ಮನದ ಗೋಡೆಯ ಮೇಲೆ

ಕನಸಿನ ಚಿತ್ರಪಟಗಳು

ಚೌಕಿಯ ಕನ್ನಡಿಯೆದುರು
ರೆಡಿಯಾಗುತ್ತಿವೆ
ಪೋರನ ಕನಸುಗಳು

ಕಂಬಳಿ ಹುಳವು
ಕನಸಿನ ರೆಕ್ಕೆ ಕಟ್ಟಿಕೊಂಡು
ಚಿಟ್ಟೆಯಾಗಿ ಹಾರಿದೆ













  • ಧಿಮಿ ಧಿಮಿ ನಡೆಯುತ್ತಿದ್ದ ಆ ಅಮ್ಮನ ಬಗಲಲ್ಲಿ ಎದೆಗಂಟಿದ ಪುಟ್ಟಮಗು, ಕೈಯಲ್ಲೊಂದು ಭಾರದ ಚೀಲ,  ಬೆವರುಗಟ್ಟಿದ ಹಣೆ,ಸೊಂಟಕ್ಕೆ ಕಟ್ಟಿದ ಸೆರಗು. ಅಮ್ಮ ಮುಂದೆ ಮುಂದೆ ನಡೆಯುತ್ತಿದ್ದರೆ ತೊದಲು ಹೆಜ್ಜೆಯಾಗಿ ಹಿಂಬಾಲಿಸುತ್ತಿದ ನಾಲ್ಕೈದು ವರ್ಷದ ಇನ್ನೊಬ್ಬ ಪೋರ. ಅವನ ಕೈಯಲ್ಲಿನ ತಲೆಕೆಳಗಾದ ಪುಟ್ಟ ಮಾಸುಗುಲಾಬಿ ಬಣ್ಣದ ಬೊಂಬೆಯ ಅರಿವಿಲ್ಲದ ಮಂದಹಾಸದಲ್ಲಿನ ಕನಸೊಂದು ಈ ಶಹರದ ಕಟ್ಟಡದ ಕಿಟಕಿಗಳನು ಎಟುಕಲಾಗದೆ ನೋಡುತ್ತಿದ್ದ ಪರಿ ಅವ್ಯಕ್ತದ ದುಗುಡದಂತೆ ಮನದ ತುದಿಯಲೆಲ್ಲೋ ಹೊಕ್ಕಿ ಕಂಪಿಸತೊಡಗಿತ್ತು.. 

  • ಪೆಟಿಕೋಟಿನ ಆ ಪುಟ್ಟಿಯ ಕಂಗಳಲ್ಲಿ ರಾತ್ರಿ ಕತೆ ಹೇಳಲೆಂದು ಸಾವಿರ ತಾರೆಗಳ ನಡುವಿಂದ ಬಂದ ಕನಸೊಂದು ಬೆಳಕಿನ ರೇಕುಗಳ ಬೆರೆಯಲೆಂಬಂತೆ ಇಷ್ಟೆ ಬಾಗಿಲು ತೆರೆದು ಬೆರಗು ಕಂಗಳಲ್ಲಿ ಇಣುಕುತ್ತಿದೆ.

  • ಪುಟಾಣಿ ಯಕ್ಷಿಯೊಬ್ಬಳು ನಸುಕಿನಲ್ಲಿ ಭುವಿಯ ಮೇಲೆ ರಂಗವಲ್ಲಿಯಿಡುತ್ತಿದ್ದಾಗ ಸೂರ್ಯ ಕಂಡುಬಿಟ್ಟಿದ್ದಾನೆ, ನಾಚಿದ ಪೋರಿ ನಾಳೆ ಅರಳಲಿರುವ ಆ ಮೊಗ್ಗಿನಲ್ಲಿ ಅಡಗಿದಳು ನೋಡಿ.

  • ಆ ಹುಡುಗನ ಬಳಿಯಿರುವ ಎತ್ತರದ ವಸ್ತುವೆಂದರೆ ಅವನ ಕಣ್ಣೊಳಗಿನ ಆಗಸದ ನೀಲಿ ಮಾತ್ರ.

  • ದಟ್ಟ ಸುರಿವ ಕಾಡಿನಲ್ಲಿ ಜೋರುಮಳೆಗೆ ಹಮಾಸ್ಕಲೆಲ್ಲ ಹರಿದು ಕಪ್ಪಾದ ಕೆಂಪು ಹೆಂಚಿನ ಇಬ್ಬನಿ ಮಂಜು ಮುಸುಕಿದ ಮಾಡಿನ ಮನೆಯ ಮೇಲೆ ಕಾಗೆ ಹಕ್ಕಿಗಳ ಕೂಕು,ದಾಸಾಳ,ಸೇವಂತಿ,ದುಂಡುಮಲ್ಲಿಗೆ,ನಿತ್ಯಪುಷ್ಪ,ತುಳಸಿ,ಜಾಜಿಗಳಿಂದ ತುಂಬಿದ ದೊಡ್ಡ ಅಂಗಳ ನಡುವೆ ತುಳಸಿ ಪೀಠ,ಎದುರಿಗೆ ಪೊದೆಗಳನ್ನು ಸರಿಸಿ ಸಂಕ ದಾಟಿ ಅಂತು ಇಂತು ಮನೆಗೆ ಬಂದುಮುಟ್ಟಿದ ಒಂಟಿ ಕಾಲ್ದಾರಿ,ಸುತ್ತ ಎತ್ತರದ ತೆಂಗಿನಮರಗಳು,ಆಕಾಶಮುತ್ತುವ ಸಾಲುಅಡಿಕೆಮರಗಳ ತೋಟ,ಸದ್ದಾದರೆ ಮಳೆಯದೇ ಎನ್ನುವ ಹಾಗೆ ನೀರವ ಮೌನದಲ್ಲಿ ಸಗಣಿ ನೀರು ಸಾರಿಸಿ ಹಾಕಿಟ್ಟ ರಂಗೋಲಿ,ಹೊರಗೆ ನಿಲಿಸಿಟ್ಟ ಸೈಕಲ್ಲು,ಮೋಟಾರುಗಾಡಿ,ದೋಸೆಗೆ ಹಚ್ಚಿದ ಎಣ್ಣೆಯ ಕಂಪಿನೊಂದಿಗೆ ತೇಲಿಬರುತಿರುವ ರೇಡಿಯೊದ್ದೊ ಟಿವಿಯದ್ದೋ ಇಲ್ಲ ಒಳಮನೆಯ ಹೆಂಗಸರದ್ದೊ ಸಣ್ಣ ಹಾಡು, ಸಣ್ಣ ಕಟಕಟಯ ಕಿಟಕಿಗೆ ತೂಗುಹಾಕಿದ ಪಂಚಾಂಗ,ಮಕ್ಕಳ ಪಾಟೀಚೀಲ,ದೊಡ್ಡ ಹಳೇಕಾಲದ ಗಟ್ಟಿ ಮಂಚ,ಎದುರಿಗೆ ಮರೆಯದೇ ಇಟ್ಟ ಕವಳದ ಪೇಳಿ,ಅಲ್ಲೇ ಬದೀಗೆ ನಿನ್ನೆ ಕೆಲಸದವರು ಇಟ್ಟುಹೋದ ಮಣ್ಣು ಅಂಟಿದ ಹಾರೆ,ಪಿಕಾಸಿ,ಕತ್ತಿ,ಗುದ್ದಲಿ, ನೀರಚೊಂಬು, ಸೆಣಬಿನ ಚೀಲ ಹೀಗೆ ಅಲ್ಲಿನ ಮನೆಗಳಿಗಷ್ಟೆ ಇರುವ ತಮ್ಮದೇ ಆಪ್ತ ಪರಿಕರಗಳು ಹಾಗು ಅವುಗಳವೇ ಕ್ಷಣಗಳು.
     ಅಂಥ ಮನೆಯಲ್ಲಿ ನಸುಕಿಗೇ ಗಡಬಡೆಲಿ ಬಚ್ಚಲ ಮನೆಗೆ ಹೋಗಿ ಸಣ್ಣ ಸ್ನಾನ ಮಾಡಿ,ಆಹಾಹ ಮಡಿ ಮೈಲಿಗೆ ಎಲ್ಲ ಮರ್ತು ಹಂಗೆ ಎರಡು ಮಂತ್ರ ಹೇಳಿ ದೇವ್ರಿಗೆ ಕೈಮುಗ್ದು ತೆಳ್ಳವು ಆಸ್ರಿಗೆ ಕುಡ್ದು ವಲೆ ಮುಂದೆ ಸ್ವಲ್ಪ ಕೂತು ಚಳಿ ಕಾಯ್ಸುತ್ತ,ಅಚ್ಚೆಮನೆ ಇಚ್ಚೆಮನೆ ಬದಿಗೆಲ್ಲ ಹೋಗ್ಬಂದು,ದೊಡ್ಡ ಗಡಿಯಾರ ಸದ್ದು ಕೇಳಿ ಕೆಲಸಕ್ಕೆ ಹೊರಟು,ಅಡಿಕೆ ಸುಲಿಯುತ್ತ ನೂರು ಮಾತಾಡಿ,ಯಕ್ಷಗಾನ- ತಾಳಮದ್ದಲೆಗೆ ಹೋಗುವ ನೆನಪಲ್ಲಿ ಎರಡು ಹಾಡು ಗುನುಗಿ,ಬಂದ ನೆಂಟ್ರಿಗೆ ಹಪ್ಪಳ ಸಂಡಿಗೆ,ಅಪ್ಪೆ ಮಾವಿನ ಉಪ್ಪಿನಕಾಯಿ,ಅಪ್ಪೆಹುಳಿ ತಂಬ್ಳಿ,ಜೊತೆಗೆ ನೀರು ಮಜ್ಜಿಗೆ,ನಂತರ ಚಂದದ ಕವಳದ ಪೇಳಿ,ಮದ್ವೆ-ಮುಂಜಿ,ಬಾಣಂತನ,ಕೊಟ್ಟಿಗೆ ದನ ಬಾಯ್ತುಂಬ ಮಾತು,ಹಳ್ಳಾ, ಗದ್ದೆನೆಟ್ಟಿ, ತೋಟದ ಕೊಳೆ,ಚೊರಾಟೆ, ಉಂಬ್ಳ, ಸಣ್ಣ ಸಣ್ಣ ಹಾವು, ಹಪ್ರ್ಯಾ ಅಡ-ಪಡಾ ಸುದ್ದಿ ಹೇಳ್ತಾ,ಪೇಟೇಲಿ ಸಿಕ್ಕ ಗುರುತಿನವರೊಂದಿಗೆ ನಮ್ದೇ ಚಂದದ  ಬಾಶೆಲಿ ಮರ್ಯದ್ದೆ ಮಾತಾಡಿಸಿ, ತೆಂಗಿನ ಸೋಗೆಯ ತಟ್ಟಿಯ ನಡುವೆ ಬೆಚ್ಚಗಿನ ಮನೆಯಲ್ಲಿ,ಮರೆತ ಆಸ್ತಿ ಜಗಳಗಳ ನಡುವೆ ಅಗ್ಗಾಸಿ ಸಿದ್ದಣ್ಣ,ತರಕಾರಿ ಬಸಪ್ಪ, ಫಾರೆಸ್ಟು  ಗಾರ್ಡ ಶ್ಯಾಮ ಎಲ್ಲರಿಗು ಮಾತನಾಡಿಸಿ ಆಸರಿಗೆ ಮಜ್ಜಿಗೆ ನೀರು ಕೊಡುವ ಹೆಣ್ಮಕ್ಕಳು, ತೋಟದ ಕೆಲಸದ ಹೊನ್ನಗೌಡ, ಮಾಬ್ಲ ಪೂಜಾರಿ,ಸಿದ್ದಿ ಶೇಶನ ಜೊತೆಗೆ ಅರ್ಧ ಎಲೆಯ ಕವಳ ಹಂಚಿಕೊಳ್ಳುತ್ತ ತಮಾಶೆ ಮಾಡುತ್ತ ಗಣತಿಗೆ ಬಂದ ನಾಯ್ಕಮಾಸ್ತರಿಗೆ,ಕರವಸೂಲಿಯ ಉಗ್ರಾಣಿ ಗೋಪಾಲನಿಗು ಆಚೆಬದಿಯ ಮನೆಯ ಸಂಕದ ದಾರಿಹೇಳಿಕೊಡುತ್ತಎಲ್ಲರೊಳಗೊಂದಾಗಿ ಗುದ್ದಲಿ ಹಿಡಿದು ಕೆಲಸ ಮಾಡುವ ಜನರಿಗೆ ಸಂಬಂದಿಸಿದ ನಡನಡುವೆಯೇ ನೆನಪಾದ ಅಪ್ಪಯ್ಯನ ಸಿಟ್ಟು, ಆಯಿಯ ಪ್ರೀತಿ,ಎಲ್ಲ ನೆನಪಿಸುತ್ತ ನವಿರು ನೀವುತ್ತ ನಮ್ಮ ಉಸಿರಿನ ಹಾಗೆ ನಮ್ಮೊಳಗೆ ಹಾಸುಹೊಕ್ಕಾದ ಅನನ್ಯ ಸಂಸ್ಕೃತಿಯ ನಮ್ಮೆಲ್ಲರ ಒಳಗಿನಿಂದ ದೇವರ ಪಕ್ಕದ ನವಿಲುಮುಖದ ದೀಪದ ಹಾಗೆ ಅವಿರತ ಪೊರೆವ ಹವ್ಯಕವೆಂಬ ಜೀವನ ಪದ್ದತಿಯ ಅನುರತ ಕ್ಷಣಗಳ ನಮ್ಮದೆ ದೈನಿಕವ ನಡೆಸುವ ಬನ್ನಿ.



