29 June, 2011

ಬಸ್‌ಸ್ಟ್ಯಾಂಡು

ಅದು ಒಂಥರಾ ಜಾಗ ಆ ಜಾಗ ಕಣ್ಣು ಬಿಡುವುದು ಈಗಷ್ಟೇ ಅಲ್ಲೆಲ್ಲೋ ಮೂಲೆಯಿಂದ ಎದ್ದುಕುಳಿತ ಹಮಾಲಿಗಳು, ರಾತ್ರಿ ಪಾಳಿಯ ಕಂಡಕ್ಟರುಗಳು ತಮ್ಮ ತಮ್ಮ ಟ್ರಾವೆಲಿಂಗ್‌ ಮನೆಯ ದಿನಚರಿಗಳನ್ನು ಹವಾಯಿ ಚಪ್ಪಲಿ,ಬ್ರಶ್ಶು,ಪೇಸ್ಟು ಹುಡುಕುವುದರೊಂದಿಗೆ ಶುರುಮಾಡುತ್ತಾರಲ್ಲಾ ಆಗ.ಅದರ ಹೆಸರು ಬಸ್‌ಸ್ಟ್ಯಾಂಡು.ಅಜ್ಜನ ಮನೆಗೆ ಹೋಗಲು ಬೆಳಬೆಳಿಗ್ಗೆಯೇ ಅಮ್ಮನೊಟ್ಟಿಗೆ ಬಂದ ಪುಟ್ಟನ ಕೇಕೆಯಿಂದ, ಅವಸರವಾಗಿ ಬಸ್ಸಿಗೆ ಓಡಿಬಂದ ಕಾಲೇಜು ಹುಡುಗಿಯ ಟಿಫಿನ್ ಬಾಕ್ಸು ಓಪನ್ ಆಗುವ ಘಮದಿಂದ,ಬಗೆಬಗೆಯ ಬಣ್ಣದ ಚಪ್ಪಲಿಗಳ ಟಪಟಪದಿಂದ,ಅಲ್ಲೇ ಚಿಲಿಪಿಲಿಗುಟ್ಟಾಗಲೇ ಇರುವು ಅರಿವಾಗುವ ಪುಟ್ಟ ಗುಬ್ಬಚ್ಚಿ,ಇಣಚಿಗಳಿಂದ ಆ ಬಸ್‌ಸ್ಟ್ಯಾಂಡಿಗೆ ಅಸ್ತಿತ್ವ. ಅಲ್ಲಿ ಯಾರು ಬರುವುದಿಲ್ಲ ಎನ್ನುವ ಹಾಗೆಯೇ ಇಲ್ಲ, ಅಜ್ಜ ಅಜ್ಜಿಯಿಂದ ಹಿಡಿದು ಹಾಲುಗಲ್ಲದ ಹಸುಳೆಯವರೆಗೆ ಅತಿಥಿಗಳು,ಸ್ವಾಮಿ ನಾರಾಯಣನಿಂದ ಹಿಡಿದು ಹರುಕು ಅಂಗಿಯ ಬೇಡುವ ಮುದುಕನವರೆಗೆ ಎಲ್ಲರಿಗೂ ಜಾಗ ಉಂಟು.ಅದನ್ನು ನಾವೆಲ್ಲ ಬಸ್‌ಸ್ಟ್ಯಾಂಡೆಂದು ಕರೆದರೆ ಬೀದಿಬದಿಯ ಕೂಲಿಯವನಿಗೆ,ಬೆಳಗಾಗೆದ್ದು ಪೇಪರ್ ಹಂಚುವವನಿಗೆಲ್ಲ ರಾತ್ರಿ ಮಲಗಲು ಅದೇ ಮನೆ .ಆಂಥ ಬಸ್‌ಸ್ಟ್ಯಾಂಡುಗಳಲ್ಲಿ ಚಾದರ ಹಾಸಿ ಸುತ್ತಿ ಮಲಗಿ ಕನಸು ಕಾಣಬಹುದು ಎಂಬುದು ಕೆಟ್ಟಕನಸಿಗಿಂತಾ ಸುಂದರ..! ದಿನ ಬೆಳಗಾದರೆ ಸಾವಿರ ಹೊಸಮುಖಗಳು ಹುಡುಕಿಕೊಂಡು ಬರುವ ಬಸ್‌ಸ್ಟ್ಯಾಂಡೇ ಹಾಗೆ. ಗಿಜಿ ಗಿಜಿ ಕೇಳಿ ಅದಕ್ಕೆ ಬೇಜರಾಗಿಲ್ಲವೇ? ಆಗಿರಬಹುದು ಇಲ್ಲ ಅದೇ ಇಷ್ಟವಾಗಿರಬಹುದು. ಅಲ್ಲಿ ಬರುವ ಜನರದೇ ಒಂದು ವೆರಾಯಿಟಿ,ಪಟ್ಟೆ ಪಟ್ಟೇ ಅಂಗಿಯ ಶಿಸ್ತು ಬೂಟಿನ ಶಾಲೆ ಹುಡುಗರು,ಹೊಸಾ ಹೆಂಡತಿ ಕೈ ಅಡುಗೆಯ ಟಿಫಿನ್ ಬಾಕ್ಸನ್ನು ನಿಧಿಯೆಂದು ಕೈಲಿ ಹಿಡಿದಿರುವ ಯುವಕನಿಂದ, ಎರಡು ರುಪಾಯಿ ಸೇಂಗಾ ಬಿಚ್ಚಿಕೊಂಡು ತಿನ್ನುವ ಹುಡುಗರಿಂದ, ಕ್ಯಾಲೆಂಡರ್ ಮಾರಿ ಎರಡು ಮಕ್ಕಳನ್ನು ಸಾಕುವವನಿಗೆ ಅದೇ ಜಾಗ ಆಗಬೇಕು.ಈ ಬಸ್‌ಸ್ಟ್ಯಾಂಡಿನ ಸುತ್ತ ಹೊಸತೇ ಊರುಗಳು ಹುಟ್ಟಿಕೊಳ್ಳುತ್ತವೆ, ಬೆಂಗಳೂರೋ ಮಂಗಳೂರೋ ಬಸ್‌ಸ್ಟ್ಯಾಂಡಿನ ಸುತ್ತ ಬೆಳೆದ ಊರುಗಳೇ. ಅಲ್ಲೇ ಸುತ್ತ ದೋಸೆ ಅಂಗಡಿ,ಮಂಡಕ್ಕಿ ಶಾಪು,ಆಮ್ಲೆಟ್ಟಿನ ಟಪರಿ ಹೀಗೆ.ಅಗ್ಗದ ಸಾಮಾನುಗಳೇನಾದರೂ ಬೇಕಾದರೆ ಇತ್ತ ಬನ್ನಿ ಎನ್ನುವ ಹಾಗೆ.

