25 October, 2010
ಬಯಲುಸೀಮೆಯ ರೈತ
ಧಾರವಾಡದ ಗೆಳತಿ ರೇಣು ಕ್ಲಿಕ್ಕಿಸಿದ ಬಯಲುಸೀಮೆಯ ರೈತ ನನ್ನ ಪೆನ್ಸಿಲ್ಲಿನಲ್ಲಿ - ದೈನಿಕದ ಈ ಕ್ಷಣ ನಮ್ಮೆಲ್ಲರ ಬಾಳಿಗೆ ಶಕ್ತಿ ಕೊಡುವಂತದ್ದು.
ತೊಟ್ಟ ಬಟ್ಟೆ ಇಷ್ಟೂ ಕೆಡದ ಹಾಗೆ
ಕಸ ಹಾಕಲು ಬರುತ್ತಾರೆ ಜನ
ತಿಂದು ಉಳಿದ ಮುಸುರೆ
ಎಲ್ಲೋ ಕಸಿದ ತಿನಿಸು
ಬಿಸ್ಕತ್ತು ಕೊಟ್ಟೆ ಚೆಲ್ಲಾಪಿಲ್ಲಿ
ಉಟ್ಟ ಬಿಟ್ಟ ಸೀರೆ ಅಂಗಿ
ಹರುಕು ಮುರುಕು ಮಂಡೆಕಸ
ಬಾಟ್ಲಿ,ಪಾರ್ಟಿ ಫ್ಯಾಷನ್ನು
ಮಾಡಿಬಿಟ್ಟ ಹೊಲಸನೆಲ್ಲ
ನಕಲಿ ನೋಟು, ತನಿಕೆ
ಫೈಲು ನ್ಯೂಸು ಪೇಪರ್ರು
ಮೆಟ್ಟಿ ಕೊಂದ ಯಾರದೋ ಕೈ
ಬಸಿದ ಉಸಿರು,ಫಳಫಳ
ಹೊಳೆವ ಹಳೆಯ ಭಾಷೆಯನೆಲ್ಲ
ಶಸ್ತ್ರ ಅಸ್ತ್ರ ಔಷ್ದಿ ಗಿವ್ಸ್ಡಿ
ಶವದ ಪೆಟ್ಟಿಗೆಗೆ ಜಾಸ್ತಿ ಕಮ್ಮಿ
ಮುರುಕು ಚಪ್ಲಿ
ಹರಿದ ದೈನಿಕದ ತುಂಡು
ಉಳಿದುಕೊಂಡ ಪೌರುಷತ್ವದ ಟಾನಿಕ್ಕುಗಳನೆಲ್ಲ
ಹೊಲಸು ಬೂದಿ ಒಲೆಯ ತುಂಬ
ಸುಳ್ಳು ಸೆಡವು ಉದ್ಧಾರದ
ಮಾತು ರಾಜಕೀಯ
ಜನ ಕಸ ಎಸೆಯಲು ಬರುತ್ತಿದ್ದಾರೆ
ಗವ್ವನೆಂಬ ಕತ್ತಲಲ್ಲಿ
ಸಂಜೆ ನಸುಕಿನಲ್ಲಿ
ಕೆಂಪು ಕೆಸರು ಮರೆತ ಹೆಸರು
ಭಿಕ್ಷೆ, ಸಾಲದ ಪತ್ರ ಎಲ್ಲವನ್ನು
ಹೊರಗೆ ಚೆಲ್ಲಿಬಿಟ್ಟರೆ
ನಮ್ಮ ಮನೆ ಎಷ್ಟು ಸ್ವಚ್ಛ
ಗಡಿಯ ತಂಟೆಯಲ್ಲಿ
ಒಡೆದ ಕನ್ನಡಿ ಹಿಡಿದು
ಗಗನಚುಂಬಿಗಳ ಸಂದಣಿಯಿಂದ
ಹೋರಾಡಿ ಗಳಿಸಿಕೊಂಡ
ಜೀವವಿಲ್ಲದ ತಮ್ಮವೇ
