10 January, 2011

ಮನೆ ಹುಡುಕುತ್ತಿದ್ದಾರೆ



ಮನೆ ಹುಡುಕುತ್ತಿದ್ದಾರೆ
ಅವರಿವರ ಕೇಳುತ್ತಿದ್ದಾರೆ
ಈ ಮೊದಲು ನೋಡಿದ್ದಾರೋ
ನೊಡಿದ್ದರೂ ಆಗಿದ್ದ ಮನೆ
ಈಗಲೂ ಹಾಗೇ ಇದೆಯೋ ಗೊತ್ತಿಲ್ಲ


ಜನರೂ ಅಷ್ಟೆ
ತಮಗೆ ತಿಳಿದ ಹಾಗೆ ತೋರಿಸುತ್ತಿದ್ದಾರೆ
ಆಚೆಬದಿಗೆ,
ಓಯ್-ಆ ಮೂಲೆಯಲ್ಲಿ ನೀರಿನ ಟಾಂಕಿಯ ಹಿಂದೆ
ಹೀಗೆ ಎಲ್ಲೆಲ್ಲೊ
ಇವರೂ ಕನಸ ಕಟ್ಟಿ
ಬದುಕ ಹುಡುಕಿದಂತೆ
ಹಂಚಿಲ್ಲದ ಮನೆಯಲ್ಲಿ
ನಕ್ಷತ್ರ ಕಾಣುತ್ತ ಮಲಗಿದವರನ್ನ,
ರೇಲ್ವೆ ಸ್ಟೇಷನ್ನಿನಲ್ಲಿ ನಡುಗುತ್ತ ಮಲಗಿದವರನ್ನ
ಹೊದೆಸಿದ ಮಾಡಿನ ಜೊತೆ ಎಂದೋ
ರಾತ್ರಿ ಕನಸ ಮರೆತವರನ್ನ ಕೇಳುತ್ತಿದ್ದಾರೆ

ಕಟ್ಟಿದ ಮನೆಯೊಳಗೆ ಚಹರೆ ಮರೆತ ಜನರನ್ನ
ಸಾಲು ತೂತಿನ ರಂಗಿನರಮನೆಯ ಬಾದಷಹರನ್ನ
ಸುಖಗಳನು ಮನೆಯೊಳಗೆ ಅಡಗಿಸಿ ಬಚ್ಚಿಟ್ಟವರ
ಪುರಸೊತ್ತು ಕಳೆದುಹೋದ ಯಂತ್ರದಂತ ಮಾನವರನ್ನ
ಮನೆ ತೋರಿಸಿಯಾರೆಂದು ಆಸೆಯಿಂದ ಕೇಳುತ್ತಿದ್ದಾರೆ

ಯಾರದೋ ಭ್ರಮೆಯಂತ ಮನೆಯನೆಲ್ಲ ತಮ್ಮದೇನೊ ಎನ್ನುತ್ತ
ಅವರು ಮನೆ ಹುಡುಕುತ್ತಿದ್ದಾರೆ

ಮೊನ್ನೆಯಷ್ಟೆ ಮುನ್ಸಿಪಲ್‍ನವರು
ಕೆಡವಿದ ಮನೆ ಅದೇ ಆಗಿತ್ತೇ?
ಇಲ್ಲ ಅಂದು ಗಲಭೆಯಲ್ಲಿ ಸುಟ್ಟು
ಹೊಗೆಯಾಡಿ ಕರಕಲಾದ ಮನೆ..

ಎಂದೋ ಉದುರಿದ ಇಟ್ಟಿಗೆ ಚೂರುಗಳಲ್ಲಿ
ಮಣ್ಣಗೋಡೆಗಳಲ್ಲಿ ಅವರ ಮನೆಯಿದ್ದರೆ
ತೋರಿಸಿಬಿಡಿ

ಹಗಲುರಾತ್ರಿಗಳ ಕನಸಿನಲ್ಲಿ
ಎಲ್ಲಾದರೂ ಅವ್ಯಕ್ತದೊಳಗಿನ ವ್ಯಕ್ತದಂತೆ
ನೆನಪಿನ ಚಹರೆಯ ಹಾಗೆ
ಅವರು ಹುಡುಕುತ್ತಿರುವ ಮನೆಯೇನಾದರೂ
ಕಂಡರೆ ಪಾಪ..
ಅವರಿಗೆ ತೋರಿಸಿಬಿಡಿ

ಸಿಕ್ಕಮರ ತಬ್ಬಿ ಬೆಳೆದ ಅವರಿಗೆ
ಪಾಪಿಗಳಿಂದೊಂದಿಷ್ಟು ರಕ್ಷಿಸುವ
ಬೇಲಿಯಂಥ ಮನೆಯೊಂದಿದ್ದರೆ ತೋರಿಸಿಬಿಡಿ
ಪರಸ್ಪರರ ಸುಳ್ಳುಗಳಿಂದ,
ಆಡಿಕೊಳುವ ಬಾಯಿಯಿಂದ ತಪ್ಪಿಸಿಕೊಳ್ಳಲು
ಮನೆಯೊಂದಿದ್ದರೆ ತೋರಿಸಿಬಿಡಿ

ಎಲ್ಲ ಬೆಸೆಯುವ ಸೂತ್ರದ ಹಾಗೆ
ನೀಲಾಕಾಶದಡಿ
ಶಬ್ಧ ನಿಶ್ಯಬ್ಧಗಳಲ್ಲಿಯಾದರೂ
ಅವರಿಗೊಂದು ಮನೆ ಹುಡುಕಿಕೊಡಿ

ಜಾತಿಗಳ ಹಂಗಿಲ್ಲದೆ
ನಾಳೆಗಳಿಗೆ ನಡೆಸುವಂಥ
ಪುಟ್ಟ ಮನೆಯೊಂದಿದ್ದರೆ

ಅವರಿಗೆ ತೋರಿಸಿಬಿಡಿ

9 comments:

Soumya. Bhagwat said...

really nice one venkat. liked it :)

Dr.D.T.Krishna Murthy. said...

ಅದ್ಭುತ ಕವನ!ಕವಿತೆಯ ಆಶಯ ತುಂಬಾ ಇಷ್ಟವಾಯಿತು.

ವಾಣಿಶ್ರೀ ಭಟ್ said...

nice one!

ಆನಂದ said...

ಹಾರಿ ಹೋದ ಕನಸಿನರಮನೆಯನ್ನು ಹುಡುಕುತ್ತಾ ಹೊರಟವರಿಗೆ ಶುಭವಾಗಲಿ. ಚೆಂದದ ಕವಿತೆ, ಇಷ್ಟವಾಯ್ತು.

ಪ್ರವೀಣ್ ಭಟ್ said...

Ultimate Venkataraman... sakath agi baradde.... super meaning..

Anonymous said...

purusottu maretha yantradanta maanvru. . . . . olleye grahike. good one.
geervani

Sushma Sindhu said...

ಹಾಯ್,
ನನ್ನ ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ.
ಕವನ ತು೦ಬಾ ಅರ್ಥಗರ್ಭಿತವಾಗಿದೆ. ಇಷ್ಟವಾಯಿತು.
ಕವನ ಓದಿದ ನ೦ತರ ಅದಕ್ಕೆ ನೀವು ನೀಡಿರುವ ಚಿತ್ರದಲ್ಲಿ ನೂರಾರು ಅರ್ಥಗಳು ಕಾಣಿಸುತ್ತಿವೆ :)

ಡಾ. ಚಂದ್ರಿಕಾ ಹೆಗಡೆ said...

tumbaa chendavaada saalugalu... chitragalu....

VENU VINOD said...

ಅರ್ಥಪೂರ್ಣ ಕವಿತೆ, ನಾನು ಕೂಡಾ ಅಪರಿಚಿತವಾದ ಓಣಿಯೊಂದರಲ್ಲಿ ಅಲ್ಲಿನವರಲ್ಲಿ ಮನೆಯೊಂದನ್ನು ಹುಡುಕುತ್ತಾ ಸಾಗಿದಂತೆ ಭಾಸವಾಯಿತು...ಇಂತಹ ಕಲ್ಪನೆ ಹುಟ್ಟಿಸುವುದಕ್ಕೇ ಅಲ್ಲವೇ ಸಾಹಿತ್ಯ ಇರೋದು!