ಎಲ್ಲ ಊರುಗಳನ್ನು ನೋಡಿ ಬರುವ ಬಸ್ಸು ಈ ಬಸ್‌ಸ್ಟ್ಯಾಂಡಿನಲ್ಲಿ ತಾಸುಗಟ್ಟಲೇ ನಿಂತು ಸುತ್ತಿದೂರಿನ ಕಥೆ ಹೇಳುತ್ತದೆ.ಅಲ್ಲಿ ಹಂಗೆ ಇಲ್ಲಿ ಹಿಂಗೆ,ಅಲ್ಲಿ ಗದ್ದೆ ಎಲ್ಲಾ ಕುಯಿಲು ಮುಗಿಸಿ ಭತ್ತದ ವಜ್ಜೆಗಳನ್ನು ಹರವಿಕೊಂಡು ನಿಂತಿದೆ,ಚಿಲಿಪಿಲಿ ಗುಬ್ಬಿಗಳನ್ನು ಮಾತನಾಡಿಸಿದೆ,ಆ ಊರಲ್ಲಿ ಮನೆಕಟ್ಟುತ್ತಿದ್ದಾರೆ ಅಂದಿದ್ದೆನಲ್ಲ, ಈಗ ಅಲ್ಲಿ ಮನೆ ಎಲ್ಲ ಎದ್ದು ನಿಂತು ಆ ಮನೆಯ ಸಣ್ಣ ಪಾಪುವೊಂದು ದಿನವೂ ಕೈಬೀಸದಿದ್ದರೆ ನನಗೂ ಸಮಾಧಾನವಿಲ್ಲ ಎನ್ನುವಂತೆ ಆಗಿದೆ ಗೊತ್ತಾ.., ಇಂದು ಮುಂಜಾನೆ ತಿರುವಿನ ಎದುರು ಜಿಂಕೆ ದಂಡು,ಈ ಪ್ಯಾಟೆಯಲ್ಲಿ ತಿರುಗುವುದು ಅಂದರೆ ಯಾರಿಗೂ ಬೇಡದ ಗೋಳು ಎಲ್ಲರಿಗೂ ನನ್ನ ರೋಡೇ ಆಗಬೇಕು ಹಾಗೆ, ಹೀಗೆ ಏನೇನೋ ಕತೆ.ಕೇಳಿನೋಡಿ ಈ ಬಸ್‌ಸ್ಟ್ಯಾಂಡಿನ ಬಳಿಯೂ ಅಂತದ್ದೇ ನೂರು ಕಥೆಗಳಿವೆ.ದಿನವೂ ಸೇರುವ ಪ್ರೇಮಿಗಳದು ಒಂದಾದರೆ, ಶಾಲೆ ಮಕ್ಕಳ ಶಾಲೆಯ ದಿನಚರಿಗಳ ಕತೆ ಇನ್ನೊಂದು, ಕೆಲ ಊರುಗಳಲ್ಲಿ ಬಸ್ಸಿನಿಂದ ಬಸ್ಸಿಗೆ ಮೂರು ತಾಸುಗಳ ಅಂತರವಿರುತ್ತದೆ,ನಡುವಿನ ವೇಳೆಯೇನಾದರೂ ಬಿಡುವ ಶಾಲೆಯಾದರೆ ಮಕ್ಕಳ ಹೋಮ್‌ವರ್ಕ್ ಅಲ್ಲೇ ನಡೆಯುವುದು.ನಾವೆಲ್ಲ ಹೈಸ್ಕೂಲಿಗೆ ಹೋಗುವಾಗ ಸಂಜೆ ತಾಸುಗಟ್ಟಲೆ ಬಸ್ಸಿಗೆ ಕಾಯಬೇಕಾಗುತ್ತಿತ್ತು, ಹುಡುಗಿಯರೆಲ್ಲ ಕಷ್ಟಪಟ್ಟು ಆಗಲೇ ಹೋಮ್‌ವರ್ಕ್‌ ಮಾಡುತ್ತಿದ್ದರೆ ಹುಡುಗರು ನಮ್ಮದನ್ನೂ ಅವರಿಗೇ ಬರೆಯಲು ಕೊಟ್ಟು ಕ್ರಿಕೆಟ್ ಆಡುವುದಿತ್ತು. ಬಸ್‌ಸ್ಟಾಂಡಿಗೆ ಎಲ್ಲ ಊರುಗಳನ್ನು ಒಂದೇ ಸೇರಿಸುವ ಉಮೇದಿ.ಬಸ್‌ಸ್ಟ್ಯಾಂಡಿನಲ್ಲಿ ಕೂತು ಹರಟದೇ ಹೋದ ಪ್ರೇಮಿಗಳು ನಿರ್ಭಾಗ್ಯರ ಲಿಸ್ಟಿಗೆ ಸೇರುತ್ತಾರೆ.ನಮ್ಮ ಊರಿನಲ್ಲೊಬ್ಬ ಹಮಾಲಿ ಕೆಲಸ ಮಾಡಿಕೊಂದಿದ್ದವನಿದ್ದ ಅವನದು ಯಾವ ಜಾತಿಯೊ ಪಾತಿಯೋ ಆದರೆ ಬಸ್‌ಸ್ಟ್ಯಾಂಡಿನಲ್ಲಿ ಯಾರು ಏನು ಲಗೇಜು ಹಿಡಿದು ನಿಂತಿದ್ದರೂ ಎದುರಿಗೆ ಹಾಜರಾಗುತ್ತಿದ್ದ ಅವನ ಹೆಸರು ಸರ್‌ನೇಮ್ ಎಲ್ಲ ಬಿಡಿ ಎಲ್ಲರೂ ಕರೆಯುವುದು ಬಸ್‌ಸ್ಟ್ಯಾಂಡ್ ಪಾಂಡು ಎಂದೇ, ಹಾಗೆ ಎಷ್ಟೋ ಜನರು ಹೊತ್ತಿನ ಅನ್ನ,ಐಡೆಂಟಿಟಿ ಕಂಡಿದ್ದು ಇದೇ ಬಸ್‌ಸ್ಟ್ಯಾಂಡ್‌ನಲ್ಲಿ.


ನಮ್ಮ ಊರುಗಳಲ್ಲಿ ಬಸ್‌ಸ್ಟ್ಯಾಂಡ್‌ಗಳು, ಬಸ್‌ಸ್ಟಾಪ್‌ಗಳಿಗೆ ಬೇರೆಯದೇ ರೂಪ, ದೊಡ್ಡ ಬಸ್ಸುಗಳನ್ನು ತಿರುಗಿಸಿ ತಿರುಗಿಸಿ ಆದ ಬಯಲನ್ನೇ ಬಸ್‌ಸ್ಟ್ಯಾಂಡೆಂದು ಕರೆಯುವುದು,ಆ ಬಸ್ಸುಗಳು ಹೋಗುವಾಗ ಟಾರುರಸ್ತೆಗೆ ನೂರು ಕಾಲುದಾರಿ,ಅವುಗಳ ಪಕ್ಕ ಒಂದು ಮರದ ಕೆಳಗೆ ಜಾಗ ಸ್ವಚ್ಚ ಮಾಡಿ ಗೂಟ ಹುಗಿದೋ, ಒಣಗಿದೆಲೆಯ ಕೊಂಬೆಯನ್ನು ನೇತುಹಾಕಿಯೋ ಗುರುತು ಮಾಡಿಟ್ಟು ನಾಲ್ಕು ಜನ ನಿಂತರೆ ಅದೇ ಬಸ್‌ಸ್ಟಾಪು. ಎಲ್ಲೆಲ್ಲೋ ಒಂದೆರಡು ಕಡೆ ವ್ಯವಸ್ಥಿತ ಬಸ್‌ಸ್ಟ್ಯಾಂಡುಗಳು ಸ್ಟಾಪುಗಳು ಇವೆ. ಇಂತ ಬಸ್‌ಸ್ಟ್ಯಾಂಡುಗಳ ವಯಕ್ತಿಕ ಹಿನ್ನೆಲೆಗಳ ಮೇಲೆ,ಅಲ್ಲಿ ನಿಲ್ಲುವ ಜನರ ಮೇಲೆ,ಪ್ರಣಯ ಕಥೆಗಳ ಮೇಲೆ ದಂತಕತೆಗಳ ಮೇಲೆ ಅವುಗಳ ನಟೋರಿಸಿಟಿಯೋ,ಪ್ರಸಿಧ್ಧಿಯೋ,ಅಡ್ಡನಾಮಗಳೋ ಇರುತ್ತವೆ. ಜಗತ್ತಿನ ಪರಮ ಸೀಕ್ರೇಟುಗಳು ಲೀಕಾಗುವ ಜಾಗವೂ ಅದೇ.

ಅಲ್ಲಿ ಹಳೇ ಹಾಡಿನ ಗುಂಗು ಮತ್ತು ಹರೆಯದ ಹುಡುಗಿಯರ ದಂಡು. ಆ ಮೂಲೆಯ ಕಂಬದ ಬಳಿ ಹೊಸಾ ಪ್ರೇಮಿಗಳ ಯುಗಳ ಗೀತ. ಮನೆ ಸಾಮಾನು,ಮಗಳಿಗೆ ಪೆಟ್ಟಿಕೋಟು, ಅಂಗಿ, ಹೊಸಾಪಾತ್ರೆ ತಂದುಕುಳಿತ ಗಂಡಹೆಂಡತಿಗೆ ಬಸ್ಸು ಇನ್ನೆರಡು ಗಳಿಗೆ ತಡೆದು ಬರಲಿ ಎಂಬ ಆಸೆ.ಸೂರ್ಯ ಆಕಡೆಗಿಂದ ಹುಟ್ಟಿ ಈಕಡೆ ಮುಳುಗುವ ಒಳಗೆ ಎಷ್ಟು ಜನರ ಉಸಿರುಗಳ ಉಸ್ತುವಾರಿ ವಹಿಸಿಕೊಳ್ಳುತ್ತದೆ ಈ ಬಸ್‌ಸ್ಟ್ಯಾಂಡು.ಮುದ್ದು ಕಂದನನ್ನು ಎತ್ತಿಕೊಂಡು ಬಸ್ಸು ಹಿಡಿಯಲು ಓಡುತ್ತಿದ್ದ ತಾಯಿಯ ಪ್ರೀತಿ ಈ ಬಸ್‌ಸ್ಟ್ಯಾಂಡಿನಲ್ಲೂ ಹರಡಿದೆ.ಬಸ್ಸಿಗಾಗಿ ಕಾಯುತ್ತ ನಿಂತ ಎಲ್ಲ ಜನಗಳ ಸ್ನಿಗ್ಧ ಆಸೆ ಅಲ್ಲಿ ನೆಲೆಗೊಳ್ಳುತ್ತವೆ.ಕತ್ತಲು ರಾತ್ರಿಯಾದರೆ ಮತ್ತೆ ಹಾಸಿಗೆಯಲ್ಲದ ಹಾಸಿಗೆ ಬಿಚ್ಚಿಕೊಂಡಾಗ ಬಸ್‌ಸ್ಟ್ಯಾಂಡಿನಲ್ಲಿ ಆ ರಾತ್ರಿಯ ಕೊನೇ ಬಸ್ಸನ್ನು  ಆಗಷ್ಟೇ ಬೀಳ್ಕೊಟ್ಟು ಬಂದು ನಿಂತ ಬಸ್ಸುಗಳು ಪಿಸುದನಿಯಲ್ಲಿ ಕಥೆ ಹೇಳುತ್ತ ಅಲ್ಲೇ ಒರಗಿದ ನೀಲಿ ಬಸ್ಸಿನ ಡ್ರೈವರನನ್ನು ಮಲಗಿಸುತ್ತವೆ.ಹಳ್ಳಿಯ ಬಸ್‌ಸ್ಟ್ಯಾಂಡುಗಳಲ್ಲಿ ದಾರಿತಪ್ಪಿದ ಎಮ್ಮೆಗಳು ಮೆಲುಕು ಹಾಕುತ್ತ  ಸಂಗೀತಾ ಐ ಲವ್ವ್‌ ಯೂ ಎಂಬ ಭಗ್ನ ಪ್ರೇಮಿಯ ಡೊಂಕು ಬರಹವನ್ನು ಓದುತ್ತಾ ಮಲಗಿರುತ್ತವೆ.

