16 September, 2012

ಜಗತ್ತಿನ ಕಣ್ಣಿನಲ್ಲಿ ಕಾವ್ಯವನ್ನು ನೋಡುವ ಕವಿ..


ರಮೇಶ್ ಅರೋಲಿಯವರಿಗೆ,

ಆರಾಮಿದ್ದೀರಾ? ನಿಮ್ಮ ಕವನ ಸಂಕಲನ 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೇ ಇಟ್ಟುಕೊಳ್ಳಿ' ಯನ್ನು ಓದಿದೆ. ಇಷ್ಟವಾಯ್ತು ಮತ್ತು ತುಂಬ ಖುಷಿಯಾಯ್ತು.  ಕಲವೊಮ್ಮೆ ಇಷ್ಟವಾದ ಬರಹಗಳ ಬಗ್ಗೆ ಅನ್ನಿಸಿದ್ದನ್ನು ಹಂಚಿಕೊಳ್ಳುತ್ತಿರುತ್ತೇನೆ. ಇದೂ ಹಾಗೇ ಒಂದು ಅನಿಸಿಕೆಯೇ ಹೊರತು ಗಂಭೀರವಾಗಿ ತೆಗೆದುಕೊಳ್ಳಬೇಕಾದದ್ದಲ್ಲ.

ನಿಮ್ಮ ಕಾವ್ಯ ಭಾಷೆಯಲ್ಲಿ ಗುಂಗು ಹಿಡಿಸುವ ಗಝಲ್‌ಗಳ ಮತ್ತಿದೆ. ಮತ್ತೆ ಮತ್ತೆ ಕಾಡುವ ದಟ್ಟ ವಿಷಾದವಿದೆ. ಹರಿತ ಅಲಗುಗಳ ಪ್ರತಿರೋಧವಿದೆ. ಜೊತೆಗೆ ಮತ್ತೆ ಮತ್ತೆ ಮಜಾಕ್ಕೆ ಕೂಡ ಓದಿಕೊಳ್ಳಬೇಕೆನಿಸುವ ಲಯ ಲಾಲಿತ್ಯ ಇದೆ. ಈ ವಿಶಿಷ್ಟ ಸಂಕರಗಳಿಂದಲೇ ನಿಮ್ಮ ಕಾವ್ಯ ಆಪ್ತವಾಗುತ್ತದೆ, ಬೆರಗು ಹುಟ್ಟಿಸುತ್ತದೆ.

ನೀವು ಈ ಜಗತ್ತಿನ ಜಂಜಡಗಳಿಂದ, ಗದ್ದಲಗಳಿಂದ ಬೇರೆ ಕೂತು ನಿರ್ವಾತದಲ್ಲಿ ಕಾವ್ಯವನ್ನು ಕೇವಲ 'ಕಟ್ಟುವ ಕಲೆ'ಯಾಗಿ ಪ್ರಾಕ್ಟಿಸ್ ಮಾಡುತ್ತಾ ಕಳೆದುಹೋಗುವ ಕವಿಯಲ್ಲ. ಸುತ್ತಲಿನ ಜಗತ್ತಿಗೆ, ಅದರ ಆಗು ಹೋಗುಗಳಿಗೆ ತೆರೆದುಕೊಂಡು ಅದಕ್ಕೆ ತೀವ್ರವಾಗಿ ಸ್ಪಂದಿಸುವ ಒತ್ತಡದಲ್ಲಿ ಬರೆಯುವ ಮತ್ತು ಈ ಜಗದ ಎಲ್ಲ ಕ್ರೌರ್ಯಗಳ, ದುರಂತ ನೋವು ದಾರುಣತೆಗಳ ಜೊತೆಯಲ್ಲೇ ತಾನೂ ಬೆಳೆಯಬೇಕು ಎಂಬ ಎಚ್ಚರವಿರುವ ಸಹೃದಯಿ. (ನಿಮ್ಮ ಅನೇಕ ಕವನಗಳ ಕೊನೆಗೆ ಕೊಟ್ಟಿರುವ ಟಿಪ್ಪಣಿಯೂ ಇದಕ್ಕೆ ಪುಷ್ಟಿ ನೀಡುತ್ತದೆ)  ನೇರವಾಗಿ ಹೇಳಬೇಕೆಂದರೆ ನಿಮಗೆ ಶ್ರೇಷ್ಠ ಕವಿಯಾಗಿ ಆ ಕಣ್ಣಿಂದ ಜಗತ್ತನ್ನು ನೋಡುವುದಕ್ಕಿಂತ ಒಳ್ಳೆಯ ಮನುಷ್ಯನಾಗಿ ಜಗತ್ತಿನ ಕಣ್ಣಲ್ಲಿ ಕಾವ್ಯವನ್ನು ನೋಡುವುದು ಮುಖ್ಯ ಅಂದುಕೊಂಡವರು ನೀವು ಅನ್ನಿಸಿತು.

