ನಮ್ಮ ಊರೇ ಹಾಗೆ ಮೈಲುದೂರದಲ್ಲಿ ದ್ವೀಪಗಳ ಹಾಗೆ ಒಂಟಿಮನೆಗಳು,ನಮ್ಮ ಊರಷ್ಟೇ ಅಲ್ಲ ಮಲೆನಾಡೆಂಬ ಮಲೆನಾಡಿನ ಸೊಬಗೇ ಅದು.ಕೆಲವೊಂದು ಮನೆಗಳನ್ನು ತಲುಪಲು ಒಂದಿಡೀ ಹೊತ್ತು ನಡೆಯಬೇಕು,ಬೈಕು ಸೈಕಲ್ಲುಗಳು ಎಲ್ಲೆಡೆ ಹೋದಾವೆಂಬಹಾಗಿಲ್ಲ, ಮಳೆಗಾಲವಾದರೆ ಎಂದಿನ ದಾರಿಯೆಲ್ಲ ಹಳ್ಳಕೊಳ್ಳದ ಪಾಲಾಗಿ ತಂದ ಸೈಕಲ್ಲುಗಳನ್ನು ಆಚೆಯೇ ಸುರಿವ ಮಳೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೊಸದಾರಿಯಲ್ಲೆ ನಡೆಯಬೇಕು.ಅಂತ ಊರಲ್ಲಿ ಹೊರಊರಿನೊಂದಿಗೆ ಬೆಸುಗೆಯ ಪರಮ ಸಂಪರ್ಕದ ಕೊಂಡಿಯೆಂದರೆ ಅಂಚೆಕಛೇರಿ,ಇಂದಿನ ಟೆಲಿಫೋನ್ ಯುಗದಲ್ಲೂ ಬಹಳಕಡೆ ಈ ಸ್ಥಿತಿ ಭಿನ್ನವಾಗೇನೂ ಇಲ್ಲ.ಅಂಥ ಅಂಚೆ ಕಚೇರಿಯಲ್ಲಿ ನನ್ನಪ್ಪ ಪೋಸ್ಟ್ ಮಾಸ್ತರು, ಅವನಿಗೂ- ಊರ ಜನಕ್ಕೂ ಅದು ಕೇವಲ ನೌಕರಿಯಾಗಿಯಷ್ಟೇ ಉಳಿದಿಲ್ಲ,ಅವರ ಬದುಕೆಂಬ ಬದುಕೇ ಬೆಸೆದುಕೊಂಡಿದೆ, ಎಷ್ಟರ ಮಟ್ಟಿಗೆಂದರೆ ಪೋಸ್ಟಾಪೀಸೆಂದರೆ ಭಟ್ಟರೆಂಬ ಹಾಗೆ ಅದು ಅವರ ಬದುಕಲ್ಲಿ ಹಾಸುಹೊಕ್ಕಾಗಿದೆ. ಅವನ ಯಾವ ಹೊಸ ಅಂಗಿಗೂ ಪೋಸ್ಟಿನ ಸಿಖ್ಖದ ವಿಶಿಷ್ಟ ಕರಿಮಸಿ ಹತ್ತಿಲ್ಲವೆಂಬುದಿಲ್ಲ. ಹಿಂದೆಲ್ಲ ಊರ ಶಾಲೆಗೆ ಬರುವ ಮಾಸ್ತರರನ್ನೇ ಪೋಸ್ಟ್ಮಾಸ್ತರರನ್ನಾಗಿ ನೇಮಿಸಿಬಿಡುತ್ತಲಿದ್ದರು, ಅಂತಿಪ್ಪ ಮಾಸ್ತರರ ಶಿಷ್ಯನಾದ ಅಪ್ಪನಿಗೆ ಹುಡುಗ ಹುಶಾರಿಯಿದ್ದಾನೆ ಎಂದು ಆ ಕಾಲದಲ್ಲಿ ಒಂದುಮಟ್ಟಿಗೆ ದೊಡ್ಡದೆಂಬಂಥ ಈ ಪೋಸ್ಟಾಪೀಸಿನ ನೌಕರಿ ಸಿಕ್ಕಿದ್ದಿತ್ತು. ಪೋಸ್ಟಾಪಿಸಿಗೆ ಬೇರೆ ಆಫೀಸಾಗಲೀ ಬಿಲ್ಡಿಂಗಾಗಲೀ ಇಲ್ಲ, ಮನೆಯ ಹೊರಗಿನ ಒಂದು ಸಣ್ಣ ಖೋಲಿಯೇ ಸಣ್ಣ ಸಣ್ಣ ಕಪಾಟು, ಟ್ರಂಕು, ಕ್ಯಾಲೆಂಡರು,ಖಾಕಿ ಚೀಲ,ತಕ್ಕಡಿ-ತೂಕದ ಕಲ್ಲು, ಠಸ್ಸೆಯ ಬಾಕ್ಸು ಹೀಕೆ ಸಕಲ ಅಲಂಕಾರಿಕ ಸಲಕರಣೆಯನ್ನು ತನ್ನಲ್ಲಿ ಹರಡಿಕೊಂಡು ಒಂದು ಚಿಕ್ಕ ಕೆಂಬಣ್ಣದ ಬೋರ್ಡನ್ನು ಹೊರಗೋಡೆಗೆ ತಗುಲಿಹಾಕಿಕೊಂಡು ಪೋಸ್ಟಾಪೀಸಾಗಿ ರೂಪುಗೊಂಡುಬಿಟ್ಟಿತ್ತು.ಹಾಗಾಗಿ ಪೋಸ್ಟಾಪೀಸು ಮನೆಯ ಅವಿಭಾಜ್ಯ ಅಂಗವೂ ಆಗಿತ್ತು.
ಅಂಥ ಊರುಗಳಲ್ಲಿ ಈ ಅಂಚೆಯಣ್ಣನ ಕೆಲಸ ಬರೀ ಪತ್ರಹಂಚುವುದಕ್ಕಷ್ಟೇ ಸೀಮಿತವಾಗಿರುವುದಿಲ್ಲ, ಹೆಚ್ಚೂಕಡಿಮೆ ಎಲ್ಲ ಮನೆಗಳಿಗೂ ತಿರುಗುವವನಾದ್ದರಿಂದ ಅಪ್ಪನ ಬಳಿ ಊರಿನ ತಾಜಾ ಸುದ್ದಿಗಳಿರುತ್ತವೆ. ಅಲ್ಲೆಲ್ಲೋ ಹೊಸದಾಗಿ ಟಾರುರಸ್ತೆ ಮಾಡುತ್ತಿರುವ ಬಗ್ಗೆ, ದೊಡ್ಡಮನೆಯ ಶಿವರಾಮಣ್ಣ ಬೋರ್ವೆಲ್ಲ್ ಹೊಡೆಸುತ್ತಿರುವ ಬಗ್ಗೆ, ಶಂಕರಭಾವನ ಮಗಳನ್ನು ಪೇಟೆಯ ಗಂಡಿನ ಕಡೆಯವರು ನೋಡಲು ಬಂದ ಗುಟ್ಟಿನ ಸುದ್ದಿಯಿಂದ ಹಿಡಿದು ಮೇಲಿನ ಬಜೆಮನೆ ಕೆರೆಯಲ್ಲಿ ಸಿದ್ದಿ ಹುಡುಗರು ಮೀನುಹಿಡಿಯುತ್ತಿರುವುದು, ದೇವಸ್ತಾನದ ಆಚೆಗಿನ ದೊಡ್ಡಮರಕ್ಕೆ ಜೇನುಬಂದಿದ್ದು, ಒಮ್ಮೊಮ್ಮೆ ಕಬ್ಬಿನ ಗದ್ದೆಯ ಕಡೆ ಬಂದ ಆನೆಯ ವಿಷಯದವರೆಗೆ.ಯಾರಯಾರಮನೆಯಲ್ಲಿ ಯಾರ್ಯಾರಿಗೆ ಓಟುಹಾಕುವ ಬಗ್ಗೆ ಮಾತು ನಡೆಯುತ್ತಿದೆ ಎಂಬ ಪಂಚಾಯತ್ ಚುಣಾವಣೆಗೆ ನಿಂತವರು ಕೇಳುವ ಒಳವಿಚಾರಗಳಿಂದ ಹಿಡಿದು 'ಎಲ್ಲಾದರೂ ಒಳ್ಳೇ ಹೋರಿ-ಮಣಕ ಕೊಡುವ ಸುದ್ದಿ ಗೊತ್ತಾದ್ರೆ ಹೇಳೋ' ಎನ್ನುವವರೂ ಇರುತ್ತಿದ್ದರು. ಅದರದ್ದೇ ವಿಶಿಷ್ಟವಾದ ಖಾಕಿ ಚೀಲಗಳಲ್ಲಿ ದಿನವೂ ಬರುವ ಪತ್ರಗಳಲ್ಲೂ ಬಹಳ ವೆರಾಯಿಟಿ;ದೊಡ್ಡ ಜಮೀನ್ದಾರರಿಗಷ್ಟೇ ಬರುವ ಬ್ಯಾಂಕಿನ ಅಢಾವೆ ಪತ್ರಿಕೆಗಳೂ,ಬೇಡವೆಂದರೂ ಬರುತ್ತಲೇ ಇರುವ ಬ್ಯಾಂಕಿನ,ಎಲ್ಐಸಿಯ ನೋಟೀಸುಗಳು,ಪ್ರೀತಿಯ ಜಾನ್ಹವಿಗೆ ಪೇಟೆಯಲ್ಲಿ ಕೆಲಸಕ್ಕಿರುವ ಪ್ರಕಾಶ ಬರೆದ ಪ್ರೇಮಪತ್ರವೂ,ಡೇಟ್ಬಾರ್ ಆದ ಇನ್ವಿಟೇಷನ್ಗಳು, ಸಣ್ಣ ಪುಟ್ಟ ಹಸಿರು,ಹಳದಿ ಪತ್ರಗಳು,ಸರಕಾರಿ ಪತ್ರಗಳು ಹೀಗೆ ಹಲವು ಉಸಿರಿನ ಭಾವನೆಗಳನ್ನು, ಕತೆಗಳನ್ನು ತನ್ನೊಡನೆ ಹೊತ್ತುತರುತ್ತವೆ.
![]() |
ಪೋಸ್ಟಾಪೀಸಿನಲ್ಲಿ ಅಪ್ಪ |
ನಾನು ದೂರದೂರಿನ ಕಾಲೇಜು ಸೇರಿದ ಆರಂಭದ ದಿನಗಳಲ್ಲಿ ಮನೆಗೆ ಪತ್ರಬರೆಯುವುದನ್ನೂ, ಕೆಲವೊಮ್ಮೆ ಹಾಸ್ಟೆಲಿನ ಗೆಳೆಯರಿಗೆ ಪೋಸ್ಟ್ಮಾಡಿ ಎಂದು ಪತ್ರಗಳನ್ನು ಕೊಡುವಾಗ ವಿಚಿತ್ರ ಹಾಗೂ ಅಚ್ಚರಿ ಎಂಬಂತೆ ನೋಡುತ್ತಿದ್ದರು,ಆದರೆ ನಾನು ಮಾತ್ರ ಪ್ರತೀ ಸಲ ಮನೆಗೆ ಹೋದಾಗ ಖಾಲಿ ಅಂತರ್ದೇಶಿ ಪತ್ರಗಳನ್ನು ತರಲು ಮರೆಯುತ್ತಿರಲಿಲ್ಲ.ನನ್ನ ಹೆಸರಿಗೆ ಬರುತ್ತಿದ್ದ ಮನೆಯವರ ಹಾಗೂ ಅದೂ ಇದು ಪತ್ರಗಳಿಂದ ನನಗೆ ಅಲ್ಲಿನ ಪೋಸ್ಟ್ಮಾಸ್ತರರೂ ಪರಿಚಯವಾಗಿದ್ದಿತ್ತು, ಅಂತ ಪತ್ರಗಳಿಗೆ ಕಾಯುತ್ತಿದ್ದ ದಿನಗಳಿದ್ದವು. ನಾವಂತೂ ಪತ್ರಬರೆಯುವ ಹೊಸವಿಧಾನಗಳನ್ನು ಸೃಸ್ಟಿಸಿದ್ದೆವು, ಅದೊಂಥರಾ ಸಾಪ್ತಹಿಕ ದಿನಪತ್ರಿಕೆಯಂತೆ ಬಹಳಷ್ಟು ಸಂಗತಿಗಳನ್ನು ಒಳಗೊಂಡಿರುತ್ತಿತ್ತು. ನಂತರದ ದಿನಗಳಲ್ಲಿ ಮೊಬೈಲುಗಳು ಕೈಸಿಕ್ಕಿ ಪತ್ರಬರೆಯುವುದೇ ಮರೆತು ಹೋಗಿದೆ. 