02 October, 2010

ನೀನಿಲ್ಲದೆ


ಸಂಪಿಗೆ ಮರದ ತುಂಬೆಲ್ಲ
ಎಷ್ಟೆಲ್ಲ ಹೂಬಿಟ್ಟಿದೆ
ಮರವೇರಿ ಕಿತ್ತು ಬೀಳಿಸೋಣವೆಂದರೆ
ಹೆಕ್ಕಲು ನೀನಿಲ್ಲ

ಹುಲ್ಲುಬೇಣದಲ್ಲಿ
ನವಿಲುಗರಿ
ವ್ಯರ್ಥ ಬಿದ್ದಿದೆ ಗೊತ್ತಾ?
ಓಡಿಹೋಗಿ ಹೆಕ್ಕೊಣವೆಂದರೆ - ನಂಗೇ.. ಎನ್ನಲು ನೀನಿಲ್ಲ

ಮಳೆಗಾಲ ಕಳೆದು
ಹೊಳೆದಂಡೆಗೆ ಎಷ್ಟೆಲ್ಲ ಹೊಸಕಲ್ಲುಗಳು,
ಹತ್ತಾರು ಬಣ್ಣದವು
ಬಂದುಬಿದ್ದಿವೆ,
'ಯಾವುದನ್ನು ಆರಿಸಿಕೊಳ್ಳಲೋ?'
ಎಂದು ಕೇಳಲು ನೀನಿಲ್ಲ

ಸಮುದ್ರ ದಂಡೆಗೆ
ಎಷ್ಟೆಲ್ಲ ಅಲೆಗಳು ಬಂದು ಹೋದವು
ಸಂಜೆಗೆಂಪು ಮುಳುಗುವವರೆಗೂ
ಎಣಿಸುತ್ತ ಕೂರಲು
ಯಾಕೋ ಮನಸ್ಸಿಲ್ಲ


( 531ನೇ ಹಾಯ್ ಬೆಂಗಳೂರ್‌ನಲ್ಲಿ ಪ್ರಕಟಿತ )