19 December, 2012

song of the body,song of the soul..




When you dance,I wish
you a wave o' the sea, that 
you might 
ever do nothing but 
that
-William Shakespeare



'ಛಂದ ಪುಸ್ತಕ' ಪ್ರಕಟಿಸಿದ ಜಯಶ್ರೀ ಭಟ್  ಅನುವಾದಿಸಿದ  'ಮಾವೋನ ಕೊನೆಯ ನರ್ತಕ' ಪುಸ್ತಕಕ್ಕೆ ರಚಿಸಿದ್ದ ಚಿತ್ರಗಳಿವು

15 October, 2012

ಇಲ್ಲಸ್ಟ್ರೇಷನ್



                                                    "..ದೂರ ದೂರದವರೆಗೆ ಹಬ್ಬಿ ನಿಂತ
                                                        ತೋಟಗಳು, ನಡುಬಾಗಿಸಿದ ರೈತರು.
                                                       ಹೀಗೆ ಹೂಜಿ ಒಂದು ಬಲಿಷ್ಠ ರಾಷ್ಟ್ರ.

                                                       ಒಮ್ಮೊಮ್ಮೆ ಅದರ ಖಾಲಿತನ ತುಂಬಲಿಕ್ಕೆ
                                                       ತಯಾರಿ ನಡೆಯುತ್ತೆ. ಅದು
                                                       ರಾಜನ ಅಧಿಕಾರಕ್ಕೆ
                                                       ಸೂಳೆಯ ಮೊಲೆತುರಿತಕ್ಕೆ
                                                       ವಿದೂಷಕನ ವ್ಯಂಗ್ಯಕ್ಕೆ.."     

                                                                    -ರವಿ ದ್ರಾವಿಡ (ಒಂದು ಹೂಜಿ ಮತ್ತು ಕವಣೆ ಏಟು)





* ಇದು ರವಿ ದ್ರಾವಿಡರ  'ಒಂದು ಹೂಜಿ ಮತ್ತು ಕವಣೆ ಏಟು' ಕವಿತೆಗೆ ಬಿಡಿಸಿದ ಇಲ್ಲಸ್ಟ್ರೇಷನ್, ಮೇಲಿನವು ಇದೇ ಕವಿತೆಯಿಂದ ಆಯ್ದ ಸಾಲುಗಳು.

Play Time


02 October, 2012

ಬೇರು-ಬಿಳಲು




ನಮ್ಮಲ್ಲಿ ಹಲವರು ಹೊಟ್ಟೆಪಾಡಿಗೋ ಅನಿವಾರ್ಯಕ್ಕೋ ಕಟ್ಟುಬಿದ್ದು ನಮ್ಮ ಮೂಲವನ್ನು ಬಿಟ್ಟು ಬಂದವರು,ನಾವು ಮೂಲದೆಡೆಗೆ ತುಡಿಯುತ್ತಲೇ ಇಲ್ಲಿನ ನಗರೀಕರಣ ವ್ಯವಸ್ಥೆಗೆಯಾಂತ್ರಿಕತೆಯ,ಜಾಗತೀಕರಣಉದಾರೀಕರಣ,ಬಂಡವಾಳಶಾಹಿತ್ವದ ಅನಿವಾರ್ಯಕ್ಕೆ ಒಗ್ಗಿಕೊಳ್ಳುತ್ತ ದಿನೇದಿನೇ ನಮ್ಮ ನೈಜತೆಯನ್ನ ಕಳೆದುಕೊಳ್ಳುತ್ತಿದ್ದೇವೆ, ಸಮಯವೋ ಮೇಲಧಿಕಾರಿಯೋ ಯಾವುದೋ ಕಾಣದ ಕೈ ನಮಗೂ ತಿಳಿಯದಂತೆ ನಮ್ಮನ್ನು ನಿಯಂತ್ರಿಸುತ್ತಿದೆ, ಎಲ್ಲಿಯವರೆಗೆಂದರೆ ನಿಯಂತ್ರಣವಿಲ್ಲದೇ ಅಸ್ತಿತ್ವವಿಲ್ಲವೆಂಬಂತೆ. ಕೊನೆಕೊನೆಗೆ ಬಣ್ಣವಿಲ್ಲದ ಒಂದು ಪೀಳಿಗೆ ನಮ್ಮದಾಗುತ್ತ ನಡೆದಿದೆ, ಬೇರೂ ಇಲ್ಲ ಬಿಳುಲೂ ಇಲ್ಲ. ಇಂತದ್ದೇ ಪರಿಸರವೂ ಸುತ್ತ ಬೆಳೆಯುತ್ತ ಬಂದಂತೆ ಬೇರಿನ ಹಂಗಿಲ್ಲದ ಯಾಂತ್ರಿಕತೆಯೇ ಪ್ರಿಯವಾಗುತ್ತ ನಮ್ಮನ್ನು ನಾವು ನಿರ್ವಾತದಲ್ಲಿ ಬಂದಿಸಿಕೊಳ್ಳುತ್ತ ಸಾಗಿದ್ದೇವೆ,ನಿಧಿಯಂತೆ ಅವುಚಿಕೊಂಡು ತಂದಿದ್ದ ಕನಸುಗಳು ನಮ್ಮ ಪರಿವೆಯೇ ಇಲ್ಲದೇ ಬಣ್ಣಕಳೆದುಕೊಂಡ ಗೊಂಬೆಗಳಾಗುತ್ತಿವೆ.ಸತ್ವಹೀನತೆಯೊಳಗೆ ಕುಳಿತು ನಮ್ಮ ಒಳತುಡಿತವನ್ನು ಗ್ರಹಿಸುವ ಸೂಕ್ಷ್ಮತೆಯನ್ನ ಕಳೆದುಕೊಳ್ಳುತ್ತ  ನಾವೇ ನಮ್ಮನ್ನು ಸ್ಪಂದಿಸದಷ್ಟು ಘನೀಭವಿಸುವ ಪ್ರಕ್ರಿಯೆಗೆ ಒಡ್ಡಿಕೊಳ್ಳುತ್ತ ನಡೆದಿದ್ದೇವೆ.

ಇದು 'ಮುಗುಳು' ಪತ್ರಿಕೆಗೆ ಮಾಡಿದ ಚಿತ್ರ, ಈ ಸಲದ ಮುಗುಳು ಒಳ್ಳೊಳ್ಳೇ ಲೇಖನಗಳಿಂದ ಕೂಡಿದೆ. ಈ ಇ ಪೇಪರ್ ವರ್ಶನ್‌ನ‌ಲಿಂಕಿನಲ್ಲಿ ಬಿಡುವಾದಾಗ ನೀವೂ ಮುಗುಳು ಓದಬಹುದು, ಡೌನ್‌ಲೋಡ್ ಕೂಡ ಮಾಡಿಟ್ಟುಕೊಳ್ಳಬಹುದು.

16 September, 2012

ಜಗತ್ತಿನ ಕಣ್ಣಿನಲ್ಲಿ ಕಾವ್ಯವನ್ನು ನೋಡುವ ಕವಿ..


ರಮೇಶ್ ಅರೋಲಿಯವರಿಗೆ,

ಆರಾಮಿದ್ದೀರಾ? ನಿಮ್ಮ ಕವನ ಸಂಕಲನ 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೇ ಇಟ್ಟುಕೊಳ್ಳಿ' ಯನ್ನು ಓದಿದೆ. ಇಷ್ಟವಾಯ್ತು ಮತ್ತು ತುಂಬ ಖುಷಿಯಾಯ್ತು.  ಕಲವೊಮ್ಮೆ ಇಷ್ಟವಾದ ಬರಹಗಳ ಬಗ್ಗೆ ಅನ್ನಿಸಿದ್ದನ್ನು ಹಂಚಿಕೊಳ್ಳುತ್ತಿರುತ್ತೇನೆ. ಇದೂ ಹಾಗೇ ಒಂದು ಅನಿಸಿಕೆಯೇ ಹೊರತು ಗಂಭೀರವಾಗಿ ತೆಗೆದುಕೊಳ್ಳಬೇಕಾದದ್ದಲ್ಲ.

ನಿಮ್ಮ ಕಾವ್ಯ ಭಾಷೆಯಲ್ಲಿ ಗುಂಗು ಹಿಡಿಸುವ ಗಝಲ್‌ಗಳ ಮತ್ತಿದೆ. ಮತ್ತೆ ಮತ್ತೆ ಕಾಡುವ ದಟ್ಟ ವಿಷಾದವಿದೆ. ಹರಿತ ಅಲಗುಗಳ ಪ್ರತಿರೋಧವಿದೆ. ಜೊತೆಗೆ ಮತ್ತೆ ಮತ್ತೆ ಮಜಾಕ್ಕೆ ಕೂಡ ಓದಿಕೊಳ್ಳಬೇಕೆನಿಸುವ ಲಯ ಲಾಲಿತ್ಯ ಇದೆ. ಈ ವಿಶಿಷ್ಟ ಸಂಕರಗಳಿಂದಲೇ ನಿಮ್ಮ ಕಾವ್ಯ ಆಪ್ತವಾಗುತ್ತದೆ, ಬೆರಗು ಹುಟ್ಟಿಸುತ್ತದೆ.

ನೀವು ಈ ಜಗತ್ತಿನ ಜಂಜಡಗಳಿಂದ, ಗದ್ದಲಗಳಿಂದ ಬೇರೆ ಕೂತು ನಿರ್ವಾತದಲ್ಲಿ ಕಾವ್ಯವನ್ನು ಕೇವಲ 'ಕಟ್ಟುವ ಕಲೆ'ಯಾಗಿ ಪ್ರಾಕ್ಟಿಸ್ ಮಾಡುತ್ತಾ ಕಳೆದುಹೋಗುವ ಕವಿಯಲ್ಲ. ಸುತ್ತಲಿನ ಜಗತ್ತಿಗೆ, ಅದರ ಆಗು ಹೋಗುಗಳಿಗೆ ತೆರೆದುಕೊಂಡು ಅದಕ್ಕೆ ತೀವ್ರವಾಗಿ ಸ್ಪಂದಿಸುವ ಒತ್ತಡದಲ್ಲಿ ಬರೆಯುವ ಮತ್ತು ಈ ಜಗದ ಎಲ್ಲ ಕ್ರೌರ್ಯಗಳ, ದುರಂತ ನೋವು ದಾರುಣತೆಗಳ ಜೊತೆಯಲ್ಲೇ ತಾನೂ ಬೆಳೆಯಬೇಕು ಎಂಬ ಎಚ್ಚರವಿರುವ ಸಹೃದಯಿ. (ನಿಮ್ಮ ಅನೇಕ ಕವನಗಳ ಕೊನೆಗೆ ಕೊಟ್ಟಿರುವ ಟಿಪ್ಪಣಿಯೂ ಇದಕ್ಕೆ ಪುಷ್ಟಿ ನೀಡುತ್ತದೆ)  ನೇರವಾಗಿ ಹೇಳಬೇಕೆಂದರೆ ನಿಮಗೆ ಶ್ರೇಷ್ಠ ಕವಿಯಾಗಿ ಆ ಕಣ್ಣಿಂದ ಜಗತ್ತನ್ನು ನೋಡುವುದಕ್ಕಿಂತ ಒಳ್ಳೆಯ ಮನುಷ್ಯನಾಗಿ ಜಗತ್ತಿನ ಕಣ್ಣಲ್ಲಿ ಕಾವ್ಯವನ್ನು ನೋಡುವುದು ಮುಖ್ಯ ಅಂದುಕೊಂಡವರು ನೀವು ಅನ್ನಿಸಿತು.

ಸಂಕಲನದ 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೇ ಇಟ್ಟುಕೊಳ್ಳಿ' ಎಂಬ ಹೆಸರೇ ವಿಚಿತ್ರ ಸೆಳೆಯುವ ಹಾಗಿದೆ. ಮೊದಲ ಕವನ 'ದುಃಖ ದಾಖಲಿಸುವವನೇ ಇದನ್ನು ಬರೆದಿಟ್ಟುಕೋ' ದಲ್ಲಿನ
 "ಇನ್ನು ತೀರ್ಪು ನಿನ್ನಿಚ್ಛೆಯಂತೇ ಬರೆದುಕೊಂಡಲ್ಲಿ
ಪ್ರತಿಸಲ ನಾನೇಕೆ ಅಚ್ಚರಿಪಡಲಿ" 
ಎಂಬ ಸಾಲು ಪ್ರಶ್ನೆಯಷ್ಟೇ ಅಲ್ಲ ಉತ್ತರವೂ ಕೂಡ ಆಗಿ ಪಕ್ಷಪಾತದ ತೀರ್ಪೂ ನಿರೀಕ್ಷಿತವಾಗುವ ದುರಂತವನ್ನು  ರಾಚುವಂತಿದೆ.

ಚಿತ್ರ ಕೃಪೆ:  http://naditeera.blogspot.in 
 'ಮಂಡಿಯೂರಿದ್ದಾಳೆ ಕಿಸಾಗೋತಮಿ ಜೀವಕ್ಕಲ್ಲ' ಕವನದಲ್ಲಿ ಬರುವ ಸಾಲು "ಮಂಡಿಯೂರಿ ಕಿಸಾಗೋತಮಿಯಾಗುತ್ತಾಳೆ". 'ಆಗುತ್ತಾಳೆ' ಅಂದರೆ ಅವಳು ಕಿಸಾಗೋತಮಿಯೇ ಅಲ್ಲ. ಇಲ್ಲಿ ಕಿಸಾಗೋತಮಿ ಕೇವಲ ಗತಕಾಲದ ಕತೆ ಅಥವಾ ಪ್ರತಿಮೆಯಷ್ಟೇ ಅಲ್ಲದೇ ಒಂದು 'ಸಂದರ್ಭ'ವಾಗಿ ಯಾರು ಬೇಕಾದರೂ ಹಾಯಬೇಕಾಗಿಬರಬಹುದಾದ 'ಮನಸ್ಥಿತಿ'ಯಾಗಿ ಹೊಳೆಯುವ ರೀತಿ ತುಂಬ ಇಷ್ಟವಾಯ್ತು. ಅಲ್ಲದೇ ಕಿಸಾಗೋತಮಿ ಹೆಸರಿನ ಆ ಸಿಚುವೇಶನ್ನಿಗೆ ಬುದ್ಧನ ಎಲ್ಲ ಬೋಧೆಗಳಿಗೆ ರಪ್ಪನೇ ಎದುರಾಗಿ 'ಗೋರಿಗಳ ಮೇಲೆ ಕಟ್ಟಿದ ಊರ ತೊರೆದು' ಮತ್ತೆ ಆಸೆಯ ಮೂಲವ ನೆನೆದು' ಹೊರಡುವಂತೇ ಮಾಡುವ ಶಕ್ತಿಯಿರುವುದು ಬೆರಗಿಗೆ ಕಾರಣವಾಯ್ತು.

'ಹಾಗೇ ಉಸಿರಾಟದಲ್ಲೇಕೋ ಸಂದೇಹವೀಗ
ಹುಡುಗನಿಗೆ ಅನುಮಾನ
ತೋಪಿನಲಿ ತೂರಿಬಿಟ್ಟ ಮುತ್ತು
ಆಕೆ ತನಗೆ ತಲುಪಿಲ್ಲ ಎಂದಾಗ!' (ಸ್ಮಶಾನಗಳು ಮುಚ್ಚಲಿವೆ ಮನುಷ್ಯರಿದ್ದರೆ ಕಳುಹಿಸಿ)

 ಇಲ್ಲಿ ಕ್ರೌರ್ಯ ಮತ್ತು ಹೇಗೆ ಒಟ್ಟೊಟ್ಟಿಗೇ ಉಕ್ಕುತ್ತವೆ ನೋಡಿ. ಒಂಥರಾ ಚೆಂದದ ಬೆಕ್ಕು ಒಮ್ಮೆಲೇ ಪಂಜನ್ನು ಹೊರಚಾಚಿ ಪರಚಿದಾಗ ಅದು ಬೆರೆಯೇ ಆಗಿ ಕಾಣತೊಡಗುತ್ತಲ್ಲ ಹಂಗೆ. "ತೋಪಿನಲ್ಲಿ ತೂರಿಬಿಟ್ಟ ಮುತ್ತು" ಇಲ್ಲಿ ತೂರಿಬಿಟ್ಟ ಮುತ್ತು ಎಷ್ಟು ನವಿರಾದ ಕಲ್ಪನೆಯನ್ನು ಮನದಲ್ಲಿ ಮೂಡಿಸುತ್ತದೆಯೋ, ಅದರ ಹಿಂದಿನ ಶಬ್ದ "ತೋಪಿನಲ್ಲಿ" ಅಷ್ಟೇ ತೀವ್ರವಾಗಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಮತ್ತು ಈ ದಾರುಣತೆ ನಿಮ್ಮ ಕಾವ್ಯದಲ್ಲಿ ಎಷ್ಟು ಸಹಜವಾಗಿ ಬರುತ್ತದೆ ಎಂಬುದು ಅಚ್ಚರಿ ಹುಟ್ಟಿಸಿತು. 