10 May, 2011

ಆಡುಮಳೆಯ ಜೊತೆಗೆ..

ಮೇ ತಿಂಗಳ ಸಂಜೆ ಮಳೆಯೆಂದರೇ ಹಾಗೆ,ಇಷ್ಟದ ಗೆಳತಿಯ ಹಾಗೆ.ಕಾಯಿಸುತ್ತದೆ,ಕಾಡಿಸುತ್ತದೆ,ಪ್ರೀತಿ ತೋರಿಸುತ್ತದೆ.ಬೇಕು ಬೇಕು ಎಂದೆನಿಸುತ್ತಿರುವ ಹಾಗೇ ನಾಳೆ ಬರುತ್ತೇನೆ ಎನ್ನುತ್ತಾ ಸದ್ದಿಲ್ಲದೇ ಹೊರಟುನಿಂತುಬಿಡುತ್ತದೆ.ಅದು ಜುಮುರು ಮಳೆ,ಅದು ಹನಿ ಮಳೆ,ಅದು ಕಿರಿಕಿರಿ ಮಳೆ,ಅದು ಪಿರಿಪಿರಿ ಮಳೆ, ಅದು ಮಗು ಮಳೆ, ಅದು ಗದ್ದಲದ ನಗು ನಗುತ್ತಾ ನಮ್ಮನ್ನೂ ನಗಿಸುವ ಪುಟ್ಟ ಹುಡುಗರಂಥ ಮಳೆ, ಬಯ್ದುಬಿಡಬೇಕೆಂದುಕೊಂಡರೂ ಮುದ್ದುಮಾಡಿಸಿಕೊಳ್ಳುತ್ತದೆ.ಈ ಮಳೆಯಲ್ಲಿ ನೆನಪಿನ ರಾಶಿಯಿದೆ.ಸುಸ್ತುಬಡಿದು ಪುದುಪುದು ಮನೆ ಸೇರಲು ಹೊರಟವರನ್ನು ನಿಲ್ಲಿಸಿ ತಲೆ ನೇವರಿಸುತ್ತದೆ,ಆರಾಗುವುದರೊಳಗೆ ಮನೆಸೇರಲೆಂದು ಪಾತ್ರೆ, ನೀರು,ಅಡುಗೆ ಸೀರಿಯಲ್ಲು ಎನ್ನುತ್ತ ಹೊರಟ ವ್ಯಾನಿಟಿ ಬ್ಯಾಗಿನ ಹೆಂಗಸರನ್ನೆಲ್ಲ ತಡೆದು ನಿಲ್ಲಿಸಿ ಬಯ್ಯಿಸಿಕೊಳ್ಳುತ್ತದೆ,ಇಲ್ಲ ಇಲ್ಲ ಎನ್ನುತ್ತಲೇ ಬೀಸಿ ಬರುವ ದಪ್ಪದಪ್ಪ ಹನಿಗಳು ತಾರಸಿಯನ್ನು ಟಪಟಪಿಸುತ್ತವೆ.ಈ ಮಳೆಗೆ ಕಿಟಕಿ ಬಾಲ್ಕನಿಗಳೆಂದರೆ ಬಲು ಅಕ್ಕರೆ,ಕಿಟಕಿಯೊಳಗೆಲ್ಲ ಇಣುಕದಿದ್ದರೆ ಸಮಾಧಾನವಿಲ್ಲ. ಈ ಮಳೆಗೆ ಕಿಟಕಿಯೇ ಇಲ್ಲದ ಕೋಟೆಯೊಳಗೆ ಕಂಪ್ಯೂಟರಿನ ವಿಂಡೋದಲ್ಲಿ ತಲೆಹುದುಗಿಸಿಕೊಂಡಿದ್ದವರೆಲ್ಲರನ್ನು ಬಾಲ್ಕನಿಗೆ ಕರೆದು ನಿಲ್ಲಿಸುವ ತಾಕತ್ತಿದೆ.
ಚಿತ್ರ: ನಾಗರಾಜ್ ಭಟ್

ಈ ಮಳೆ ಹದಿಹರೆಯದ ಮಳೆ,ಸುಮ್ಮನೆ ಸುರಿವ ಮಳೆಯಲ್ಲ, ತಾರಸಿಯಯ ಮೇಲೆ ಬೀಳುವುದಕ್ಕಿಂತ ಗೋಡೆಗೆ ಮುತ್ತಿಕ್ಕುವುದೇ ಪ್ರೀತಿ,ಬಾಲ್ಕನಿಯಗುಂಟ ಮುದ್ದಾಗಿ ಹನಿಸುತ್ತದೆ,ಹೊರಗಿಟ್ಟ ಚಪ್ಪಲಿಗಳನ್ನು ತೋಯಿಸುವುದಿಲ್ಲ,ನಿಂತ ಸೈಕಲ್ಲನ್ನು ತೋಯಿಸದೇ ಬಿಡುವುದಿಲ್ಲ,ಮನೆಸೇರಲು ಬಸ್ಸಿನಲ್ಲಿ ತುಂಬಿಕೊಂಡು ಬೆವರು ಸುರಿಸುವ ಜನರನ್ನು ಗಾಜಿನ ಹೋರಗಿಂದೇ ತಳಕ್-ತಳಕ್ ಎಂದು ತಾಕುತ್ತ ಎದೆಯ ಉಸಿರಿಗೆ ತಂಪನ್ನು ಸಂವಹನಿಸುತ್ತದೆ.ಆಫೀಸಿನಲ್ಲಿ ಬೈಸಿಕೊಂಡು ಜೀವನ ಬೇಸರವಾದ ಯುವಕನ ಅಂಗಿಯನ್ನು ನವಿರಾಗಿ ಒದ್ದೆಗೊಳಿಸುತ್ತದೆ.ಮೆಸ್ಸೇಜಿನಲ್ಲಿ ಹುದುಗಿ ನಗುತ್ತಿರುವ ಹುಡುಗಿಯ ಕೆನ್ನೆಯ ಮೇಲೆ ಹನಿಸುತ್ತದೆ,ಕಾಲೇಜು ಮುಗಿದು ಆಡಲು ನಿಂತ ಹುಡುಗರು ಇನ್ನೇನು ಗೆಲ್ಲಬೇಕೆಂಬ ಕ್ರಿಕೆಟ್ ಮ್ಯಾಚನ್ನು ಅಲ್ಲಿಗೇ ನಿಲ್ಲಿಸಿ ಮಜಾನೋಡುತ್ತದೆ.
ಮನೆಗೆ ಹಿಂತಿರುಗುವ ಪಾರಿವಾಳಗಳ ಬೂದುರೆಕ್ಕೆಗಳ ಮೇಲಿಂದ ಜಿಗಿದು ಸಂದಿಗೊಂದಿಗಳಲ್ಲಿ ಚಿಲಿಪಿಲಿಗುಟ್ಟುತ್ತಿದ್ದ ಎರಡೇ ಗುಬ್ಬಚ್ಚಿಗಳ ಕೊಕ್ಕನ್ನಷ್ಟೇ ತೋಯಿಸಿ ಕೆಳಗಿನ ಗೂಡಂಗಡಿಯವನ ಚಹಾ ಕೆಟಲಿನ ಮೇಲೆಯೇ ಬೀಳುತ್ತದೆ.ಹೊರಗಿಟ್ಟ ಬಿಂದಿಗೆಯ ಮೇಲೆಲ್ಲ ಬರ್ರನೆ ಸುರಿಯುತ್ತದೆ.ಒಬ್ಬಂಟಿ ಹುಡುಗನ ಕನಸಿನಲ್ಲಿನ ಬಾಡಿದ ಹೂವಿನ ಮೇಲೆಲ್ಲ ಬಿದ್ದು ಪ್ರೀತಿ ಚಿಗುರಿಸುತ್ತದೆ,ಒಣಗಿಹೋದ ಹೂಗಿಡದ ಎಲೆಯಮೇಲಿಂದ ಜಾರಿ ಬುಡದಲ್ಲಿ ಇಲ್ಲದಂತೆ ಮಾಯವಾಗುತ್ತದೆ.ಕೈಚಾಚಿ ನಿಂತ ಸಾವಿರ ಕಟ್ಟಡಗಳಿಂದ ತಪ್ಪಿಸಿಕೊಂಡು ಫ್ಲೋರು-ಫ್ಲೋರುಗಳನ್ನು ನೋಡದೇ ಲಿಫ್ಟಿನಲ್ಲಿ ಜಾರಿ ಬಂದವರನ್ನೂ,ಕಾಫಿಡೇಯಲ್ಲಿ ತಾಸು ಕೂತುಬಂದವರನ್ನೂ,ಎಲ್ಲ ಬಣ್ಣದಂಗಿಯಲ್ಲಿದ್ದರೂ ಕಾಣದ ಕಟ್ಟಡದ ಕೂಲಿಗಳನ್ನೂ ಬಿಡದೇ ತೋಯಿಸಿ ಹೆದ್ದಾರಿಯಲ್ಲಿ ಎಲ್ಲ ರಾಡಿಗಳನ್ನೂ ತೊಳೆಯುತ್ತ ಹರಿಯುತ್ತದೆ.ಗುಲಾಬಿ ಚಪ್ಪಲಿಗೆ ಹಳದಿ ಅಂಗಿಯನ್ನು ಜೊತೆ ಮಾಡುತ್ತದೆ.

ಶಾಲೆ ಬಿಟ್ಟು ದಾರಿತುಂಬ ಕೇಕೆ ಹಾಕಿ ನಡೆದಿದ್ದ ನೀಲಿ ಅಂಗಿಗಳ ಪಾಟೀಚೀಲಗಳನ್ನು ತೋಯಿಸುತ್ತದೆ,ಪಾಟೀಚೀಲದಲ್ಲಿನ ಡ್ರಾಯಿಂಗು ಪುಸ್ತಕದ ಸ್ಕೆಚ್‌ಪೆನ್ನಿನ ಚಿತ್ರವನ್ನು ಹುಡುಕಿ ಕೆಂಬಣ್ಣದ ಮನೆಯನ್ನೂ ನೀಲಿ ಆಕಾಶವನ್ನೂ ಒಂದುಮಾಡುತ್ತದೆ,ಜಗಳ ಮಾಡಿಕೊಂಡ ಟಾಮೆಂಜರಿಗಳ ಬಾಲಗಳಾನ್ನು ಜೋಡಿಸುತ್ತದೆ,ಪಾಟೀಚೀಲಗಳನ್ನು ಎದೆಗವಚಿಕೊಂಡು ಓಡುವ ಹುಡುಗರಿಗೆಂದೇ ತಗೋ ಎಂದು ಆಡುಮಾವಿನ ಹಣ್ಣುಗಳನ್ನು ರಾಶಿ ರಾಶಿ ಬೀಳಿಸುತ್ತದೆ.ಬಿಸಿಲಲ್ಲಿ ಸುಡುತ್ತ ನಿಂತ ಗೋಡೆಯ ಚಿತ್ರಗಳನ್ನೆಲ್ಲ ತೋಯಿಸುತ್ತದೆ.ರಸ್ತೆಬದಿಯ ತುಂಬ ಬೊಂಬೆಗಳನ್ನು  ಹರಡಿಕೊಂಡು ಕೂತವನನ್ನು ಪಜೀತಿಗಿಟ್ಟು ಕಾಡುತ್ತದೆ,ಬಿಸಿಲಿಗೆ ಕರಗಿದ ಕರಿಡಾಂಬರೂ ಈ ಮಳೆಗೆ ಕಾತರಿಸುತ್ತದೆ.ಬಸ್‌ಸ್ಟ್ಯಾಂಡಿನ ಬೆಂಚುಗಳನೆಲ್ಲ ತೋಯಿಸಿ ದಪ್ಪದಪ್ಪ ಹೆಂಗಸರನೆಲ್ಲ ಕಾಯಲು ನಿಲ್ಲಿಸುತ್ತದೆ. ಗಾಡಿಗಳ ಅವಸರಕ್ಕೆ ಎದ್ದು ಹೊಗೆಯಾಡುವ ಧೂಳನ್ನೆಲ್ಲ ಕೂತ್ಕೋ ಸುಮ್ಮನೆ ಎಂದು ಕೂರಿಸಿ ಮೊದಲ ಮಣ್ಣ ಕಂಪನ್ನು ಹರಡುತ್ತದೆ.ಮದುವೆ ಚಪ್ಪರದ ಒಳಗೆ ಹುಡುಗಿಯರನ್ನು ಹುಡುಕಿ ಸಣ್ಣಗೆ ಹಣುಕುತ್ತದೆ. ತಾರಸಿಯ ಮೇಲೆ ಗರಿಗರಿ ಒಣಗಿದ ಹಸಿರು,ಕೆಂಪು, ನೀಲಿ ಬಟ್ಟೆಗಳನ್ನು ರಪಾರಪಾ ತೋಯಿಸುತ್ತದೆ,ಅಮ್ಮನ ಪಕ್ಕ ಕುಳಿತ ಎರಡು ಜಡೆಯ ಪುಟ್ಟಿಯನ್ನು ಬಾಗಿ ಮುತ್ತಿಕ್ಕುತ್ತದೆ. ವರ್ಷಕ್ಕೊಂದೇ ಪಾರ್ಟಿ ಕೊಡಿಸುವ ಗೆಳೆಯ ಈ ಬಾರಿಯೂ ಬಚಾವಾಗುವಂತೆ ಮಾಡಿಬಿಡುತ್ತದೆ.ನಾಲ್ವರಿದ್ದರೆ ಮಾಡಿನ ತುಂಬ ಗದ್ದಲ, ಇಬ್ಬರಿದ್ದರೆ ಹಂಚಿಕೋ ಪ್ರೀತಿ.ಇಲ್ಲಿ ದೊಡ್ಡದೊಡ್ಡ ಹನಿಗಳ ಮಳೆ ಕಣೇ ಎಂದು ಗೆಳತಿಗೆ ಮರೆಯದೇ ಹೇಳಬೇಕೆನಿಸುತ್ತದೆ,ನಾನೂ ಬರುತ್ತೇನೆ ಕಣೋ ಎಂದು ರಚ್ಚೆಹಿಡಿಯಲಿ ಎಂಬ ಆಸೆ.ಏಕೆಂದರೆ ಈ ಮಳೇಯೇ ಹಾಗೆ.ಈಗತಾನೆ ಬಿದ್ದಮಳೆ ಕನಸೆಂಬಂತೆ ಇಲ್ಲವಾಗುತ್ತದೆ.ದೋಣಿಮಾಡಿ ಬಿಡುವ ಹಾಗೆ ಸುರಿಯದಿದ್ದರೂ ಮೇ ತಿಂಗಳ ಮಳೇಯೇ ಕೇಳಿಸಿಕೋ ನಾನು ನಿನ್ನನ್ನು ಪ್ರೀತಿಸುತ್ತೇನೆ.


('ವಿಜಯ ಕರ್ನಾಟಕ'ದ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟವಾದ ಬರಹ )

03 May, 2011

ಒಂದೇ ಬಸ್ಸಿನಲ್ಲಿ

ಸಪಾಟು ಬೀದಿಯೆಲ್ಲ
ಬಾಗಿಲು  ಮೆಟ್ಟಿಲು ಅಂತ ತುಂಬಿದೆ
ಒಂದೇ ಕಡೆ ಇದ್ದವರು,ಇಲ್ಲಿ ಇಲ್ಲದವರು
ಪಾತ್ರೆ ಪಗಡಿ  ಟಿಕಲಿ  ಬಾಕ್ಸು
ಅಂತ ಬೇರೆ ಮನೆಮಾಡಿಕೊಂಡು
ಉಣ್ಣುತ್ತಿದ್ದಾರೆ.

ಈ ಗೋಡೆಗೂ ಎಂಥ ತಾಕತ್ತು ನೋಡಿ
ಅದರದ್ದೇ ಅಕ್ಕಪಕ್ಕ
ಎಲ್ಲ ಬದಲಾಗಿಬಿಡುತ್ತದೆ
ಆ ಕಡೆ ನಿಮ್ಮ ಫೆಮಿಲಿ
ಈಕಡೆ ನಮ್ಮದು
ಮಾತು ಮುಗಿದಾಗ ಅಗುಳಿ ಹಾಕಿಕೊಳ್ಳಿ

ಕದತೆರೆದವರು ನೆನಪುಮಾಡಿಕೊಂಡು
ನಕ್ಕರೆ ನೆನಪು ಇಲ್ಲವಾದರೆ ಯಾರೋ
ಯಾರ ನೆನಪನ್ನು ಯಾರು ಇಟ್ಟುಕೊಳ್ಳಬೇಕು
ಗಂಡ ಹೆಂಡತಿ
ಪ್ರೀತಿಯಿಂದ ಮಾತನಾಡಿ ವರ್ಷವಾಯಿತು
ಒಂದೇ ಮಾಡಿನ ಕೆಳಗಿದ್ದಾರೆ ಎಂಬುದು ನಿಜ
ಒಂದೇ ರೇಖೆಯ ಮೇಲೆ ನಡೆಯುವುದು ಕಷ್ಟಾ ಮಾರಾಯ

ಒಂದೊಂದಾಗಿ ಬಾಗಿಲ ಮರೆಯಿಂದ
ಹೊರಬಂದವರು
ಹೊಸ ಶರ್ಟು-ಪ್ಯಾಂಟು
ಅಂದುಕೊಂಡರೆ ಹೊಸಾ ಮುಖ
ಇಲ್ಲವಾದರೆ ಅದೇ ಹಳತು

ಅದೋ ಅವನ  ಕೈಲಿ ಹಳೇ ಮೈಸೂರು ಸಿಲ್ಕಿನ ಪ್ಲಾಸ್ಟಿಕ್ ಕೊಟ್ಟೆ
ಹಿಂದಿನವನ ಕೈಲಿ ರೇಡಿಯೋದಂಥ ಮೊಬೈಲು
ವಾಲುವವನ ಕಣ್ಣಲ್ಲಿ ನಿನ್ನೆ ರಾತ್ರಿಯದೆ ತೇಲುವ ಜಗತ್ತು
ಕಸ ಹೊಡಿಯುತ್ತಿದ್ದವರನ್ನು ನುಣುಪಾಗಿ ದಾಟಿ
ಮಾಯವಾಗುತ್ತಿದ್ದಾರೆ ಕಪ್ಪು ಬೂಟಿನ ಮಂದಿ
ತಳ್ಳುಗಾಡಿಯ ಹುಡುಗ ಎಡಗಾಲಿನ ಹವಾಯಿ ಚಪ್ಪಲಿ ಹುಡುಕುತ್ತಿದ್ದಾನೆ
ಪಾಟೀಚೀಲ ಹಿಡಿದ ಅಮ್ಮ ಕಾಳಜಿ ಮಾಡಿದರೆ
ದೊಡ್ಡವನಾಗಿದ್ದೇನೆ ಎಂದು ಕೈ ಜಾರಿಸಿಕೊಂಡು
ಕೆಂಪುಚಡ್ಡಿಯ ಹುಡುಗ ರಸ್ತೆ ದಾಟುತ್ತಾನೆ

ಗ್ಯಾಸಿನವನು ಹತ್ತು ರುಪಾಯಿ ಕಡಿಮೆ ಅಂತ ತಗೊಂಡಿದಾನೆ
ಒಂದೇ ಬಸ್ಸಿನಲ್ಲಿ ಹೋಗಿದ್ವಿ ಅಂತ ನಕ್ಕಿದ್ದಾನೆ
ಅಲ್ಲಿ ಮೇಲೆ ಹಬ್ಬಿದ
ವಾಯರನ್ನು ಹಿಡಿದು ನಡೆದರೆ ಎಲ್ಲರೂ ನಮ್ಮವರೇ

ಬೋರಿಸರ  ಅಪ್ಪ ಮಾಡಿಸಿದ್ದಲ್ವೆ 
ನಮ್ಮನೆಯವರೇ ಹಬ್ಬಕ್ಕೆ ಕೊಡಿಸಿದ್ದು
ಎಂದು ನಾಚಿದ್ದಾಳೆ
ಆ ಗೋಡೆ ಈ ಗೋಡೆಯ ನಡುವೆ ನಿಂತು
ಬೇರೆ ಗೋಡೆಯ ಜನರ ಬಗ್ಗೆ  ಹಂಗಂತೆ ಮಾರಾಯ್ತಿ
ಅಂತ ಕತೆ ಹೇಳಿ ಬಾಗಿಲು ಹಾಕಿಕೊಂಡು ಟಿವಿ ಹಚ್ಚಿದ್ದಾರೆ.

ಬುಧ್ಧಿವಂತನಂತೆ ಮಾರಾಯ ನೀನು
ಪ್ರೀತಿಗೀತಿ ಅಂತೆಲ್ಲ ಆಡ್ತಾರೆ ಎಲ್ಲ ಹಾರ್ಮೋನು
ಅಂತ ನಗುವುದಿದೆಯಲ್ಲ-
ಸೂಪರ್ನೋವಾ,ಕಪ್ಪು ರಂದ್ರ ಅಂತೆಲ್ಲ ಲೆಕ್ಚರ್ ಕೊಡಬೇಡ
ಒಂದು ಸಾರಿಯಾದರೂ ಶುದ್ಧ ನಕ್ಷತ್ರಗಳನ್ನು ನೋಡು.

29 January, 2011

ನೀಲಿ ಅಂತರ್ದೇಶಿ ಬಿಚ್ಚಿಟ್ಟ ನೆನಪಿನ ಗಂಟು


ಮ್ಮ ಊರೇ ಹಾಗೆ ಮೈಲುದೂರದಲ್ಲಿ ದ್ವೀಪಗಳ ಹಾಗೆ ಒಂಟಿಮನೆಗಳು,ನಮ್ಮ ಊರಷ್ಟೇ ಅಲ್ಲ ಮಲೆನಾಡೆಂಬ ಮಲೆನಾಡಿನ ಸೊಬಗೇ ಅದು.ಕೆಲವೊಂದು ಮನೆಗಳನ್ನು ತಲುಪಲು ಒಂದಿಡೀ ಹೊತ್ತು ನಡೆಯಬೇಕು,ಬೈಕು ಸೈಕಲ್ಲುಗಳು ಎಲ್ಲೆಡೆ ಹೋದಾವೆಂಬಹಾಗಿಲ್ಲ, ಮಳೆಗಾಲವಾದರೆ ಎಂದಿನ ದಾರಿಯೆಲ್ಲ ಹಳ್ಳಕೊಳ್ಳದ ಪಾಲಾಗಿ ತಂದ ಸೈಕಲ್ಲುಗಳನ್ನು ಆಚೆಯೇ ಸುರಿವ ಮಳೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೊಸದಾರಿಯಲ್ಲೆ ನಡೆಯಬೇಕು.ಅಂತ ಊರಲ್ಲಿ ಹೊರಊರಿನೊಂದಿಗೆ ಬೆಸುಗೆಯ ಪರಮ ಸಂಪರ್ಕದ ಕೊಂಡಿಯೆಂದರೆ ಅಂಚೆಕಛೇರಿ,ಇಂದಿನ ಟೆಲಿಫೋನ್ ಯುಗದಲ್ಲೂ ಬಹಳಕಡೆ ಈ ಸ್ಥಿತಿ ಭಿನ್ನವಾಗೇನೂ ಇಲ್ಲ.ಅಂಥ ಅಂಚೆ ಕಚೇರಿಯಲ್ಲಿ ನನ್ನಪ್ಪ ಪೋಸ್ಟ್ ಮಾಸ್ತರು, ಅವನಿಗೂ- ಊರ ಜನಕ್ಕೂ ಅದು ಕೇವಲ ನೌಕರಿಯಾಗಿಯಷ್ಟೇ ಉಳಿದಿಲ್ಲ,ಅವರ ಬದುಕೆಂಬ ಬದುಕೇ ಬೆಸೆದುಕೊಂಡಿದೆ, ಎಷ್ಟರ ಮಟ್ಟಿಗೆಂದರೆ ಪೋಸ್ಟಾಪೀಸೆಂದರೆ ಭಟ್ಟರೆಂಬ ಹಾಗೆ ಅದು ಅವರ ಬದುಕಲ್ಲಿ ಹಾಸುಹೊಕ್ಕಾಗಿದೆ. ಅವನ ಯಾವ ಹೊಸ ಅಂಗಿಗೂ ಪೋಸ್ಟಿನ ಸಿಖ್ಖದ ವಿಶಿಷ್ಟ ಕರಿಮಸಿ ಹತ್ತಿಲ್ಲವೆಂಬುದಿಲ್ಲ. ಹಿಂದೆಲ್ಲ ಊರ ಶಾಲೆಗೆ ಬರುವ ಮಾಸ್ತರರನ್ನೇ ಪೋಸ್ಟ್‌ಮಾಸ್ತರರನ್ನಾಗಿ ನೇಮಿಸಿಬಿಡುತ್ತಲಿದ್ದರು, ಅಂತಿಪ್ಪ ಮಾಸ್ತರರ ಶಿಷ್ಯನಾದ ಅಪ್ಪನಿಗೆ ಹುಡುಗ ಹುಶಾರಿಯಿದ್ದಾನೆ ಎಂದು ಆ ಕಾಲದಲ್ಲಿ ಒಂದುಮಟ್ಟಿಗೆ ದೊಡ್ಡದೆಂಬಂಥ ಈ ಪೋಸ್ಟಾಪೀಸಿನ ನೌಕರಿ ಸಿಕ್ಕಿದ್ದಿತ್ತು. ಪೋಸ್ಟಾಪಿಸಿಗೆ ಬೇರೆ ಆಫೀಸಾಗಲೀ ಬಿಲ್ಡಿಂಗಾಗಲೀ ಇಲ್ಲ, ಮನೆಯ ಹೊರಗಿನ ಒಂದು ಸಣ್ಣ ಖೋಲಿಯೇ ಸಣ್ಣ ಸಣ್ಣ ಕಪಾಟು, ಟ್ರಂಕು, ಕ್ಯಾಲೆಂಡರು,ಖಾಕಿ ಚೀಲ,ತಕ್ಕಡಿ-ತೂಕದ ಕಲ್ಲು, ಠಸ್ಸೆಯ ಬಾಕ್ಸು ಹೀಕೆ ಸಕಲ ಅಲಂಕಾರಿಕ ಸಲಕರಣೆಯನ್ನು ತನ್ನಲ್ಲಿ ಹರಡಿಕೊಂಡು  ಒಂದು ಚಿಕ್ಕ ಕೆಂಬಣ್ಣದ ಬೋರ್ಡನ್ನು ಹೊರಗೋಡೆಗೆ ತಗುಲಿಹಾಕಿಕೊಂಡು ಪೋಸ್ಟಾಪೀಸಾಗಿ ರೂಪುಗೊಂಡುಬಿಟ್ಟಿತ್ತು.ಹಾಗಾಗಿ ಪೋಸ್ಟಾಪೀಸು ಮನೆಯ ಅವಿಭಾಜ್ಯ ಅಂಗವೂ ಆಗಿತ್ತು.

ಅಂಥ ಊರುಗಳಲ್ಲಿ ಈ ಅಂಚೆಯಣ್ಣನ ಕೆಲಸ ಬರೀ ಪತ್ರಹಂಚುವುದಕ್ಕಷ್ಟೇ ಸೀಮಿತವಾಗಿರುವುದಿಲ್ಲ, ಹೆಚ್ಚೂಕಡಿಮೆ ಎಲ್ಲ ಮನೆಗಳಿಗೂ ತಿರುಗುವವನಾದ್ದರಿಂದ ಅಪ್ಪನ ಬಳಿ ಊರಿನ ತಾಜಾ ಸುದ್ದಿಗಳಿರುತ್ತವೆ. ಅಲ್ಲೆಲ್ಲೋ ಹೊಸದಾಗಿ ಟಾರುರಸ್ತೆ ಮಾಡುತ್ತಿರುವ ಬಗ್ಗೆ, ದೊಡ್ಡಮನೆಯ ಶಿವರಾಮಣ್ಣ ಬೋರ್ವೆಲ್ಲ್ ಹೊಡೆಸುತ್ತಿರುವ ಬಗ್ಗೆ, ಶಂಕರಭಾವನ ಮಗಳನ್ನು ಪೇಟೆಯ ಗಂಡಿನ ಕಡೆಯವರು ನೋಡಲು ಬಂದ ಗುಟ್ಟಿನ ಸುದ್ದಿಯಿಂದ ಹಿಡಿದು ಮೇಲಿನ ಬಜೆಮನೆ ಕೆರೆಯಲ್ಲಿ ಸಿದ್ದಿ ಹುಡುಗರು ಮೀನುಹಿಡಿಯುತ್ತಿರುವುದು, ದೇವಸ್ತಾನದ ಆಚೆಗಿನ ದೊಡ್ಡಮರಕ್ಕೆ ಜೇನುಬಂದಿದ್ದು, ಒಮ್ಮೊಮ್ಮೆ ಕಬ್ಬಿನ ಗದ್ದೆಯ ಕಡೆ ಬಂದ ಆನೆಯ ವಿಷಯದವರೆಗೆ.ಯಾರಯಾರಮನೆಯಲ್ಲಿ ಯಾರ್ಯಾರಿಗೆ ಓಟುಹಾಕುವ ಬಗ್ಗೆ ಮಾತು ನಡೆಯುತ್ತಿದೆ ಎಂಬ ಪಂಚಾಯತ್  ಚುಣಾವಣೆಗೆ ನಿಂತವರು ಕೇಳುವ ಒಳವಿಚಾರಗಳಿಂದ ಹಿಡಿದು  'ಎಲ್ಲಾದರೂ ಒಳ್ಳೇ ಹೋರಿ-ಮಣಕ ಕೊಡುವ ಸುದ್ದಿ ಗೊತ್ತಾದ್ರೆ ಹೇಳೋ' ಎನ್ನುವವರೂ ಇರುತ್ತಿದ್ದರು. ಅದರದ್ದೇ ವಿಶಿಷ್ಟವಾದ ಖಾಕಿ ಚೀಲಗಳಲ್ಲಿ ದಿನವೂ ಬರುವ ಪತ್ರಗಳಲ್ಲೂ ಬಹಳ ವೆರಾಯಿಟಿ;ದೊಡ್ಡ ಜಮೀನ್ದಾರರಿಗಷ್ಟೇ ಬರುವ ಬ್ಯಾಂಕಿನ ಅಢಾವೆ ಪತ್ರಿಕೆಗಳೂ,ಬೇಡವೆಂದರೂ ಬರುತ್ತಲೇ ಇರುವ ಬ್ಯಾಂಕಿನ,ಎಲ್‌ಐಸಿಯ ನೋಟೀಸುಗಳು,ಪ್ರೀತಿಯ ಜಾನ್ಹವಿಗೆ ಪೇಟೆಯಲ್ಲಿ ಕೆಲಸಕ್ಕಿರುವ ಪ್ರಕಾಶ ಬರೆದ ಪ್ರೇಮಪತ್ರವೂ,ಡೇಟ್‌ಬಾರ್ ಆದ ಇನ್ವಿಟೇಷನ್‌ಗಳು, ಸಣ್ಣ ಪುಟ್ಟ ಹಸಿರು,ಹಳದಿ ಪತ್ರಗಳು,ಸರಕಾರಿ ಪತ್ರಗಳು ಹೀಗೆ ಹಲವು ಉಸಿರಿನ ಭಾವನೆಗಳನ್ನು, ಕತೆಗಳನ್ನು ತನ್ನೊಡನೆ ಹೊತ್ತು‍ತರುತ್ತವೆ.

ಪೋಸ್ಟಾಪೀಸಿನಲ್ಲಿ ಅಪ್ಪ
ನಾನು ದೂರದೂರಿನ ಕಾಲೇಜು ಸೇರಿದ ಆರಂಭದ ದಿನಗಳಲ್ಲಿ ಮನೆಗೆ ಪತ್ರಬರೆಯುವುದನ್ನೂ, ಕೆಲವೊಮ್ಮೆ ಹಾಸ್ಟೆಲಿನ ಗೆಳೆಯರಿಗೆ ಪೋಸ್ಟ್‌ಮಾಡಿ ಎಂದು ಪತ್ರಗಳನ್ನು ಕೊಡುವಾಗ ವಿಚಿತ್ರ ಹಾಗೂ ಅಚ್ಚರಿ ಎಂಬಂತೆ ನೋಡುತ್ತಿದ್ದರು,ಆದರೆ ನಾನು ಮಾತ್ರ ಪ್ರತೀ ಸಲ ಮನೆಗೆ ಹೋದಾಗ  ಖಾಲಿ ಅಂತರ್ದೇಶಿ ಪತ್ರಗಳನ್ನು ತರಲು ಮರೆಯುತ್ತಿರಲಿಲ್ಲ.ನನ್ನ ಹೆಸರಿಗೆ ಬರುತ್ತಿದ್ದ ಮನೆಯವರ ಹಾಗೂ ಅದೂ ಇದು ಪತ್ರಗಳಿಂದ ನನಗೆ ಅಲ್ಲಿನ ಪೋಸ್ಟ್‌ಮಾಸ್ತರರೂ ಪರಿಚಯವಾಗಿದ್ದಿತ್ತು, ಅಂತ ಪತ್ರಗಳಿಗೆ ಕಾಯುತ್ತಿದ್ದ ದಿನಗಳಿದ್ದವು. ನಾವಂತೂ ಪತ್ರಬರೆಯುವ ಹೊಸವಿಧಾನಗಳನ್ನು ಸೃಸ್ಟಿಸಿದ್ದೆವು, ಅದೊಂಥರಾ ಸಾಪ್ತಹಿಕ ದಿನಪತ್ರಿಕೆಯಂತೆ ಬಹಳಷ್ಟು ಸಂಗತಿಗಳನ್ನು ಒಳಗೊಂಡಿರುತ್ತಿತ್ತು. ನಂತರದ ದಿನಗಳಲ್ಲಿ ಮೊಬೈಲುಗಳು ಕೈಸಿಕ್ಕಿ ಪತ್ರಬರೆಯುವುದೇ ಮರೆತು ಹೋಗಿದೆ. 'ನಾನು ಕ್ಷೇಮ, ನಿಮ್ಮ ಕ್ಷೇಮಸಮಾಚಾರ ತಿಳಿಸಿ' ಎಂದೆಲ್ಲ ಹೇಳುವ ಪತ್ರಗಳು ಗಿಗಾಬೈಟಿನ ಸ್ಪೀಡಿನ ಎಲೆಕ್ಟ್ರಾನ್ ಯುಗದಲ್ಲಿ ಬಾಲಿಶವಾಗಿಯೂ ಹಳತಾಗಿಯೂ ಕಾಣುವುದೂ ಹೌದು.ಪಟ್ಟುಬಿದ್ದು ಬರೆಯುತ್ತೇನೆಂದರೆ ಹಳೆಪ್ರೀತಿಯ ನೆನಪಲ್ಲಷ್ಟೇ ಬದುಕುತ್ತಿರುವ ಗಂಡಹೆಂಡತಿಯ ಈಗಿನ ಪ್ರೀತಿಯಂತಾಗಿಬಿಡಬಹುದಷ್ಟೆ. ನಮ್ಮದೇ ಸ್ವಂತ ವಿಳಾಸಗಳಿಲ್ಲದ ಈ ನಗರಿಯಲ್ಲಿ ನನ್ನ ಮೂಲೆಸೇರಿದ ಸೂಟ್‌ಕೇಸಿನಲ್ಲಿನ ನೀಲಿಬಣ್ಣದ ಅಂತರ್ದೇಶಿಯೊಂದು ಕಂಡು ಇದನ್ನೆಲ್ಲ ಮತ್ತೆ ನೆನಪಿಸಿತು. ತನಗಿಲ್ಲದ ವಿಳಾಸದಲ್ಲಿನ ನೂರು ಮುಖಗಳ ಹಾಗೆ ಕಣ್ಣ ಮುಂದೆ ಅಪ್ಪನ ದೈನಿಕದ ಕೆಲ ದೃಶ್ಯಗಳು ನನ್ನಪಾಲಿನ ಎಲ್ಲಕ್ಕೂ ಮೀರಿದ ಜೀವನಪ್ರೀತಿಯ ಚಲಿಸುವ ಚಿತ್ರಗಳಂತೆ ಹಾದು ಹೋದವು.