'ನಾನು ಕ್ಷೇಮ, ನಿಮ್ಮ ಕ್ಷೇಮಸಮಾಚಾರ ತಿಳಿಸಿ' ಎಂದೆಲ್ಲ ಹೇಳುವ ಪತ್ರಗಳು ಗಿಗಾಬೈಟಿನ ಸ್ಪೀಡಿನ ಎಲೆಕ್ಟ್ರಾನ್ ಯುಗದಲ್ಲಿ ಬಾಲಿಶವಾಗಿಯೂ ಹಳತಾಗಿಯೂ ಕಾಣುವುದೂ ಹೌದು.ಪಟ್ಟುಬಿದ್ದು ಬರೆಯುತ್ತೇನೆಂದರೆ ಹಳೆಪ್ರೀತಿಯ ನೆನಪಲ್ಲಷ್ಟೇ ಬದುಕುತ್ತಿರುವ ಗಂಡಹೆಂಡತಿಯ ಈಗಿನ ಪ್ರೀತಿಯಂತಾಗಿಬಿಡಬಹುದಷ್ಟೆ. ನಮ್ಮದೇ ಸ್ವಂತ ವಿಳಾಸಗಳಿಲ್ಲದ ಈ ನಗರಿಯಲ್ಲಿ ನನ್ನ ಮೂಲೆಸೇರಿದ ಸೂಟ್ಕೇಸಿನಲ್ಲಿನ ನೀಲಿಬಣ್ಣದ ಅಂತರ್ದೇಶಿಯೊಂದು ಕಂಡು ಇದನ್ನೆಲ್ಲ ಮತ್ತೆ ನೆನಪಿಸಿತು. ತನಗಿಲ್ಲದ ವಿಳಾಸದಲ್ಲಿನ ನೂರು ಮುಖಗಳ ಹಾಗೆ ಕಣ್ಣ ಮುಂದೆ ಅಪ್ಪನ ದೈನಿಕದ ಕೆಲ ದೃಶ್ಯಗಳು ನನ್ನಪಾಲಿನ ಎಲ್ಲಕ್ಕೂ ಮೀರಿದ ಜೀವನಪ್ರೀತಿಯ ಚಲಿಸುವ ಚಿತ್ರಗಳಂತೆ ಹಾದು ಹೋದವು.
ಅಪ್ಪ ಬೆಳ್ಳಂಬೆಳಗ್ಗೆಯೇ ತನ್ನ ನೆಚ್ಚಿನ ಪೋಸ್ಟಾಪೀಸಿನಲ್ಲಿ ಎಂದಿನ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾನೆ. ಎದುರಿಗೆ ಠಸ್ಸೆಯ ಡಬ್ಬ,ಪಕ್ಕದಲ್ಲಿ ಅರಗಿನ ಸೀಲುಮಾಡಲು ಬೇಕಾಗುವ ಸಣ್ಣ ಲಾಟೀನು ದೀಪ ಹಗಲಲ್ಲೂ ಸಣ್ಣಗೆ ಉರಿಯುತ್ತಿದೆ. ಟಕ್ಕ-ಟಕ್ಕ ಟಕ ಎಂಬ ಠಸ್ಸೆಯ ಸದ್ದು ಮಾತ್ರ ಹಳ್ಳಿಯ ಆ ಎಲ್ಲ ಪತ್ರಗಳಿಗೆ ಪೇಟೆಯಕಡೆಹೋಗುವ ಕಟ್ಟಕಡೆಯ ಪರವಾನಿಗೆಯನ್ನು ಸಾಕಾರಗೊಳಿಸುತ್ತ ಮೆಲ್ಲಗೆ ಕಣ್ಣೊಡೆಯುತ್ತಿರುವ ಪರಮ ಆಲಸಿ ಹಗಲಿನಲ್ಲಿ ಒಂದು ಕಾಯಕದ ದಿವ್ಯಗಳಿಗೆಯ ರೂಪಕದಂತೆ ಹರಡಿಕೊಳ್ಳುತ್ತಲಿದೆ.
'ಅಜ್ಜೀ, ನಿನ್ನಮಗ ಹಣ ಕಳುಹಿಸಿದ್ದಾನೆ' ಎನ್ನುತ್ತ ಮನಿಆರ್ಡರ್ ಕೊಡಬಂದ ಪೋಸ್ಟ್ಭಟ್ಟರ ಬಳಿ ಮಗ ಮತ್ತೇನಾದರೂ ಬರೆದಿದ್ದಾನೆಯೇ ಎಂದು ಗೌರಜ್ಜಿ ಬೊಚ್ಚುಬಾಯಿಯಲ್ಲಿ ಕೇಳಿದ್ದಾಳೆ, ಮಗ ಏನೂ ಬರೆದಿಲ್ಲವೆಂಬುದು ಗೊತ್ತಿದ್ದ ಪೋಸ್ಟ್ಭಟ್ಟರು ವಿಷಯ ಮರೆಸಲು ನಿನ್ನ ಮಂಡಿನೋವು ಹೇಗಿದೆ ಎಂದು ಕೇಳುತ್ತಿದ್ದಾರೆ. ಮೆತ್ತಗೆ ನಗುತ್ತಾ ಅಜ್ಜಿ ತನ್ನ ಕವಳದ ಸಂಚಿಯಿಂದ ತೆಗೆದ ಐದರ ನಾಣ್ಯವನ್ನು ಬೇಡವೆಂದರೂ ಭಟ್ಟರ ಕೈಲಿ ಹಿಡಿಸುತ್ತಿದ್ದಾಳೆ.
'ಹೋಯ್ ಶಂಕ್ರಜ್ಜ ನಿನಗೇನೋ ಪತ್ರ ಬಂದಿತ್ತಂತೆ ಪೋಸ್ಟ್ಭಟ್ಟರು ನಿನ್ನ ಹುಡುಕ್ಕಬಂದಿದ್ರು, ಹೋಗಿ ನೋಡಿ ಬಾ' ಎಂದ ಮಾಬ್ಲನ ಮಾತಿಗೆ ತನ್ನನ್ನು ಪೇಟೆಗ ಕರೆಯಿಸಿಕೊಳ್ಳುತ್ತೇನೆಂದು ಹೇಳಿ ಹೋದ ಮಗನೇ ಬರೆದ ಪತ್ರವಿರಬೇಕು ಎಂದುಕೊಂಡು ಎಲ್ಲಿಯದೋ ಒಂದು ಆಪ್ತವಾದ ಜೀವದುಸಿರಿನ ಬುತ್ತಿಯಂತ ಆಸೆಯಲ್ಲಿ ಪತ್ರವನ್ನು ಭಟ್ಟರಲ್ಲಿಯೇ ಓದಿಸುವಾ ಎನ್ನುತ್ತಾ ಪೋಸ್ಟ್ಭಟ್ರಮನೆಗೇ ಬಂದು ಬಟವಾಡೆಗೆ ಹೋದ ಭಟ್ಟರ ಬರುವನ್ನೇ ಕಾಯುತ್ತಿದ್ದಾನೆ,ಪೋಸ್ಟ್ಭಟ್ಟರು ಮಧ್ಯಾನ್ನವಾದರೂ ಬರದಿದ್ದಾಗ 'ಅವ ಹೋದಲ್ಲೇ ಬಾಕಿಯಾಗಿರಬೇಕು' ಎನ್ನುತ್ತ ಭಟ್ಟರ ಅಮ್ಮ ಬಡಿಸಿದ ಊಟಮಾಡಿದ ಶಂಕ್ರಜ್ಜ ಕೂತಲ್ಲಿಯೇ ಮಧ್ಯಾನ್ಹದ ಜೋಂಪು ನಿದ್ರೆಗೆ ಜಾರಿದ್ದಾನೆ.
