10 November, 2010

ನಿನ್ನ ಕಣ್ಣ ಬಗೆಗಿನ ಮಾತು


ನಿನ್ನ ಕಣ್ಣಲ್ಲಿ ಏನಿಲ್ಲ ಹೇಳು 
ಆಗಾಧ ಸಾಗರವಿದೆ,
ಅದರೊಡಲಿನ ಪುಟ್ಟ ಹಸಿರು ಮೀನಿದೆ
ಮೀನ ರೆಕ್ಕೆಯ ಚಲನವಿದೆ

ಭುವಿಯಿಂದ ಬಾನಿಗೆ ಬಾಗಿದ
ಮಳೆಬಿಲ್ಲಿದೆ ನಿನ್ನ ಕಣ್ಣಲಿ,
ಮೋಡದ ಹನಿಮಳೆಯಿದೆ
ಒದ್ದೆ ಮಳೆಯ ಉಸಿರಿದೆ
ಗಿಡದ ಹಸಿರಿದೆ
ಮೊದಲ ಮಳೆಯ ಮಣ್ಣ ಕಂಪಿದೆ  

ನನ್ನ ಕನಸಿನ ನಾಳೆಗಳಿವೆ
ನಿನ್ನ ಕಣ್ಣಲಿ,
ನೂರು ಬಾರಿ ಹೇಳಬೇಕೆನಿಸುವ
ನನ್ನದೇ ಭಾಷೆಯ ಎರಡು ಪದಗಳಿವೆ 

ರಭಸದಿ ಹರಿವ ನದಿಯ ಅವಸರವಿದೆ,
ಸಣ್ಣ ತೊರೆಯ ನೀರವತೆಯಿದೆ
ನನ್ನ ನಿರಂತರ ಮಾತಿದೆ
ಎಲ್ಲ ಹೇಳುವ ನಿನ್ನ ಮೌನದ ದನಿಯಿದೆ

ನೂರು ಹೂವರಳಿದ ನಗುವಿದೆ
ನಿಂದೆ ಕೈಬಳೆಯ ಘನನವಿದೆ
ನನ್ನ ಉಸಿರು ಹೆಚ್ಚಿದ ಕ್ಷಣಗಳಿವೆ
ನಿನ್ನ ಒದ್ದೆ ಕೂದಲಿನ ಸಡಿಲ ಹಿಡಿತವಿದೆ

ನಿಚ್ಚಳ ಆಗಸದಂತ 
ಸೆಳೆವ ನಿನ್ನ ಕಣ್ಣುಗಳಲ್ಲಿ 
ನನ್ನೆದೆಯ ಚಡಪಡಿಕೆಯಿದೆ,
ಅದರೊಳಗಿನ ಕನವರಿಕೆಯಿದೆ
ನಿನ್ನೆಡೆಗೆ ನನ್ನನೆಳೆವ 
ಆ ನಿರಂತರ ಸೆಳಕಿದೆ

6 comments:

Dr.D.T.Krishna Murthy. said...

ಭಟ್ಟರೇ;ನಿಮ್ಮ ಕವನದಲ್ಲಿ ಆ ಕಣ್ಣುಗಳ ಕಾವ್ಯದ ಸೆಳೆತವಿದೆ!ನಿಮ್ಮ ಕವನದಲ್ಲಿ ಏನಿಲ್ಲ ಹೇಳಿ!!ಸುಂದರ ಕವನ!!!

venkat.bhats said...

ಧನ್ಯವಾದಗಳು ಮೂರ್ತಿಯವರೆ.

ತೇಜಸ್ವಿನಿ ಹೆಗಡೆ said...

Nice poem... :)

ಮನಮುಕ್ತಾ said...

ಸು೦ದರ ಕವಿತೆ...

ಜಲನಯನ said...

ವೆಂಕಟ್...ಕಣ್ಣಲ್ಲಿ ಏನಿದೆ? ಹಹಹ ಏನಿಲ್ಲ ?? ಎನ್ನಬಹುದು ಅಷ್ಟಿದೆ...ಆದ್ರೆ ಕವಿತೆ ಚನಾಗಿದೆ, ಹಿತ-ಮಿತವಾಗಿದೆ, ಸರಳ ಸುಲಲಿತವಾಗಿದೆ...

venkat.bhats said...

ನನ್ನ ಕವನಗಳನ್ನು,ಚಿತ್ರಗಳನ್ನು ಇಷ್ಟಪಡುತ್ತ ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲ ವಂದನೆಗಳು