ಸಂಕಲನದ 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೇ ಇಟ್ಟುಕೊಳ್ಳಿ' ಎಂಬ ಹೆಸರೇ ವಿಚಿತ್ರ ಸೆಳೆಯುವ ಹಾಗಿದೆ. ಮೊದಲ ಕವನ 'ದುಃಖ ದಾಖಲಿಸುವವನೇ ಇದನ್ನು ಬರೆದಿಟ್ಟುಕೋ' ದಲ್ಲಿನ
 "ಇನ್ನು ತೀರ್ಪು ನಿನ್ನಿಚ್ಛೆಯಂತೇ ಬರೆದುಕೊಂಡಲ್ಲಿ
ಪ್ರತಿಸಲ ನಾನೇಕೆ ಅಚ್ಚರಿಪಡಲಿ" 
ಎಂಬ ಸಾಲು ಪ್ರಶ್ನೆಯಷ್ಟೇ ಅಲ್ಲ ಉತ್ತರವೂ ಕೂಡ ಆಗಿ ಪಕ್ಷಪಾತದ ತೀರ್ಪೂ ನಿರೀಕ್ಷಿತವಾಗುವ ದುರಂತವನ್ನು  ರಾಚುವಂತಿದೆ.

ಚಿತ್ರ ಕೃಪೆ:  http://naditeera.blogspot.in 
 'ಮಂಡಿಯೂರಿದ್ದಾಳೆ ಕಿಸಾಗೋತಮಿ ಜೀವಕ್ಕಲ್ಲ' ಕವನದಲ್ಲಿ ಬರುವ ಸಾಲು "ಮಂಡಿಯೂರಿ ಕಿಸಾಗೋತಮಿಯಾಗುತ್ತಾಳೆ". 'ಆಗುತ್ತಾಳೆ' ಅಂದರೆ ಅವಳು ಕಿಸಾಗೋತಮಿಯೇ ಅಲ್ಲ. ಇಲ್ಲಿ ಕಿಸಾಗೋತಮಿ ಕೇವಲ ಗತಕಾಲದ ಕತೆ ಅಥವಾ ಪ್ರತಿಮೆಯಷ್ಟೇ ಅಲ್ಲದೇ ಒಂದು 'ಸಂದರ್ಭ'ವಾಗಿ ಯಾರು ಬೇಕಾದರೂ ಹಾಯಬೇಕಾಗಿಬರಬಹುದಾದ 'ಮನಸ್ಥಿತಿ'ಯಾಗಿ ಹೊಳೆಯುವ ರೀತಿ ತುಂಬ ಇಷ್ಟವಾಯ್ತು. ಅಲ್ಲದೇ ಕಿಸಾಗೋತಮಿ ಹೆಸರಿನ ಆ ಸಿಚುವೇಶನ್ನಿಗೆ ಬುದ್ಧನ ಎಲ್ಲ ಬೋಧೆಗಳಿಗೆ ರಪ್ಪನೇ ಎದುರಾಗಿ 'ಗೋರಿಗಳ ಮೇಲೆ ಕಟ್ಟಿದ ಊರ ತೊರೆದು' ಮತ್ತೆ ಆಸೆಯ ಮೂಲವ ನೆನೆದು' ಹೊರಡುವಂತೇ ಮಾಡುವ ಶಕ್ತಿಯಿರುವುದು ಬೆರಗಿಗೆ ಕಾರಣವಾಯ್ತು.

'ಹಾಗೇ ಉಸಿರಾಟದಲ್ಲೇಕೋ ಸಂದೇಹವೀಗ
ಹುಡುಗನಿಗೆ ಅನುಮಾನ
ತೋಪಿನಲಿ ತೂರಿಬಿಟ್ಟ ಮುತ್ತು
ಆಕೆ ತನಗೆ ತಲುಪಿಲ್ಲ ಎಂದಾಗ!' (ಸ್ಮಶಾನಗಳು ಮುಚ್ಚಲಿವೆ ಮನುಷ್ಯರಿದ್ದರೆ ಕಳುಹಿಸಿ)

