ನಿನ್ನ ಹೀಗೇಕೆ ಕರೆದನೆಂದರೆ ನನಗೆ ಈ ಹೆಸರು ಇಷ್ಟ ಮತ್ತು ನಿನ್ನ ನಿಜದ ಹೆಸರು ನಂಗೆ ಗೊತ್ತಿಲ್ಲ,ಹೀಗೆ ಕಾಗದದ ದೋಣಿ ಮಾಡಿ ಬಿಡುತ್ತಿದ್ದೇನೆ, ನಿನ್ನ ವಿಳಾಸದ ಕಿನಾರೆಗೆ ಬಂದೊಡನೆ ಒಂದು ಕಿರುನಗು, ಹಾಂ ಆ ನಗುವಿಗೆ ಒಂದು ಒಲವಿನ ದನಿ,ನೂರು ಕನಸಿನ ಮಣಿಮಾಲೆ. ನಿಜ ನಗ್ತೀಯಲ್ಲ?
ಜಯನಗರದ ಬಸ್ ಸ್ಟಾಂಡಿನಲ್ಲಿ ನಮ್ಮ ಏರಿಯಾದ ಬಸ್ಸು ಎಂದಿನಂತೇ ತಡವಾಗಿ ಬಸ್ಸಿಗೆ ಕಾಯುವವರ ಸಂಖ್ಯೆ ಕ್ಷಣಕ್ಕೂ ಹೆಚ್ಚುತ್ತಾ ಅಗಲೇ ಎರಡು ಬಸ್ಸಿನ ಜನ ಜಮಾಯಿಸಿದ್ದರು. ಆಗ ನಡೆದು ಬಂದಿದ್ದೆ, ದಟ್ಟ ಹಸಿರಿನ ಸಲ್ವಾರು,ಆ ಸಂಜೆ ಬೆಳಕಲ್ಲೂ ಹೊಳೆವ ಹಾಲಿನಂಥ ಮೈಬಣ್ಣ, ಮೃದು ದೇಹದ ನೀನು. ಕಿವಿಗೆ ಸಣ್ಣ ಓಲೆ,ಹೆಗಲಿಗೆ ಪುಟ್ಟ ಬ್ಯಾಗು,ಭುಜದ ಮೇಲೆ ಹರಿದಾಡಿಕೊಂಡಿರುವ ಹೊಳೆವ ಕೂದಲು, ಕೈಯಲ್ಲಿ ಮೊಬೈಲು ಹಿಡಿದು ನೀನು ನಿಧಾನ ಬರುತ್ತಿದ್ದರೆ ನನಗೆ ನಿನ್ನಿಂದ ಒಂಚೂರೂ ಕಣ್ಣು ಸರಿಸಲಾಗಲಿಲ್ಲ,ನನ್ನ ಪಾಲಿಗೆ ಸಮಯ ನಿಂತುಹೋಗಿತ್ತು, ಜನರ ಮಧ್ಯೆ ದಾರಿ ಮಾಡಿಕೊಂಡು ಬಂದ ನೀನು ನಂಗೆ ಹತ್ತಿರವೇ ನಿಂತೆ,ನಿನ್ನ ಕೆನ್ನೆ ಮೇಲಣ ಕಪ್ಪು ಮಚ್ಚೆ ಸ್ಪಷ್ಟ ಕಾಣಿಸುವಷ್ಟು ಹತ್ತಿರ. ಅರೆಮಂದ ಬೆಳಕಲ್ಲಿ ನಡೆದು ಬಂದ ಅಚ್ಚರಿಯ ಹಾಗೆ ನಿಂತಿದ್ದೆ ನೀನು. ಸುತ್ತಲಿನ ವಾತಾವರಣಕ್ಕೇ ಹೊಸ ಹುರುಪು ಬಂದಹಾಗಿತ್ತು,ಖರೆ ಹೇಳ್ತೇನೆ ನೀನಿದ್ದಷ್ಟು ಹೊತ್ತೂ ನನಗೆ ನಿನ್ನ ಬಿಟ್ಟು ಬೇರೆನನ್ನೂ ನೋಡಲಾಗಲಿಲ್ಲ.
ನಿನ್ನ ಆ ಪುಟ್ಟ ಕಣ್ಣುಗಳಲ್ಲಿ ಏನೊ ಸೆಳೆತವಿದೆ ಹುಡುಗೀ,ತುಸುನಕ್ಕರೂ ಗುಳಿಬೀಳುವ ನಿನ್ನ ಕೆನ್ನೆ,ಸುಳಿವ ಗಾಳಿಯ ನಿರಂತರ ಕಾಡಿಸುತ್ತಿದ್ದ ನಿನ್ನ ಮುಂಗುರುಳು ನಿನ್ನ ಹೆಸರ ವಿನ್ಯಾಸವ ಬರೆಯುತಿತ್ತು.ಆ ಮೃದು ಕೆನ್ನೆಯ ಮೇಲೆ ಸುಳಿದಾಡುವ ಗಾಳಿಯಾಗಬಾರದೆ ಎನಿಸಿತ್ತು.ಜಯನಗರದ ಥಂಡಿಗಾಳಿಗೆ ನೀನು ಕೈಕಟ್ಟಿ ನಿಂತಿದ್ದೆ, ನಿನ್ನ ಕಿವಿಯೊಳಗಿನ ಇಯರ್ಫೊನ್ ಅದಾವ ಒಲವಿನ ಹಾಡು ಹೇಳುತ್ತಿತ್ತು? ನಿನ್ನ ಗುಲಾಬಿಯಂಥ ಪಾದ, ಆ ಕಾಲುಗಳಿಗೆ ಚಂದದ ಗೆಜ್ಜೆಗಳಿವೆ. ಹೌದು ಗೆಜ್ಜೆಗಳಿವೆ ಅಲ್ವಾ? ನೀನು ಬಸ್ಸಿಗಾಗಿ ಸಹಜ ನನ್ನತ್ತ ತಿರುಗಿದಾಗಲೆಲ್ಲ ನನ್ನನ್ನೇ ನೋಡುತ್ತಿರುವಿಯೆಂದು ಬರಿದೆ ಒಳಗೊಳಗೆ ಖುಶಿಪಟ್ಟು ನಾನು ಕಣ್ತಪ್ಪಿಸಿದ್ದೆ ಗೊತ್ತಾ,ನೀನು ಮಾತ್ರ ಯಾಕೆ ಏನೂ ಗೊತ್ತಿಲ್ಲದವಳಂತೆ ಬರಿ ಬಸ್ಸಿಗಾಗಿ ಕಾತರಿಸಿದ್ದಿ,ಎಷ್ಟು ಹಿಂಸೆಯಾಗುತ್ತಿತ್ತು ಗೊತ್ತಾ.
ನಿನ್ನನ್ನೇ ನೋಡುತ್ತಿದ್ದ ನನ್ನ ಕಂಡೆಯಲ್ಲವಾ ನೀನು?
ನೀನು ಅಲ್ಲೆ ಬಳಿಯಿದ್ದ ಕಂಟ್ರೋಲರ್ ಬಳಿ ಏನೊ ಕೇಳಿದೆ ಸಣ್ಣಗೆ,ಎಷ್ಟು ಚಂದಾಗಿ ಮಾತನಾಡುತ್ತೀ ಹುಡುಗೀ ನೀನು.ಬಂದ ಉಳಿದ ರೂಟಿನ ಬಸ್ಸುಗಳನ್ನು ಕಂಡಾಗಲೆಲ್ಲ ದೇವರೆ ಇವಳು ಈ ಬಸ್ಸಿಗೆ ಹೋಗದಿರಲಿ ಅಂದುಕೊಳ್ಳುತ್ತಿದ್ದೆ,ಆ ಎಲ್ಲ ಬಂದ ಬಸ್ಸುಗಳನ್ನು ನೀನು ಬಿಟ್ಟಾಗ ಇವಳು ನಮ್ಮ ರೂಟಿಗೇ ಹೋಗುವವಳು ಎಂದು ಖಾತ್ರಿಯಾಗಿ ಎಲ್ಲಿಲ್ಲದ ಖುಷಿಯಾಗಿತ್ತು.ನಿನ್ನ ನೋಡುತ್ತ, ನಿನ್ನ ಕೆನ್ನೆನೋಡುತ್ತ ಎಲ್ಲೋ ಕನಸಿನೊಳಗೆ ಹೊರಟ ನನಗೆ ಬಸ್ ಬದಿದ್ದೇ ಗೊತ್ತಾಗಲಿಲ್ಲ.ಅಷ್ಟರಲ್ಲಿ ತುಂಬಿದ ಜನಸಾಗರ ಬರೋ ಎನ್ನುತ್ತ ಬಸ್ಸಿನ ಬಾಗಿಲ ಬಳಿ ನುಗ್ಗಿದರು.ನನಗೆ ಕೊನೆಯೇ ಗತಿಯಾಯ್ತು. ನೀನು ಮಾತ್ರ ಮುಂಬದಿಗೆ ಹೀಗೆ ದಾರಿ ಮಾಡಿಕೊಂಡು ಒಳಹತ್ತಿದೆ, ಆಗಲೆ ಕಣೆ ಹೊರಗೆ ನಿಂತಿದ್ದ ನನ್ನನ್ನು ನೀನು ತಿರುಗಿ ನೋಡಿದ್ದು,ನಾನಂತು ನೀನು ನನ್ನನ್ನೆ ನೋಡಿದ್ದೆಂದೆ ಅಂದುಕೊಂಡುಬಿಟ್ಟಿದ್ದೇನಾದ್ದರಿಂದ ಅದನ್ನು ಬದಲಿಸಲಾಗದು.ನೀನು ಸೀಟು ಸಿಕ್ಕಿ ಎಲ್ಲೋ ಕೂತೆಯೆಂದುಕೊಂಡೆ. ಜಗಳ ಗಿಗಳ ಮಾಡದೇ ನಿಧಾನವಾಗಿ ಬಸ್ ಹತ್ತಿ ಸಂಭಾವಿತನಾಗಿದ್ದೆ ಗೊತ್ತಾ ನಾನು,ಜನ ತಳ್ಳಿಕೊಂಡು ನನ್ನ ಹಿಂದೆಲ್ಲೋ ಒಂದು ಸೀಟಿನ ಬಳಿ ತಂದು ನಿಲಿಸಿದ್ದರು.ನಾನು ಬಸ್ಸಲ್ಲಿ ಬಾಗಿ ಹಣುಕಿ ನಿನ್ನ ಹುಡುಕಿದೆ ಕಣೆ,ಬಸ್ಸು ಇನ್ನರ್ಧ ಗಂಟೆ ತಡವಾಗಿ ಬರಬಾರದಿತ್ತೆ ಅಂದುಕೊಂಡು ಕಳವಳಿಸಿದ್ದೆ.ನೀನು ಅಲ್ಲೆ ಡ್ರೈವರ್ ಸೀಟಿನ ಹಿಂಬದಿ ನಿಂತಿದ್ದೆ.ಆಗಲೂ ನಿನ್ನ ಬಿಳಿಗೆನ್ನೆ ನನಗೆ ಸ್ಪಷ್ಟವಾಗಿ ಕಾಣುತಿತ್ತು. ನಂತರ ನಿನಗೆಲ್ಲೋ ಸೀಟು ಸಿಕ್ಕಿದಾಗ ನೀನು ನನಗೆ ಕಾಣದಾದೆ,ನಾನು ನಿನ್ನ ಹುಡುಕಲೆತ್ನಿಸಿ ಪಕ್ಕದವನ ಬಳಿ ಬಯ್ಸಿಕೊಂಡಿದ್ದೆ.
ಕಡೆಗೆ ಆ ರಶ್ಶಿನಲ್ಲಿ ನೀನೆಲ್ಲಿಳಿದೆಯೋ ಗೊತ್ತಾಗಲಿಲ್ಲ. ಆಗ ರಶ್ಶಿನ ಜನರನ್ನು ಒಳಗೊಳಗೆ ಬಯ್ದುಕೊಂಡಿದ್ದೆ.
ಮನೆ ತಲುಪಿದಾಗ ಎಂದಿನ ಸುಸ್ತು ಮಾತ್ರ ನನ್ನಲ್ಲಿರಲಿಲ್ಲ. "I miss you" ಅಂತ ಮನಸ್ಸು ಮಾತ್ರ ನೂರುಸಾರಿ ಒಳಗೇ ಕೂಗಿ ಹೇಳುತ್ತಿತ್ತು. ಮರುದಿನಕ್ಕೆ ನಾನು ಇನ್ನೂ ಹಾಕಿರದ ಹೊಸಾ ಬಟ್ಟೆಯನ್ನೆ ರೆಡಿ ಮಾಡಿಕೊಂಡಿದ್ದೆ,ನಾಳೆ ಮಾತ್ರ ಹೇಗಾದರೂ ಮಾಡಿ ಬಸ್ಸಿನ ಬಗ್ಗೆ ಕೇಳುವವನಹಾಗೆ ಮಾಡಿ ನಿನ್ನ ಮಾತನಾಡಿಸಬೇಕೆಂದು ಹುಸಿಧೈರ್ಯದಲ್ಲಿ ಅಂದುಕೊಂಡು ಒಳಗೊಳಗೇ ಎದೆಬಡಿತ ಹೆಚ್ಚಿಸಿಕೊಂಡಿದ್ದೆ.ನಿನ್ನ ಕಡೆ ಒಂದು ಸುಮ್ಮನೆ ಸ್ಮೈಲ್ ಹರಿಬಿಡಬೇಕು,ನೀನು ಚಂದ ಕಾಣುತ್ತಿ ಎಂದು ಸಣ್ಣಗೆ ಹೇಳಬೇಕು ಎಂದೆಲ್ಲ ಅಂದುಕೊಂಡಿದ್ದೆ. ಅಂದುರಾತ್ರಿ ನನ್ನ ಕನಸಲ್ಲಿ ನೀನು ನಸುಗೆಂಪು ಸಲ್ವಾರ್ ತೊಟ್ಟು ನಿಂತ ಹಾಗೆ,ಅದರ ದುಪಟ್ಟಾದ ಮೇಲೆ ನವಿಲುಹೂವಿನ ಚಿತ್ರವಿದ್ದ ಹಾಗೆಲ್ಲ ಕಂಡು ಗಾಳಿಗೆ ಹಾರುತ್ತ ಆ ದುಪಟ್ಟಾ ನನ್ನೊಳಗೆ ನೂರು ಕನಸಿನ ಸಾಧ್ಯತೆಗಳನ್ನು ಬರೆದಿತ್ತು.
ಆ ರಾತ್ರಿ ನಾನು ಕಂಡ ಕನಸಿನ ಹೆಸರು ನೀನು ಕಣೆ ಹುಡುಗೀ..!
ಮರುದಿನ ಆಫೀಸಿನಿಂದ ಬೇಗ ಹೊರಟಿದ್ದೆ ನಿನ್ನ ಸಮಯದಲ್ಲೆ ಅಲ್ಲಿರಲೆಂದು.
ಆದಿನ ಹಾಗು ಸುಳ್ಳು ಹೇಳಬಾರದೆಂದರೆ ಇಂದಿಗೂ ನನ್ನ ಜಗತ್ತು ಅಂದರೆ ನೀನು, ಬರೀ ನೀನು ಮಾತ್ರ, ನಿನ್ನ ಹಸಿರು ದುಪಟ್ಟಾ,ಕಿವಿಯೋಲೆ, ಕೆನ್ನೆಗುಳಿ, ಚಂದದ ನಿನ್ನ ಕಣ್ಣು.
ಆ ಬಸ್ ಸ್ಟ್ಯಾಂಡ್ನಲ್ಲಿ ನಾನು ನಿನಗೆ ಹುಡುಕತೊಡಗಿದ್ದೆ, ಅದರೆ ನೀನು ಮಾತ್ರ ಬರಲಿಲ್ಲ, ಸಮಯ ಸರಿಯಾಗಿಯೆ ಇತ್ತು. ನಿ ಬಂದಿದ್ದ ಹಾದಿಯೆಲ್ಲ ಹುಡುಕಿ ಕಾದಿದ್ದೆ. ಅಷ್ಟರಲ್ಲೇ ಹೊರಟುಬಿಟ್ಟಿದ್ದೆಯಾ?
ಆದಿನ ಹಾಗು ಸುಳ್ಳು ಹೇಳಬಾರದೆಂದರೆ ಇಂದಿಗೂ ನನ್ನ ಜಗತ್ತು ಅಂದರೆ ನೀನು, ಬರೀ ನೀನು ಮಾತ್ರ, ನಿನ್ನ ಹಸಿರು ದುಪಟ್ಟಾ,ಕಿವಿಯೋಲೆ, ಕೆನ್ನೆಗುಳಿ, ಚಂದದ ನಿನ್ನ ಕಣ್ಣು.
ಆ ಬಸ್ ಸ್ಟ್ಯಾಂಡ್ನಲ್ಲಿ ನಾನು ನಿನಗೆ ಹುಡುಕತೊಡಗಿದ್ದೆ, ಅದರೆ ನೀನು ಮಾತ್ರ ಬರಲಿಲ್ಲ, ಸಮಯ ಸರಿಯಾಗಿಯೆ ಇತ್ತು. ನಿ ಬಂದಿದ್ದ ಹಾದಿಯೆಲ್ಲ ಹುಡುಕಿ ಕಾದಿದ್ದೆ. ಅಷ್ಟರಲ್ಲೇ ಹೊರಟುಬಿಟ್ಟಿದ್ದೆಯಾ?
ನೀನಿಲ್ಲದೆ ಆ ಬುಸ್ ಸ್ಟ್ಯಾಂಡಿಗೆ ಚೆಲುವಿಲ್ಲ, ನಿನಗೆ ಬಸ್ಸಿನ ಬರುವ ಹೇಳಿದ ಆ ಕಂಟ್ರೋಲರನೂ ಸಪ್ಪಗಿದ್ದಾನೆ,ನೀ ನಿಂತಿದ್ದಿಯಲ್ಲ ಆ ಜಾಗ ಹಾಗೇ ಖಾಲಿಯಿದೆ ಕಣೆ,ಬಸ್ಸಿಗೂ ಅಂದಿನ ಹುರುಪಿಲ್ಲ.
ಈಗ ಕೂಡ ನಿನ್ನ ದಟ್ಟ ಹಸಿರು ಸಲ್ವಾರ್,ತುದಿಗೆ ಕನ್ನಡಿಗಳಿದ್ದ ದುಪಟ್ಟಾ, ಹಾಂ ನೀನು ಹಾಕಿದ್ದೀಯಲ್ಲ ಆ ಕಾಲ್ಗೆಜ್ಜೆ,ಕಿವಿಯೋಲೆ, ಕೆನ್ನೆಮಚ್ಚೆ ಈಗತಾನೆ ನೋಡಿದ್ದೇನೆನುವ ಹಾಗೆ ನಿಚ್ಚಳ ನೆನಪಿದೆ ಕಣೆ.ಯಾವ ಜನದ ಗದ್ದಲವಿದ್ದರೂ ನಿನ್ನ ಗುರುತಿಸಿಬಿಡುತ್ತೇನೆ.
ಒಮ್ಮೆ ಮತ್ತೆ ಬಂದುಬಿಡೇ, ನೀನು ಚಂದದ ಹುಡುಗಿಯೆಂದು ಹೇಳಲಿಕ್ಕಿದೆ,ಕೆನ್ನೆಗುಳಿ ನೋಡಲಿಕ್ಕಿದೆ.ನಿನ್ನ ಕಪ್ಪು ಕಣ್ಣುಗಳಲ್ಲಿ ಕಳೆದುಹೋಗಲಿಕುಂಟು.
ಹೀಗೆ ಕರೆದು ಮಾತನಾಡಿಸಬೇಕೆನುವಷ್ಟರಲ್ಲಿ ಕನಸುಗಳಾಚೆ ಸರಿದುಬಿಟ್ಟೆಯಲ್ಲೆ,ನಿನ್ನ ಕನಸುಗಳಲ್ಲದೆ ಬೇರಾವ ಕನಸನ್ನೂ ನಾನು ಬಯಸಿಲ್ಲ ಗೆಳತೀ,ನಿನ್ನ ಕಂಡಾಗಿನಿಂದ ನನ್ನ ಕನಸಿನ ಪ್ರತಿ ಅಧ್ಯಾಯದ ಮೊದಲ ಹಾಗು ಕೊನೆಯ ಪದ ನೀನು.ನಿನ್ನ ನೋಡಿದ ಆ ಬಸ್ಸ್ಟ್ಯಾಂಡ್ ಈಗ ನನ್ನ ಕನಸಿನ ಒಂದು ನವಿರು ಅಂಗವಾಗಿಬಿಟ್ಟಿದೆ ಅದೇ ಜಾಗ, ಅದೇ ಜನ,ಅವೇ ಬಸ್ಸುಗಳು,ಅದೇ ಗಾಳಿ ಆದರೆ ಅದರೆಡೆಗಿನ ನನ್ನ ನೋಟ ಬೇರೇನೆ ಆಗಿಬಿಟ್ಟಿದೆ. ಅದರೆಡೆಗೆ ನನ್ನ ಕಣ್ಣಲ್ಲಿ ಸದ್ದಿಲ್ಲದೇ ಒಂದು ಪ್ರೀತಿ ನಿಂತುಬಿಟ್ಟಿದೆ,ಅಲ್ಲಿ ಕಾಯುವ ಪ್ರತಿಗಳಿಗೆಯೂ ನೀನು ನೆನಪಾಗುತ್ತಿ,ನಿನ್ನ ಮುದ್ದು ಮುಖಕ್ಕಾಗಿ ಹುಡುಕುವ ನನ್ನ ಕಾತರಗಳಿಂದ ನನ್ನ ಕಾಪಾಡು ಹುಡುಗೀ.
ದಿನನಿತ್ಯ ಬಸ್ಸಿಗೆ ನನ್ನ ಜೊತೆ ಕಾಯುವ ನೂರು ಜನರಲ್ಲಿ ನಿನ್ನ ಹಸಿರು ದುಪಟ್ಟಾಕ್ಕಾಗಿ ಹುಡುಕುತ್ತೇನೆ.ನಿನ್ನ ಬಗ್ಗೆ ಬರೆಯಬೇಕೆಂದುಕೊಂಡ ಎಲ್ಲ ಕವಿತೆಯ ಸಾಲುಗಳೂ ನನ್ನಕಣ್ಣಲ್ಲಿ ನಿನ್ನ ಕಾಣುವಿಕೆಯನ್ನು ರಚ್ಚೆಹಿಡಿದು ನಿರುಕಿಸುತಿವೆ. ಒಂದು ದಿನ ಮತ್ತೆ ಹೀಗೆ ಬಂದುಬಿಡೆ.
ಇಂತಿ,
ನಿನ್ನ ಬರುವಿಕೆಯ ಹಂಬಲಿಸಿ ಕಾದಿರುವ ನಾನು.
ನಿನ್ನ ಬರುವಿಕೆಯ ಹಂಬಲಿಸಿ ಕಾದಿರುವ ನಾನು.
5 comments:
good one bhatre...
:) nice..
ಹಸಿರು ದುಪ್ಪಟ್ಟ ಹುಡುಗಿಯ ಗೆಜ್ಜೆ ನಾದ ನಿಮ್ಮ ಹೆಜ್ಜೆಯ ಜೊತೆ ಬೇಗನೆ ಬೆಸೆಯಲಿ
ಥ್ಯಾಂಕ್ಸ್ ಮಹೇಂದ್ರ,ನಾನು ಬರೆದದ್ದನ್ನು ಯಾವಾಗಲೂ ಆಸ್ಥೆಯಿಂದ ಪುರಸೊತ್ತಿಂದ ಓದುತ್ತಿ. ಹೀಗೆ ಹೆಗಲಮೇಲೆ ಯಾವಾಗಲೂ ನಿನ್ನ ಅಕ್ಕರೆಯಿರಲಿ.
ಥ್ಯಾಂಕ್ಸ್ ವಾಣಿ,ನಿನ್ನ ಹಾರೈಕೆಗೆ,ನಿನ್ನ ಮಾತಿಗೆ.
ಹ್ಹ ಹ್ಹ ಹ್ಹ, ಪ್ರೀತಿ ಸಿಗದಾಗಲೇ ನವಿರು ಕಣೊ. ಓಶೋ ಏನಂದಿದ್ದಾನೆ ಗೊತ್ತಾ? ನಿಜವಾದ ಪ್ರೇಮಿಗಳೆಂದರೆ ಯಾವತ್ತೂ ಭೇಟಿಯಾಗದವರು ಎಂದು. ಬಿಡು ಅಮರ ಪ್ರೇಮಿಯಾಗಿಬಿಟ್ಟೆ.
ಗೀವಾಣಿ.
ಗೀರ್ವಾಣಿಯಕ್ಕ,'ನಿಜವಾದ ಪ್ರೇಮಿಗಳೆಂದರೆ ಯಾವತ್ತೂ ಭೇಟಿಯಾಗದವರು' ಎಂಬ ಓಶೋನ ಮಾತು ನೆನಪಿಸಿದಾಗ ನನಗೆ 'ಜಪನೀಸ್ ವೈಫ್' ಸಿನಿಮಾದ ನವಿರು ಪ್ರೀತಿ ನೆನಪಾಯ್ತು..
Post a Comment