'ಹಸಿವೆಗೆ ಉಪಮೆಗಳ
ಹುಡುಕಿ ಹಸಿದುಕೊಂಡಿರಿ ನೀವು
ಬಿಡಿ ಅದ್ಹೇಗೆ ಅರ್ಥವಾದೇವು
ಅರ್ಧರಾತ್ರಿಯ ಅನಾಥ ಪ್ರತಿಮೆಗಳು ನಾವು!" (ಮರ್ಕ್ಯೂರಿ ಲೈಟಿನಡಿಗೆ)

ನಿಮ್ಮ ಕಾವ್ಯಕ್ಕೆ ಅವರ ತೀರ್ಪಿನ ಫಲಿತಾಂಶ ಮೊದಲೇ ಅರಿತೂ, ಸದಾ ಹಾಲುಗಲ್ಲದ ಮೇಲೆ ನಳಿಕೆ ಹಿಡಿಯುವ ಕ್ರೌರ್ಯದ ಎದುರೂ ನಿರ್ಲಿಪ್ತವಾಗಿರಬಲ್ಲ ಮತ್ತು ಅಷ್ಟೇ ತಣ್ಣಗೇ "ಕಾಯಿದೆಗಳ ಹೊರಡಿಸಿ ನಿಷೇಧಿಸಲಾಗದು ನಿಟ್ಟುಸಿರು" ಎಂದು ಧೈರ್ಯವಾಗಿ ಹೇಳುವ ತಣ್ಣನೆಯ ಆದರೆ ಗಟ್ಟಿ ದನಿಯಿದೆ ಅನ್ನಿಸಿತು.

ಇವಿಷ್ಟೇ ಅಲ್ಲ ಸಂಕಲನದ ಇನ್ನು ಬಹಳ ಕವಿತೆಗಳು ತುಂಬಾ ಇಷ್ಟವಾದವು. ಈ ಸಂಕಲನ ಓದಿದ ಮೇಲೆ ನಿಮ್ಮ ಮುಂದಿನ ಬರವಣಿಗೆಯ ಮೇಲೆ ವಿಶ್ವಾಸಪೂರ್ಣ ಕುತೂಹಲ ಹುಟ್ಟಿದೆ. ಇನ್ನೂ ಒಳ್ಳೆಯ ಕವಿತೆಗಳನ್ನು ಬರೆಯಿರಿ.. ಶುಭವಾಗಲಿ.

ಪ್ರೀತಿಯಿಂದ,

ಪದ್ಮನಾಭ ಭಟ್, ಶೇವ್ಕಾರ್.






-----------------------------------------------------------------------------------------------------------

(ಇದು 'ರೂಪಾಂತರ'ದ  ಅತಿಥಿ ಬರಹ. ಪದ್ಮನಾಭ ಭಟ್, ನಮ್ಮ ನಡುವಿನ ಉತ್ಸಾಹಿ ಯುವ ಬರಹಗಾರ, ಸೂಕ್ಷ್ಮ ಸಂವೇದನಾಶೀಲ ಓದುಗ, ಭಾವಜೀವಿ. ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿ)

29 April, 2012

ನೀನು

ನನ್ನ ಬಾಳಲ್ಲಿ ನಿನ್ನ ಹಾಜರಿಯೊಂದಿರದಿದ್ದರೆ ಪ್ರೀತಿಯೆಂದರೇನೆಂಬುದು ಬಹುಷಃ ನನಗೂ ಅರ್ಥವಾಗಿಬಿಡುತ್ತಿತ್ತೇನೋ..