 ಇಲ್ಲಿ ಕ್ರೌರ್ಯ ಮತ್ತು ಹೇಗೆ ಒಟ್ಟೊಟ್ಟಿಗೇ ಉಕ್ಕುತ್ತವೆ ನೋಡಿ. ಒಂಥರಾ ಚೆಂದದ ಬೆಕ್ಕು ಒಮ್ಮೆಲೇ ಪಂಜನ್ನು ಹೊರಚಾಚಿ ಪರಚಿದಾಗ ಅದು ಬೆರೆಯೇ ಆಗಿ ಕಾಣತೊಡಗುತ್ತಲ್ಲ ಹಂಗೆ. "ತೋಪಿನಲ್ಲಿ ತೂರಿಬಿಟ್ಟ ಮುತ್ತು" ಇಲ್ಲಿ ತೂರಿಬಿಟ್ಟ ಮುತ್ತು ಎಷ್ಟು ನವಿರಾದ ಕಲ್ಪನೆಯನ್ನು ಮನದಲ್ಲಿ ಮೂಡಿಸುತ್ತದೆಯೋ, ಅದರ ಹಿಂದಿನ ಶಬ್ದ "ತೋಪಿನಲ್ಲಿ" ಅಷ್ಟೇ ತೀವ್ರವಾಗಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಮತ್ತು ಈ ದಾರುಣತೆ ನಿಮ್ಮ ಕಾವ್ಯದಲ್ಲಿ ಎಷ್ಟು ಸಹಜವಾಗಿ ಬರುತ್ತದೆ ಎಂಬುದು ಅಚ್ಚರಿ ಹುಟ್ಟಿಸಿತು. 

'ಹಸಿವೆಗೆ ಉಪಮೆಗಳ
ಹುಡುಕಿ ಹಸಿದುಕೊಂಡಿರಿ ನೀವು
ಬಿಡಿ ಅದ್ಹೇಗೆ ಅರ್ಥವಾದೇವು
ಅರ್ಧರಾತ್ರಿಯ ಅನಾಥ ಪ್ರತಿಮೆಗಳು ನಾವು!" (ಮರ್ಕ್ಯೂರಿ ಲೈಟಿನಡಿಗೆ)

ನಿಮ್ಮ ಕಾವ್ಯಕ್ಕೆ ಅವರ ತೀರ್ಪಿನ ಫಲಿತಾಂಶ ಮೊದಲೇ ಅರಿತೂ, ಸದಾ ಹಾಲುಗಲ್ಲದ ಮೇಲೆ ನಳಿಕೆ ಹಿಡಿಯುವ ಕ್ರೌರ್ಯದ ಎದುರೂ ನಿರ್ಲಿಪ್ತವಾಗಿರಬಲ್ಲ ಮತ್ತು ಅಷ್ಟೇ ತಣ್ಣಗೇ "ಕಾಯಿದೆಗಳ ಹೊರಡಿಸಿ ನಿಷೇಧಿಸಲಾಗದು ನಿಟ್ಟುಸಿರು" ಎಂದು ಧೈರ್ಯವಾಗಿ ಹೇಳುವ ತಣ್ಣನೆಯ ಆದರೆ ಗಟ್ಟಿ ದನಿಯಿದೆ ಅನ್ನಿಸಿತು.

ಇವಿಷ್ಟೇ ಅಲ್ಲ ಸಂಕಲನದ ಇನ್ನು ಬಹಳ ಕವಿತೆಗಳು ತುಂಬಾ ಇಷ್ಟವಾದವು. ಈ ಸಂಕಲನ ಓದಿದ ಮೇಲೆ ನಿಮ್ಮ ಮುಂದಿನ ಬರವಣಿಗೆಯ ಮೇಲೆ ವಿಶ್ವಾಸಪೂರ್ಣ ಕುತೂಹಲ ಹುಟ್ಟಿದೆ. ಇನ್ನೂ ಒಳ್ಳೆಯ ಕವಿತೆಗಳನ್ನು ಬರೆಯಿರಿ.. ಶುಭವಾಗಲಿ.

ಪ್ರೀತಿಯಿಂದ,

ಪದ್ಮನಾಭ ಭಟ್, ಶೇವ್ಕಾರ್.


-----------------------------------------------------------------------------------------------------------

(ಇದು 'ರೂಪಾಂತರ'ದ  ಅತಿಥಿ ಬರಹ. ಪದ್ಮನಾಭ ಭಟ್, ನಮ್ಮ ನಡುವಿನ ಉತ್ಸಾಹಿ ಯುವ ಬರಹಗಾರ, ಸೂಕ್ಷ್ಮ ಸಂವೇದನಾಶೀಲ ಓದುಗ, ಭಾವಜೀವಿ. ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿ)