಿಗಳನ್ನು ಒಳಗೊಂಡಿರುತ್ತಿತ್ತು. ನಂತರದ ದಿನಗಳಲ್ಲಿ ಮೊಬೈಲುಗಳು ಕೈಸಿಕ್ಕಿ ಪತ್ರಬರೆಯುವುದೇ ಮರೆತು ಹೋಗಿದೆ. 'ನಾನು ಕ್ಷೇಮ, ನಿಮ್ಮ ಕ್ಷೇಮಸಮಾಚಾರ ತಿಳಿಸಿ' ಎಂದೆಲ್ಲ ಹೇಳುವ ಪತ್ರಗಳು ಗಿಗಾಬೈಟಿನ ಸ್ಪೀಡಿನ ಎಲೆಕ್ಟ್ರಾನ್ ಯುಗದಲ್ಲಿ ಬಾಲಿಶವಾಗಿಯೂ ಹಳತಾಗಿಯೂ ಕಾಣುವುದೂ ಹೌದು.ಪಟ್ಟುಬಿದ್ದು ಬರೆಯುತ್ತೇನೆಂದರೆ ಹಳೆಪ್ರೀತಿಯ ನೆನಪಲ್ಲಷ್ಟೇ ಬದುಕುತ್ತಿರುವ ಗಂಡಹೆಂಡತಿಯ ಈಗಿನ ಪ್ರೀತಿಯಂತಾಗಿಬಿಡಬಹುದಷ್ಟೆ. ನಮ್ಮದೇ ಸ್ವಂತ ವಿಳಾಸಗಳಿಲ್ಲದ ಈ ನಗರಿಯಲ್ಲಿ ನನ್ನ ಮೂಲೆಸೇರಿದ ಸೂಟ್‌ಕೇಸಿನಲ್ಲಿನ ನೀಲಿಬಣ್ಣದ ಅಂತರ್ದೇಶಿಯೊಂದು ಕಂಡು ಇದನ್ನೆಲ್ಲ ಮತ್ತೆ ನೆನಪಿಸಿತು. ತನಗಿಲ್ಲದ ವಿಳಾಸದಲ್ಲಿನ ನೂರು ಮುಖಗಳ ಹಾಗೆ ಕಣ್ಣ ಮುಂದೆ ಅಪ್ಪನ ದೈನಿಕದ ಕೆಲ ದೃಶ್ಯಗಳು ನನ್ನಪಾಲಿನ ಎಲ್ಲಕ್ಕೂ ಮೀರಿದ ಜೀವನಪ್ರೀತಿಯ ಚಲಿಸುವ ಚಿತ್ರಗಳಂತೆ ಹಾದು ಹೋದವು.
ಅಪ್ಪ ಬೆಳ್ಳಂಬೆಳಗ್ಗೆಯೇ ತನ್ನ ನೆಚ್ಚಿನ ಪೋಸ್ಟಾಪೀಸಿನಲ್ಲಿ ಎಂದಿನ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾನೆ. ಎದುರಿಗೆ ಠಸ್ಸೆಯ ಡಬ್ಬ,ಪಕ್ಕದಲ್ಲಿ ಅರಗಿನ ಸೀಲುಮಾಡಲು ಬೇಕಾಗುವ ಸಣ್ಣ ಲಾಟೀನು ದೀಪ ಹಗಲಲ್ಲೂ ಸಣ್ಣಗೆ ಉರಿಯುತ್ತಿದೆ. ಟಕ್ಕ-ಟಕ್ಕ ಟಕ ಎಂಬ ಠಸ್ಸೆಯ ಸದ್ದು ಮಾತ್ರ ಹಳ್ಳಿಯ ಆ ಎಲ್ಲ ಪತ್ರಗಳಿಗೆ ಪೇಟೆಯಕಡೆಹೋಗುವ ಕಟ್ಟಕಡೆಯ ಪರವಾನಿಗೆಯನ್ನು ಸಾಕಾರಗೊಳಿಸುತ್ತ ಮೆಲ್ಲಗೆ ಕಣ್ಣೊಡೆಯುತ್ತಿರುವ ಪರಮ ಆಲಸಿ ಹಗಲಿನಲ್ಲಿ ಒಂದು ಕಾಯಕದ ದಿವ್ಯಗಳಿಗೆಯ ರೂಪಕದಂತೆ ಹರಡಿಕೊಳ್ಳುತ್ತಲಿದೆ.
'ಅಜ್ಜೀ, ನಿನ್ನಮಗ ಹಣ ಕಳುಹಿಸಿದ್ದಾನೆ' ಎನ್ನುತ್ತ ಮನಿಆರ್ಡರ್ ಕೊಡಬಂದ ಪೋಸ್ಟ್‌ಭಟ್ಟರ ಬಳಿ ಮಗ ಮತ್ತೇನಾದರೂ ಬರೆದಿದ್ದಾನೆಯೇ ಎಂದು ಗೌರಜ್ಜಿ ಬೊಚ್ಚುಬಾಯಿಯಲ್ಲಿ ಕೇಳಿದ್ದಾಳೆ, ಮಗ ಏನೂ ಬರೆದಿಲ್ಲವೆಂಬುದು ಗೊತ್ತಿದ್ದ ಪೋಸ್ಟ್‌ಭಟ್ಟರು ವಿಷಯ ಮರೆಸಲು ನಿನ್ನ ಮಂಡಿನೋವು ಹೇಗಿದೆ ಎಂದು ಕೇಳುತ್ತಿದ್ದಾರೆ. ಮೆತ್ತಗೆ ನಗುತ್ತಾ ಅಜ್ಜಿ ತನ್ನ ಕವಳದ ಸಂಚಿಯಿಂದ ತೆಗೆದ ಐದರ ನಾಣ್ಯವನ್ನು ಬೇಡವೆಂದರೂ ಭಟ್ಟರ ಕೈಲಿ ಹಿಡಿಸುತ್ತಿದ್ದಾಳೆ.
'ಹೋಯ್ ಶಂಕ್ರಜ್ಜ ನಿನಗೇನೋ ಪತ್ರ ಬಂದಿತ್ತಂತೆ ಪೋಸ್ಟ್‌ಭಟ್ಟರು ನಿನ್ನ ಹುಡುಕ್ಕಬಂದಿದ್ರು, ಹೋಗಿ ನೋಡಿ ಬಾ' ಎಂದ ಮಾಬ್ಲನ ಮಾತಿಗೆ ತನ್ನನ್ನು ಪೇಟೆಗ ಕರೆಯಿಸಿಕೊಳ್ಳುತ್ತೇನೆಂದು ಹೇಳಿ ಹೋದ ಮಗನೇ ಬರೆದ ಪತ್ರವಿರಬೇಕು ಎಂದುಕೊಂಡು ಎಲ್ಲಿಯದೋ ಒಂದು ಆಪ್ತವಾದ ಜೀವದುಸಿರಿನ ಬುತ್ತಿಯಂತ ಆಸೆಯಲ್ಲಿ ಪತ್ರವನ್ನು ಭಟ್ಟರಲ್ಲಿಯೇ ಓದಿಸುವಾ ಎನ್ನುತ್ತಾ ಪೋಸ್ಟ್‌ಭಟ್ರಮನೆಗೇ ಬಂದು ಬಟವಾಡೆಗೆ ಹೋದ ಭಟ್ಟರ ಬರುವನ್ನೇ ಕಾಯುತ್ತಿದ್ದಾನೆ,ಪೋಸ್ಟ್‌ಭಟ್ಟರು ಮಧ್ಯಾನ್ನವಾದರೂ ಬರದಿದ್ದಾಗ 'ಅವ ಹೋದಲ್ಲೇ ಬಾಕಿಯಾಗಿರಬೇಕು' ಎನ್ನುತ್ತ ಭಟ್ಟರ ಅಮ್ಮ ಬಡಿಸಿದ ಊಟಮಾಡಿದ ಶಂಕ್ರಜ್ಜ ಕೂತಲ್ಲಿಯೇ ಮಧ್ಯಾನ್ಹದ ಜೋಂಪು ನಿದ್ರೆಗೆ ಜಾರಿದ್ದಾನೆ.
'ಏನು, ಕಾರ್ಯಕ್ರಮ ಮುಗಿದನಂತರ ತಂದುಕೊಡುತ್ತೀರಲ್ಲ ಈ ಪತ್ರವನ್ನು' ಎಂದು ಸಿಡಿಮಿಡಿಗುಟ್ಟ ಗೋಪಾಲಣ್ಣನಿಗೆ ಅದು ನಮ್ಮ ಪೋಸ್ಟಿಗೂ ಇಂದೇ ಬಂದದ್ದು ಮಾರಾಯ ಎಂದು ಹೇಳಲೂ ಆಗದೇ ಅಪ್ಪ ಹೊರಬಂದಿದ್ದಾನೆ, ಶನಿವಾರದ ಶಾಲೆ ಮುಗಿಸಿ ಬಂದ ಕುಣಬಿಯ ಹುಡುಗನೊಬ್ಬ ದಣಪೆಯ ಹೊರಗೆ ನಿಲ್ಲಿಸಿದ್ದ ಪೋಸ್ಟ್‌ಭಟ್ಟರ ಸೈಕಲ್ಲಿನ ಸ್ಟ್ಯಾಂಡ್ ತೆಗೆದಿದ್ದಾನೆ,ತನ್ನಳತೆಗಿಂತ ದೊಡ್ಡದಾದ ಸೈಕಲ್ಲನ್ನು ಹಿಡಿದು ನಿಲ್ಲಿಸಿ ಹತ್ತಿ ಪೆಡಲ್ ತುಳಿಯತೊಡಗಿದ್ದಾನೆ,ಇನ್ನೊಂದೇ ರೌಂಡು ಎನ್ನುತ್ತ ಮೂರ್ನಾಲ್ಕು ರೌಂಡ್ ಮುಗಿಸಿ ರೊಯ್ಯೆಂದು ಪತ್ರ ಕೊಟ್ಟು ಬಂದ ಅಪ್ಪನ ಬಳಿಯೇ ತಂದು ನಿಲಿಸಿದ್ದಾನೆ,ತುಸು ಅಂಜಿಕೆಯಿಂದ ಕೂಡಿದ ಅವನ ಮುಖದಲ್ಲಿನ ಪುಟ್ಟ ಮಾಯದ ನಗುವೊಂದು ನೀರವವನ್ನು ದಾಟಿ ನಿಧಾನವಾಗಿ ಅಪ್ಪನ ಮೋರೆಯನ್ನು ತಾಕಿಕೊಂಡು ಸಣ್ಣಗೆ ಅರಳತೊಡಗಿದೆ.
ಅಪ್ಪ ದೂರದ ನಾಗರಕಾನಿನ ಕಾಡಿನಲ್ಲಿರುವ ಪುನಿಯಜ್ಜನ ಪಾಲಿನ ಸರ್ಕಾರದ ಕಡೆಗಿನ ಅತಿದೊಡ್ಡ ಸಹಾಯವಾದ ವೃದ್ಧಾಪ್ಯ ವೇತನವನ್ನು ಕೊಡಹೋದವನು ಜೋರುಮಳೆಯಲ್ಲಿ ತೊಯ್ದುಬಂದಿದ್ದಾನೆ,ಅವನು ತನ್ನ ತೊಯ್ಯುವಿಕೆಯನ್ನೂ ಮರೆತು ಜೊತೆಗೆ ಒಯ್ದಿದ್ದ ಉಳಿದ ಪತ್ರಗಳನ್ನೆಲ್ಲ ಒಂದುರೀತಿಯ ಭಯದಿಂದ ಕೂಡಿದ ಕಾಳಜಿಯಲ್ಲಿ ಒಂದೊಂದನ್ನೆ ಹರವುತ್ತಿದ್ದರೆ,ಶಾಲೆಯಿಂದ ಅಮ್ಮನ ಜೊತೆ ಮನೆಗೆ ಬರುವಾಗ ಸಂಜೆಮಳೆಗೆ ಅರ್ಧಂಬರ್ಧ ತೊಯ್ದ ಇನ್ನೂ ಆಡುವ ಮೂಡಿನಲ್ಲೆ ಇರುವ ಪುಟಾಣಿಗಳಂತೆ ಕಾಣುತ್ತಿವೆ ಆ ಪತ್ರಗಳು.
16 January, 2011
10 January, 2011
ಮನೆ ಹುಡುಕುತ್ತಿದ್ದಾರೆ
ಮನೆ ಹುಡುಕುತ್ತಿದ್ದಾರೆ
ಅವರಿವರ ಕೇಳುತ್ತಿದ್ದಾರೆ
ಈ ಮೊದಲು ನೋಡಿದ್ದಾರೋ
ನೊಡಿದ್ದರೂ ಆಗಿದ್ದ ಮನೆ
ಈಗಲೂ ಹಾಗೇ ಇದೆಯೋ ಗೊತ್ತಿಲ್ಲ
ಜನರೂ ಅಷ್ಟೆ
ತಮಗೆ ತಿಳಿದ ಹಾಗೆ ತೋರಿಸುತ್ತಿದ್ದಾರೆ
ಆಚೆಬದಿಗೆ,
ಓಯ್-ಆ ಮೂಲೆಯಲ್ಲಿ ನೀರಿನ ಟಾಂಕಿಯ ಹಿಂದೆ
ಹೀಗೆ ಎಲ್ಲೆಲ್ಲೊ
ಇವರೂ ಕನಸ ಕಟ್ಟಿ
ಬದುಕ ಹುಡುಕಿದಂತೆ
ಹಂಚಿಲ್ಲದ ಮನೆಯಲ್ಲಿ
ನಕ್ಷತ್ರ ಕಾಣುತ್ತ ಮಲಗಿದವರನ್ನ,
ರೇಲ್ವೆ ಸ್ಟೇಷನ್ನಿನಲ್ಲಿ ನಡುಗುತ್ತ ಮಲಗಿದವರನ್ನ
ಹೊದೆಸಿದ ಮಾಡಿನ ಜೊತೆ ಎಂದೋ
ರಾತ್ರಿ ಕನಸ ಮರೆತವರನ್ನ ಕೇಳುತ್ತಿದ್ದಾರೆ
ಕಟ್ಟಿದ ಮನೆಯೊಳಗೆ ಚಹರೆ ಮರೆತ ಜನರನ್ನ
ಸಾಲು ತೂತಿನ ರಂಗಿನರಮನೆಯ ಬಾದಷಹರನ್ನ
ಸುಖಗಳನು ಮನೆಯೊಳಗೆ ಅಡಗಿಸಿ ಬಚ್ಚಿಟ್ಟವರ
ಪುರಸೊತ್ತು ಕಳೆದುಹೋದ ಯಂತ್ರದಂತ ಮಾನವರನ್ನ
ಮನೆ ತೋರಿಸಿಯಾರೆಂದು ಆಸೆಯಿಂದ ಕೇಳುತ್ತಿದ್ದಾರೆ
ಯಾರದೋ ಭ್ರಮೆಯಂತ ಮನೆಯನೆಲ್ಲ ತಮ್ಮದೇನೊ ಎನ್ನುತ್ತ
ಅವರು ಮನೆ ಹುಡುಕುತ್ತಿದ್ದಾರೆ
ಮೊನ್ನೆಯಷ್ಟೆ ಮುನ್ಸಿಪಲ್‍ನವರು
ಕೆಡವಿದ ಮನೆ ಅದೇ ಆಗಿತ್ತೇ?
ಇಲ್ಲ ಅಂದು ಗಲಭೆಯಲ್ಲಿ ಸುಟ್ಟು
ಹೊಗೆಯಾಡಿ ಕರಕಲಾದ ಮನೆ..
ಎಂದೋ ಉದುರಿದ ಇಟ್ಟಿಗೆ ಚೂರುಗಳಲ್ಲಿ
ಮಣ್ಣಗೋಡೆಗಳಲ್ಲಿ ಅವರ ಮನೆಯಿದ್ದರೆ
ತೋರಿಸಿಬಿಡಿ
ಹಗಲುರಾತ್ರಿಗಳ ಕನಸಿನಲ್ಲಿ
ಎಲ್ಲಾದರೂ ಅವ್ಯಕ್ತದೊಳಗಿನ ವ್ಯಕ್ತದಂತೆ
ನೆನಪಿನ ಚಹರೆಯ ಹಾಗೆ
ಅವರು ಹುಡುಕುತ್ತಿರುವ ಮನೆಯೇನಾದರೂ
ಕಂಡರೆ ಪಾಪ..
ಅವರಿಗೆ ತೋರಿಸಿಬಿಡಿ
ಸಿಕ್ಕಮರ ತಬ್ಬಿ ಬೆಳೆದ ಅವರಿಗೆ
ಪಾಪಿಗಳಿಂದೊಂದಿಷ್ಟು ರಕ್ಷಿಸುವ
ಬೇಲಿಯಂಥ ಮನೆಯೊಂದಿದ್ದರೆ ತೋರಿಸಿಬಿಡಿ
ಪರಸ್ಪರರ ಸುಳ್ಳುಗಳಿಂದ,
ಆಡಿಕೊಳುವ ಬಾಯಿಯಿಂದ ತಪ್ಪಿಸಿಕೊಳ್ಳಲು
ಮನೆಯೊಂದಿದ್ದರೆ ತೋರಿಸಿಬಿಡಿ
ಎಲ್ಲ ಬೆಸೆಯುವ ಸೂತ್ರದ ಹಾಗೆ
ನೀಲಾಕಾಶದಡಿ
ಶಬ್ಧ ನಿಶ್ಯಬ್ಧಗಳಲ್ಲಿಯಾದರೂ
ಅವರಿಗೊಂದು ಮನೆ ಹುಡುಕಿಕೊಡಿ
ಜಾತಿಗಳ ಹಂಗಿಲ್ಲದೆ
ನಾಳೆಗಳಿಗೆ ನಡೆಸುವಂಥ
ಪುಟ್ಟ ಮನೆಯೊಂದಿದ್ದರೆ
31 December, 2010
ಕನಸಿಗೊಂದು ವಿಳಾಸ ಸಿಕ್ಕ ಖುಶಿಯು
ಉಪಗ್ರಹಕ್ಕೆ ಕನಸಿನ ರೆಕ್ಕೆಗಳಿವೆ
ಕತ್ತಲಲ್ಲಿ ಮರೆತ ಬಟ್ಟೆಗಳು
ರಾತ್ರಿಯ ಜೊತೆ ಕನಸು ಕಾಣುತ್ತಿವೆ
ಒಳಗೆ ಇಸ್ತ್ರಿ ಮಾಡಿಟ್ಟ ಬಟ್ಟೆಗಳು
ಸೆಕೆಗೆ ಬೆವತಿವೆ
--
ಹಗಲು ರಾತ್ರಿ ವ್ಯತ್ಯಾಸ ಗೊತ್ತಾಗದ
ರಾತ್ರಿಪಾಳಿಯ ಹುಡುಗನ ಕೆಂಪುಕಣ್ಣಿನಲ್ಲಿನ
ಹಗಲಿನ ಕನಸುಗಳಿಗೆ ಯಾವ ಪದಗಳೂ ಇಲ್ಲ
--
ಆ ಎಲ್ಲ ನಕ್ಷತ್ರಕಡ್ಡಿ ಹೊತ್ತಿಸುವ
ಕನಸುಗಳು ಕಳೆದಿದ್ದು
ಟಿವಿ ನ್ಯೂಸಲ್ಲಿ ಮೈಮುರಿಯುತ್ತಿರುವ
ಇದೇ ಪೇಟೆಯಲ್ಲಿ
--
ಊರೂರು ಸುತ್ತುವ ಲಾರಿಗೆ ಮಾತ್ರ
ಯಾವ ಊರಿನ ಹೆಸರೂ ನೆನಪಿಲ್ಲ
--
ಶಾಪಿಂಗ್ ಮಾಲಿನ
ಬಾಗಿಲು ತೆರೆದುಕೊಳ್ಳುವ ಹೊತ್ತಿಗೆ
ಹಳ್ಳಿ ಹುಡುಗ ಕಂಡ ಕನಸಿನ
ವಿಳಾಸ ಹುಡುಕಿ ಅಲೆಯುತ್ತಿದ್ದಾನೆ
--
ಹೈವೆಬದಿಯ ತಂದೂರಿ ರೊಟ್ಟಿ ಸುಡುವ
ಹುಡುಗನಿಗೆ ಮಾತ್ರ ಎಲ್ಲ ದೊಡ್ಡ ಲಾರಿಗಳ
ನೆನಪಿದೆ
--
ಸುಮ್ಮನೆ ಕರೆದುನೋಡು
ನೀನಿದ್ದಲ್ಲಿಗೇ ಬರುತ್ತದೆ,
ಭೂಗೋಳದ ನೆತ್ತಿಯ ಮೇಲೆ ಸುತ್ತುವ
ಉಪಗ್ರಹಕ್ಕೆ ಕನಸಿನ ರೆಕ್ಕೆಗಳಿವೆ.
____________________________
[ಅಡಿಟಿಪ್ಪಣಿ: ನನಗನಿಸಿದ ಸಾಲುಗಳನ್ನು ಹಾಗೇ ಬರೆದಿಟ್ಟಿದ್ದೆ, ಒಂದೇ ಶೀರ್ಶಿಕೆಯಡಿ ಬರುವಂಥದ್ದನ್ನೆಲ್ಲ ಜೋಡಿಸಿದಾಗ ಕವಿತೆಯ ತರ ಕಂಡು ನಾಲ್ಕು ತಿಂಗಳ ಹಿಂದೆ 'ಮಯೂರ'ಕ್ಕೆ ಕಳುಹಿಸಿದ್ದೆ,ಪುಣ್ಯಕ್ಕೆ ಸಂಪಾದಕರಿಗೂ ಹಾಗೇ ಅನಿಸಿ ಈ ಜನವರಿ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ.ಕಳುಹಿಸಿಯಾದ ನಂತರ ಇದನ್ನು ಇನ್ನಷ್ಟು ತಿದ್ದಿ ತೀಡಿದ್ದರೆ ಕವಿತೆಯಾಗಬಹುದಿತ್ತು ಅನ್ನಿಸಿತ್ತು,ಹಾಗೆ ತಿದ್ದಿದಾಗಲೂ ಏನೂ ಸುಧಾರಣೆ ಕಾಣದೆ ಕವಿತೆಯಾಗಿಸುವ ಅಸೆ ಕೈಬಿಟ್ಟು ಇಲ್ಲಿನ ಕೆಲ ಸಾಲುಗಳ ಜೊತೆ ಉಳಿದ ಕೆಲವನ್ನೂ ಸೇರಿಸಿ ಕನಸಿನ ವಿಳಾಸಕ್ಕಾಗಿ ಎಂಬ ಶೀರ್ಶಿಕೆಯಡಿ ಬ್ಲಾಗಿನಲ್ಲಿ ಪೋಸ್ಟ್ ಮಾಡಿದ್ದೆ. ಮಯೂರದಲ್ಲಿ ನನ್ನ ಕವನ ನೋಡುವುದು ನನ್ನ ಬಹುದಿನದ ಹಂಬಲವಾಗಿತ್ತು, ಅಲ್ಲಿ ಪ್ರಕಟವಾದ ಕವಿತೆಯ ಜೊತೆಗೇ ನಾನು ತಿದ್ದಿಟ್ಟಿದ್ದ ಕವಿತೆಯಂಥದ್ದನ್ನೂ ಇರಲಿ ಎಂದು ಇಲ್ಲಿ ಹಾಕಿದ್ದೇನೆ. ಯಾವುದಕ್ಕೂ ನಿಮ್ಮ ಅನಿಸಿಕೆ/ಸಲಹೆ ತಿಳಿಸಿ]
ಕ್ಯಾಲೆಂಡರಿನ ಲೆಕ್ಕದಲ್ಲಿ ಮತ್ತೊಂದು ಇಸವಿಯನ್ನು ಹಿಂದೆ ತಳ್ಳುತ್ತ ಹೊಸದೊಂದು ನಾಳೆಗೆ ತೆರೆದುಕೊಳ್ಳುವ ಸಮಯದಲ್ಲಿ ನಿಮ್ಮನ್ನೆಲ್ಲ ನೆನೆಯುತ್ತ,ಹೊಸ ಹುರುಪೊಂದು ಅನುದಿನವೂ ನಿಮ್ಮ ಕೈಹಿಡಿದು ನಡೆಸಲೆನ್ನುವ ಆಶಯದೊಂದಿಗೆ ಈ ವರ್ಷಕ್ಕೆ ಕೋರುವ ವಿದಾಯವು.
22 December, 2010
ಗಾಳಿಗೆ ತಡೆದ ಗೀಜುಗನ ಗೂಡಾಗಿ
ಎಲ್ಲ ಮರೆತು ಹೋಗಿತ್ತು
ಜಂಜಡವೇ ಬದುಕಾಗಿ
ಏನೋ ನೆನಪಾಗಿ ಹೋಗಿ ನೋಡಿದರೆ
ಗೀಜುಗನ ಗೂಡು ಹರಿದು ಬಿದ್ದಿತ್ತು
ಮೊಟ್ಟೆ ಮರಿ ಎಲ್ಲಿ ಹೋದವು?
ಜಂಜಡವೇ ಬದುಕಾಗಿ
ಏನೋ ನೆನಪಾಗಿ ಹೋಗಿ ನೋಡಿದರೆ
ಗೀಜುಗನ ಗೂಡು ಹರಿದು ಬಿದ್ದಿತ್ತು
ಮೊಟ್ಟೆ ಮರಿ ಎಲ್ಲಿ ಹೋದವು?
ಅಲ್ಲಲ್ಲಿ ಹಾರುತ್ತ ಚಿಲಿಪಿಲಿ ಕೂಗುತ್ತ
ಅನುಕ್ಷಣವೂ ಜೀವದುಸಿರಿನಂತೆ
ಅಂಟು ಗಂಟಿಲ್ಲದ ಬರೀ ನಂಟಿನ
ಗೀಜುಗನ ಗೂಡಿತ್ತಲ್ಲ
ಅನುಕ್ಷಣವೂ ಜೀವದುಸಿರಿನಂತೆ
ಅಂಟು ಗಂಟಿಲ್ಲದ ಬರೀ ನಂಟಿನ
ಗೀಜುಗನ ಗೂಡಿತ್ತಲ್ಲ
ಒಡಲೊಳಗಣ ಕನಸೆಲ್ಲ ನನಸಾದ ಹಾಗೆ
ತುದಿಟೊಂಗೆಗೆ ಜೋತುಬಿದ್ದ
ಸುಳಿವ ಗಾಳಿಯ ದನಿಯಾಗಿ
ಗೀಜುಗನ ಗೂಡಿತ್ತಲ್ಲ
ಕನಸಿನ ಚಿಲಿಪಿಲಿಯೆಲ್ಲ ಬೇಸರವಾಗಿ
ಗಾಳಿಮರ ಮರೆತು ಹಾರಿದವೆ ಗೀಜುಗ
ಸ್ತಬ್ಧ ಗಾಳಿಯನಷ್ಟೆ ಉಳಿಸಿ
ಮರದ ನಂಟು ಮುಗಿದ ಹಾಗೆ
ಇಲ್ಲ ಹಕ್ಕಿ ಗೂಡು ಬಿಡಲಿಲ್ಲ,ಹಕ್ಕಿಯ ಉಸಿರು ಬೀಳಲಿಲ್ಲ.ಒಮ್ಮೆ ತೆರೆದರೆ ಮುಚ್ಚಿದ ಕಣ್ಣು ನಮ್ಮೊಳಗನ ಒಳಗಾಗಿ ಕಾಣುವುದು ಗೀಜುಗನ ಗೂಡು.ಸೋತ ಭಾರದ ಬದುಕು ಹಗುರಾಗಿ ನಿರಮ್ಮಳ ಕೂರಲು ಗೂಡು ಸಿಗಬಹುದು,ನಿರಾಳ ಬಯಲಲ್ಲೂ ಸುಳಿವ ಗಾಳಿಯ ಹಾಡಾಗಿ.ಜೀವದೆಳೆ ಜೊತೆಯಾಗಿ ಇರಬಹುದು ಗಾಳಿಗೆ ತಡೆದು.ಇಲ್ಲ ಹಕ್ಕಿ ಗೂಡು ಬೀಳಲಿಲ್ಲ, ಹಕ್ಕಿ ಗೂಡ ಬಿಡಲಿಲ್ಲ.
ನಮ್ಮ ನಡುವಿನ ನಂಟ ಹೊಲಿದರೆ
ಆಸೆಬುರುಕು ಹಸಿವ ಕಳೆದರೆ
ಕಂಡ ಕನಸು ಚಿಂವ್ವೆನ್ನುತ್ತ
ನಮ್ಮ ನಡೆಸೀತು ನಾಳೆಗಳಿಗೆ
ಎದೆಯ ದುಗುಡ ಮರೆಸುವ ಜೋಗುಳದಂತೆ
ಅನುದಿನವೂ ಗೀಜುಗನ ಹಾಡು ಸಿಕ್ಕೀತು
ಬದುಕು ನಿಂತೀತು ಗಾಳಿಗೆ ತಡೆದ ಗೂಡಾಗಿ
ಆಸೆಬುರುಕು ಹಸಿವ ಕಳೆದರೆ
ಕಂಡ ಕನಸು ಚಿಂವ್ವೆನ್ನುತ್ತ
ನಮ್ಮ ನಡೆಸೀತು ನಾಳೆಗಳಿಗೆ
ಎದೆಯ ದುಗುಡ ಮರೆಸುವ ಜೋಗುಳದಂತೆ
ಅನುದಿನವೂ ಗೀಜುಗನ ಹಾಡು ಸಿಕ್ಕೀತು
ಬದುಕು ನಿಂತೀತು ಗಾಳಿಗೆ ತಡೆದ ಗೂಡಾಗಿ
2006
[ಅಡಿ ಟಿಪ್ಪಣಿ: ಇದು ನಾಲ್ಕು ವರ್ಷದ ಹಿಂದೆ ಬರೆದ ಪದ್ಯ .ಸಣ್ಣವನಿದ್ದಾಗ ತಾಸುಗಟ್ಟಲೆ ಕಾಯುತ್ತ ಮಳ್ಳುಬಿದ್ದು ಗೀಜುಗನ ಗೂಡನ್ನು ನೋಡುತ್ತ ಕುಳಿತಿರುವುದು ಕುಶಿಕೊಡುತ್ತಿತ್ತು,ಈಗಲೂ ಹಾಗೇ.ಗೀಜುಗನ ಗೂಡು ಯಾವತ್ತೂ ನನಗೆ ಕುತೂಹಲದ ಸಂಗತಿಯಾಗಿದೆ.ನನ್ನೊಳಗಿನ ತುಡಿತವೊಂದರ ಅವ್ಯಕ್ತದ ಸಂಗತಿಯಾಗಿದೆ,ಚಲನದ ಸಂಗತಿಯಾಗಿದೆ.ಅದು ಬದುಕು ಮತ್ತು ಭರವಸೆಯ ಸಂಗತಿಯಾಗಿದೆ,ಜೀವನ ಪ್ರೀತಿಯ,ಮಮತೆಯ ಸಂಗತಿಯಗಿದೆ.]
Posted by
venkat.bhats
at
Wednesday, December 22, 2010
Labels:
ಕವಿತೆ,
ಗೀಜುಗ,
ಗೂಡು,
ಬದುಕು
4 comments:
17 December, 2010
13 December, 2010
ಕನಸ ಬಾಜಾರದ ತುದಿಯಲ್ಲಿ
ನೆರಳೇ ಇಲ್ಲದ ದಾರಿಯಲ್ಲಿ
ಬಿರುಮಧ್ಯಾಹ್ನ
ಕರಿಡಾಂಬರು ಆರಿಹೋಗುವ ಬಿಸಿಲಲ್ಲಿ
ಇಂಗಿಹೋದ ಕನಸು ನನ್ನದಾಗಿತ್ತು
ಮರುದಿನ ಅದೇ ದಾರಿಯಲ್ಲಿ
ಸತ್ತುಬಿದ್ದ ಹೆಣಗಳಲ್ಲಿ
ಕನಸಿನ ನೆರಳುಗಳಿರಬೇಕು
ಕಂಡನೆನಪಾಗಿ ಬಿಕ್ಕಳಿಸಿ
ಕಿಟಕಿಗಳಿಲ್ಲದ ಮನೆಯೊಳಗೆ
ಉಸಿರಿಲ್ಲದೆ ಅತ್ತಿದ್ದೆ
ನಿಲುವಿಲ್ಲದ ನೆಲೆಯಲ್ಲಿ
ಮುಗಿಯದ ಹಾಗೆ ಈಗೆಲ್ಲ
ಎಷ್ಟೊಂದಿವೆ
ಕನಸುಬಾರದ ಜನರಿಗೆ ಶೋಕಿಗೆ
ಬೇಕೆಂದರೆ ಮಾರಾಟಕ್ಕೂ ಸಿಗುತ್ತವೆ
ಹತ್ತುರೂಪಾಯಿ ಕೊಟ್ಟರೆ ತೋರಿಸಿಹೋಗುತ್ತಾರೆ
ಬಗೆಬಗೆಯ ಸಲಕರಣೆ ಹಿಡಿದು
ಕನಸ ನನಸು ಮಾಡಲೆಂದೇ ಕೂತವರಿದ್ದಾರೆ
ಕನಸ ಬಾಜಾರದ ತುದಿಯಲ್ಲಿ
ಸ್ಮಶಾನವೊಂದಿದೆ
ಮಾರಾಟವಾಗದೆ ಉಳಿದವಕ್ಕೆ
ಅಲ್ಲೆಲ್ಲ
ಸಮಾಧಿಯ ಧೂಳೊರೆಸಿ
ಬರೆದ ಸಾಲುಗಳನ್ನು ಓದುವಾಗೆಲ್ಲ
ಇಂಥ ಸಾಲುಗಳೇ ಇಲ್ಲದ
ನನ್ನ ಕನಸಿನ ನೆನಪಾಗುತ್ತದೆ
ಬಿರುಮಧ್ಯಾಹ್ನ
ಕರಿಡಾಂಬರು ಆರಿಹೋಗುವ ಬಿಸಿಲಲ್ಲಿ
ಇಂಗಿಹೋದ ಕನಸು ನನ್ನದಾಗಿತ್ತು
ಮರುದಿನ ಅದೇ ದಾರಿಯಲ್ಲಿ
ಸತ್ತುಬಿದ್ದ ಹೆಣಗಳಲ್ಲಿ
ಕನಸಿನ ನೆರಳುಗಳಿರಬೇಕು
ಕಂಡನೆನಪಾಗಿ ಬಿಕ್ಕಳಿಸಿ
ಕಿಟಕಿಗಳಿಲ್ಲದ ಮನೆಯೊಳಗೆ
ಉಸಿರಿಲ್ಲದೆ ಅತ್ತಿದ್ದೆ
ನಿಲುವಿಲ್ಲದ ನೆಲೆಯಲ್ಲಿ
ಮುಗಿಯದ ಹಾಗೆ ಈಗೆಲ್ಲ
ಎಷ್ಟೊಂದಿವೆ
ಕನಸುಬಾರದ ಜನರಿಗೆ ಶೋಕಿಗೆ
ಬೇಕೆಂದರೆ ಮಾರಾಟಕ್ಕೂ ಸಿಗುತ್ತವೆ
ಹತ್ತುರೂಪಾಯಿ ಕೊಟ್ಟರೆ ತೋರಿಸಿಹೋಗುತ್ತಾರೆ
ಬಗೆಬಗೆಯ ಸಲಕರಣೆ ಹಿಡಿದು
ಕನಸ ನನಸು ಮಾಡಲೆಂದೇ ಕೂತವರಿದ್ದಾರೆ
ಕನಸ ಬಾಜಾರದ ತುದಿಯಲ್ಲಿ
ಸ್ಮಶಾನವೊಂದಿದೆ
ಮಾರಾಟವಾಗದೆ ಉಳಿದವಕ್ಕೆ
ಅಲ್ಲೆಲ್ಲ
ಸಮಾಧಿಯ ಧೂಳೊರೆಸಿ
ಬರೆದ ಸಾಲುಗಳನ್ನು ಓದುವಾಗೆಲ್ಲ
ಇಂಥ ಸಾಲುಗಳೇ ಇಲ್ಲದ
ನನ್ನ ಕನಸಿನ ನೆನಪಾಗುತ್ತದೆ
04 December, 2010
30 November, 2010
ಕನಸಿನ ವಿಳಾಸಕ್ಕಾಗಿ
ಇವು ನನ್ನದೇ ತಲ್ಲಣಗಳ ಪ್ರತಿಮೆಗಳಂಥ ಯಾವುದೋ ಅರ್ಧಕ್ಕೇ ಬಿಟ್ಟ ಕವಿತೆಯ ಸಾಲುಗಳಂಥ,ಹಾಳೆಯ ಮೇಲೆ ಬಿಡಿಸಲಾಗದೆ ಉಳಿದ ಮನಸಿನ ಅರೆಬರೆ ಚಿತ್ರಗಳಂಥ ಏನೋ ಹೇಳಬೇಕೆಂದುಕೊಂಡು ಹೇಳಲಾಗದೇ ಉಳಿದುಹೋದ,ಹೀಗೇ ಬರೆದಿಟ್ಟು ಸಾಲುಗಟ್ಟಿದವುಗಳು.ಉದ್ದೇಶ ಮತ್ತು ಅರ್ಥ ಎರಡನ್ನೂ
ತಿಳಿದಂತೆ ಅರ್ಥೈಸಿಕೊಂಬುದು.
ಗೋಡೆಯ ಮೇಲಿನ ಚಿತ್ರಕೆಲ್ಲ ಚೌಕಟ್ಟು,ನಾಕಂಡ ಕನಸುಗಳು ಅದರೊಳಗೆ ಬಂಧಿಯಾಗಿವೆ.
ಎಲ್ಲರೆದುರೂ ಸಂಭಾವಿತನಾಗುವ ಹೊತ್ತಿಗೆ ಕನ್ನಡಿಯಲ್ಲಿ ಕಾಣುವ ಮುಖ ಬೇರೆಯದೇ ಆಗಿತ್ತು.
ಬೆಳಕಿನ ಮಾತನಾಡುತ್ತ ಕತ್ತಲಲ್ಲಿ ಕಳೆದುಹೋದವಳು ಹ್ಯಾಲೋಜನ್ ದೀಪದ ಸುತ್ತ ಸತ್ತ ಪತಂಗವಾಗಿದ್ದಾಳೆ.
ಸ್ತ್ರೀ ಸ್ವಾತಂತ್ರ್ಯ ಕನಸು ವಿಮಾನ ಎಂದೆಲ್ಲ ಮಾತನಾಡುತ್ತಿದ್ದವಳು ಒಂದು ದಿನ ಅಪ್ಪ ನೋಡಿದ ಹುಡುಗನೊಂದಿಗೇ ಮದುವೆಯಾದಳು.
ಭಟ್ಟರ ಜೋರುಮಂತ್ರ ಅರ್ಥವಾಗದೇ ಮದುಮಗಳ ಜರಿಸೀರೆಯ ಗೊಂಬೆಗಳು ತುಸು ಬೆದರಿವೆ.
ಕವಡೆಹಕ್ಕಿ ಕಚ್ಚಿಕೊಂಡ ಒಂದು ಕಂಬಳಿಹುಳದ ಮೈಗೆ ನಸುಗೆಂಪು ಮ್ಯಾಂಗನೀಸು ಧೂಳಿದೆ.
ಭತ್ತ ತಿಂದು ಹೋಗಲು ಬಂದ ಹಕ್ಕಿಗಳಿಗೆ ಬೀಜದ ಪೇಟೆಂಟಿನ ಬಗ್ಗೆ ಗೊತ್ತಿದ್ದಂತಿಲ್ಲ.
ಅಮ್ಮನ ಡಾನ್ಸ್ ಕ್ಲಾಸು, ಅಪ್ಪನ ಕಂಪ್ಯೂಟರ್ ಕ್ಲಾಸು, ಶಾಲೆ ಮಾಸ್ತರರ ಹೋಮ್‌ವರ್ಕು ಯಾರೋ ಹೇಳಿದ ಎಂಥದೋ ಕೋಚಿಂಗಿನ ಗದ್ದಲದಲ್ಲಿ ಗಾಳಿಪಟದ ಕನಸೊಂದು ಹಳತಾಗಿ ಬಣ್ಣಗೆಟ್ಟು ಹಾರಲಾಗದೆ ಉಳಿದುಬಿಟ್ಟಿದೆ.
ಹೊದೆಸಿದ ಮಾಡಿನ ಜೊತೆಜೊತೆಗೇ ಎಂದೋ ರಾತ್ರಿ ಕನಸ ಮರೆತವರನ್ನು ಇವರು ಯಾವುದೋ ವಿಳಾಸ ಕೇಳುತ್ತಿದ್ದಾರೆ.
ಊರೂರು ಸುತ್ತುವ ಲಾರಿಗೆ ಯಾವ ಊರಿನ ಹೆಸರೂ ಸರಿ ನೆನಪಿಲ್ಲ, ಸುತ್ತಿದೂರಿನ ನೆನಪಿಗೆ ಸವೆದ ಟೈರುಗಳಿವೆ.
ಕೆಲಸ ಕೊಡಿಸುತ್ತೇನೆಂದು ಹೋದ ಎಲ್ಲರ ವಿಳಾಸಗಳನ್ನೂ ಬರೆದಿಟ್ಟುಕೊಂಡ ತಂದೂರಿ ರೊಟ್ಟಿ ಸುಡುವ ಹುಡುಗನಿಗೆ ಮಾತ್ರ ಆ ಎಲ್ಲ ದೊಡ್ಡ ಲಾರಿಗಳ ನೆನಪಿದೆ.
ಕಾರಿನಲ್ಲಿ ಬಂದವರು ಕೂಲಿಜನರ ಹಾಡುಗಳ ವಿಡಿಯೋ ಮಾಡಿಕೊಂಡಿದ್ದಾರೆ, ಕಾಲಿನ ನಂಜಿನ ಬಗ್ಗೆ ಏನಾದರು ಔಸಧಿ ಗೊತ್ತಿದೆಯಾ ಕೇಳಲು ಅವನಿಗೆ ಹಿಂಜರಿಕೆ.
ಅವಳಿಗಾಗಿ ಮಲ್ಲಿಗೆ ತರಹೋದ ಸಂತೆಯಲ್ಲಿ ಬರೀ ಕನ್ನಡಿಗಳು ಮಾರಾಟಕ್ಕಿವೆ.
ಕಳೆದುಹೋದ ಕನಸುಗಳು ಎಂದೂ ತೆರೆಯದಿದ್ದ ಕಿಟಕಿಯನ್ನು ತೆರೆದ ಕೂಡಲೆ ಕಂಡಿವೆ, ಸತ್ತ ಅವನ್ನು ಎಲ್ಲಾದರೂ ಎಸೆದುಬರಬೇಕಿದೆ.
ಅವರು ಮೋಡದ ಬಗ್ಗೆ ಕವಿತೆ ಕಟ್ಟಿ ಹಾಡಿದರು, ಮೋಡ ಸುರಿದು ಮಳೆಯಾಯಿತು,ಹರಿದ ನೀರಲ್ಲಿ ಜನ ತಮ್ಮ ಪಾಲು ಎಣಿಸಿದರು,ಸಾಲದೆಂದು ಭೂಮಿಯ ಬಗೆದರು.
ದಿನವೂ ಹುಡುಗ ಹುಡುಗಿಯರ ಜೋರು ಪ್ರೀತಿಯಲ್ಲಿ ನಲುಗಿದ ಕಾಫಿಡೆಯ ಗೋಡೆಗೆ ರಾತ್ರಿಯಹೊತ್ತಿಗೆ ಕಷ್ಟದ ನಿಟ್ಟುಸಿರು.
ಡೈಪರ್ಸ್ ಪ್ಯಾಮ್ಪರ್ಸ್‌ಗಳಿಂದ ತುಂಬಿಹೋದ ಮೆಡಿಕಲ್ ಶಾಪಿನಲ್ಲಿ ಜ್ವರದ ಗುಳಿಗೆ ಕೇಳಲು ಈಗಷ್ಟೆ ಪೇಟೆಯಲ್ಲಿರಲು ಕಲಿಯುತ್ತಿರುವ ಹಳ್ಳಿಹುಡುಗ ತುಸುನಾಚಿದ್ದಾನೆ.
ಶಾಪಿಂಗ್ ಮಾಲುಗಳು ಬಾಗಿಲು ತೆರೆದುಕೊಳ್ಳುವ ಸರೀಹೊತ್ತಿಗೆ ಹಳ್ಳಿಹುಡುಗ ಕಂಡಕನಸಿನ ವಿಳಾಸ ಹುಡುಕುತ್ತಿದ್ದಾನೆ.
( 9 ಜನವರಿ,2011ರ ವಿಜಯ ಕರ್ನಾಟಕ ಸಾಪ್ತಾಹಿಕ ಲವಲVKಯಲ್ಲಿ ಪ್ರಕಟಿತ )
Posted by
venkat.bhats
at
Tuesday, November 30, 2010
Labels:
ಪದಸಾಲು,
ವಿಳಾಸ,
ಹಬ್ಬಲಿಗೆ,
ಹುಡುಗ
6 comments:
24 November, 2010
ಆ ರಾತ್ರಿ ನಾನು ಕಂಡ ಕನಸಿನ ಹೆಸರು ನೀನು ಕಣೇ
ನಿನ್ನ ಹೀಗೇಕೆ ಕರೆದನೆಂದರೆ ನನಗೆ ಈ ಹೆಸರು ಇಷ್ಟ ಮತ್ತು ನಿನ್ನ ನಿಜದ ಹೆಸರು ನಂಗೆ ಗೊತ್ತಿಲ್ಲ,ಹೀಗೆ ಕಾಗದದ ದೋಣಿ ಮಾಡಿ ಬಿಡುತ್ತಿದ್ದೇನೆ, ನಿನ್ನ ವಿಳಾಸದ ಕಿನಾರೆಗೆ ಬಂದೊಡನೆ ಒಂದು ಕಿರುನಗು, ಹಾಂ ಆ ನಗುವಿಗೆ ಒಂದು ಒಲವಿನ ದನಿ,ನೂರು ಕನಸಿನ ಮಣಿಮಾಲೆ. ನಿಜ ನಗ್ತೀಯಲ್ಲ?
ಜಯನಗರದ ಬಸ್ ಸ್ಟಾಂಡಿನಲ್ಲಿ ನಮ್ಮ ಏರಿಯಾದ ಬಸ್ಸು ಎಂದಿನಂತೇ ತಡವಾಗಿ ಬಸ್ಸಿಗೆ ಕಾಯುವವರ ಸಂಖ್ಯೆ ಕ್ಷಣಕ್ಕೂ ಹೆಚ್ಚುತ್ತಾ ಅಗಲೇ ಎರಡು ಬಸ್ಸಿನ ಜನ ಜಮಾಯಿಸಿದ್ದರು. ಆಗ ನಡೆದು ಬಂದಿದ್ದೆ, ದಟ್ಟ ಹಸಿರಿನ ಸಲ್ವಾರು,ಆ ಸಂಜೆ ಬೆಳಕಲ್ಲೂ ಹೊಳೆವ ಹಾಲಿನಂಥ ಮೈಬಣ್ಣ, ಮೃದು ದೇಹದ ನೀನು. ಕಿವಿಗೆ ಸಣ್ಣ ಓಲೆ,ಹೆಗಲಿಗೆ ಪುಟ್ಟ ಬ್ಯಾಗು,ಭುಜದ ಮೇಲೆ ಹರಿದಾಡಿಕೊಂಡಿರುವ ಹೊಳೆವ ಕೂದಲು, ಕೈಯಲ್ಲಿ ಮೊಬೈಲು ಹಿಡಿದು ನೀನು ನಿಧಾನ ಬರುತ್ತಿದ್ದರೆ ನನಗೆ ನಿನ್ನಿಂದ ಒಂಚೂರೂ ಕಣ್ಣು ಸರಿಸಲಾಗಲಿಲ್ಲ,ನನ್ನ ಪಾಲಿಗೆ ಸಮಯ ನಿಂತುಹೋಗಿತ್ತು, ಜನರ ಮಧ್ಯೆ ದಾರಿ ಮಾಡಿಕೊಂಡು ಬಂದ ನೀನು ನಂಗೆ ಹತ್ತಿರವೇ ನಿಂತೆ,ನಿನ್ನ ಕೆನ್ನೆ ಮೇಲಣ ಕಪ್ಪು ಮಚ್ಚೆ ಸ್ಪಷ್ಟ ಕಾಣಿಸುವಷ್ಟು ಹತ್ತಿರ. ಅರೆಮಂದ ಬೆಳಕಲ್ಲಿ ನಡೆದು ಬಂದ ಅಚ್ಚರಿಯ ಹಾಗೆ ನಿಂತಿದ್ದೆ ನೀನು. ಸುತ್ತಲಿನ ವಾತಾವರಣಕ್ಕೇ ಹೊಸ ಹುರುಪು ಬಂದಹಾಗಿತ್ತು,ಖರೆ ಹೇಳ್ತೇನೆ ನೀನಿದ್ದಷ್ಟು ಹೊತ್ತೂ ನನಗೆ ನಿನ್ನ ಬಿಟ್ಟು ಬೇರೆನನ್ನೂ ನೋಡಲಾಗಲಿಲ್ಲ.
ನಿನ್ನ ಆ ಪುಟ್ಟ ಕಣ್ಣುಗಳಲ್ಲಿ ಏನೊ ಸೆಳೆತವಿದೆ ಹುಡುಗೀ,ತುಸುನಕ್ಕರೂ ಗುಳಿಬೀಳುವ ನಿನ್ನ ಕೆನ್ನೆ,ಸುಳಿವ ಗಾಳಿಯ ನಿರಂತರ ಕಾಡಿಸುತ್ತಿದ್ದ ನಿನ್ನ ಮುಂಗುರುಳು ನಿನ್ನ ಹೆಸರ ವಿನ್ಯಾಸವ ಬರೆಯುತಿತ್ತು.ಆ ಮೃದು ಕೆನ್ನೆಯ ಮೇಲೆ ಸುಳಿದಾಡುವ ಗಾಳಿಯಾಗಬಾರದೆ ಎನಿಸಿತ್ತು.ಜಯನಗರದ ಥಂಡಿಗಾಳಿಗೆ ನೀನು ಕೈಕಟ್ಟಿ ನಿಂತಿದ್ದೆ, ನಿನ್ನ ಕಿವಿಯೊಳಗಿನ ಇಯರ್‌ಫೊನ್ ಅದಾವ ಒಲವಿನ ಹಾಡು ಹೇಳುತ್ತಿತ್ತು? ನಿನ್ನ ಗುಲಾಬಿಯಂಥ ಪಾದ, ಆ ಕಾಲುಗಳಿಗೆ ಚಂದದ ಗೆಜ್ಜೆಗಳಿವೆ. ಹೌದು ಗೆಜ್ಜೆಗಳಿವೆ ಅಲ್ವಾ? ನೀನು ಬಸ್ಸಿಗಾಗಿ ಸಹಜ ನನ್ನತ್ತ ತಿರುಗಿದಾಗಲೆಲ್ಲ ನನ್ನನ್ನೇ ನೋಡುತ್ತಿರುವಿಯೆಂದು ಬರಿದೆ ಒಳಗೊಳಗೆ ಖುಶಿಪಟ್ಟು ನಾನು ಕಣ್ತಪ್ಪಿಸಿದ್ದೆ ಗೊತ್ತಾ,ನೀನು ಮಾತ್ರ ಯಾಕೆ ಏನೂ ಗೊತ್ತಿಲ್ಲದವಳಂತೆ ಬರಿ ಬಸ್ಸಿಗಾಗಿ ಕಾತರಿಸಿದ್ದಿ,ಎಷ್ಟು ಹಿಂಸೆಯಾಗುತ್ತಿತ್ತು ಗೊತ್ತಾ.
ನಿನ್ನನ್ನೇ ನೋಡುತ್ತಿದ್ದ ನನ್ನ ಕಂಡೆಯಲ್ಲವಾ ನೀನು?
ನೀನು ಅಲ್ಲೆ ಬಳಿಯಿದ್ದ ಕಂಟ್ರೋಲರ್ ಬಳಿ ಏನೊ ಕೇಳಿದೆ ಸಣ್ಣಗೆ,ಎಷ್ಟು ಚಂದಾಗಿ ಮಾತನಾಡುತ್ತೀ ಹುಡುಗೀ ನೀನು.ಬಂದ ಉಳಿದ ರೂಟಿನ ಬಸ್ಸುಗಳನ್ನು ಕಂಡಾಗಲೆಲ್ಲ ದೇವರೆ ಇವಳು ಈ ಬಸ್ಸಿಗೆ ಹೋಗದಿರಲಿ ಅಂದುಕೊಳ್ಳುತ್ತಿದ್ದೆ,ಆ ಎಲ್ಲ ಬಂದ ಬಸ್ಸುಗಳನ್ನು ನೀನು ಬಿಟ್ಟಾಗ ಇವಳು ನಮ್ಮ ರೂಟಿಗೇ ಹೋಗುವವಳು ಎಂದು ಖಾತ್ರಿಯಾಗಿ ಎಲ್ಲಿಲ್ಲದ ಖುಷಿಯಾಗಿತ್ತು.ನಿನ್ನ ನೋಡುತ್ತ, ನಿನ್ನ ಕೆನ್ನೆನೋಡುತ್ತ ಎಲ್ಲೋ ಕನಸಿನೊಳಗೆ ಹೊರಟ ನನಗೆ ಬಸ್ ಬದಿದ್ದೇ ಗೊತ್ತಾಗಲಿಲ್ಲ.ಅಷ್ಟರಲ್ಲಿ ತುಂಬಿದ ಜನಸಾಗರ ಬರೋ ಎನ್ನುತ್ತ ಬಸ್ಸಿನ ಬಾಗಿಲ ಬಳಿ ನುಗ್ಗಿದರು.ನನಗೆ ಕೊನೆಯೇ ಗತಿಯಾಯ್ತು. ನೀನು ಮಾತ್ರ ಮುಂಬದಿಗೆ ಹೀಗೆ ದಾರಿ ಮಾಡಿಕೊಂಡು ಒಳಹತ್ತಿದೆ, ಆಗಲೆ ಕಣೆ ಹೊರಗೆ ನಿಂತಿದ್ದ ನನ್ನನ್ನು ನೀನು ತಿರುಗಿ ನೋಡಿದ್ದು,ನಾನಂತು ನೀನು ನನ್ನನ್ನೆ ನೋಡಿದ್ದೆಂದೆ ಅಂದುಕೊಂಡುಬಿಟ್ಟಿದ್ದೇನಾದ್ದರಿಂದ ಅದನ್ನು ಬದಲಿಸಲಾಗದು.ನೀನು ಸೀಟು ಸಿಕ್ಕಿ ಎಲ್ಲೋ ಕೂತೆಯೆಂದುಕೊಂಡೆ. ಜಗಳ ಗಿಗಳ ಮಾಡದೇ ನಿಧಾನವಾಗಿ ಬಸ್ ಹತ್ತಿ ಸಂಭಾವಿತನಾಗಿದ್ದೆ ಗೊತ್ತಾ ನಾನು,ಜನ ತಳ್ಳಿಕೊಂಡು ನನ್ನ ಹಿಂದೆಲ್ಲೋ ಒಂದು ಸೀಟಿನ ಬಳಿ ತಂದು ನಿಲಿಸಿದ್ದರು.ನಾನು ಬಸ್ಸಲ್ಲಿ ಬಾಗಿ ಹಣುಕಿ ನಿನ್ನ ಹುಡುಕಿದೆ ಕಣೆ,ಬಸ್ಸು ಇನ್ನರ್ಧ ಗಂಟೆ ತಡವಾಗಿ ಬರಬಾರದಿತ್ತೆ ಅಂದುಕೊಂಡು ಕಳವಳಿಸಿದ್ದೆ.ನೀನು ಅಲ್ಲೆ ಡ್ರೈವರ್ ಸೀಟಿನ ಹಿಂಬದಿ ನಿಂತಿದ್ದೆ.ಆಗಲೂ ನಿನ್ನ ಬಿಳಿಗೆನ್ನೆ ನನಗೆ ಸ್ಪಷ್ಟವಾಗಿ ಕಾಣುತಿತ್ತು. ನಂತರ ನಿನಗೆಲ್ಲೋ ಸೀಟು ಸಿಕ್ಕಿದಾಗ ನೀನು ನನಗೆ ಕಾಣದಾದೆ,ನಾನು ನಿನ್ನ ಹುಡುಕಲೆತ್ನಿಸಿ ಪಕ್ಕದವನ ಬಳಿ ಬಯ್ಸಿಕೊಂಡಿದ್ದೆ.
ಕಡೆಗೆ ಆ ರಶ್ಶಿನಲ್ಲಿ ನೀನೆಲ್ಲಿಳಿದೆಯೋ ಗೊತ್ತಾಗಲಿಲ್ಲ. ಆಗ ರಶ್ಶಿನ ಜನರನ್ನು ಒಳಗೊಳಗೆ ಬಯ್ದುಕೊಂಡಿದ್ದೆ.
ಮನೆ ತಲುಪಿದಾಗ ಎಂದಿನ ಸುಸ್ತು ಮಾತ್ರ ನನ್ನಲ್ಲಿರಲಿಲ್ಲ. "I miss you" ಅಂತ ಮನಸ್ಸು ಮಾತ್ರ ನೂರುಸಾರಿ ಒಳಗೇ ಕೂಗಿ ಹೇಳುತ್ತಿತ್ತು. ಮರುದಿನಕ್ಕೆ ನಾನು ಇನ್ನೂ ಹಾಕಿರದ ಹೊಸಾ ಬಟ್ಟೆಯನ್ನೆ ರೆಡಿ ಮಾಡಿಕೊಂಡಿದ್ದೆ,ನಾಳೆ ಮಾತ್ರ ಹೇಗಾದರೂ ಮಾಡಿ ಬಸ್ಸಿನ ಬಗ್ಗೆ ಕೇಳುವವನಹಾಗೆ ಮಾಡಿ ನಿನ್ನ ಮಾತನಾಡಿಸಬೇಕೆಂದು ಹುಸಿಧೈರ್ಯದಲ್ಲಿ ಅಂದುಕೊಂಡು ಒಳಗೊಳಗೇ ಎದೆಬಡಿತ ಹೆಚ್ಚಿಸಿಕೊಂಡಿದ್ದೆ.ನಿನ್ನ ಕಡೆ ಒಂದು ಸುಮ್ಮನೆ ಸ್ಮೈಲ್ ಹರಿಬಿಡಬೇಕು,ನೀನು ಚಂದ ಕಾಣುತ್ತಿ ಎಂದು ಸಣ್ಣಗೆ ಹೇಳಬೇಕು ಎಂದೆಲ್ಲ ಅಂದುಕೊಂಡಿದ್ದೆ. ಅಂದುರಾತ್ರಿ ನನ್ನ ಕನಸಲ್ಲಿ ನೀನು ನಸುಗೆಂಪು ಸಲ್ವಾರ್ ತೊಟ್ಟು ನಿಂತ ಹಾಗೆ,ಅದರ ದುಪಟ್ಟಾದ ಮೇಲೆ ನವಿಲುಹೂವಿನ ಚಿತ್ರವಿದ್ದ ಹಾಗೆಲ್ಲ ಕಂಡು ಗಾಳಿಗೆ ಹಾರುತ್ತ ಆ ದುಪಟ್ಟಾ ನನ್ನೊಳಗೆ ನೂರು ಕನಸಿನ ಸಾಧ್ಯತೆಗಳನ್ನು ಬರೆದಿತ್ತು.
ಆ ರಾತ್ರಿ ನಾನು ಕಂಡ ಕನಸಿನ ಹೆಸರು ನೀನು ಕಣೆ ಹುಡುಗೀ..!
ಮರುದಿನ ಆಫೀಸಿನಿಂದ ಬೇಗ ಹೊರಟಿದ್ದೆ ನಿನ್ನ ಸಮಯದಲ್ಲೆ ಅಲ್ಲಿರಲೆಂದು.
ಆದಿನ ಹಾಗು ಸುಳ್ಳು ಹೇಳಬಾರದೆಂದರೆ ಇಂದಿಗೂ ನನ್ನ ಜಗತ್ತು ಅಂದರೆ ನೀನು, ಬರೀ ನೀನು ಮಾತ್ರ, ನಿನ್ನ ಹಸಿರು ದುಪಟ್ಟಾ,ಕಿವಿಯೋಲೆ, ಕೆನ್ನೆಗುಳಿ, ಚಂದದ ನಿನ್ನ ಕಣ್ಣು.
ಆ ಬಸ್ ಸ್ಟ್ಯಾಂಡ್ನಲ್ಲಿ ನಾನು ನಿನಗೆ ಹುಡುಕತೊಡಗಿದ್ದೆ, ಅದರೆ ನೀನು ಮಾತ್ರ ಬರಲಿಲ್ಲ, ಸಮಯ ಸರಿಯಾಗಿಯೆ ಇತ್ತು. ನಿ ಬಂದಿದ್ದ ಹಾದಿಯೆಲ್ಲ ಹುಡುಕಿ ಕಾದಿದ್ದೆ. ಅಷ್ಟರಲ್ಲೇ ಹೊರಟುಬಿಟ್ಟಿದ್ದೆಯಾ?
ಆದಿನ ಹಾಗು ಸುಳ್ಳು ಹೇಳಬಾರದೆಂದರೆ ಇಂದಿಗೂ ನನ್ನ ಜಗತ್ತು ಅಂದರೆ ನೀನು, ಬರೀ ನೀನು ಮಾತ್ರ, ನಿನ್ನ ಹಸಿರು ದುಪಟ್ಟಾ,ಕಿವಿಯೋಲೆ, ಕೆನ್ನೆಗುಳಿ, ಚಂದದ ನಿನ್ನ ಕಣ್ಣು.
ಆ ಬಸ್ ಸ್ಟ್ಯಾಂಡ್ನಲ್ಲಿ ನಾನು ನಿನಗೆ ಹುಡುಕತೊಡಗಿದ್ದೆ, ಅದರೆ ನೀನು ಮಾತ್ರ ಬರಲಿಲ್ಲ, ಸಮಯ ಸರಿಯಾಗಿಯೆ ಇತ್ತು. ನಿ ಬಂದಿದ್ದ ಹಾದಿಯೆಲ್ಲ ಹುಡುಕಿ ಕಾದಿದ್ದೆ. ಅಷ್ಟರಲ್ಲೇ ಹೊರಟುಬಿಟ್ಟಿದ್ದೆಯಾ?
ನೀನಿಲ್ಲದೆ ಆ ಬುಸ್ ಸ್ಟ್ಯಾಂಡಿಗೆ ಚೆಲುವಿಲ್ಲ, ನಿನಗೆ ಬಸ್ಸಿನ ಬರುವ ಹೇಳಿದ ಆ ಕಂಟ್ರೋಲರನೂ ಸಪ್ಪಗಿದ್ದಾನೆ,ನೀ ನಿಂತಿದ್ದಿಯಲ್ಲ ಆ ಜಾಗ ಹಾಗೇ ಖಾಲಿಯಿದೆ ಕಣೆ,ಬಸ್ಸಿಗೂ ಅಂದಿನ ಹುರುಪಿಲ್ಲ.
ಈಗ ಕೂಡ ನಿನ್ನ ದಟ್ಟ ಹಸಿರು ಸಲ್ವಾರ್,ತುದಿಗೆ ಕನ್ನಡಿಗಳಿದ್ದ ದುಪಟ್ಟಾ, ಹಾಂ ನೀನು ಹಾಕಿದ್ದೀಯಲ್ಲ ಆ ಕಾಲ್ಗೆಜ್ಜೆ,ಕಿವಿಯೋಲೆ, ಕೆನ್ನೆಮಚ್ಚೆ ಈಗತಾನೆ ನೋಡಿದ್ದೇನೆನುವ ಹಾಗೆ ನಿಚ್ಚಳ ನೆನಪಿದೆ ಕಣೆ.ಯಾವ ಜನದ ಗದ್ದಲವಿದ್ದರೂ ನಿನ್ನ ಗುರುತಿಸಿಬಿಡುತ್ತೇನೆ.
ಒಮ್ಮೆ ಮತ್ತೆ ಬಂದುಬಿಡೇ, ನೀನು ಚಂದದ ಹುಡುಗಿಯೆಂದು ಹೇಳಲಿಕ್ಕಿದೆ,ಕೆನ್ನೆಗುಳಿ ನೋಡಲಿಕ್ಕಿದೆ.ನಿನ್ನ ಕಪ್ಪು ಕಣ್ಣುಗಳಲ್ಲಿ ಕಳೆದುಹೋಗಲಿಕುಂಟು.
ಹೀಗೆ ಕರೆದು ಮಾತನಾಡಿಸಬೇಕೆನುವಷ್ಟರಲ್ಲಿ ಕನಸುಗಳಾಚೆ ಸರಿದುಬಿಟ್ಟೆಯಲ್ಲೆ,ನಿನ್ನ ಕನಸುಗಳಲ್ಲದೆ ಬೇರಾವ ಕನಸನ್ನೂ ನಾನು ಬಯಸಿಲ್ಲ ಗೆಳತೀ,ನಿನ್ನ ಕಂಡಾಗಿನಿಂದ ನನ್ನ ಕನಸಿನ ಪ್ರತಿ ಅಧ್ಯಾಯದ ಮೊದಲ ಹಾಗು ಕೊನೆಯ ಪದ ನೀನು.ನಿನ್ನ ನೋಡಿದ ಆ ಬಸ್ಸ್ಟ್ಯಾಂಡ್ ಈಗ ನನ್ನ ಕನಸಿನ ಒಂದು ನವಿರು ಅಂಗವಾಗಿಬಿಟ್ಟಿದೆ ಅದೇ ಜಾಗ, ಅದೇ ಜನ,ಅವೇ ಬಸ್ಸುಗಳು,ಅದೇ ಗಾಳಿ ಆದರೆ ಅದರೆಡೆಗಿನ ನನ್ನ ನೋಟ ಬೇರೇನೆ ಆಗಿಬಿಟ್ಟಿದೆ. ಅದರೆಡೆಗೆ ನನ್ನ ಕಣ್ಣಲ್ಲಿ ಸದ್ದಿಲ್ಲದೇ ಒಂದು ಪ್ರೀತಿ ನಿಂತುಬಿಟ್ಟಿದೆ,ಅಲ್ಲಿ ಕಾಯುವ ಪ್ರತಿಗಳಿಗೆಯೂ ನೀನು ನೆನಪಾಗುತ್ತಿ,ನಿನ್ನ ಮುದ್ದು ಮುಖಕ್ಕಾಗಿ ಹುಡುಕುವ ನನ್ನ ಕಾತರಗಳಿಂದ ನನ್ನ ಕಾಪಾಡು ಹುಡುಗೀ.
ದಿನನಿತ್ಯ ಬಸ್ಸಿಗೆ ನನ್ನ ಜೊತೆ ಕಾಯುವ ನೂರು ಜನರಲ್ಲಿ ನಿನ್ನ ಹಸಿರು ದುಪಟ್ಟಾಕ್ಕಾಗಿ ಹುಡುಕುತ್ತೇನೆ.ನಿನ್ನ ಬಗ್ಗೆ ಬರೆಯಬೇಕೆಂದುಕೊಂಡ ಎಲ್ಲ ಕವಿತೆಯ ಸಾಲುಗಳೂ ನನ್ನಕಣ್ಣಲ್ಲಿ ನಿನ್ನ ಕಾಣುವಿಕೆಯನ್ನು ರಚ್ಚೆಹಿಡಿದು ನಿರುಕಿಸುತಿವೆ. ಒಂದು ದಿನ ಮತ್ತೆ ಹೀಗೆ ಬಂದುಬಿಡೆ.
ಇಂತಿ,
ನಿನ್ನ ಬರುವಿಕೆಯ ಹಂಬಲಿಸಿ ಕಾದಿರುವ ನಾನು.
ನಿನ್ನ ಬರುವಿಕೆಯ ಹಂಬಲಿಸಿ ಕಾದಿರುವ ನಾನು.
15 November, 2010
ದಳಗಳಿಗಂಟಿದ ಕನಸ ಹರಡಿಕೊಂಡು ಕೂತಿದ್ದವಳು
ಚಿಟ್ಟೆಯ ರೆಕ್ಕೆ ಕಟ್ಟಿಕೊಂಡು ಹಾರಿದವಳು
ಕೊಳದ ಬಳಿ ತನ್ನಂತದ್ದೇ ಹುಡುಗಿಯರ ಕಂಡು ಕೆಳಗಿಳಿದಳು
ಹೆಸರೇನೆಂದು ಕೇಳಿದೆ
ಓ, ನನಗೆ ಹೆಸರೇ ಇಲ್ಲವೆಂದು ಜೋರಾಗಿ ನಕ್ಕಳು
ಜನ ನಿನ್ನ ಏನಂತ ಕರೀತಾರೆ
ಜನ ನನ್ನ ಹೆಸರಿಡಿದು ಕರೆಯುವುದೇ ಕಡಿಮೆ ಎಂದಳು
ಹೋಗಲಿ ನಾನು ನಿನ್ನ ಏನಂತ ಕರೆಯಲಿ
ನಿನಗಿಷ್ಟವಾದ ಹಾಗೆ, ಜನರೂ ಅವರಿಗಿಷ್ಟವಾದ ಹಾಗೇ ಕರೆಯುತ್ತಾರೆ
ನವಿಲುಗರಿ ತೋರಿಸುತ್ತೇನೆಂದು ಕರೆದೊಯ್ದಳು
ಗರಿ ಮಾತ್ರ ಎಷ್ಟು ಹುಡುಕಿದರೂ ಸಿಗಲಿಲ್ಲ
ಮಳೆ ಎಂದರೆ ಇಷ್ಟವೆಂದವಳು
ಮಳೆಬರುವಾಗ ಯಾಕೋ ಜೋರಾಗಿ ಅಳುತ್ತಿದ್ದಳು
ಕಂಬಳಿಹುಳವೆ ಚಿಟ್ಟೆಯಾಗುತ್ತದೆ ಎಂದಾಗ
ಕತ್ತಲಲ್ಲಿ ಬಣ್ಣಗಳು ಕಾಣುವುದಿಲ್ಲವೆಂದೇನೇನೋ ಹೇಳುತ್ತಿದ್ದಳು
ಜಾಜಿ ಮಲ್ಲಿಗೆ, ದಾಸವಾಳ ಸಂಪಿಗೆ ಸೇವಂತಿಗೆಗಳ
ದಳಗಳಿಗಂಟಿದ ಕನಸ ಹರಡಿಕೊಂಡು ಕೂತಿದ್ದವಳು
ಇಂದು ಮಾತ್ರ ಸುಮ್ಮನೆ ಕೂತುಬಿಟ್ಟಿದ್ದಳು
ಕೊಳದ ಬಳಿ ತನ್ನಂತದ್ದೇ ಹುಡುಗಿಯರ ಕಂಡು ಕೆಳಗಿಳಿದಳು
ಹೆಸರೇನೆಂದು ಕೇಳಿದೆ
ಓ, ನನಗೆ ಹೆಸರೇ ಇಲ್ಲವೆಂದು ಜೋರಾಗಿ ನಕ್ಕಳು
ಜನ ನಿನ್ನ ಏನಂತ ಕರೀತಾರೆ
ಜನ ನನ್ನ ಹೆಸರಿಡಿದು ಕರೆಯುವುದೇ ಕಡಿಮೆ ಎಂದಳು
ಹೋಗಲಿ ನಾನು ನಿನ್ನ ಏನಂತ ಕರೆಯಲಿ
ನಿನಗಿಷ್ಟವಾದ ಹಾಗೆ, ಜನರೂ ಅವರಿಗಿಷ್ಟವಾದ ಹಾಗೇ ಕರೆಯುತ್ತಾರೆ
ನವಿಲುಗರಿ ತೋರಿಸುತ್ತೇನೆಂದು ಕರೆದೊಯ್ದಳು
ಗರಿ ಮಾತ್ರ ಎಷ್ಟು ಹುಡುಕಿದರೂ ಸಿಗಲಿಲ್ಲ
ಮಳೆ ಎಂದರೆ ಇಷ್ಟವೆಂದವಳು
ಮಳೆಬರುವಾಗ ಯಾಕೋ ಜೋರಾಗಿ ಅಳುತ್ತಿದ್ದಳು
ಕಂಬಳಿಹುಳವೆ ಚಿಟ್ಟೆಯಾಗುತ್ತದೆ ಎಂದಾಗ
ಕತ್ತಲಲ್ಲಿ ಬಣ್ಣಗಳು ಕಾಣುವುದಿಲ್ಲವೆಂದೇನೇನೋ ಹೇಳುತ್ತಿದ್ದಳು
ಜಾಜಿ ಮಲ್ಲಿಗೆ, ದಾಸವಾಳ ಸಂಪಿಗೆ ಸೇವಂತಿಗೆಗಳ
ದಳಗಳಿಗಂಟಿದ ಕನಸ ಹರಡಿಕೊಂಡು ಕೂತಿದ್ದವಳು
ಇಂದು ಮಾತ್ರ ಸುಮ್ಮನೆ ಕೂತುಬಿಟ್ಟಿದ್ದಳು
Subscribe to:
Posts (Atom)



