'ಏನು, ಕಾರ್ಯಕ್ರಮ ಮುಗಿದನಂತರ ತಂದುಕೊಡುತ್ತೀರಲ್ಲ ಈ ಪತ್ರವನ್ನು' ಎಂದು ಸಿಡಿಮಿಡಿಗುಟ್ಟ ಗೋಪಾಲಣ್ಣನಿಗೆ ಅದು ನಮ್ಮ ಪೋಸ್ಟಿಗೂ ಇಂದೇ ಬಂದದ್ದು ಮಾರಾಯ ಎಂದು ಹೇಳಲೂ ಆಗದೇ ಅಪ್ಪ ಹೊರಬಂದಿದ್ದಾನೆ, ಶನಿವಾರದ ಶಾಲೆ ಮುಗಿಸಿ ಬಂದ ಕುಣಬಿಯ ಹುಡುಗನೊಬ್ಬ ದಣಪೆಯ ಹೊರಗೆ ನಿಲ್ಲಿಸಿದ್ದ ಪೋಸ್ಟ್ಭಟ್ಟರ ಸೈಕಲ್ಲಿನ ಸ್ಟ್ಯಾಂಡ್ ತೆಗೆದಿದ್ದಾನೆ,ತನ್ನಳತೆಗಿಂತ ದೊಡ್ಡದಾದ ಸೈಕಲ್ಲನ್ನು ಹಿಡಿದು ನಿಲ್ಲಿಸಿ ಹತ್ತಿ ಪೆಡಲ್ ತುಳಿಯತೊಡಗಿದ್ದಾನೆ,ಇನ್ನೊಂದೇ ರೌಂಡು ಎನ್ನುತ್ತ ಮೂರ್ನಾಲ್ಕು ರೌಂಡ್ ಮುಗಿಸಿ ರೊಯ್ಯೆಂದು ಪತ್ರ ಕೊಟ್ಟು ಬಂದ ಅಪ್ಪನ ಬಳಿಯೇ ತಂದು ನಿಲಿಸಿದ್ದಾನೆ,ತುಸು ಅಂಜಿಕೆಯಿಂದ ಕೂಡಿದ ಅವನ ಮುಖದಲ್ಲಿನ ಪುಟ್ಟ ಮಾಯದ ನಗುವೊಂದು ನೀರವವನ್ನು ದಾಟಿ ನಿಧಾನವಾಗಿ ಅಪ್ಪನ ಮೋರೆಯನ್ನು ತಾಕಿಕೊಂಡು ಸಣ್ಣಗೆ ಅರಳತೊಡಗಿದೆ.
ಅಪ್ಪ ದೂರದ ನಾಗರಕಾನಿನ ಕಾಡಿನಲ್ಲಿರುವ ಪುನಿಯಜ್ಜನ ಪಾಲಿನ ಸರ್ಕಾರದ ಕಡೆಗಿನ ಅತಿದೊಡ್ಡ ಸಹಾಯವಾದ ವೃದ್ಧಾಪ್ಯ ವೇತನವನ್ನು ಕೊಡಹೋದವನು ಜೋರುಮಳೆಯಲ್ಲಿ ತೊಯ್ದುಬಂದಿದ್ದಾನೆ,ಅವನು ತನ್ನ ತೊಯ್ಯುವಿಕೆಯನ್ನೂ ಮರೆತು ಜೊತೆಗೆ ಒಯ್ದಿದ್ದ ಉಳಿದ ಪತ್ರಗಳನ್ನೆಲ್ಲ ಒಂದುರೀತಿಯ ಭಯದಿಂದ ಕೂಡಿದ ಕಾಳಜಿಯಲ್ಲಿ ಒಂದೊಂದನ್ನೆ ಹರವುತ್ತಿದ್ದರೆ,ಶಾಲೆಯಿಂದ ಅಮ್ಮನ ಜೊತೆ ಮನೆಗೆ ಬರುವಾಗ ಸಂಜೆಮಳೆಗೆ ಅರ್ಧಂಬರ್ಧ ತೊಯ್ದ ಇನ್ನೂ ಆಡುವ ಮೂಡಿನಲ್ಲೆ ಇರುವ ಪುಟಾಣಿಗಳಂತೆ ಕಾಣುತ್ತಿವೆ ಆ ಪತ್ರಗಳು.