ಅಪ್ಪ ಬೆಳ್ಳಂಬೆಳಗ್ಗೆಯೇ ತನ್ನ ನೆಚ್ಚಿನ ಪೋಸ್ಟಾಪೀಸಿನಲ್ಲಿ ಎಂದಿನ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾನೆ. ಎದುರಿಗೆ ಠಸ್ಸೆಯ ಡಬ್ಬ,ಪಕ್ಕದಲ್ಲಿ ಅರಗಿನ ಸೀಲುಮಾಡಲು ಬೇಕಾಗುವ ಸಣ್ಣ ಲಾಟೀನು ದೀಪ ಹಗಲಲ್ಲೂ ಸಣ್ಣಗೆ ಉರಿಯುತ್ತಿದೆ. ಟಕ್ಕ-ಟಕ್ಕ ಟಕ ಎಂಬ ಠಸ್ಸೆಯ ಸದ್ದು ಮಾತ್ರ ಹಳ್ಳಿಯ ಆ ಎಲ್ಲ ಪತ್ರಗಳಿಗೆ ಪೇಟೆಯಕಡೆಹೋಗುವ ಕಟ್ಟಕಡೆಯ ಪರವಾನಿಗೆಯನ್ನು ಸಾಕಾರಗೊಳಿಸುತ್ತ ಮೆಲ್ಲಗೆ ಕಣ್ಣೊಡೆಯುತ್ತಿರುವ ಪರಮ ಆಲಸಿ ಹಗಲಿನಲ್ಲಿ ಒಂದು ಕಾಯಕದ ದಿವ್ಯಗಳಿಗೆಯ ರೂಪಕದಂತೆ ಹರಡಿಕೊಳ್ಳುತ್ತಲಿದೆ.

'ಅಜ್ಜೀ, ನಿನ್ನಮಗ ಹಣ ಕಳುಹಿಸಿದ್ದಾನೆ' ಎನ್ನುತ್ತ ಮನಿಆರ್ಡರ್ ಕೊಡಬಂದ ಪೋಸ್ಟ್‌ಭಟ್ಟರ ಬಳಿ ಮಗ ಮತ್ತೇನಾದರೂ ಬರೆದಿದ್ದಾನೆಯೇ ಎಂದು  ಗೌರಜ್ಜಿ ಬೊಚ್ಚುಬಾಯಿಯಲ್ಲಿ ಕೇಳಿದ್ದಾಳೆ, ಮಗ ಏನೂ ಬರೆದಿಲ್ಲವೆಂಬುದು ಗೊತ್ತಿದ್ದ ಪೋಸ್ಟ್‌ಭಟ್ಟರು ವಿಷಯ ಮರೆಸಲು ನಿನ್ನ ಮಂಡಿನೋವು ಹೇಗಿದೆ ಎಂದು ಕೇಳುತ್ತಿದ್ದಾರೆ. ಮೆತ್ತಗೆ ನಗುತ್ತಾ ಅಜ್ಜಿ ತನ್ನ ಕವಳದ ಸಂಚಿಯಿಂದ ತೆಗೆದ ಐದರ ನಾಣ್ಯವನ್ನು ಬೇಡವೆಂದರೂ ಭಟ್ಟರ ಕೈಲಿ ಹಿಡಿಸುತ್ತಿದ್ದಾಳೆ. 

'ಹೋಯ್ ಶಂಕ್ರಜ್ಜ ನಿನಗೇನೋ ಪತ್ರ ಬಂದಿತ್ತಂತೆ ಪೋಸ್ಟ್‌ಭಟ್ಟರು ನಿನ್ನ ಹುಡುಕ್ಕಬಂದಿದ್ರು, ಹೋಗಿ ನೋಡಿ ಬಾ' ಎಂದ ಮಾಬ್ಲನ ಮಾತಿಗೆ ತನ್ನನ್ನು ಪೇಟೆಗ ಕರೆಯಿಸಿಕೊಳ್ಳುತ್ತೇನೆಂದು ಹೇಳಿ ಹೋದ ಮಗನೇ ಬರೆದ ಪತ್ರವಿರಬೇಕು ಎಂದುಕೊಂಡು ಎಲ್ಲಿಯದೋ ಒಂದು ಆಪ್ತವಾದ ಜೀವದುಸಿರಿನ ಬುತ್ತಿಯಂತ ಆಸೆಯಲ್ಲಿ ಪತ್ರವನ್ನು ಭಟ್ಟರಲ್ಲಿಯೇ ಓದಿಸುವಾ ಎನ್ನುತ್ತಾ ಪೋಸ್ಟ್‌ಭಟ್ರಮನೆಗೇ ಬಂದು ಬಟವಾಡೆಗೆ ಹೋದ ಭಟ್ಟರ ಬರುವನ್ನೇ ಕಾಯುತ್ತಿದ್ದಾನೆ,ಪೋಸ್ಟ್‌ಭಟ್ಟರು ಮಧ್ಯಾನ್ನವಾದರೂ ಬರದಿದ್ದಾಗ 'ಅವ ಹೋದಲ್ಲೇ ಬಾಕಿಯಾಗಿರಬೇಕು' ಎನ್ನುತ್ತ ಭಟ್ಟರ ಅಮ್ಮ ಬಡಿಸಿದ ಊಟಮಾಡಿದ ಶಂಕ್ರಜ್ಜ ಕೂತಲ್ಲಿಯೇ ಮಧ್ಯಾನ್ಹದ ಜೋಂಪು ನಿದ್ರೆಗೆ ಜಾರಿದ್ದಾನೆ.

 'ಏನು, ಕಾರ್ಯಕ್ರಮ ಮುಗಿದನಂತರ ತಂದುಕೊಡುತ್ತೀರಲ್ಲ ಈ ಪತ್ರವನ್ನು' ಎಂದು ಸಿಡಿಮಿಡಿಗುಟ್ಟ ಗೋಪಾಲಣ್ಣನಿಗೆ ಅದು ನಮ್ಮ ಪೋಸ್ಟಿಗೂ ಇಂದೇ ಬಂದದ್ದು ಮಾರಾಯ ಎಂದು ಹೇಳಲೂ ಆಗದೇ ಅಪ್ಪ ಹೊರಬಂದಿದ್ದಾನೆ, ಶನಿವಾರದ ಶಾಲೆ ಮುಗಿಸಿ ಬಂದ ಕುಣಬಿಯ ಹುಡುಗನೊಬ್ಬ ದಣಪೆಯ ಹೊರಗೆ ನಿಲ್ಲಿಸಿದ್ದ ಪೋಸ್ಟ್‌ಭಟ್ಟರ ಸೈಕಲ್ಲಿನ ಸ್ಟ್ಯಾಂಡ್ ತೆಗೆದಿದ್ದಾನೆ,ತನ್ನಳತೆಗಿಂತ ದೊಡ್ಡದಾದ ಸೈಕಲ್ಲನ್ನು ಹಿಡಿದು ನಿಲ್ಲಿಸಿ ಹತ್ತಿ ಪೆಡಲ್ ತುಳಿಯತೊಡಗಿದ್ದಾನೆ,ಇನ್ನೊಂದೇ ರೌಂಡು ಎನ್ನುತ್ತ ಮೂರ್ನಾಲ್ಕು ರೌಂಡ್ ಮುಗಿಸಿ ರೊಯ್ಯೆಂದು ಪತ್ರ ಕೊಟ್ಟು ಬಂದ ಅಪ್ಪನ ಬಳಿಯೇ ತಂದು ನಿಲಿಸಿದ್ದಾನೆ,ತುಸು ಅಂಜಿಕೆಯಿಂದ ಕೂಡಿದ ಅವನ ಮುಖದಲ್ಲಿನ ಪುಟ್ಟ ಮಾಯದ ನಗುವೊಂದು ನೀರವವನ್ನು ದಾಟಿ ನಿಧಾನವಾಗಿ ಅಪ್ಪನ ಮೋರೆಯನ್ನು ತಾಕಿಕೊಂಡು ಸಣ್ಣಗೆ ಅರಳತೊಡಗಿದೆ.

ಅಪ್ಪ ದೂರದ ನಾಗರಕಾನಿನ ಕಾಡಿನಲ್ಲಿರುವ ಪುನಿಯಜ್ಜನ ಪಾಲಿನ ಸರ್ಕಾರದ ಕಡೆಗಿನ ಅತಿದೊಡ್ಡ ಸಹಾಯವಾದ ವೃದ್ಧಾಪ್ಯ ವೇತನವನ್ನು ಕೊಡಹೋದವನು ಜೋರುಮಳೆಯಲ್ಲಿ ತೊಯ್ದುಬಂದಿದ್ದಾನೆ,ಅವನು ತನ್ನ ತೊಯ್ಯುವಿಕೆಯನ್ನೂ ಮರೆತು ಜೊತೆಗೆ ಒಯ್ದಿದ್ದ ಉಳಿದ ಪತ್ರಗಳನ್ನೆಲ್ಲ ಒಂದುರೀತಿಯ ಭಯದಿಂದ ಕೂಡಿದ ಕಾಳಜಿಯಲ್ಲಿ ಒಂದೊಂದನ್ನೆ ಹರವುತ್ತಿದ್ದರೆ,ಶಾಲೆಯಿಂದ ಅಮ್ಮನ ಜೊತೆ ಮನೆಗೆ ಬರುವಾಗ ಸಂಜೆಮಳೆಗೆ ಅರ್ಧಂಬರ್ಧ ತೊಯ್ದ ಇನ್ನೂ ಆಡುವ ಮೂಡಿನಲ್ಲೆ ಇರುವ ಪುಟಾಣಿಗಳಂತೆ ಕಾಣುತ್ತಿವೆ ಆ ಪತ್ರಗಳು.

16 January, 2011

Love - Acrylic on paper


(ಚಿತ್ರದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ನೋಡಬಹುದು)

10 January, 2011

ಮನೆ ಹುಡುಕುತ್ತಿದ್ದಾರೆಮನೆ ಹುಡುಕುತ್ತಿದ್ದಾರೆ
ಅವರಿವರ ಕೇಳುತ್ತಿದ್ದಾರೆ
ಈ ಮೊದಲು ನೋಡಿದ್ದಾರೋ
ನೊಡಿದ್ದರೂ ಆಗಿದ್ದ ಮನೆ
ಈಗಲೂ ಹಾಗೇ ಇದೆಯೋ ಗೊತ್ತಿಲ್ಲ


ಜನರೂ ಅಷ್ಟೆ
ತಮಗೆ ತಿಳಿದ ಹಾಗೆ ತೋರಿಸುತ್ತಿದ್ದಾರೆ
ಆಚೆಬದಿಗೆ,
ಓಯ್-ಆ ಮೂಲೆಯಲ್ಲಿ ನೀರಿನ ಟಾಂಕಿಯ ಹಿಂದೆ
ಹೀಗೆ ಎಲ್ಲೆಲ್ಲೊ
ಇವರೂ ಕನಸ ಕಟ್ಟಿ
ಬದುಕ ಹುಡುಕಿದಂತೆ
ಹಂಚಿಲ್ಲದ ಮನೆಯಲ್ಲಿ
ನಕ್ಷತ್ರ ಕಾಣುತ್ತ ಮಲಗಿದವರನ್ನ,
ರೇಲ್ವೆ ಸ್ಟೇಷನ್ನಿನಲ್ಲಿ ನಡುಗುತ್ತ ಮಲಗಿದವರನ್ನ
ಹೊದೆಸಿದ ಮಾಡಿನ ಜೊತೆ ಎಂದೋ
ರಾತ್ರಿ ಕನಸ ಮರೆತವರನ್ನ ಕೇಳುತ್ತಿದ್ದಾರೆ

ಕಟ್ಟಿದ ಮನೆಯೊಳಗೆ ಚಹರೆ ಮರೆತ ಜನರನ್ನ
ಸಾಲು ತೂತಿನ ರಂಗಿನರಮನೆಯ ಬಾದಷಹರನ್ನ
ಸುಖಗಳನು ಮನೆಯೊಳಗೆ ಅಡಗಿಸಿ ಬಚ್ಚಿಟ್ಟವರ
ಪುರಸೊತ್ತು ಕಳೆದುಹೋದ ಯಂತ್ರದಂತ ಮಾನವರನ್ನ
ಮನೆ ತೋರಿಸಿಯಾರೆಂದು ಆಸೆಯಿಂದ ಕೇಳುತ್ತಿದ್ದಾರೆ

ಯಾರದೋ ಭ್ರಮೆಯಂತ ಮನೆಯನೆಲ್ಲ ತಮ್ಮದೇನೊ ಎನ್ನುತ್ತ
ಅವರು ಮನೆ ಹುಡುಕುತ್ತಿದ್ದಾರೆ

ಮೊನ್ನೆಯಷ್ಟೆ ಮುನ್ಸಿಪಲ್‍ನವರು
ಕೆಡವಿದ ಮನೆ ಅದೇ ಆಗಿತ್ತೇ?
ಇಲ್ಲ ಅಂದು ಗಲಭೆಯಲ್ಲಿ ಸುಟ್ಟು
ಹೊಗೆಯಾಡಿ ಕರಕಲಾದ ಮನೆ..

ಎಂದೋ ಉದುರಿದ ಇಟ್ಟಿಗೆ ಚೂರುಗಳಲ್ಲಿ
ಮಣ್ಣಗೋಡೆಗಳಲ್ಲಿ ಅವರ ಮನೆಯಿದ್ದರೆ
ತೋರಿಸಿಬಿಡಿ

ಹಗಲುರಾತ್ರಿಗಳ ಕನಸಿನಲ್ಲಿ
ಎಲ್ಲಾದರೂ ಅವ್ಯಕ್ತದೊಳಗಿನ ವ್ಯಕ್ತದಂತೆ
ನೆನಪಿನ ಚಹರೆಯ ಹಾಗೆ
ಅವರು ಹುಡುಕುತ್ತಿರುವ ಮನೆಯೇನಾದರೂ
ಕಂಡರೆ ಪಾಪ..
ಅವರಿಗೆ ತೋರಿಸಿಬಿಡಿ

ಸಿಕ್ಕಮರ ತಬ್ಬಿ ಬೆಳೆದ ಅವರಿಗೆ
ಪಾಪಿಗಳಿಂದೊಂದಿಷ್ಟು ರಕ್ಷಿಸುವ
ಬೇಲಿಯಂಥ ಮನೆಯೊಂದಿದ್ದರೆ ತೋರಿಸಿಬಿಡಿ
ಪರಸ್ಪರರ ಸುಳ್ಳುಗಳಿಂದ,
ಆಡಿಕೊಳುವ ಬಾಯಿಯಿಂದ ತಪ್ಪಿಸಿಕೊಳ್ಳಲು
ಮನೆಯೊಂದಿದ್ದರೆ ತೋರಿಸಿಬಿಡಿ

ಎಲ್ಲ ಬೆಸೆಯುವ ಸೂತ್ರದ ಹಾಗೆ
ನೀಲಾಕಾಶದಡಿ
ಶಬ್ಧ ನಿಶ್ಯಬ್ಧಗಳಲ್ಲಿಯಾದರೂ
ಅವರಿಗೊಂದು ಮನೆ ಹುಡುಕಿಕೊಡಿ

ಜಾತಿಗಳ ಹಂಗಿಲ್ಲದೆ
ನಾಳೆಗಳಿಗೆ ನಡೆಸುವಂಥ
ಪುಟ್ಟ ಮನೆಯೊಂದಿದ್ದರೆ

ಅವರಿಗೆ ತೋರಿಸಿಬಿಡಿ