ಅಕ್ಷರಗಳನ್ನು ಮುಚ್ಚಿತಂದು
ಎಸೆದು ಹೋಗುತ್ತಾರೆ
ಅನರ್ಥವೆಂದು ಕಂಡ ಕನಸನೆಲ್ಲ,
ಆಸೆ ನಿರಾಸೆಗಳೊಳಗೆ ತಪ್ಪಿಹೋದ
ವಿಳಾಸಗಳನೆಲ್ಲ,
ನಾಳೆ ಎಸೆಯಲೋ
ಇನ್ನಷ್ಟು ಮಾಡಿಯೇ ಒಯ್ಯಲೋ
ಎನ್ನುತ್ತಾ ತೊಟ್ಟ ಬಟ್ಟೆ
ಇಷ್ಟೂ ಕೆಡದ ಹಾಗೆ
ಕಸ ಎಸೆಯಲು ಬರುತ್ತಾರೆ ಜನ
ವೆರಾಯಿಟಿ ವೆರಾಯಿಟಿ ಕಸ
( 22 ಅಕ್ಟೋಬರ್,೨೦೧೦ರ ಕೆಂಡಸಂಪಿಗೆಯಲ್ಲಿ ಪ್ರಕಟಿತ )
21 October, 2010
ನಮ್ಮೊಳಗಿನ ಬುದ್ಧ

ಬುದ್ಧ ಯಾರಿಗೆ ಗೊತ್ತಿಲ್ಲ,
ಪುಟ್ಟ ಮಗುವೂ ಹೇಳುತ್ತದೆ-
ನಟ್ಟ ನಡುರಾತ್ರಿ ಎದ್ದುಹೋದನಂತೆ
ಬೋಧಿವೃಕ್ಷದಡಿ ಜ್ಞಾನವಾಯ್ತಂತೆ
ಬುದ್ಧನೆಂದರೆ ಶಾಂತಿ ಅಹಿಂಸೆ
ಕ್ರೌರ್ಯವೇ ಹೆಸರಾದವರು
ಜೀವ ವ್ಯಾಪಾರದವರು
ಹಣದಾಸೆಗೆ ಸಂತತೆಯ ಮರೆತವರೂ
ಹೇಳುತ್ತಾರೆ ಬುದ್ಧ ಗೊತ್ತೆಂದು
ಮತ್ಸರದ ಕಿಚ್ಚಂತ ಎದೆಯವರು
ಬಾಂಬಿನ ಭಾಷೆಯವರು
ಓಟಿನ ರಾಜಕೀಯದವರೂ
ಕ್ಲಬ್ಬು ಪಬ್ಬಲ್ಲೂ ಇಷ್ಟುದ್ದ
ಕೊರೆಯುತ್ತಾರೆ ಬುದ್ಧನ ಬಗ್ಗೆ,
ಕೇಳಿದರೆ ನಕ್ಕಾನು ಬುದ್ಧ

ಬುದ್ಧನೆಂದರೆ ಇಷ್ಟೆ ಅಲ್ಲ,
ಕಣ್ತೆರೆದು ನೋಡಿಕೊಂಡರೆ
ಒಮ್ಮೆ ನಮ್ಮೊಳಗಿನ ಬೆಳಕ,
ಒಣಜೀವದೊಳಗೆ ಪ್ರೀತಿ ತುಂಬಿ,
ಹರಿಯಬಿಟ್ಟರೆ ಅದನು ಎದೆಯಿಂದ ಎದೆಗೆ,
ಎಚ್ಚರಾದರೆ ನಮ್ಮೊಳಗಿನ ಮಾನವ
ನಮ್ಮೊಳಗಿನ ನಿರಮ್ಮಳತೆಯಾಗಿ,
ನೆಮ್ಮದಿಯಾಗಿ ಇರುತ್ತಾನೆ.
ಜಗದಳುವಿಗ ಕಾರಣ ಕಂಡುಕೊಂಡವ
ನಮ್ಮವನೆ ಆಗುತ್ತಾನೆ.
ಮತ್ತು ಹೇಳಿಕೊಳ್ಳಬಹುದು
ಬುದ್ಧ ನಮಗೂ ಗೊತ್ತೆಂದು.
೨೦೦೮
13 October, 2010
ಹೆಸರು ಮರೆಯಬೇಕಿದೆ
ಹೊತ್ತೇರಿ ಇಳಿದರೂ ಕಾದು ಕುಳಿತಿದ್ದೆ
ಕಾರಿನ ಕಪ್ಪು ಗಾಜಿನ ಹೊರಗೆ
ಒಳಗೆ ನೀನಿಲ್ಲದ್ದು ನನಗೆ ತಿಳಿಯಲೇ ಇಲ್ಲ
0
ನೀನೊಲಿದರೆ ಕೊರಡು ಕೊನರುವುದೆಂದು
ಹಗಲೂ ರಾತ್ರಿ ಕಾದಿದ್ದೆ
ಅದು ಗೆದ್ದಲು ಹಿಡಿದು ಹೋದದ್ದು ನನಗೆ ಗೊತ್ತಾಗಲೇ ಇಲ್ಲ
0
ನಿರೀಕ್ಷೆಯಲ್ಲಿ ಹಚ್ಚಿಟ್ಟ ಹೊಸ್ತಿಲ ದೀಪ
ಆಗಲೇ ನಂದಿರಬೇಕು, ಪ್ರೀತಿ ಕಳೆದಮೇಲೆ
ನವಿಲುಗರಿ ನೆಲಗುಡಿಸಲಿಕ್ಕೇ ಲಾಯಕ್ಕಲ್ಲವೇ
0
ಪ್ರೀತಿ ಪ್ರಣತಿಯಂಥದ್ದು
ಎಂದಿದ್ದೆ ನೀನು, ಕರಗಿ ಉರಿದೆ ನಾನು
ನೀ ಮೈಯಷ್ಟೇ ಕಾಯಿಸಿಕೊಂಡೆ
0
ನಿನ್ನ ಬಗ್ಗೆ ಬರೆದ ಕವಿತೆಯ
ಮೊದಲ ಚರಣ ಗೆದ್ದಲು ತಿಂದು ಹೋಗಿದೆ
ಕವಿತೆಯ ಹೆಸರೂ ಮರೆಯಬೇಕಿದೆ
0
ಕಳೆದು ಹೋದರೆ ಹೋಗಲೆಂದು ಬಿಸಾಡಿದ್ದ
ನೆನಪು ಮಾತ್ರ ಆಗಾಗ
ಮಂಚದ ಬಳಿ ಕಾಲಿಗೆ ಸಿಕ್ಕುತ್ತವೆ
0
ನನ್ನ ಗೋರಿಯ ಮೇಲೆ ಅರಳಿದ ಗುಲಾಬಿಯನ್ನು
ಹೂವಿನಂಥ ಹುಡುಗಿಯರಿಗೆ ಹಂಚಿ
ನೀನು, ಪ್ರೀತಿಯ ಬಗ್ಗೆ ತಿಳಿಸುತ್ತಿದ್ದೀಯಂತೆ
0
ಪ್ರೀತಿಯಲ್ಲಿ ನೆಪವಿಲ್ಲವೆಂದು
ಹೇಳಿದ್ದೆ ನೀನು, ನಂಬಿದ್ದೆ ನಾನು
ನೀ ಹೋಗಿದ್ದರ ಕಾರಣ ಕೇಳಿರಲಿಲ್ಲ
0
ಹುಚ್ಚು ಪ್ರೀತಿಯಲ್ಲಿ ಅಂದುಕೊಂಡಿದ್ದೆ
ಸತ್ತರೆ ಸಮಾಧಿ ನಿನ್ನ ಮನೆಯಿರುವ ಬೀದಿಯಲ್ಲೇ ಎಂದು,
ಪುಣ್ಯಕ್ಕೆ ಈಗ ಅಲ್ಲಿ ಜಾಗವಿಲ್ಲ
0
ಬಾಗಿಲ ಕದವನ್ನು ಆಗಲೇ ಮುಚ್ಚಿದ್ದೇನೆ
ಬರುವನೆಂದು ಕಾದು ಕುಳಿತೇ
ಬದುಕು ಮುಗಿಯಬಾರದಲ್ಲ.
( ಕನ್ನಡಪ್ರಭ ಸಾಪ್ತಾಹಿಕದಲ್ಲಿ ಪ್ರಕಟಿತ )
08 October, 2010
ಲಜ್ಜೆಗೆಂಪಾದ ನಿನ್ನ ಮೋರೆ ನೆನಪಾಗಿ
ಅಲ್ಲದ ಹೊತ್ತಲ್ಲಿ ನಿನ್ನ ನೀಲಿ ಕಿವಿಯೋಲೆ ನೆನಪಾಗಿದೆ
ಮಾತೆ ಬೇಡವೆಂದು ಮುನಿಸಿದರೂ ಒಂದೆ ನಿನ್ನ ಮಾತಿಗೆ ಕಾಯಬೇಕೆನಿಸಿದೆ
ನಿಶೆಯ ನೀರವತೆಯಲೂ ನಿನ್ನ ಇನಿದನಿಯ ಹುಡುಕಬೇಕೆನಿಸಿದೆ
ನಿನ್ನ ಬಿಳಿಗೆನ್ನೆಯ ಮೇಲಿನ ಕರಿಮಚ್ಚೆ ತನಗೆ ತಾನೇ ಉಪಮೆಯಾಗಿದೆ
ನಿನ್ನ ನವಿರು ಹೆಜ್ಜೆಯ ಗೆಜ್ಜೆಸದ್ದು ಕಿವಿತುಂಬ ತುಂಬಿದೆ
ಲಜ್ಜೆಗೆಂಪಾದ ನಿನ್ನ ಮೋರೆ ನೆನಪಾಗಿ
ಕೊಳಕನೆನ್ನುತ ಕೊಟ್ಟ ಮುತ್ತೊಂದು ನನ್ನ ನಾಚುವಂತೆ ಕಾಡಿದೆ
ಗೋಡೆಯ ಮೇಲೆ ಬರೆದ ಸಾವಿರ ಕಣ್ಣಿನ ಹಕ್ಕಿ..
ಧೋ ಸುರಿವ ಮಳೆಯ ನಡುವೆ ದಟ್ಟ ಕಾಡಿನಲ್ಲಿ ತಮ್ಮವೇ ಲೋಕದ ಒಂಟಿಮನೆಗಳಲ್ಲಿ ಕವಳ ಹಾಕುತ್ತ, ಅಡಿಕೆ ಸುಲಿಯುತ್ತ ಕೂತ ಜನ, ಸಾಗರವಾಗುತ್ತೇನೆಂದು ಹೊರಟ ಹಳ್ಳ, ಮಳೆಯ ರಭಸಕ್ಕೆ ತತ್ತರಿಸುತ್ತಿರುವ ಗಿಡಮರ,ಪಡಸಾಲೆಯಲ್ಲಿ ಹೊಡಚಲಿನ ಸಣ್ಣ ಶಾಖಕ್ಕೆ ಒಣಗುತ್ತಿರುವ ಕಂಬಳಿ ಕೊಪ್ಪೆ, ಅಲ್ಲೇ ಬೆಚ್ಚಗೆ ಬಾಲ ಸುತ್ತಿ ಮಲಗಿದ ಬೆಕ್ಕು, ಅದೋ ಅಲ್ಲೊಬ್ಬ ಪೋರ ಈಗಷ್ಟೇ ಶಾಲೆಯಿಂದ ಬಂದು ಪಾಟೀಚೀಲ ಇಡಲೂ ಪುರುಸೊತ್ತಿಲ್ಲದೆ ಗಣಿತ ಪಟ್ಟಿಯ ಕೊನೆ ಹಾಳೆ ಹರಿದು ದೋಣಿ ಮಾಡಿ ಬಿಡಲು ಹೊರಟಿದ್ದಾನೆ. ಅವನವೇ ಕನಸುಗಳು ದೋಣಿಯಾಗಲು ಕಾತರಿಸಿವೆ.
ಪುಟ್ಟ ಪೂರ್ವಿ ನಾಳೆ ಶಾಲೆಗೆ ಹೋದಕೂಡಲೇ ಅಕ್ಕೋರಿಗೆ ಕೊಡಲು ದಂಡೆ ಮಾಡಿಕೊಡೆಂದು ಆಯಿಯ ಕಾಡಿದ್ದಾಳೆ, ಮಾಚಣ್ಣ ಕಂಬಳಿಕೊಪ್ಪೆಯೊಳಗೆ ನೆನೆಯುತ್ತ ಈಗಷ್ಟೇ ಮನೆಗೆ ಬರುತ್ತಿದ್ದಾನೆ,ಹೆಂಡತಿ ಕೊಡಲಿರುವ ಬೆಚ್ಚಗಿನ ಚಹ ನೆನಪಿಸಿಕೊಳ್ಳುತ್ತ.
ಕೊಟ್ಟಿಗೆಯಲ್ಲಿ ಇಂದಷ್ಟೇ ಜನಿಸಿದ ಗೌರಿಯ ಪುಟ್ಟ ಕರು ಇಂದೇ ಎದ್ದು ನಿಲ್ಲುತ್ತೇನೆನುತ ಬೀಳುತ್ತಲೇ ಅಂಬೆಗಾಲಿಕ್ಕಿ ತಾಲೀಮು ನಡೆಸುತ್ತಿದೆ, ಗೌರಿ ಪ್ರೀತಿಯಿಂದ ಕರುವಿನ ಮೋರೆ ನೆಕ್ಕುತ್ತಿದೆ, ಗೆದ್ದೆ ನಾಟಿಗೆ ಬಂದ ದೇವಕಿಗೆ ಗದ್ದೆ ತುದಿಯ ಡೊಂಬಿನಲ್ಲಿ ಕೈಯಗಲದ ಏಡಿಯೊಂದು ಸಿಕ್ಕಿದೆ, ದೂರದ ಹೈವೆಯ ಅಂಚಿನಲ್ಲಿ ಕೆಂಪು ರಾಡಿ ನೀರು ಮ್ಯಾಂಗನೀಸ್ ಧೂಳನೆಲ್ಲ ಹೊತ್ತು ಸಾಗಿದೆ. ಯಾರೂ ನೋಡುತ್ತಿಲ್ಲವೆನ್ದುಕೊಂಡ ಗೋಡೆಗೆ ಮಸಿಯಿಂದ ಬರೆದ ಸಾವಿರ ಕಣ್ಣಿನ ನವಿಲು ಗರಿಬಿಚ್ಚಿ ನರ್ತಿಸಲನುವಾಗಿದೆ.
ಬಕುಲದ ಹೂವಿನಂಥ ಗಂಧವೊಂದು ತೇಲಿಕೊಂಡು ಬಂದಿದೆ, ದೈನಿಕದ ದಿವ್ಯ ಗಳಿಗೆಗಳನ್ನು ನೆನಪಿಸುತ್ತ ಸಾಗಿದೆ.
( 24 ಅಕ್ಟೋಬರ್, 2010ರ ವಿಜಯ ಕರ್ನಾಟಕದ ಸಪ್ತಾಹಿಕ ಲವಲvkಯಲ್ಲಿ ಪ್ರಕಟಿತ )
02 October, 2010
ಮೂಕ ಮನಸು ಕಾಯತಾವ
ಕಪ್ಪು ಮೋಡ ಮುಗಿಲಿನ್ಯಾಗ
ಸುಳಿದಾಡುತಾವ
ಹೊಯ್ದಾಡುತಾವ ಅತ್ತಿಂದಿತ್ತ
ಗುಡುಗುಡುಗುತಾವ, ಸಿಡುಸಿಡುಕುತಾವ
ಸಾವಿರ ನೆನಪು ಮನದೊಳಗ
ಯಾರೀಗೂ ಹೇಳಲಾರದಾಂಗ
ಅಲೆದದ ಒಳಗೊಳಗ, ದಿಗಿಲು ಹೀಂಗ
ಮೂಕ ಮನಸು ಕಾಯತಾವ
ಬೆಳಕು ಮಿಂಚಿ ಮಾಯತಾವ
ಕತ್ತಾಲ ಗೋಡೆಯೊಳಗ
ಸೋಗಿನೊಳಗ ಅಡಗುತಾವ
ಮಳೆಯ ಮೋಡ
ಎಲ್ಲೋ ಸೆಳೆದು ಹೊರಳುತಾವ
ದೂರ ದೂರ ನಿಲ್ಲದ್ಹಾಂಗ
ನವಿಲ ಕುಣಿತ ಅರಸುತಾವ
ಬರದ ಒಳಗೆ ಸಾಯುತಾವ
ಒಂದು ಹನಿಯೂ
ಹನಿಸುತಿಲ್ಲ
ಮನದ ದುಗುಡ ನಿಲ್ಲುತ್ತಿಲ್ಲ
ತೇಲಿಹೋತ
ಆರಿಹೋತ
ಬಿದ್ದರೂ ಬೀಳಲಾರದ ಮಳೆ
ವರ್ತಮಾನ ಚೌಕಟ್ಟಿನಾಚೆ ಹರಡತೊಡಗಿದೆ
ನೆಲಕೆ ಸುರಿದ ಬೆವರೆ
ಹಕ್ಕಿ ಗೂಡಾಗಿ
ಹಸಿದ ಹೊಟ್ಟೆಗೆ- ಒಂಟಿ ಮರಿಗೆ
ಜೀವ ತುಂಬಿ
ಬೆಳಕೆ ಬಾಯ್ದೆರೆದು
ಕವಲೊಡೆದು ಗೆರೆಯಾಗಿ
ಚಿತ್ತಾರದ ಮರವಾಗಿ
ಬಣ್ಣದೋಕುಳಿಯಲಿ ಹೂವಾಗಿದೆ
ಎಷ್ಟೋ ರೇಖೆಗಳ ನಡುವೆ
ಹೂವಿನ ಗೀತೆ ಹುಟ್ಟಿ
ಒಂದು ಒಲವಿನ ದನಿಯು
ನೆಲದ ಪುಳಕವಾಗಿ
ಗುಬ್ಬಿಗೂಡನರಸುತ್ತ ನಡೆದಿದೆ
ಆಗಸದ ಮೋಡವು
ಕಡಲ ದಡಕೆ
ಅಲೆಯಾಗಿ ಹರಿದಿದೆ
ಹಗಲಿನಂಥ ಕನಸು
ಮನಸಿನೊಳಗೆ ಸುಳಿದು
ಧ್ಯಾನವಾಗಿ ಸಮಾಧಾನದ
ಹನಿಮಳೆ
ಸುಮ್ಮನೆ ತೋಯಿಸುತ್ತ ನಡೆದಿದೆ
ಲಿಪಿಯಿಲ್ಲದ ಭಾವನೆಯೊಂದು
ಭಾಷಾಂತರಗೊಂಡು
ಜಾತಿ-ವಿಜಾತಿಯ ಊರನೆಲ್ಲ
ಅಳಿಸುತ್ತ ನಡೆದಿದೆ
ಬ್ಲ್ಯಾಕೆಂಡ್ ವೈಟ್ ಚಿತ್ರ
ಹೊಸದೇ ಬಣ್ಣಗಳನು ಹೇಳುತ
ಚೌಕಟ್ಟಿನಾಚೆಗೆ ಹರಡಿದೆ
ಮತ್ತು
ಜಂಗಮದ ಜಾಡಿನಲ್ಲಿ ವರ್ತಮಾನ
-ವಷ್ಟೇ ಉಳಿದು
ಇತಿಹಾಸ ಅಸಂಬದ್ಧವಾಗಿದೆ.
Subscribe to:
Posts (Atom)