02 October, 2010

ಇಷ್ಟಕ್ಕೂ ಅವಳು ಏನಾಗಬೇಕು ನನಗೆ






ಒಂದು ದಿನವೂ ಗ್ಯಾಸು ತರಕಾರಿ
ಕರೆಂಟು ನಲ್ಲಿನೀರು
ಎನ್ನುವುದಿಲ್ಲ 

ರಸ್ತೆ ಬದಿಯ ಗೋಬಿಮಂಚೂರಿ,
ಪಾನಿಪುರಿ,ಪಿಜ್ಜಾ ಪಾನಕದ ಜೊತೆ
ಕುಲುಕುಲು ನಗುವಾಗಿ

ಫೋನಿನಲ್ಲಿ ಹ್ಯಾಗೆ ಮೆತ್ತಗೆ
ಹೂವು ಬಿದ್ದ ಹಾಗೆ,
ಹಲೋ ಕೂಡ ಅನ್ನುವುದಿಲ್ಲ.
ಇನ್ನೇನೋ ಹೇಳಬೇಕೆನ್ನುವಷ್ಟರಲ್ಲೇ
ಫೋನಿಟ್ಟ ಸದ್ದಾಗಿ

ಬೆರಳಿಗೆ ತಾಕಿದ ನವಿರಾಗಿ
ಒಮ್ಮೊಮ್ಮೆ ಐಸ್ಕ್ರೀಂ ಪಾರ್ಲರಿನಲ್ಲಿ
ಕಣ್ಣುಮಿಟುಕಿಸಿದಂತಾಗಿ
ಎದೆಯ ಢವ ಢವ ಹೆಚ್ಚಿ

ಎದೆಯೊಳಗಿನ ಢವ ಢವಕ್ಕೆ
 ಹಣೆಯ ಬೆವರಿಗೆ 
ತಾನೇನೂ ಕಾರಣವಲ್ಲ ಎಂಬಂತೆ
ಬಿಸಿಬಿಸಿ ಕಪ್ ಚಹಾ ತಂದಿಡುತ್ತಾಳೆ


 ಒದ್ದೆ ಸೋಪು, ಬೆಚ್ಚಗಿನ ಷವರು
ಕನ್ನಡಿಗೆ ಇಟ್ಟ ಬಿಂದಿ
ಅರ್ಧ ಮುಗಿದ ಶಾಂಪೂವಿನಂತೆ  
ಒದ್ದೆ ಕೂದಲಿನ ಘಮವಾಗಿ


ಬೆಚ್ಚಗಿನ ಟವೆಲ್ಲು ಹುಡುಕುವ
ಹೊತ್ತಿಗೆ ಎದುರಲ್ಲೇ ಕಂಡು
ಕನ್ನಡಿಯ ಮುಂದೆ
ರಾತ್ರಿ ಅತ್ತು ಕರೆದದ್ದು ನೆನಪಾಗಿ

ಹೀಗೆ ಅಡುಗೆ ಸ್ನಾನ ಐರನ್ನು 
 ಎನ್ನುವ ಹೊತ್ತಿಗೆ 
ಗುಡ್ ಮಾರ್ನಿಂಗ್ ಮೆಸ್ಸೇಜಿನ  ಹಾಗೆ   

ಪರ್ಸು ವ್ಯಾಲೆಟ್ಟು ಎನ್ನುತ್ತಾ
ಏಳು ಕಳೆದು ಎಂಟಾಯ್ತು
ಎನ್ನುವಷ್ಟರಲ್ಲಿ
'ನಿನ್ನದಾರಿ ನಿನಗೆ- ತನ್ನ ದಾರಿ ತನಗೆ' ಎನ್ನುವ ಹಾಗೆ
ಬಸ್ಸಿಗೆ  ಕೈಬೀಸುತ್ತಾಳೆ
ಬಸ್ಸು ನಿಂತುಬಿಡುತ್ತದೆ
ಕೈಬೀಸೋಣವೆನ್ನುವಷ್ಟರಲ್ಲೇ 
ಹೊರಟುಬಿಡುತ್ತದೆ 


No comments: