10 May, 2011

ಆಡುಮಳೆಯ ಜೊತೆಗೆ..

ಮೇ ತಿಂಗಳ ಸಂಜೆ ಮಳೆಯೆಂದರೇ ಹಾಗೆ,ಇಷ್ಟದ ಗೆಳತಿಯ ಹಾಗೆ.ಕಾಯಿಸುತ್ತದೆ,ಕಾಡಿಸುತ್ತದೆ,ಪ್ರೀತಿ ತೋರಿಸುತ್ತದೆ.ಬೇಕು ಬೇಕು ಎಂದೆನಿಸುತ್ತಿರುವ ಹಾಗೇ ನಾಳೆ ಬರುತ್ತೇನೆ ಎನ್ನುತ್ತಾ ಸದ್ದಿಲ್ಲದೇ ಹೊರಟುನಿಂತುಬಿಡುತ್ತದೆ.ಅದು ಜುಮುರು ಮಳೆ,ಅದು ಹನಿ ಮಳೆ,ಅದು ಕಿರಿಕಿರಿ ಮಳೆ,ಅದು ಪಿರಿಪಿರಿ ಮಳೆ, ಅದು ಮಗು ಮಳೆ, ಅದು ಗದ್ದಲದ ನಗು ನಗುತ್ತಾ ನಮ್ಮನ್ನೂ ನಗಿಸುವ ಪುಟ್ಟ ಹುಡುಗರಂಥ ಮಳೆ, ಬಯ್ದುಬಿಡಬೇಕೆಂದುಕೊಂಡರೂ ಮುದ್ದುಮಾಡಿಸಿಕೊಳ್ಳುತ್ತದೆ.ಈ ಮಳೆಯಲ್ಲಿ ನೆನಪಿನ ರಾಶಿಯಿದೆ.ಸುಸ್ತುಬಡಿದು ಪುದುಪುದು ಮನೆ ಸೇರಲು ಹೊರಟವರನ್ನು ನಿಲ್ಲಿಸಿ ತಲೆ ನೇವರಿಸುತ್ತದೆ,ಆರಾಗುವುದರೊಳಗೆ ಮನೆಸೇರಲೆಂದು ಪಾತ್ರೆ, ನೀರು,ಅಡುಗೆ ಸೀರಿಯಲ್ಲು ಎನ್ನುತ್ತ ಹೊರಟ ವ್ಯಾನಿಟಿ ಬ್ಯಾಗಿನ ಹೆಂಗಸರನ್ನೆಲ್ಲ ತಡೆದು ನಿಲ್ಲಿಸಿ ಬಯ್ಯಿಸಿಕೊಳ್ಳುತ್ತದೆ,ಇಲ್ಲ ಇಲ್ಲ ಎನ್ನುತ್ತಲೇ ಬೀಸಿ ಬರುವ ದಪ್ಪದಪ್ಪ ಹನಿಗಳು ತಾರಸಿಯನ್ನು ಟಪಟಪಿಸುತ್ತವೆ.ಈ ಮಳೆಗೆ ಕಿಟಕಿ ಬಾಲ್ಕನಿಗಳೆಂದರೆ ಬಲು ಅಕ್ಕರೆ,ಕಿಟಕಿಯೊಳಗೆಲ್ಲ ಇಣುಕದಿದ್ದರೆ ಸಮಾಧಾನವಿಲ್ಲ. ಈ ಮಳೆಗೆ ಕಿಟಕಿಯೇ ಇಲ್ಲದ ಕೋಟೆಯೊಳಗೆ ಕಂಪ್ಯೂಟರಿನ ವಿಂಡೋದಲ್ಲಿ ತಲೆಹುದುಗಿಸಿಕೊಂಡಿದ್ದವರೆಲ್ಲರನ್ನು ಬಾಲ್ಕನಿಗೆ ಕರೆದು ನಿಲ್ಲಿಸುವ ತಾಕತ್ತಿದೆ.
ಚಿತ್ರ: ನಾಗರಾಜ್ ಭಟ್

ಈ ಮಳೆ ಹದಿಹರೆಯದ ಮಳೆ,ಸುಮ್ಮನೆ ಸುರಿವ ಮಳೆಯಲ್ಲ, ತಾರಸಿಯಯ ಮೇಲೆ ಬೀಳುವುದಕ್ಕಿಂತ ಗೋಡೆಗೆ ಮುತ್ತಿಕ್ಕುವುದೇ ಪ್ರೀತಿ,ಬಾಲ್ಕನಿಯಗುಂಟ ಮುದ್ದಾಗಿ ಹನಿಸುತ್ತದೆ,ಹೊರಗಿಟ್ಟ ಚಪ್ಪಲಿಗಳನ್ನು ತೋಯಿಸುವುದಿಲ್ಲ,ನಿಂತ ಸೈಕಲ್ಲನ್ನು ತೋಯಿಸದೇ ಬಿಡುವುದಿಲ್ಲ,ಮನೆಸೇರಲು ಬಸ್ಸಿನಲ್ಲಿ ತುಂಬಿಕೊಂಡು ಬೆವರು ಸುರಿಸುವ ಜನರನ್ನು ಗಾಜಿನ ಹೋರಗಿಂದೇ ತಳಕ್-ತಳಕ್ ಎಂದು ತಾಕುತ್ತ ಎದೆಯ ಉಸಿರಿಗೆ ತಂಪನ್ನು ಸಂವಹನಿಸುತ್ತದೆ.ಆಫೀಸಿನಲ್ಲಿ ಬೈಸಿಕೊಂಡು ಜೀವನ ಬೇಸರವಾದ ಯುವಕನ ಅಂಗಿಯನ್ನು ನವಿರಾಗಿ ಒದ್ದೆಗೊಳಿಸುತ್ತದೆ.ಮೆಸ್ಸೇಜಿನಲ್ಲಿ ಹುದುಗಿ ನಗುತ್ತಿರುವ ಹುಡುಗಿಯ ಕೆನ್ನೆಯ ಮೇಲೆ ಹನಿಸುತ್ತದೆ,ಕಾಲೇಜು ಮುಗಿದು ಆಡಲು ನಿಂತ ಹುಡುಗರು ಇನ್ನೇನು ಗೆಲ್ಲಬೇಕೆಂಬ ಕ್ರಿಕೆಟ್ ಮ್ಯಾಚನ್ನು ಅಲ್ಲಿಗೇ ನಿಲ್ಲಿಸಿ ಮಜಾನೋಡುತ್ತದೆ.
ಮನೆಗೆ ಹಿಂತಿರುಗುವ ಪಾರಿವಾಳಗಳ ಬೂದುರೆಕ್ಕೆಗಳ ಮೇಲಿಂದ ಜಿಗಿದು ಸಂದಿಗೊಂದಿಗಳಲ್ಲಿ ಚಿಲಿಪಿಲಿಗುಟ್ಟುತ್ತಿದ್ದ ಎರಡೇ ಗುಬ್ಬಚ್ಚಿಗಳ ಕೊಕ್ಕನ್ನಷ್ಟೇ ತೋಯಿಸಿ ಕೆಳಗಿನ ಗೂಡಂಗಡಿಯವನ ಚಹಾ ಕೆಟಲಿನ ಮೇಲೆಯೇ ಬೀಳುತ್ತದೆ.ಹೊರಗಿಟ್ಟ ಬಿಂದಿಗೆಯ ಮೇಲೆಲ್ಲ ಬರ್ರನೆ ಸುರಿಯುತ್ತದೆ.ಒಬ್ಬಂಟಿ ಹುಡುಗನ ಕನಸಿನಲ್ಲಿನ ಬಾಡಿದ ಹೂವಿನ ಮೇಲೆಲ್ಲ ಬಿದ್ದು ಪ್ರೀತಿ ಚಿಗುರಿಸುತ್ತದೆ,ಒಣಗಿಹೋದ ಹೂಗಿಡದ ಎಲೆಯಮೇಲಿಂದ ಜಾರಿ ಬುಡದಲ್ಲಿ ಇಲ್ಲದಂತೆ ಮಾಯವಾಗುತ್ತದೆ.ಕೈಚಾಚಿ ನಿಂತ ಸಾವಿರ ಕಟ್ಟಡಗಳಿಂದ ತಪ್ಪಿಸಿಕೊಂಡು ಫ್ಲೋರು-ಫ್ಲೋರುಗಳನ್ನು ನೋಡದೇ ಲಿಫ್ಟಿನಲ್ಲಿ ಜಾರಿ ಬಂದವರನ್ನೂ,ಕಾಫಿಡೇಯಲ್ಲಿ ತಾಸು ಕೂತುಬಂದವರನ್ನೂ,ಎಲ್ಲ ಬಣ್ಣದಂಗಿಯಲ್ಲಿದ್ದರೂ ಕಾಣದ ಕಟ್ಟಡದ ಕೂಲಿಗಳನ್ನೂ ಬಿಡದೇ ತೋಯಿಸಿ ಹೆದ್ದಾರಿಯಲ್ಲಿ ಎಲ್ಲ ರಾಡಿಗಳನ್ನೂ ತೊಳೆಯುತ್ತ ಹರಿಯುತ್ತದೆ.ಗುಲಾಬಿ ಚಪ್ಪಲಿಗೆ ಹಳದಿ ಅಂಗಿಯನ್ನು ಜೊತೆ ಮಾಡುತ್ತದೆ.

ಶಾಲೆ ಬಿಟ್ಟು ದಾರಿತುಂಬ ಕೇಕೆ ಹಾಕಿ ನಡೆದಿದ್ದ ನೀಲಿ ಅಂಗಿಗಳ ಪಾಟೀಚೀಲಗಳನ್ನು ತೋಯಿಸುತ್ತದೆ,ಪಾಟೀಚೀಲದಲ್ಲಿನ ಡ್ರಾಯಿಂಗು ಪುಸ್ತಕದ ಸ್ಕೆಚ್‌ಪೆನ್ನಿನ ಚಿತ್ರವನ್ನು ಹುಡುಕಿ ಕೆಂಬಣ್ಣದ ಮನೆಯನ್ನೂ ನೀಲಿ ಆಕಾಶವನ್ನೂ ಒಂದುಮಾಡುತ್ತದೆ,ಜಗಳ ಮಾಡಿಕೊಂಡ ಟಾಮೆಂಜರಿಗಳ ಬಾಲಗಳಾನ್ನು ಜೋಡಿಸುತ್ತದೆ,ಪಾಟೀಚೀಲಗಳನ್ನು ಎದೆಗವಚಿಕೊಂಡು ಓಡುವ ಹುಡುಗರಿಗೆಂದೇ ತಗೋ ಎಂದು ಆಡುಮಾವಿನ ಹಣ್ಣುಗಳನ್ನು ರಾಶಿ ರಾಶಿ ಬೀಳಿಸುತ್ತದೆ.ಬಿಸಿಲಲ್ಲಿ ಸುಡುತ್ತ ನಿಂತ ಗೋಡೆಯ ಚಿತ್ರಗಳನ್ನೆಲ್ಲ ತೋಯಿಸುತ್ತದೆ.ರಸ್ತೆಬದಿಯ ತುಂಬ ಬೊಂಬೆಗಳನ್ನು  ಹರಡಿಕೊಂಡು ಕೂತವನನ್ನು ಪಜೀತಿಗಿಟ್ಟು ಕಾಡುತ್ತದೆ,ಬಿಸಿಲಿಗೆ ಕರಗಿದ ಕರಿಡಾಂಬರೂ ಈ ಮಳೆಗೆ ಕಾತರಿಸುತ್ತದೆ.ಬಸ್‌ಸ್ಟ್ಯಾಂಡಿನ ಬೆಂಚುಗಳನೆಲ್ಲ ತೋಯಿಸಿ ದಪ್ಪದಪ್ಪ ಹೆಂಗಸರನೆಲ್ಲ ಕಾಯಲು ನಿಲ್ಲಿಸುತ್ತದೆ. ಗಾಡಿಗಳ ಅವಸರಕ್ಕೆ ಎದ್ದು ಹೊಗೆಯಾಡುವ ಧೂಳನ್ನೆಲ್ಲ ಕೂತ್ಕೋ ಸುಮ್ಮನೆ ಎಂದು ಕೂರಿಸಿ ಮೊದಲ ಮಣ್ಣ ಕಂಪನ್ನು ಹರಡುತ್ತದೆ.ಮದುವೆ ಚಪ್ಪರದ ಒಳಗೆ ಹುಡುಗಿಯರನ್ನು ಹುಡುಕಿ ಸಣ್ಣಗೆ ಹಣುಕುತ್ತದೆ. ತಾರಸಿಯ ಮೇಲೆ ಗರಿಗರಿ ಒಣಗಿದ ಹಸಿರು,ಕೆಂಪು, ನೀಲಿ ಬಟ್ಟೆಗಳನ್ನು ರಪಾರಪಾ ತೋಯಿಸುತ್ತದೆ,ಅಮ್ಮನ ಪಕ್ಕ ಕುಳಿತ ಎರಡು ಜಡೆಯ ಪುಟ್ಟಿಯನ್ನು ಬಾಗಿ ಮುತ್ತಿಕ್ಕುತ್ತದೆ. ವರ್ಷಕ್ಕೊಂದೇ ಪಾರ್ಟಿ ಕೊಡಿಸುವ ಗೆಳೆಯ ಈ ಬಾರಿಯೂ ಬಚಾವಾಗುವಂತೆ ಮಾಡಿಬಿಡುತ್ತದೆ.ನಾಲ್ವರಿದ್ದರೆ ಮಾಡಿನ ತುಂಬ ಗದ್ದಲ, ಇಬ್ಬರಿದ್ದರೆ ಹಂಚಿಕೋ ಪ್ರೀತಿ.ಇಲ್ಲಿ ದೊಡ್ಡದೊಡ್ಡ ಹನಿಗಳ ಮಳೆ ಕಣೇ ಎಂದು ಗೆಳತಿಗೆ ಮರೆಯದೇ ಹೇಳಬೇಕೆನಿಸುತ್ತದೆ,ನಾನೂ ಬರುತ್ತೇನೆ ಕಣೋ ಎಂದು ರಚ್ಚೆಹಿಡಿಯಲಿ ಎಂಬ ಆಸೆ.ಏಕೆಂದರೆ ಈ ಮಳೇಯೇ ಹಾಗೆ.ಈಗತಾನೆ ಬಿದ್ದಮಳೆ ಕನಸೆಂಬಂತೆ ಇಲ್ಲವಾಗುತ್ತದೆ.ದೋಣಿಮಾಡಿ ಬಿಡುವ ಹಾಗೆ ಸುರಿಯದಿದ್ದರೂ ಮೇ ತಿಂಗಳ ಮಳೇಯೇ ಕೇಳಿಸಿಕೋ ನಾನು ನಿನ್ನನ್ನು ಪ್ರೀತಿಸುತ್ತೇನೆ.


('ವಿಜಯ ಕರ್ನಾಟಕ'ದ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟವಾದ ಬರಹ )

7 comments:

nsru said...

ತುಂಬ ರೋಮಾಂಚನ ಆಯ್ತು ಓದಿ. ತುಂಟ ಮಳೆ ಚಿನಕುರಳಿಯಂತೆ ಕಚಗುಳಿ ಇಟ್ಟಂತೆ ಅನುಭವ :) ಸಿಹಿಯಾದ ನೈಜ ಅನುಭೂತಿ.
ಮಳೆಯ ಚೇಸ್ಟೆಗಳು ಇಷ್ಟವಾದವು.

ಜುಮುರು, ಕಿರಿಕಿರಿ, ಪಿರಿಪಿರಿ, ಪುದುಪುದು, ತಳಕ್ ತಳಕ್, ರಪಾ ರಪಾ - ಇಂತಹ ಪದಗಳು ಈ ಲೇಖನಕ್ಕೆ ಬೇರೆಯದೇ ಆದ ಆಯಾಮ ನೀಡಿವೆ.
ಅಭಿನಂದನೆಗಳು

ವಾಣಿಶ್ರೀ ಭಟ್ said...

chennagide.. narration ontara ishta ata maraya...:)hinge barita eru.. odta irtya nanga...

Narayani Bhat said...

Last lines tumba ishta aaytu....illi dodda dodda haniya male kane .....and nanoo baruttene kano endu rachhe hidiyali emba aase..........tumba chenagi bareeteera......all the best...

Ranjith said...

ತುಂಬಾ ಚೆನ್ನಾಗಿದೆ ಬರಹ. ಓದಿಸಿಕೊಂಡುಹೋಗುವುದರ ಜತೆಗೆ ನಮ್ಮನ್ನ ತೊಯ್ಯಿಸಿಕೊಂಡು ಹೋಗುತ್ತೆ..

ಥ್ಯಾಂಕ್ಸ್..

ಸಂಧ್ಯಾ ಶ್ರೀಧರ್ ಭಟ್ said...

ಮೇ ತಿಂಗಳ ಮಳೆಯ ಬಗೆಗೆ ಓದುತ್ತಲೇ ಮೊದೆಲೇ ಎಲ್ಲೋ ಓದಿದ್ದೇನೆ ಎಂಬ ಭಾವ ಮನಸಲ್ಲೆಲ್ಲೋ ಇತ್ತು. ಆಮೇಲೆ ನೋಡಿದೆ ವಿಕೆ ನಲ್ಲಿ ಓದಿದ್ದು.. ತುಂಬಾ ಚೆನ್ನಾಗಿದೆ. ಇದನ್ನ ತುಂಬಾ ಇಷ್ಟಪಟ್ಟು ಓದಿದ್ದೆ."ಕಾಲೇಜು ಮುಗಿದು ಆಡಲು ನಿಂತ ಹುಡುಗರು ಇನ್ನೇನು ಗೆಲ್ಲಬೇಕೆಂಬ ಕ್ರಿಕೆಟ್ ಮ್ಯಾಚನ್ನು ಅಲ್ಲಿಗೇ ನಿಲ್ಲಿಸಿ ಮಜಾನೋಡುತ್ತದೆ." ಈ ವಾಕ್ಯವನ್ನು ಆಗಲೂ ಇಷ್ಟಪಟ್ಟು ಎರಡು ಬಾರಿ ಓದಿದ್ದೆ. ಈಗಲೂ ಕೂಡ..:)

Jaya Nanaiah said...

roopanatara_blog lokadalli gandrva Vihara..

Jaya Nanaiah said...

Navilu...Beru-Belalu....Radhika-Krishna Dyana....Mandiyurida Kisagotami....Gelatiya Viraha....Kryan Beragu....muru hudigiyara nirliptha Bava....jeeva jalaja.....dari kempagisi thampagisida Gulmohar...gokarna teera....busstandna midita....sanje maleya Hanigalu...estu roopantaragalu..baduke hage allva..