  • ಎಲ್ಲಿ ಹೋದವವು ನಮ್ಮದೇ ಪ್ರತಿಮೆಗಳು
    ಕಾದ ಸಂಜೆಗಳು ಕಟ್ಟಿದ ರಾತ್ರಿ ಕನಸುಗಳು
    ಬಸ್ಸಿನಲ್ಲಿ ರೈಲಿನಲ್ಲಿ- ಸಂಪಿಗೆ ಮರದಡಿ 
    ಹೂವಂತೆ ಕಳೆದ ಕ್ಷಣಗಳೆಲ್ಲ
    ಬಿಸಿಲಿಗೆ ಒಣಗಿ ಬಿದ್ದಿವೆ

    ಒಲವ ಹಾಡಿದ ಮೌನದುಸಿರು
    ಇಳಿಸಂಜೆಯ ಎಷ್ಟೆಲ್ಲ ಮಾತುಗಳು
    ಕಳೆದಿವೆ ಮುಸುಕು ಕತ್ತಲಲಿ

    ನಾನು ನೀನು ಕೊಟ್ಟುಕೊಂಡ ನವಿಲುಗರಿಗಳೆಲ್ಲ ಸಂತೆಯಲ್ಲಿ ಬಿಕರಿಗಿಟ್ಟ ವಸ್ತುಗಳಂತೆ ತೋರುತ್ತಿವೆ ಈಗ.ನೂರು ಜನರಲ್ಲಿ ನಿನ್ನ ಕಣ್ಣು ನನ್ನನ್ನೇ ನಿಲುಕಿದ್ದು, ಬೆರಳಿಗೆ ಬೆರಳು ತಾಗಿಸಿ ತುಸುನಡುಗಿದ್ದು,ಆರುತಾಸು ಬಿಟ್ಟಿರಲು ನರಳಿದ್ದು ಬರೀ ನಾಟಕವಾ?ಮನೆ,ಬೈಕು,ಸೀರೆ,ಪಾತ್ರೆಪಗಡಿ,ಕಪಾಟು,ಗೋಡೆ,ಹಣ,ಬಾತ್ರೂಮು,ಕನ್ನಡಿ,ಟಾರ್ಚುಗಳಿಗೆ ಅರ್ಥವಿಲ್ಲದ ಗಳಿಗೆಗಳಿದ್ದವಲ್ಲ.ಎಲ್ಲ ಕತೆಯೆಂದಾದರೆ ನೆನಪುಗಳನ್ನೂ ಒಯ್ದುಬಿಡು.ನೀನು ಮಾಡಿದ್ದು ಮೋಸವೆನ್ನಲು ನಿನ್ನ ಬಕುಲದ ದಂಡೆಯ ಕಂಪು ನೆನಪಾಗುತ್ತದೆ.ಹೂವಷ್ಟೇ ಬಾಡುವ ಬಗ್ಗೆ ಗೊತ್ತಿತ್ತು ನನಗೆ.

    ಹೊಂಬಿಸಿಲಲ್ಲಿ ಕಂಡ ಎಲೆ ಮೇಲಿನ ಮಳೆಹನಿಯ ಮುತ್ತೆಲ್ಲ ಬೀಸುಗಾಳಿಗೆ ಬಿದ್ದಿದೆ ಕಳೆದ ಕನಸಾಗಿ.

    ಹೇಳು ಇದೆಲ್ಲಾ ನನ್ನದಷ್ಟೆ ನೋವಾ?ಇಲ್ಲ ಕಂಡಾಗಲೆಲ್ಲ ನಗಲಾರದೇ ನಗುವ ನಿನಗೂ ಹೀಗೇ ಅನ್ನಿಸುವುದುಂಟಾ 
    ನಿನ್ನ ಕದಡಿಹೋದ ಮುಖದಲ್ಲಿನ ನಗು ಕಷ್ಟವಾದರೂ ನಗಲೇಬೇಕಿದೆಯಾ?


No comments: